ADVERTISEMENT

ಯಾವುದೂ ಕಿರಿದಲ್ಲ

ಡಾ. ಗುರುರಾಜ ಕರಜಗಿ
Published 25 ಮಾರ್ಚ್ 2019, 20:15 IST
Last Updated 25 ಮಾರ್ಚ್ 2019, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು ? |

ಕ್ರಿಮಿಗೆ ಹಸಿವುಂಟಿನಿತು ಬೆದಕಾಟಮುಂಟು ||
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ |
ಕ್ರಿಮಿಪಂಕ್ತಿ ಕಿರಿದಹುದೆ – ಮಂಕುತಿಮ್ಮ || 110 ||

ಪದ-ಅರ್ಥ: ಹಿರಿಮೆಯದೇನು=ಹಿರಿಮೆ+ಅದೇನು, ಹಸಿವುಂಟಿನಿತು=ಹಸಿವುಂಟು+ಇನಿತು(ಸ್ವಲ್ಪ), ಬೆದಕಾಟಮುಂಟು=ಬೆದಕಾಟ(ಹೆಣಗಾಟ, ತಡಗಾಟ)+ಉಂಟು, ಸಮಯುಗದ (ಅದೇ ಯುಗದ)

ADVERTISEMENT

ವಾಚ್ಯಾರ್ಥ: ಹಿಮಾಲಯದ ಗಿರಿಗಳನ್ನು ಕಂಡವನಿಗೆ ಕ್ರಿಮಿ ಹಿರಿದೆನಿಸೀತೇ? ಈ ಕ್ರಿಮಿಗೆ ಹಸಿವು ಇದೆ, ಬದುಕಿನ ಒದ್ದಾಟವಿದೆ, ಅನಾದಿಕಾಲದಿಂದ ಬಂದ ಸಂತತಿಯ ಪರಂಪರೆ ಇದೆ. ಹಿಮಾಲಯದ ಆಯಸ್ಸಿಗೆ ಸಮಾನಾದ ಕ್ರಿಮಿ ಪರಂಪರೆಯನ್ನು ಕಿರಿದು ಎನ್ನಬಹುದೆ?

ವಿವರಣೆ: ಹಿಮಾಲಯದ ಉನ್ನತ ಶಿಖರಗಳನ್ನು ಕಂಡು ಸಂತೋಷಪಟ್ಟವನಿಗೆ ಒಂದು ಪುಟ್ಟ ಕ್ರಿಮಿ ದೊಡ್ಡದು ಎನ್ನಿಸೀತೇ? ಛೇ ಆ ಮಹಾಪರ್ವತದ ಮುಂದೆ ಇದರ ಗಾತ್ರ ನಿಕೃಷ್ಟವಾದದ್ದು ಎನ್ನಿಸಬಹುದು. ಆದರೆ ಸೂಕ್ಷ್ಮದಲ್ಲಿ ಗಮನಿಸಿದರೆ ಹಿಮಾಲಯಕ್ಕೆ ಅಸಾಧ್ಯವಾದದ್ದು ಕ್ರಿಮಿಗೆ ಸುಲಭಸಾಧ್ಯವಾಗುತ್ತದೆ. ಧರೆಯ ಮೇಲೆ ಸೆಟೆದು ನಿಂತ ಪರ್ವತಕ್ಕೆ ಹಸಿವು, ನೀರಡಿಕೆ ಇಲ್ಲ. ಅದು ಅದರಿಚ್ಛೆಯಂತೆ ಚಲಿಸಲಾರದು. ಅದಕ್ಕೆ ಯಾವ ಒದ್ದಾಟಗಳೂ ಇಲ್ಲ. ಅಪೇಕ್ಷೆಗಳೂ ಇಲ್ಲ. ಆದರೆ ಅದೆಷ್ಟೇ ಪುಟ್ಟ ಕ್ರಿಮಿಯಾದರೂ ಅದಕ್ಕೆ ಮತ್ತೊಂದು ಕ್ರಿಮಿಯೊಂದಿಗೆ ಬಾಂಧವ್ಯವುಂಟು, ಸಂತೋಷದ ಗಳಿಗೆಗಳುಂಟು. ಅದು ತನ್ನ ಸಂಸಾರವನ್ನು ಬೆಳೆಸುತ್ತದೆ. ಆ ಸಂತತಿಯಿಂದ ಮತ್ತೆ ಸಂತತಿ. ಹೀಗೆ ಕ್ರಿಮಿ ಸತ್ತು ಹೋದರೂ ಕ್ರಿಮಿಯ ಸಂತತಿ ಅಬಾಧಿತವಾಗಿ ಬೆಳೆಯುತ್ತಲೇ ಹೋಗುತ್ತದೆ.

ಹಿಮಗಿರಿ ಎಷ್ಟು ವರ್ಷಗಳಿಂದ ನಿಂತಿದೆಯೋ ಅಷ್ಟು ವರ್ಷಗಳಿಂದಲೂ ಕ್ರಿಮಿಗಳಿವೆ. ಒಂದು ಕ್ರಿಮಿ ಅಷ್ಟುಕಾಲ ಬದುಕಲಾರದು. ಆದರೆ ಒಂದು ಪರಂಪರೆಯಾಗಿ ಹಿಮಾಲಯದಷ್ಟೇ ವರ್ಷಗಳಿಂದ ಉಳಿದುಕೊಂಡಿದೆ. ಹಾಗಾದರೆ ಹಿಮಾಲಯಕ್ಕೆ ಹೋಲಿಸಿ ಈ ಕ್ರಿಮಿಪಂಕ್ತಿ ಕಿರಿದು ಎನ್ನುವುದು ಸರಿಯೇ?

ಈ ಕಗ್ಗದ ಮೂಲ ಆಶಯ, ಯಾವುದೂ ಹಿರಿದಲ್ಲ, ಯಾವುದೂ ಕಿರಿದಲ್ಲ. ಪ್ರತಿಯೊಂದಕ್ಕೂ ಅದರದೇ ಆದ ಮಾನದ ಸ್ಥಾನವಿದೆ. ಕ್ರಿಮಿಗೆ ಅಸಾಧ್ಯವಾದದ್ದು ಗಿರಿಗೆ ಸಾಧ್ಯವಾಗುತ್ತದೆ. ಹಾಗೆಯೇ ಗಿರಿಗೆ ಮಾಡಲು ಅಸಾಧ್ಯವಾದ ಚಲನೆ ಕ್ರಿಮಿಗೆ ಅತ್ಯಂತ ಸುಲಭ.

ಅತ್ಯಂತ ಬಲಶಾಲಿಯಾದ, ಬೃಹತ್ ದೇಹದ ಆನೆಗೆ ಇರುವೆಯನ್ನು ಕಂಡರೆ ತಾತ್ಸಾರ. ಅದರ ಪುಟ್ಟ ಶರೀರದ ಬಗ್ಗೆ ತಿರಸ್ಕಾರ. ಗಾತ್ರದಲ್ಲಿ ಹೋಲಿಕೆಗೆ ಅಸಾಧ್ಯವಾದಷ್ಟು ಪುಟ್ಟ ಶರೀರ ಇರುವೆಯದು, ಅದಕ್ಕಾಗಿ ಆನೆಯ ಅಹಂಕಾರ. ಒಂದು ದಿನ ಇರುವೆ ಸೊಂಡಿಲಿನೊಳಗೆ ಸೇರಿತು. ಮೇಲೇರಿ ಅತ್ಯಂತ ಮೃದುವಾದ ಭಾಗದ ಮೇಲೆ ಕುಳಿತು ಬಲವಾಗಿ ಕಚ್ಚಿತು. ಆನೆ ಜೋರಾಗಿ ಉಸಿರುಬಿಟ್ಟಿತು, ಸೊಂಡಿಲನ್ನು ಜೋರಾಗಿ ಅಲ್ಲಾಡಿಸಿತು, ಕಾಲೆತ್ತಿ ಹಾರಾಡಿತು. ಊಹೂಂ ಏನಾದರೂ ಇರುವೆ ಬಿಡುತ್ತಿಲ್ಲ. ಆನೆಗೆ ಹುಚ್ಚು ಹಿಡಿಯುವುದು ಬಾಕಿ. ಆನೆಗರಿವಾಯಿತು ದೊಡ್ಡ ದೇಹ ಅಹಂಕಾರಕ್ಕೆ ಯೋಗ್ಯವಲ್ಲ. ಪುಟ್ಟ ದೇಹ ವ್ಯರ್ಥ, ನಿರರ್ಥಕವಲ್ಲ. ಎರಡಕ್ಕೂ ಅವರವರ ಸ್ಥಾನದಲ್ಲಿ ಬೆಲೆಯುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.