ADVERTISEMENT

ಬದುಕಿನ ಪರಿಪಾಕ

ಡಾ. ಗುರುರಾಜ ಕರಜಗಿ
Published 17 ಏಪ್ರಿಲ್ 2019, 20:00 IST
Last Updated 17 ಏಪ್ರಿಲ್ 2019, 20:00 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪಾಕ ನಿನ್ನೊಳದೊಂದು ಸಾಗುತಿಹುದೆಡೆಬಿಡದೆ |
ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ||
ಸಾಕುಬೇಕುಗಳೆಲ್ಲವದರಿನಾ ಯಂತ್ರವನು |
ಏಕೆ ರಚಿಸಿದನೋ ವಿಧಿ ! – ಮಂಕುತಿಮ್ಮ || 120 ||

ಪದ-ಅರ್ಥ: ಪಾಕ=ಸಾರ, ಬನಿ, ನಿನ್ನೊಳದೊಂದು=ನಿನ್ನೊಳು+ಅದೊಂದು, ಸಾಗುತಿಹುದೆಡೆಬಿಡದೆ= ಸಾಗುತಿಹುದು+ ಎಡೆಬಿಡದೆ, ಲೋಕದೆಲ್ಲವು=ಲೋಕದ+ಎಲ್ಲವೂ, ಸೂಕ್ಷ್ಮಗತಿಯಿನೊಳವೊಕ್ಕು=ಸೂಕ್ಷ್ಮಗತಿಯಿಂದ+ಒಳಹೊಕ್ಕು, ಸಾಕುಬೇಕುಗಳೆಲ್ಲವದರಿನಾ=ಸಾಕುಬೇಕುಗಳೆಲ್ಲವಂ+ಅದರಿಂ+ಆ

ವಾಚ್ಯಾರ್ಥ: ನಿನ್ನಲ್ಲಿ ಒಂದು ಪಾಕ, ಸಾರ, ಸಾರವಸ್ತುವೊಂದು ಎಡೆಬಿಡದೆ ಸಾಗುತ್ತಿದೆ. ಲೋಕದ ಎಲ್ಲವೂ ಸೂಕ್ಷ್ಮಗತಿಯಲ್ಲಿ ಅದರ ಒಳಹೊಕ್ಕಿದ. ಸಾಕು, ಬೇಕುಗಳೆಲ್ಲವೂ ಆ ಪಾಕದಿಂದಲೇ ಬರುವಂಥವುಗಳು. ಈ ಯಂತ್ರವನ್ನು ವಿಧಿ ಯಾಕೆ ರಚಿಸಿದನೋ?

ADVERTISEMENT

ವಿವರಣೆ: ಮೋಹನದಾಸನ ಬಾಲ್ಯ ಯಾವ ವಿಶೇಷತೆಯಿಂದಲೂ ಕೂಡಿದ್ದಲ್ಲ. ಅತ್ಯಂತ ಸಾಮಾನ್ಯವಾದ ಬಾಲ್ಯ. ಅನೇಕ ದೌರ್ಬಲ್ಯಗಳು ಬೆನ್ನತ್ತಿದವು, ದು:ಖ, ಪಶ್ಚಾತ್ತಾಪಗಳು ಕಾಡಿದವು. ಸೋಲು, ಅಪಮಾನಗಳು ಅವನನ್ನು ಬೇಯಿಸಿದವು. ಅನ್ಯಾಯದ ವಿರುದ್ಧ ಜೀವನವನ್ನು ಹುರಿಗೊಳಿಸಿದವು.

ಬದುಕಿನ ಕೊನೆಯ ಹಂತಕ್ಕೆ ಬರುವಾಗ ಅವರೊಬ್ಬ ಮಹಾತ್ಮ ಗಾಂಧೀಯಾದರು, ಸಂತರೇ ಆದರು. ಅವರ ಬದುಕಿನುದ್ದಕ್ಕೂ ಜೀವನದ ಪಾಕ ಹರಳುಗಟ್ಟುತ್ತ ಬಂದಿತ್ತು. ಯಾವ ಒಂದು ಘಟನೆ ಅವರನ್ನು ಮಹಾತ್ಮನನಾಗಿ ಮಾಡಲಿಲ್ಲ, ಬದುಕಿನ ಎಲ್ಲ ಘಟನೆಗಳೂ ಕ್ಷಣದಿಂದ ಕ್ಷಣಕ್ಕೆ ಪರಿವರ್ತನೆಯನ್ನು ತಂದಿದ್ದವು.

ಇದರಂತೆಯೇ ಯಾವುದೇ ಮಹಾನುಭಾವರ ಬದುಕನ್ನು ಗಮನಿಸಿದರೆ ಬದುಕಿನಲ್ಲಿ ಬರುವ ಪ್ರತಿಯೊಂದು ಘಟನೆ ಅವರನ್ನು ಪಕ್ವತೆಯ ಕಡೆಗೆ ಕರೆದೊಯ್ದದ್ದು ಕಾಣುತ್ತದೆ. ಭಾರತದ ಋಷಿಮುನಿಗಳು, ಶ್ರೇಷ್ಠ ಆಚಾರ್ಯರುಗಳು, ಸಂತರು, ಶರಣರು, ಸೂಫೀಗಳು, ಝೆನ್ ಗುರುಗಳು ಎಲ್ಲರಲ್ಲೂ ಒಂದು ಸಮಾನತೆಯನ್ನು ಕಾಣುತ್ತೇವೆ. ಅವರೆಲ್ಲ ಬದುಕಿದ್ದು ಎಲ್ಲರನ್ನು ಬಿಗಿದುಹಾಕುವ, ಆಕರ್ಷಣೆಯಿಂದ ಮನಸ್ಸನ್ನು ಸೆಳೆದುಬಿಡುವ ಈ ಪ್ರಪಂಚದಲ್ಲೇ. ಅವರಿಗೆ ಸಿರಿಸಂಪದಗಳು ಇರಲಿಲ್ಲ. ಬಡತನವನ್ನೇ ಹಾಸಿ ಹೊದ್ದಿದವರು. ಆದರೂ ಅವರಿಗೆ ದೊರೆತ ಪರಮಶಾಂತಿ ಎಂಥದ್ದು? ಅನುದಿನದ ಬದುಕನ್ನೇ ಧ್ಯಾನವನ್ನಾಗಿಸಿದಾಗ ಪ್ರತಿದಿನವೂ ಮನಸ್ಸು ಪಾಕವಾಗಿ ಹೋಯಿತು.

ನಮ್ಮ ಬದುಕಿನಲ್ಲಿ ಎಡೆಬಿಡದೆ ಆ ಪಾಕವಾಗುವ ಕ್ರಿಯೆ ನಡೆಯುತ್ತದೆ. ದಿನನಿತ್ಯದ ಸಂಭ್ರಮ, ಕೊರಗು, ದು:ಖ, ನೋವು, ಅಪಮಾನ, ಲಾಭ, ಜಯ, ಹೊಗಳಿಕೆ, ತೆಗಳಿಕೆಗಳೆಲ್ಲ ಪಾಕದ ವಿಧಾನಗಳು. ಅದಕ್ಕೆ ಕಗ್ಗ ಹೇಳುತ್ತದೆ – “ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು” ಎಂದು. ಹೀಗೆಂದರೆ ಲೋಕವ್ಯಾಪಾರದ ಪ್ರತಿಯೊಂದು ನಡೆಯೂ ನಮಗರಿವಿಲ್ಲದಂತೆ ಸೂಕ್ಷ್ಮವಾಗಿ ನಮ್ಮ ಅನುಭವದ ಕೋಶದೊಳಗೆ ಸೇರುತ್ತದೆ. ಆ ಅನುಭವ ನಮ್ಮ ಬದುಕನ್ನು ಹದಗೊಳಿಸಿ ಯಾವುದು ಬೇಕು, ಯಾವುದು ಸಾಕು ಎಂಬುದರ ಪರಿಜ್ಞಾನವನ್ನು ನೀಡುತ್ತದೆ.

ಇದೊಂದು ಜೀವನಯಂತ್ರ. ಹುಟ್ಟಿನಿಂದ ಸಾಯುವವರೆಗೆ ಪ್ರತಿಕ್ಷಣದ ಅನುಭವದಿಂದ ಬೆಳೆಯುತ್ತ, ಲೋಕದ ಎಲ್ಲ ವ್ಯವಹಾರಗಳು ಅದನ್ನು ಪಾಕ ಮಾಡುತ್ತ, ಮನದಲ್ಲಿ ಸಾಕು, ಬೇಕುಗಳನ್ನು ಸೃಷ್ಟಿಸುತ್ತವೆ. ಡಿ.ವಿ.ಜಿ ಆಶ್ಚರ್ಯಪಡುತ್ತಾರೆ- ಇಂಥ ಯಂತ್ರವನ್ನು ವಿಧಿ ಯಾಕೆ ರಚಿಸಿದನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.