ADVERTISEMENT

ಅತಿಯಾದ ಮೋಹದ ಫಲ

ಡಾ. ಗುರುರಾಜ ಕರಜಗಿ
Published 26 ಮಾರ್ಚ್ 2019, 18:30 IST
Last Updated 26 ಮಾರ್ಚ್ 2019, 18:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಹಳ್ಳಿಯಲ್ಲಿ ಕುಂಬಾರನಾಗಿ ಜನ್ಮವೆತ್ತಿದ್ದ. ಪಾತ್ರೆಗಳನ್ನು, ಮಡಕೆಗಳನ್ನು ಮಾಡುತ್ತ ಜೀವನ ಸಾಗಿಸುತ್ತಿದ್ದ.

ವಾರಾಣಸಿಯ ಮುಂದೆಯೇ ಹರಿಯುತ್ತಿದ್ದ ಮಹಾನದಿಯ ಬದಿಯಲ್ಲಿ ಕೆಲವು ಕೆರೆಗಳಿದ್ದವು. ಮಳೆಗಾಲದಲ್ಲಿ ನದಿಯ ನೀರು ತುಂಬಿ ಹರಿದಾಗ ಅದರ ನೀರು ಕೆರೆಗೆ ಬಂದು ಸೇರಿ ಎರಡೂ ಒಂದೇ ಪಾತ್ರವಾಗಿಬಿಡುತ್ತಿದ್ದವು. ಮತ್ತೆ ನೀರು ಕಡಿಮೆಯಾದಾಗ ಅವು ಬೇರೆ ಬೇರೆಯೇ ಆಗುತ್ತಿದ್ದವು. ಎರಡೂ ಪಾತ್ರಗಳು ಒಂದಾಗಿದ್ದಾಗ ನದಿಯ ಮೀನುಗಳು ಕೆರೆಗೆ ಮತ್ತು ಕೆರೆಯ ಮೀನುಗಳು ನದಿಗೆ ಹೋಗಿ ಬರುತ್ತಿದ್ದವು.

ಕೆರೆಯಲ್ಲಿಯ ಮೀನುಗಳಿಗೆ, ಆಮೆಗಳಿಗೆ ಈ ವರ್ಷ ಮಳೆ ಹೆಚ್ಚಾಗುತ್ತದೆ. ಕಡಿಮೆಯಾಗುತ್ತದೆ ಎಂಬುದು ಮೊದಲೇ ತಿಳಿದುಬಿಡುತ್ತಿತ್ತು. ಒಂದು ವರ್ಷ ಈ ಪ್ರಾಣಿಗಳಿಗೆ ತಿಳಿಯಿತು, ಈ ವರ್ಷ ಮಳೆ ತುಂಬ ಕಡಿಮೆಯಾಗುತ್ತದೆ. ಹಾಗಾದಾಗ ಕೆರೆ ಒಣಗಿ ಮೀನುಗಳು ಸಾಯುತ್ತವೆ ಎಂಬುದು ಖಚಿತವಾಗಿ ನದಿ ತುಂಬಿ ಕೆರೆಯನ್ನು ಸೇರಿದಾಗ ಮೀನುಗಳು, ಆಮೆಗಳು ನದಿಯನ್ನು ಸೇರಿಬಿಟ್ಟವು. ಒಂದು ಆಮೆ ಮಾತ್ರ ಇದು ನನ್ನ ಕೆರೆ, ನಾನು ಹುಟ್ಟಿದ ಕೆರೆ, ನಾನು ಇಲ್ಲಿಯೇ ದೊಡ್ಡವನಾದದ್ದು, ನನ್ನ ತಂದೆ-ತಾಯಿಯರೂ ಬದುಕಿದ್ದು ಇಲ್ಲಿಯೇ. ಆದ್ದರಿಂದ ನಾನು ಇದನ್ನು ಬಿಟ್ಟು ಹೋಗಲಾರೆ ಎಂದು ತೀರ್ಮಾನ ಮಾಡಿತು. ಬೇರೆ ಪ್ರಾಣಿಗಳು ತಿಳಿಹೇಳಿದರೂ ಕೇಳದೆ ಅಲ್ಲಿಯೇ ಉಳಿಯಿತು.

ADVERTISEMENT

ಪ್ರಾಣಿಗಳು ಯೋಚಿಸಿದಂತೆ ಈ ವರ್ಷ ಬೇಸಿಗೆ ಬಹಳ ಪ್ರಖರವಾಗಿತ್ತು. ಕೆರೆ ಪೂರ್ತಿ ಒಣಗಿಹೋಯಿತು. ಆಮೆಗೆ ಬದುಕೇ ಕಷ್ಟವಾಯಿತು. ಹೇಗಾದರೂ ಬದುಕಿಕೊಳ್ಳಬೇಕೆಂದು ಕೆರೆಯ ತಳದಲ್ಲಿ ನೆಲವನ್ನು ಕೊರೆದು ಒಳಗೆ ಸೇರಿ ಕುಳಿತುಕೊಂಡಿತು. ಆಗ ಬೋಧಿಸತ್ವ ಮಡಕೆ ಮಾಡಲು ಮಣ್ಣು ತರಲು ಕೆರೆಗೆ ಹೋದ. ಕೆರೆಯ ತಳದಲ್ಲಿಯ ಮಣ್ಣು ಮಡಕೆ ಮಾಡಲು ಅತ್ಯಂತ ಸೂಕ್ತವಾದದ್ದು. ಆತ ಹೋಗಿ ಮಣ್ಣು ಅಗೆಯಲು ಪ್ರಾರಂಭಿಸಿದ. ದುರ್ದೈವಕ್ಕೆ ಅವನು ಆರಿಸಿಕೊಂಡ ಸ್ಥಳ ಆಮೆ ಅವಿತುಕೊಂಡಿರುವ ಜಾಗೆಯೇ ಆಗಿತ್ತು. ಬೋಧಿಸತ್ವ ಗುದ್ದಲಿಯಿಂದ ನೆಲವನ್ನು ಅಗೆದಾಗ ಗುದ್ದಲಿ ಬೆನ್ನಿಗೆ ಬಡಿದು ಆಮೆಯ ಬೆನ್ನು ಮುರಿದು ಹೋಯಿತು. ಅದನ್ನು ಮಣ್ಣು ಉಂಡೆಯಂದೇ ತಿಳಿದು ಅದನ್ನು ಎತ್ತಿ ದಂಡೆಯ ಮೇಲೆ ಹಾಕಿದ. ಆಮೆ ನೋವು ತಡೆಯಲಾರದೆ ಒದ್ದಾಡುತ್ತಿತ್ತು. ಜನರು ಸುತ್ತ ನೆರೆದಿದ್ದರು. ಆಗ ಆಮೆ, ‘ನಾನು ಕೆಸರಿನಲ್ಲೇ ಉಳಿದು ಹೋದೆ. ದುರ್ಬಲನಾದ ನನ್ನನ್ನು ಈ ಕೆಸರೇ ದು:ಖಕ್ಕೆ ಈಡುಮಾಡಿತು. ನಾನು ಉಳಿದವರಂತೆ ನದಿಗೆ ಹೋಗಿದ್ದರೆ ಸಂತೋಷವಾಗಿ ಬದುಕಬಹುದಿತ್ತು’ ಇಷ್ಟು ಹೇಳಿ ಆಮೆ ಸತ್ತು ಹೋಯಿತು.

ಬೋಧಿಸತ್ವ ಇದನ್ನು ನೋಡಿ ಜನರಿಗೆ ಬೋಧೆ ಮಾಡಿದ, ‘ತನ್ನ ನಿವಾಸಸ್ಥಾನದ ಬಗ್ಗೆ ಇದ್ದ ಅತಿಯಾದ ಮೋಹದಿಂದ ಆಮೆ ಸತ್ತು ಹೋಯಿತು. ನೀವೂ ಆಮೆಯಂತೆ ಆಗಬೇಡಿ. ತೃಷ್ಣೆಗೆ ವಶರಾಗಿ ಈ ರೂಪ ನನ್ನದು, ಈ ಶಬ್ದ ನನ್ನದು, ಈ ರಸ ನನ್ನದು, ಈ ಸ್ಪರ್ಶ ನನ್ನದು, ಮಗ ನನ್ನವನು, ಮಗಳು ನನ್ನವಳು, ದಾಸ ದಾಸಿಯರು ನನ್ನವರು ಎಂದು ತಿಳಿದು ದು:ಖಕ್ಕೆ ಬೀಳಬೇಡಿ. ನಮ್ಮ ಮೋಹ ಹೆಚ್ಚಿದಷ್ಟು ನಮ್ಮ ದು:ಖವೂ ಹೆಚ್ಚಾಗುತ್ತದೆ’ ಅವನ ಉಪದೇಶ ಜಂಬೂದ್ವೀಪದಲ್ಲೆಲ್ಲ ಹಬ್ಬಿ ಏಳುನೂರು ವರ್ಷಗಳವರೆಗೆ ನೆಲೆಯಾಗಿತ್ತಂತೆ.

ಆ ಉಪದೇಶ ಇಂದಿಗೂ, ನಮಗೂ ಸದಾ ಪ್ರಸ್ತುತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.