ADVERTISEMENT

ಸದ್ಗುಣದ ಫಲ

ಡಾ. ಗುರುರಾಜ ಕರಜಗಿ
Published 19 ಜನವರಿ 2020, 19:43 IST
Last Updated 19 ಜನವರಿ 2020, 19:43 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಒಂದು ಜನ್ಮದಲ್ಲಿ ಬೋಧಿಸತ್ವ ಜಿಂಕೆಯಾಗಿ ಹುಟ್ಟಿದ್ದ. ಅದು ಬೆಳೆದು ಬಲಿಷ್ಠ ಮೃಗವಾಯಿತು. ಅದರ ಹೆಸರು ನಂದಿಯ. ನಂದಿಯ ಜಿಂಕೆ ತನ್ನ ತಂದೆ-ತಾಯಿಯರ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿತ್ತು.

ಆ ಸಮಯದಲ್ಲಿ ಕೋಸಲ ರಾಜನಿಗೆ ಜಿಂಕೆಗಳನ್ನು ಬೇಟೆಯಾಡುವ ಹವ್ಯಾಸ ಹುಟ್ಟಿಕೊಂಡಿತು. ಆತ ತನ್ನೊಂದಿಗೆ ಅಪಾರ ಸಂಖ್ಯೆಯ ಜೊತೆಗಾರರು, ಬೇಟೆಗಾರರನ್ನು ಕರೆದುಕೊಂಡು ಹುಯ್ಯಲೆಬ್ಬಿಸುತ್ತ ಕಾಡಿಗೆ ನುಗ್ಗುತ್ತಿದ್ದ. ಇದರಿಂದ ನಗರದ ಜನರಿಗೆ ತುಂಬ ತೊಂದರೆಯಾಗುತ್ತಿತ್ತು.

ಅದಕ್ಕೆ ಅವರೇ ಒಂದು ಯೋಜನೆಯನ್ನು ಮಾಡಿದರು. ನಗರದ ನೂರಾರು ಜನ ಸಣ್ಣ ಸಣ್ಣ ಗುಂಪುಗಳನ್ನು ಮಾಡಿಕೊಂಡು ಕಾಡಿಗೆ ಹೋಗಿ ಅಲ್ಲಲ್ಲಿ ಹುಲ್ಲಿನ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಜಿಂಕೆಗಳನ್ನು ಓಡಿಸಿ ನಗರದ ಹೊರವಲಯದಲ್ಲಿ ಬೇಲಿ ಹಾಕಿ ಇಟ್ಟಿದ್ದ ಪ್ರದೇಶದಲ್ಲಿ ನುಗ್ಗಿಸಿಬಿಡುತ್ತಿದ್ದರು.

ADVERTISEMENT

ಆ ಸಮಯದಲ್ಲಿ ನಂದಿಯ ಜಿಂಕೆ ತನ್ನ ತಂದೆ-ತಾಯಂದಿರೊಂದಿಗೆ ಒಂದು ಹುಲ್ಲುಗಾವಲಿನಲ್ಲಿ ಕುಳಿತಿತ್ತು. ಜನರ ಗದ್ದಲ ಕೇಳಿದಾಗ ಅದು ತನ್ನ ತಂದೆ-ತಾಯಿಯರಿಗೆ ಹೇಳಿತು, “ಈಗ ಬೇಟೆಗಾರರು ಎಲ್ಲ ಜಿಂಕೆಗಳನ್ನು ಹಿಡಿಯುತ್ತಿದ್ದಾರೆ. ನಾನು ನನ್ನ ಪ್ರಾಣ ಕೊಟ್ಟಾದರೂ ನಿಮ್ಮನ್ನು ಉಳಿಸುತ್ತೇನೆ. ಅವರು ಹತ್ತಿರಬಂದಾಗ ನಾನು ಎದ್ದು ಓಡಿಬಿಡುತ್ತೇನೆ. ನೀವು ಅಡಗಿಕೊಂಡು ಕುಳಿತಿರಿ. ಇಲ್ಲಿ ಇರುವುದು ಒಂದೇ ಜಿಂಕೆ ಎಂದುಕೊಂಡು ಅವರು ಹೋಗಿಬಿಡುತ್ತಾರೆ. ನೀವು ಪಾರಾಗುತ್ತೀರಿ”. ಹಾಗೆಯೇ ಗದ್ದಲ ಹತ್ತಿರ ಬಂದಂತೆ ನಂದಿಯ ಅಲ್ಲಿಂದ ಓಡಿ ಉಳಿದ ಜಿಂಕೆಗಳನ್ನು ಸೇರಿಕೊಂಡಿತು. ಜನ ಅಲ್ಲಿಂದ ಹೊರಟು ಹೋದರು.

ಹೀಗೆ ಸಾವಿರಾರು ಜಿಂಕೆಗಳನ್ನು ಕೂಡಿಹಾಕಿದ ಮೇಲೆ ಆ ಪ್ರದೇಶವನ್ನು ಭದ್ರಪಡಿಸಿ ಅರಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಒಂದು ದಿನ ನಂದಿಯ ಜಿಂಕೆಯ ಸರದಿ ಬಂದಿತು. ರಾಜ ಅದನ್ನು ಕೊಲ್ಲಲು ಬಿಲ್ಲಿಗೆ ಬಾಣ ಹೂಡಿ ನಿಂತ. ಈ ಜಿಂಕೆ ಹೆದರಲಿಲ್ಲ, ಓಡಲಿಲ್ಲ. ರಾಜನಿಗೆ ಆಶ್ಚರ್ಯ! ಇನ್ನೊಂದು ಆಶ್ಚರ್ಯವೆಂದರೆ ಬಿಲ್ಲಿನಿಂದ ಬಾಣ ಹೊರಡಲೇ ಇಲ್ಲ. “ಯಾಕೆ ನನಗೆ ಬಾಣ ಬಿಡುತ್ತಿಲ್ಲ?” ಎಂದು ನಂದಿಯ ಜಿಂಕೆ ಕೇಳಿದಾಗ ರಾಜ ಹೇಳಿದ, “ನೀನು ಸದ್ಗುಣಿಯಾಗಿರಬೇಕು. ಈ ಮರದ ಬಿಲ್ಲಿಗೆ ನಿನ್ನ ಗುಣ ತಿಳಿಯಿತು, ಆದರೆ ನನಗೆ ತಿಳಿಯಲಿಲ್ಲ. ನಾನು ನಿನ್ನನ್ನು ಕೊಲ್ಲಲಾರೆ, ಬಿಟ್ಟುಬಿಡುತ್ತೇನೆ”

ಜಿಂಕೆ ಬೇಡಿಕೊಂಡಿತು, “ನನ್ನೊಬ್ಬನಿಗೇ ನೀಡಿದ ಜೀವದಾನ ಯಾವ ಪ್ರಯೋಜನಕ್ಕೆ? ಉಳಿದ ಜಿಂಕೆಗಳು, ಪ್ರಾಣಿಗಳು ನಿನಗೆ ಏನು ಅನ್ಯಾಯ ಮಾಡಿವೆ ಎಂದು ಕೊಲ್ಲುತ್ತೀ? ಇದು ಪಾಪವಲ್ಲವೇ” ರಾಜ ಆ ಕ್ಷಣದಿಂದ ಪ್ರಾಣಿಹಿಂಸೆ ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿ ಅಂತೆಯೇ ನಡೆದ. ಸದ್ಗುಣಗಳನ್ನು ಜನ ಬಹುಬೇಗ ಗುರುತಿಸಲಿಕ್ಕಿಲ್ಲ, ಆದರೆ ಅವುಗಳ ಪ್ರಕಾಶ ಒಂದಲ್ಲ ಒಂದು ದಿನ ಆಗುವುದು, ಅದರಿಂದ ಪ್ರಪಂಚಕ್ಕೆ ಒಳಿತಾಗುವುದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.