ADVERTISEMENT

ಮನಸಿನ ಹಸಿವಿನ ಚಕ್ರ

ಡಾ. ಗುರುರಾಜ ಕರಜಗಿ
Published 15 ನವೆಂಬರ್ 2019, 23:07 IST
Last Updated 15 ನವೆಂಬರ್ 2019, 23:07 IST
   

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ ? ಚಿಂತಿಸೆಲೊ – ಮಂಕುತಿಮ್ಮ || 211 ||

ಪದ-ಅರ್ಥ: ತಣಿಸಲದನೊಗೆಯುವುದು=ತಣಿಸಲು+ಅದನು+ಒಗೆಯುವುದು(ಹುಟ್ಟುವುದು) ಮನುಜನೇಳಿಗೆಯದರಿನ್=ಮನುಜನ+ಏಳಿಗೆ+ಅದರಿನ್(ಅದರಿಂದ)

ವಾಚ್ಯಾರ್ಥ: ಮನಸ್ಸು ಬೆಳೆದಂತೆ ಅದರ ಹಸಿವೂ ಬೆಳೆಯುತ್ತದೆ. ಆ ಹಸಿವನ್ನು ತಣಿಸಲು ಹೊಸ ಹೊಸ ಯುಕ್ತಿಗಳು ಬರುತ್ತವೆ. ಆ ಯುಕ್ತಿಗಳಿಂದ ಮನುಷ್ಯನ ಬೆಳವಣಿಗೆಯಾಗುತ್ತದೆ. ಆದರೆ ಆ ಮನಸ್ಸಿನ ಏಳಿಗೆಗೆ ಕೊನೆ ಎಲ್ಲಿದೆ? ಚಿಂತಿಸಿ ನೋಡು.

ADVERTISEMENT

ವಿವರಣೆ: ಆದಿಮಾನವ ಕಾಡಿನಲ್ಲಿದ್ದ, ಗುಹೆಯಲ್ಲಿ ಬದುಕಿದ್ದ, ಬೇಟೆಯಾಡಿ ಹಸಿಮಾಂಸವನ್ನು ತಿನ್ನುತ್ತಿದ್ದ. ಬೆಂಕಿಯನ್ನು ಕಂಡುಹಿಡಿದ. ಆಹಾರವನ್ನು ಬೆಂಕಿಯಲ್ಲಿ ಬೇಯಿಸಿ ರುಚಿ ಮಾಡಿಕೊಂಡ. ನಂತರ ಚಳಿ, ಗಾಳಿಗಳಿಂದ ತಪ್ಪಿಸಿಕೊಳ್ಳಲು ಮನೆ ಕಟ್ಟಿಕೊಂಡ. ಕೆಲಸಕ್ಕೆ ಅನುಕೂಲವಾಗಲೆಂದು ಪ್ರಾಣಿಗಳನ್ನು ಬಳಸಿಕೊಂಡ. ಬದುಕಿನಲ್ಲಿ ಆಹಾರವನ್ನು ವ್ಯವಸ್ಥಿತವಾಗಿ ಪಡೆಯಲೆಂದು ಕೃಷಿಯನ್ನು ನಡೆಸಿದ. ತನ್ನ ಸುಖ, ದು:ಖಗಳನ್ನು ಹಂಚಿಕೊಳ್ಳಲು ಸಂಬಂಧಗಳನ್ನು ಕಲ್ಪಿಸಿಕೊಂಡ. ಸಮಾಜದ ವ್ಯವಸ್ಥೆ ಮಾಡಿದ. ಪ್ರವಾಸವನ್ನು ಸುಖಮಯವನ್ನಾಗಿಸಿಕೊಳ್ಳಲು ಹೊಸಹೊಸ ವಾಹನಗಳ ಆವಿಷ್ಕಾರಗಳನ್ನು ಮಾಡಿಕೊಂಡ. ಗಾಳಿಯಲ್ಲಿ ಪಕ್ಷಿಗಳಂತೆ ವಿಮಾನದಲ್ಲಿ ಹಾರಿದ, ಮೀನಿನಂತೆ ಸಾಗರದ ತಳದಲ್ಲಿ ಅಂಗರ್ತಾಮಿಯಾಗಿ ಸುತ್ತಿದ.

ಹೀಗೆ ಮನುಷ್ಯನ ಮನಸ್ಸು ಬೆಳೆಯುತ್ತ ನಡೆಯಿತು. ಈ ಮನಸ್ಸಿನ ಸ್ವಭಾವವೆಂದರೆ ಅದಕ್ಕೆ ತೃಪ್ತಿ ಎಂಬುದಿಲ್ಲ. ಒಂದು ಅಪೇಕ್ಷೆ ತೀರಿದ ನಂತರ ಮತ್ತೊಂದು ಎದ್ದು ನಿಲ್ಲುತ್ತದೆ. ಮತ್ತದರ ತೃಪ್ತಿಗೆ ಹೋರಾಟ, ಹೊಸ ವಸ್ತುಗಳ ಹುಡುಕಾಟ.

ದಯವಿಟ್ಟು ಗಮನಿಸಿ, ಈ ಜಗತ್ತಿನ ವೈಜ್ಞಾನಿಕ, ತಾಂತ್ರಿಕ, ಶೈಕ್ಷಣಿಕ, ಸಾಂಸ್ಕೃತಿಕ ಬದಲಾವಣೆಗಳ ಹಿಂದೆ ಮನುಷ್ಯನ ತಣಿಸಲಸಾಧ್ಯವಾದ ಮನಸ್ಸಿನ ಹಸಿವಿದೆ. ಆದ್ದರಿಂದ ಪ್ರಪಂಚದ ಬೆಳವಣಿಗೆಯಾದದ್ದು ಈ ಹಸಿವನ್ನು ತಣಿಸುವುದಕ್ಕಾಗಿ. ಅದನ್ನು ಕಗ್ಗ ತುಂಬ ಸುಂದರವಾಗಿ ಹೇಳುತ್ತದೆ. ಮನಸ್ಸು ಬೆಳೆಯುತ್ತದೆ, ಅದರೊಂದಿಗೆ ಮತ್ತಷ್ಟು ಪಡೆಯಬೇಕೆಂಬ ಮನಸ್ಸಿನ ಹಸಿವು ಹೆಚ್ಚಾಗುತ್ತ ಹೋಗುತ್ತದೆ. ಆ ಹಸಿವನ್ನು ಅಡಗಿಸಬೇಕಲ್ಲ? ಅದಕ್ಕೆ ನೂರಾರು ತರಹದ ಯುಕ್ತಿಗಳು.

ಈ ಯುಕ್ತಿಗಳಿಂದಾಗಿ ಪ್ರಪಂಚ ಶ್ರೀಮಂತವಾಗುತ್ತದೆ. ಆದರೆ ಬಹುಮುಖ್ಯವಾದ ಪ್ರಶ್ನೆಯೆಂದರೆ ಈ ಮನಸ್ಸಿನ ಏಳಿಗೆಗೆ ಕೊನೆ ಇದೆಯೇ? ಈಗ ಜಗತ್ತು ಬೆಳೆದುಬಂದ ರೀತಿಯನ್ನು ಗಮನಿಸಿದರೆ ಮನಸ್ಸಿನ ಹಸಿವಿಗೆ ಅಂತ್ಯವೇ ಇಲ್ಲ. ಅಂದರೆ ಆ ಹಸಿವನ್ನು ಅಡಗಿಸಲು ಮತ್ತೆ ಯುಕ್ತಿಗಳು! ಕೊನೆಯಿಲ್ಲದ ಮನಸ್ಸಿನ ಆಸೆಗಳು ಏನೇನನ್ನು ಸೃಷ್ಟಿ ಮಾಡುತ್ತವೋ?

ಎಷ್ಟು ಯುಕ್ತಿಗಳು ಬದುಕಿಗೆ ಶಾಂತಿಯನ್ನು ತರುತ್ತವೆಯೋ, ಎಷ್ಟು ಯುಕ್ತಿಗಳು ಕುಯುಕ್ತಿಗಳಾಗಿ ಪ್ರಪಂಚವನ್ನು ತಲ್ಲಣಕ್ಕೆ ದೂಡುತ್ತವೆಯೋ? ಇದೊಂದು ಚಕ್ರ. ಮನಸಿನಾಸೆಗೆ ಯುಕ್ತಿಗಳು, ಯುಕ್ತಿಗಳಿಂದ ಬೆಳವಣಿಗೆ, ಬೆಳವಣಿಗೆಯಿಂದ ಹೊಸ ಹಸಿವು, ಮತ್ತೆ ಯುಕ್ತಿಗಳು. ಈ ಚಕ್ರದಿಂದ ಮುಕ್ತಿ ಎಂದು? ಇದನ್ನು ಚಿಂತಿಸಲು ಹೇಳುತ್ತದೆ ಕಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.