ADVERTISEMENT

ಮೂವರು ಯಜಮಾನರ ಸೇವೆ

ಡಾ. ಗುರುರಾಜ ಕರಜಗಿ
Published 24 ಜೂನ್ 2019, 20:01 IST
Last Updated 24 ಜೂನ್ 2019, 20:01 IST
   

ಅರಸನೊಬ್ಬನಲ್ಲ; ಮೂವರು ಬಾಳನಾಳುವರು |
ನರ ಕರುಮ ದೈವಗಳು; ತೊಡಕದಕೆ ಸಾಜ ||
ಗುರಿಯಿರದ, ಮೊದಲು ಕೊನೆಯಿರದ, ದರಬಾರಿನಲಿ |
ಸರಿಯೇನೊ ತಪ್ಪೇನೊ ? – ಮಂಕುತಿಮ್ಮ || 149 ||

ಪದ-ಅರ್ಥ: ಕರುಮ=ಕರ್ಮ, ಸಾಜ= ಸಹಜ
ವಾಚ್ಯಾರ್ಥ: ನಮ್ಮ ಬದುಕನ್ನು ಆಳುವವರು ಮೂರು ಅರಸರು. ಅವು-ನಾನು, ಕರ್ಮ ಮತ್ತು ದೈವ. ಹೀಗಾಗಿ ಮೂವರು ಅರಸರ ಕಾರುಬಾರು ತೊಡಕೇ ಸರಿ. ಈ ಅರಸರ ದರ್ಬಾರಿಗೆ ಗುರಿ ಇಲ್ಲ, ಮೊದಲಿಲ್ಲ, ಕೊನೆಯಿಲ್ಲ. ಇಲ್ಲಿ ಯಾವುದು ಸರಿಯೋ ಯಾವುದು ತಪ್ಪೋ?

ವಿವರಣೆ: ಮನುಷ್ಯನ ಬಾಳು ಚೆನ್ನಾಗಿ ಆಗಬೇಕಾದರೆ ಅವನ ನಡವಳಿಕೆಗೆ ಒಂದು ನೀತಿ, ನಿಷ್ಕರ್ಷೆ ಬೇಕಾಗುತ್ತದೆ. ಮನುಷ್ಯರ ಬದುಕಿನ ನೀತಿ ಮೂರು ಅಂಶಗಳನ್ನು ಕುರಿತ ಸಿದ್ಧಾಂತದ ಮೇಲೆ ನಿಂತಿದೆ.

ADVERTISEMENT

1. ನಾನು ಎಂದುಕೊಳ್ಳುವ ಜೀವ. ಅದನ್ನು ಕಗ್ಗ ‘ನರ’ ಎನ್ನುತ್ತದೆ.
2. ಕರ್ಮ-ಜಗತ್ತು ಚೆಲುವಾದದ್ದೇ ಮನುಷ್ಯರ ಕರ್ಮದಿಂದ. ಇದು ಚೆಂದದ ಧೀರೋದ್ಯಮ.
3. ದೈವ - ಜೀವ, ಪ್ರಪಂಚಗಳೆರಡಕ್ಕೂ ಮೂಲಕಾರಣವಾಗಿಯೂ, ನಿಯಾಮಕವಾಗಿಯೂ ಇರುವ ವಿಶೇಷ ವಸ್ತು ಅಥವಾ ಶಕ್ತಿ.

ಇವು ಮೂರೂ ಮನುಷ್ಯನ ಬದುಕನ್ನು ಆಳುತ್ತವೆ. ಈ ಮೂರರ ಅರಿವಿನ ವಿಚಾರವೇ ತತ್ವಜ್ಞಾನ.

ಇದು ನನ್ನ ಬದುಕು, ಅದು ನನ್ನ ಜ್ಞಾನ, ಕೌಶಲ್ಯ, ಮನೋಧರ್ಮಗ
ಳಿಂದಲೇ ಸಿದ್ಧಿಸುವುದು ಎಂದು ಮನುಷ್ಯ ಅದನ್ನು ಆಳಲು ಪ್ರಯತ್ನಿಸುತ್ತಾನೆ.

ಕರ್ಮವಿಲ್ಲದೆ ಬದುಕುವುದೇ ಅಸಾಧ್ಯ. ‘ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತಿ ಅಕರ್ಮಕೃತ್’ ಎನ್ನುತ್ತದೆ ಗೀತೆ. ‘ಮನುಷ್ಯನ ರಚನೆ ಹೇಗಿದೆಯೆಂದರೆ ಕರ್ಮಮಾಡದೆ ಒಂದು ಕ್ಷಣವೂ ಇರುವುದು ಸಾಧ್ಯವಿಲ್ಲ’. ಈ ಕರ್ಮದಲ್ಲಿ ಎರಡು ಬಗೆ. ಒಂದು ಪ್ರಾಕೃತ ಕರ್ಮ, ಮತ್ತೊಂದು ಪ್ರಕೃತ ಕರ್ಮ. ಅಪ್ರಯತ್ನವಾಗಿ ನಡೆಯುವ ಕರ್ಮಗಳು- ಉಸಿರಾಡುವುದು, ರೆಪ್ಪೆ ಬಡಿಯುವುದು, ನಿದ್ರೆ, ಹಸಿವು, ಜಲ-ಮಲಬಾಧೆ- ಇವೆಲ್ಲ ಪ್ರಾಕೃತ ಕರ್ಮಗಳು. ಮನುಷ್ಯ ತಿಳಿದೇ ಮಾಡುವ ಕರ್ಮಗಳು – ಅಪ್ರಾಕೃತ ಕರ್ಮಗಳು. ಇವುಗಳಲ್ಲಿ ಎರಡು ಬಗೆ - ಸತ್ಕರ್ಮ ಹಾಗೂ ದುಷ್ಕರ್ಮ. ಸತ್ಕರ್ಮ ಬದುಕನ್ನು ಬೆಳಗುತ್ತದೆ, ದುಷ್ಕರ್ಮ ಬದುಕನ್ನು ನಾಶ ಮಾಡುತ್ತದೆ. ಆದ್ದರಿಂದ ಮನುಷ್ಯನ ಬದುಕನ್ನು ಆಳುವುದು ಕರ್ಮ.

ಪ್ರತಿಯೊಂದು ಕರ್ಮದ ಪಥದಲ್ಲಿ ಮೂರು ಘಟ್ಟಗಳು- ಪ್ರಾರಂಭ, ಪ್ರವರ್ತನ ಹಾಗೂ ಪರಿಣಾಮ. ಸಾಮಾನ್ಯವಾಗಿ ಪ್ರಾರಂಭ, ಪ್ರವರ್ತನಗಳು ಪುರುಷಾಧೀನವಾದವು. ಆದರೆ ಪರಿಣಾಮ ಮಾತ್ರ ದೈವಕ್ಕೆ ಸೇರಿದ್ದು. ಅಂದರೆ ಪ್ರಯತ್ನ ನರನದು, ಬೆಳವಣಿಗೆ ಅವನ ಕರ್ಮದ್ದು ಆದರೆ ಫಲಿತಾಂಶ ದೈವದ್ದು. ಹೀಗಾಗಿ ಮೂವರು ಅವನ ಬದುಕನ್ನು ಆಳುವವರು. ಇಂಗ್ಲೀಷಿನಲ್ಲಿ ಒಂದು ಮಾತಿದೆ, ‘It is impossible to serve two masters’ ‘ಇಬ್ಬರು ಯಜಮಾನರ ಸೇವೆ ಮಾಡುವುದು ಅಸಾಧ್ಯ’. ಇಬ್ಬರನ್ನು ಸೇವಿಸುವುದೇ ಅಸಾಧ್ಯವೆಂದಾಗ ಮೂವರನ್ನು ಸೇವೆ ಮಾಡುವುದು ಹೇಗೆ? ಈ ಕಷ್ಟವೇ ಮಾನವನ ಸಹಜತೆಗೆ ತಡೆಯಾಗಿದೆ.

ಒಂದು ವ್ಯವಸ್ಥೆಯಲ್ಲೇ ಈ ತೊಂದರೆಯಾಗುವುದಾದರೆ ಆದಿ ಇಲ್ಲದ, ಕೊನೆ ಇಲ್ಲದ, ಯಾವ ಗುರಿಯೂ ಕಾಣದ ಈ ವಿಶ್ವದಲ್ಲಿ ಯಾವುದು ಸರಿ, ಯಾವುದು ತಪ್ಪು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.