ADVERTISEMENT

ವಸ್ತು ಬಯಸುವ ಮರ್ಯಾದೆ

ಡಾ. ಗುರುರಾಜ ಕರಜಗಿ
Published 23 ಮೇ 2019, 19:45 IST
Last Updated 23 ಮೇ 2019, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಹಿಮಾಲಯದಲ್ಲಿ ಒಂದು ಆನೆಯಾಗಿ ಹುಟ್ಟಿದ್ದ. ಅವನು ಬೆಳೆದಂತೆ ಬೃಹದಾಕಾರವಾಗಿ, ಬಲಶಾಲಿಯಾಗಿ ಎಂಭತ್ತು ಸಾವಿರ ಆನೆಗಳಿಗೆ ನಾಯಕನಾಗಿದ್ದ.

ಒಬ್ಬ ಬಡವ ವಾರಾಣಸಿಯ ದಂತಕಾರರ ಬೀದಿಯಲ್ಲಿ ಹೋಗುತ್ತಿದ್ದಾಗ ಅವರು ದಂತವನ್ನು ಬಳಸಿ ಅಲಂಕಾರಗಳನ್ನು, ವಸ್ತುಗಳನ್ನು ನಿರ್ಮಿಸುವುದನ್ನು ಕಂಡು, ತಾನು ದಂತವನ್ನು ತಂದುಕೊಟ್ಟರೆ ಅವರು ತೆಗೆದುಕೊಳ್ಳಬಹುದೇ ಎಂದು ಕೇಳಿದ. ಅವರು ಆಗಬಹುದು ಎಂದಾಗ ಹರಿತವಾದ ಆಯುಧಗಳನ್ನು ತೆಗೆದುಕೊಂಡು, ತಾನು ಸನ್ಯಾಸಿಗಳ ಹಾಗೆ ಕಾವಿಬಟ್ಟೆ ಧರಿಸಿ, ತಲೆಗೊಂದು ಶಿರಸ್ತ್ರ್ತಾಣ ಹಾಕಿಕೊಂಡು ಕಾಡಿಗೆ ಹೋದ.

ಅಲ್ಲಿ ಆನೆಗಳು ಹೋಗುವ ದಾರಿಯಲ್ಲಿ ಮರೆಯಾಗಿ ನಿಂತ. ಆನೆಗಳು ಹಿಂಡು ಹಿಂಡಾಗಿ ಹೋಗುತ್ತಿದ್ದಾಗ ತೀರ ಹಿಂದೆ ಬರುತ್ತಿದ್ದ ಆನೆಯನ್ನು ಕೊಂದು ಅದರ ದಂತವನ್ನು ತಂದು ಮಾರುತ್ತಿದ್ದ. ಅದರಿಂದ ಬಂದ ಹಣದಿಂದ ಸಂಸಾರದ ಪೋಷಣ ಮಾಡುತ್ತಿದ್ದ. ಬರಬರುತ್ತ ಅವನ ದುರಾಸೆ ಹೆಚ್ಚಾಯಿತು. ನಿಧಾನಕ್ಕೆ ದಿನಕ್ಕೆ ಎರಡು ಮೂರು ಆನೆಗಳನ್ನು ಕೊಲ್ಲತೊಡಗಿದ.

ADVERTISEMENT

ದಿನದಿನವೂ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಆನೆಗಳು ನಾಯಕ ಬೋಧಿಸತ್ವನ ಗಮನಕ್ಕೆ ತಂದವು. ಅವನಿಗೂ ಏಕೆ ಆನೆಗಳು ಕಡಿಮೆಯಾಗುತ್ತಿವೆ ಎಂಬುದು ತಕ್ಷಣ ಹೊಳೆಯಲಿಲ್ಲ. ಒಂದು ಮರಿಯಾನೆ ಮಾತ್ರ, ‘ಒಬ್ಬ ಬೌದ್ಧ ಸನ್ಯಾಸಿ ದಿನಾಲು ಕಾಡಿನಲ್ಲಿ ಇರುತ್ತಾನೆ. ನಮ್ಮ ಗುಂಪಿನ ಹಿಂದೆಯೇ ಬರುತ್ತಿದ್ದುದನ್ನು ನೋಡಿದ್ದೇನೆ. ಅವನೇನಾದರೂ ನಮ್ಮವರನ್ನು ಕೊಲ್ಲುತ್ತಿದ್ದಾನೋ ಏನೋ’ ಎಂದಿತು.

ಅದನ್ನು ಪರೀಕ್ಷಿಸಿ ನೋಡಬೇಕೆಂದು ಮರುದಿನ ಬೋಧಿಸತ್ವ ತಾನೇ ಆನೆಗಳ ಹಿಂಡಿನ ಹಿಂದೆ ಬಂದ. ಗುಂಪು ನಿಧಾನವಾಗಿ ಮುಂದೆ ನಡೆದಾಗ ಸನ್ಯಾಸಿ ವೇಷದ ಈ ಮನುಷ್ಯ ಆಯುಧವನ್ನು ಹಿರಿದು ಕೊಲ್ಲಲು ಬೋಧಿಸತ್ವನೆಡೆಗೆ ನುಗ್ಗಿದ. ಮೈಯೆಲ್ಲ ಕಣ್ಣಾಗಿದ್ದ ಬೋಧಿಸತ್ವ ಕ್ಷಣದಲ್ಲಿ ಗರ್ರನೆ ತಿರುಗಿ ಸೊಂಡಲಿನಿಂದ ಅವನನ್ನು ತಳ್ಳಿ ನೆಲಕ್ಕೆ ಕೆಡವಿತು. ನಂತರ ಕಾಲನ್ನೆತ್ತಿ ಅವನು ತುಳಿದು ಹಾಕಲು ಕಾಲನ್ನೆತ್ತಿತು. ನಂತರ ಒಂದು ಕ್ಷಣ ಯೋಚನೆ ಮಾಡಿ ಅವನನ್ನು ಸೊಂಡಲಿನಿಂದ ಸುತ್ತಿ ಮೇಲೆ ಎತ್ತಿತು.

ಅವನನ್ನು ನೋಡಿ ಹೇಳಿತು, ‘ಹೇ ಮೂರ್ಖಾ, ನೀನು ಕೊಲೆಗಾರ. ಏನೂ ತೊಂದರೆ ಮಾಡದ ಆನೆಗಳನ್ನು ಕೊಲ್ಲುತ್ತೀಯಲ್ಲ, ನಿನಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆ. ಆದರೆ ನಿನಗೆ ಇನ್ನೂ ಹೆಚ್ಚಿನ ಶಿಕ್ಷೆ ಆಗಬೇಕಾದದ್ದು ನಿನ್ನ ಹಿಂಸೆಗಲ್ಲ. ಆದರೆ ನೀನು ಅರ್ಹತ್ ಧ್ವಜವಾದ, ಸನ್ಯಾಸಿಗಳ ಕಾವಿಬಟ್ಟೆಯನ್ನು ಹಾಕಿಕೊಂಡು ಹಿಂಸೆ ಮಾಡುತ್ತೀಯಲ್ಲ, ಅದಕ್ಕೆ ಶಿಕ್ಷೆಯಾಗಬೇಕು. ಈ ಅರ್ಹತ್ ಧ್ವಜವನ್ನು, ಗೌರವದ ಸಂಕೇತವನ್ನು ತೆಗೆದು ಹಾಕು ಇಲ್ಲವೇ ಕಾವಿ ಬಟ್ಟೆಗೆ ಅರ್ಹನಾಗುವಂತೆ ಬದುಕು’ ಎಂದು ಅವನನ್ನು ಬಿಸಾಕಿಬಿಟ್ಟಿತು.

ನಾವು ಹಾಕಿಕೊಳ್ಳುವ ಬಟ್ಟೆ ಕೇವಲ ಆವರಣವಲ್ಲ, ಅದು ಗೌರವದ ಸಂಕೇತ. ಕಾವಿಬಟ್ಟೆ ಹಾಕುವುದು ಸುಲಭ ಆದರೆ ಅದು ಬಯಸುವ ತ್ಯಾಗವನ್ನು, ನಿರ್ಮೋಹತ್ವವನ್ನು, ಸಮತ್ವವನ್ನು ಸಾಧಿಸುವುದು ಕಷ್ಟಸಾಧ್ಯವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.