ADVERTISEMENT

ಉರಿಮಾರಿಯಾದ ಸಂಸಾರ

345

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 20:00 IST
Last Updated 15 ಆಗಸ್ಟ್ 2019, 20:00 IST
   

ಅರಿಮಿತ್ರ ಸತಿಪುತ್ರ ಬಂಧು ಬಳಗವದೆಲ್ಲ|
ಕರುಮದವತಾರಗಳೊ, ಋಣಲತೆಯ ಚಿಗುರೋ||
ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ|
ವುರಿಮಾರಿಯಾದೀತೊ – ಮಂಕುತಿಮ್ಮ || 172 ||

ಪದ-ಅರ್ಥ: ಅರಿ=ವೈರಿ, ಕರುಮದವತಾರಗಳೊ=ಕರುಮದ(ಕರ್ಮದ)+ ಅವತಾರಗಳೊ ಕಾಪಿಡುವ=ಕಾಪಾಡುವ, ವುರಿಮಾರಿಯಾದೀತೊ=ವುರಿಮಾರಿ(ಉರಿಮಾರಿ)+ಆದೀತೊ
ವಾಚ್ಯಾರ್ಥ: ವೈರಿಗಳು, ಮಿತ್ರರು, ಹೆಂಡತಿ, ಮಗ, ಬಂಧು, ಬಳಗದವರೆಲ್ಲ ನಮ್ಮ ಕರ್ಮದ ಅವತಾರಗಳು, ನಮ್ಮ ಋಣದ ಬಳ್ಳಿಯ ಚಿಗುರುಗಳು. ಈ ಸಂಸಾರ ನಮ್ಮನ್ನು ಬಲಿಕೊಡುವ ಕುರಿಯಂತೆ ಕಾಪಾಡುತ್ತದೆ. ಇದೇ ನಮಗೆ ಉರಿಮಾರಿಯಾದೀತು.

ವಿವರಣೆ: ಹದಿನೇಳು, ಹದಿನೆಂಟನೆ ಶತಮಾನದಲ್ಲಿ ಹಂಪಿಯ ಸುತ್ತಮುತ್ತಲಿದ್ದ ವಚನಗಾರ ಹೇಮಗಲ್ಲ ಹಂಪ ಬರೆದ ವಚನ ಸಂಸಾರದ ಬವಣೆಯನ್ನು ತಿಳಿಸುತ್ತದೆ.

ADVERTISEMENT

“ಏನ ಹೇಳುವೆನಯ್ಯ? ಸಂಸಾರ ಬಂಧನದಲ್ಲಿ ಕಂದಿಕುಂದಿದೆನಯ್ಯಾ
ಅದು ಎಂತೆಂದರೆ:
ಭಾನುವಿನ ಕಿರಣದಲ್ಲಿ ಬಾಡಿದ ಕಮಲದಂತಾದೆ.
ಗಾಳಿಗುಲಿವ ತರಗೆಲೆಯಂತೆ, ಸಂಸಾರವೆಂಬ ಸುಂಟರಗಾಳಿ
ಆಕಾಶಕ್ಕೆ ನೆಗವಿ, ಭೂಕಾಂತೆಗೆನ್ನ ಬಿಟ್ಟು,
ಕಣ್ಣು ಬಾಯೊಳು ಹುಡಿಯಂ ಹೊಯಿದು,
ಮಣ್ಣಕಾಯವ ಮಣ್ಣಿಂಗೆ ಗುರಿಮಾಡಿ ಕಾಡುತಿಪ್ಪುದೀ
ಸಂಸಾರವೆಂಬ ಹೆಮ್ಮಾರಿಯ ಬಾಯಿಗೆನ್ನನಿಕ್ಕದೆ ಕಾಯೋ
ಪರಮಗುರು ಪಡುವಿಡಿ ಸಿದ್ಧಿಮಲ್ಲಿನಾಥ ಪ್ರಭುವೆ.”

ಈ ಸಂಸಾರವನ್ನು ನಾವೇ ಬೇಕೆಂದು ಅಪ್ಪಿಕೊಂಡಿದ್ದು, ಅದಕ್ಕಾಗಿ ಬಯಸಿದ್ದು. ಅದರಿಂದಾಗಿಯೇ ಹುಟ್ಟಿದ್ದು ಈ ಋಣವೆಂಬ ಬಳ್ಳಿಯ ಚಿಗುರುಗಳು. ನಮ್ಮ ಸುತ್ತಮುತ್ತ ಇರುವವರೆಲ್ಲ, ವೈರಿಗಳಾಗಲಿ, ಸ್ನೇಹಿತರಾಗಲಿ, ಪರಿವಾರದವರಾಗಲಿ ಒಂದಲ್ಲ ಒಂದು ರೀತಿಯಲ್ಲಿ ಹಗ್ಗಗಳೇ. ಅವು ನಮ್ಮನ್ನು ಬಂಧಿಸುತ್ತವೆ, ಎಳೆಯುತ್ತವೆ ಮತ್ತು ಹಿಂಸಿಸುತ್ತವೆ. ಒಳ್ಳೆಯ ಮಡದಿ ಸಿಗಲಿ, ಒಳ್ಳೆಯ ಗಂಡ ಸಿಗಲಿ ಎಂದು ಬೇಡುತ್ತೇವೆ. ಮದುವೆಯಾದ ಮೇಲೆ ಜೊತೆಗಾರ ಅಥವಾ ಜೊತೆಗಾತಿಯ ಸಮಸ್ಯೆಗಳು, ನಿಮ್ಮ ಸಮಸ್ಯೆಗಳೊಂದಿಗೆ ಸೇರಿಕೊಳ್ಳುತ್ತವೆ. ಮಕ್ಕಳಾಗಲಿ ಎಂದು ಹರಕೆ ಹೊತ್ತುಕೊಳ್ಳುತ್ತೇವೆ. ಮಗು ಹುಟ್ಟಿದ ತಕ್ಷಣ ಅದರ ಆರೈಕೆಯ ಚಿಂತೆ, ಶಿಕ್ಷಣದ, ಕೆಲಸದ, ಮದುವೆಯ ಚಿಂತೆ. ಅದಕ್ಕೇ ಈ ಕಗ್ಗ ಹೇಳುತ್ತದೆ, ಎಲ್ಲ ಸಂಬಂಧಗಳು ನಮ್ಮ ಕರ್ಮದ ಅವತಾರಗಳು, ನಮ್ಮನ್ನು ಋಣಕ್ಕೆ ಈಡುಮಾಡಿ ಅಣು ಅಣುವೆ ಸೆಳೆಯುವಂಥವುಗಳು. ಬಲಿಕೊಡುವ ಮುನ್ನ ಕುರಿಯನ್ನು ಹೇಗೆ ಚೆನ್ನಾಗಿ ನೋಡಿಕೊಂಡು ಕೊಬ್ಬಿಸುತ್ತಾರೋ ಹಾಗೆ ಸಂಸಾರ ನಮ್ಮನ್ನು ಕಾಪಾಡಿಕೊಂಡು ಬಲಿಗೆ ಸಿದ್ಧಗೊಳಿಸುತ್ತದೆ. ವಚನದಲ್ಲಿ ಹೇಳಿದಂತೆ ಅದು ಸುಂಟರಗಾಳಿಯಂತೆ ನಮ್ಮನ್ನು ಆಕಾಶಕ್ಕೆತ್ತಿ, ನೆಲಕ್ಕೆ ಅಪ್ಪಳಿಸಿ, ಕಣ್ಣು, ಬಾಯಿಯಲ್ಲಿ ಮಣ್ಣು ತುಂಬಿಸಿ, ಮಣ್ಣಿನ ಶರೀರವನ್ನು ಮಣ್ಣು ಮಾಡುತ್ತದೆ. ಕಗ್ಗ “ಈ ಸಂಸಾರ ಉರಿಮಾರಿಯಾದೀತೋ” ಎಂದು ಎಚ್ಚರಿಸುತ್ತದೆ. ಉರಿಮಾರಿಯಾದೀತು ಎಂಬ ತೀರ್ಮಾನವನ್ನು ಕೊಡುವುದಿಲ್ಲ, ಬದಲಾಗಿ ಅದು ಹಾಗೆ ಆದೀತೋ ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.