ADVERTISEMENT

ವಿವಿಧತೆ

ಡಾ. ಗುರುರಾಜ ಕರಜಗಿ
Published 18 ಮಾರ್ಚ್ 2019, 20:15 IST
Last Updated 18 ಮಾರ್ಚ್ 2019, 20:15 IST
   

ಅಜ್ಞಾತವಾದುದನಭಾವವೆನೆ ನಾಸ್ತಿಕನು |
ಆಜ್ಞೇಯವೆಂದದಕೆ ಕೈಮುಗಿಯೆ ಭಕ್ತ ||
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ |
ಸ್ಪಜ್ಞಪ್ತಿಶೋಧಿ ಮುನಿ - ಮಂಕುತಿಮ್ಮ || 107||

ಪದ-ಅರ್ಥ: ಅಜ್ಞಾತವಾದುದನಭಾವವೆನೆ=ಅಜ್ಞಾತವಾದುದನ್ನು (ಕಣ್ಣಿಗೆ ಕಾಣದ್ದನ್ನು)+ಅಭಾವ(ಇಲ್ಲ)+ಎನೆ, ನಾಸ್ತಿಕ=ದೇವರ ಅಸ್ತಿತ್ವವನ್ನು ನಂಬದವನು, ಅಜ್ಞೇಯವೆಂದದಕೆ=ಅಜ್ಞೇಯ(ಅಪ್ಪಣೆ)+ಎಂದು+ಅದಕೆ, ಜಿಜ್ಞಾಸ್ಯ=ಚಿಂತನೆಗೆ ಯೋಗ್ಯವಾದದ್ದು, ಪರಿಕಿಸತೊಡಗೆ=ಪರೀಕ್ಷಿಸತೊಡಗಿದರೆ, ಸ್ಪಜ್ಞಪ್ತಿಶೋಧಿ=ತನ್ನ ತಿಳಿವಳಿಕೆಯನ್ನು ಶೋಧಿಸುವವನು.

ವಾಚ್ಯಾರ್ಥ: ಕಣ್ಣಿಗೆ ಕಾಣದ್ದು ಇಲ್ಲವೆನ್ನುವನು ನಾಸ್ತಿಕ. ಕಂಡದ್ದಕ್ಕೆಲ್ಲ ಅಪ್ಪಣೆ ಎಂದು ಕೈಮುಗಿಯುವವನು ಭಕ್ತ. ಯಾವುದೇ ವಿಷಯವನ್ನು ಪರೀಕ್ಷಾರ್ಹವೆಂದು ಪರಿಶೀಲಿಸತೊಡಗುವವನು ವಿಜ್ಞಾನಿ. ತನ್ನ ಜ್ಞಾನವನ್ನು ಸದಾಕಾಲ ಪರಿಶೋಧಿಸುವವನು ಮುನಿ.

ADVERTISEMENT

ವಿವರಣೆ: ಭಗವದ್ಗೀತೆಯ ಒಂದು ಶ್ಲೋಕ ಹೀಗಿದೆ
‘ಚತುರ್ವಿಧಾ ಭಜಂತೇ ಮಾಂ ಜನಾ: ಸುಕೃತಿನೋರ್ಜುನ |
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ||’

‘ಆರ್ತರು, ಜಿಜ್ಞಾಸುಗಳು, ಅರ್ಥಾರ್ಥಿಗಳು ಮತ್ತು ಜ್ಞಾನಿಗಳು ಎಂಬ ನಾಲ್ಕು ಬಗೆಯ ಪುಣ್ಯಾತ್ಮರು ನನ್ನನ್ನು ಭಜಿಸುತ್ತಾರೆ’
ಅಂದರೆ ಪ್ರಪಂಚದಲ್ಲಿ ನಾಲ್ಕು ತರಹದ ಜನರಿದ್ದಾರೆ. ಮೊದಲನೆಯವರು ಆರ್ತರು. ಅವರು ತೊಂದರೆಯಾದಾಗಲೆಲ್ಲ ದೇವರನ್ನು ನೆನೆಯುತ್ತಾರೆ. ಏನನ್ನು ಕಂಡರೂ ಭಯದಿಂದ ಕೈಮುಗಿಯುವ ಇವರು ಭಕ್ತರು.

ಎರಡನೆಯವರು ಜಿಜ್ಞಾಸುಗಳು. ಇವರು ಜ್ಞಾನಕುತೂಹಲಿಗಳು, ಶಾಸ್ತ್ರಾರ್ಥಿಗಳು. ಯಾವುದನ್ನಾದರೂ ಪರೀಕ್ಷೆ ಮಾಡಿ ನಂತರ ಒಪ್ಪಿಕೊಳ್ಳುವವರು. ಇವರು ವಿಜ್ಞಾನಿಗಳು.

ಮೂರನೆಯವರು ಅರ್ಥಾರ್ಥಿಗಳು. ಇವರು ಪ್ರಾಪಂಚಿಕ ಅಪೇಕ್ಷೆ ಉಳ್ಳವರು. ಯಾವುದನ್ನೂ ಬೇಗನೇ ನಂಬದವರು. ನಾಸ್ತಿಕತ್ವಕ್ಕೆ ಮನ ತೆತ್ತವರು. ನಾಲ್ಕನೆಯವರು ಜ್ಞಾನಿಗಳು. ಇವರು ತತ್ಪಾನುಭವಿಗಳು, ಸಾಧಕರು. ಯಾವಾಗಲೂ ಅಂತರೀಕ್ಷಣೆ ಮಾಡಿಕೊಳ್ಳುವವರು.

ಈ ಗೀತೆಯ ಮಾತನ್ನೇ ಕಗ್ಗ ಎಷ್ಟು ಸುಂದರವಾಗಿ ಹೇಳುತ್ತದಲ್ಲವೇ?

ಯಾವುದು ಕಣ್ಣಿಗೆ ಕಾಣುವುದಿಲ್ಲವೋ ಅದು ಇಲ್ಲ ಎಂದು ನಂಬುವವನು ನಾಸ್ತಿಕ. ದೇವರು ಕಣ್ಣಿಗೆ ಕಾಣುವುದಿಲ್ಲವಾದ್ದರಿಂದ ಅವನು ಇಲ್ಲವೇ ಇಲ್ಲ, ದೇವರೆಂಬುದು ಕೇವಲ ಕಲ್ಪನೆ, ದೇವರನ್ನು ನಂಬುವವರು ಅಂಧಶ್ರದ್ಧೆಯುಳ್ಳವರು ಎಂದು ತಿಳಿಯುತ್ತಾರೆ. ಇನ್ನು ಭಕ್ತರಿಗೆ ಯಾವ ಪರೀಕ್ಷೆಯೂ ಬೇಡ. ದೇವರ ಬಗ್ಗೆ ಯಾರು ಏನು ಹೇಳಿದರೂ ನಂಬಿ ಬಿಡುವವರು ಇವರು. ಕಂಡದ್ದೆಲ್ಲ ಆಜ್ಞೇಯ, ಅದೊಂದು ಆಜ್ಞೆ, ಅಪ್ಪಣೆ ಎಂದು ತಿಳಿದು ಪಾಲಿಸುವವರು. ಮೂರನೆಯವರು ವಿಜ್ಞಾನಿಗಳು. ಯಾವುದೇ ವಿಷಯವನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಅದು ಸ್ವೀಕಾರ ಮಾಡುವುದಕ್ಕೆ ಅರ್ಹವಾದದ್ದು ಎಂದು ಸಿದ್ಧವಾದಾಗ ಮಾತ್ರ ಒಪ್ಪಿಕೊಳ್ಳುವವರು. ಕೊನೆಗೆ ಬರುವವರು ಜ್ಞಾನಿಗಳು. ಪ್ರತಿಯೊಂದು ಚಿಂತನೆಯನ್ನು ಅಂತರೀಕ್ಷಣೆಯಿಂದ ಕಂಡು, ಶೋಧಿಸಿ ಅದರ ಅಂತರಂಗವನ್ನು ಗ್ರಹಿಸುವವರು.
ಹೀಗೆ ಪ್ರಪಂಚ ವಿವಿಧ ತರಹದ ಜನರ ವಿಶಾಲವಾದ ಕೂಟವಾಗಿದೆ. ಇದೇ ಅದರ ಸ್ವಾರಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.