ADVERTISEMENT

ರುಚಿಗೆ ಗುರು- ಸೃಷ್ಟಿ

ಡಾ. ಗುರುರಾಜ ಕರಜಗಿ
Published 2 ಡಿಸೆಂಬರ್ 2019, 18:47 IST
Last Updated 2 ಡಿಸೆಂಬರ್ 2019, 18:47 IST

ಪರಿಪರಿಯರೂಪಿನಲಿ ಕಾಂತಿಯಲಿ ರಾಗದಲಿ |
ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ ||
ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು |
ಗುರುರುಚಿಗೆ ಸೃಷ್ಟಿಯಲ - ಮಂಕುತಿಮ್ಮ || 218 ||

ಪದ-ಅರ್ಥ: ಕಾಂತಿಯಲಿ= ಹೊಳಪಿನಲಿ
ವಾಚ್ಯಾರ್ಥ: ವಿಧವಿಧವಾದ ರೂಪಗಳಲ್ಲಿ, ಹೊಳಪಿನಲ್ಲಿ, ರಾಗಗಳಲ್ಲಿ ಪರಿಪರಿಯಾದ ರಸಗಳನ್ನು ಪ್ರಕೃತಿ ತಂದು ತೋರುತ್ತಾಳೆ. ಹಸಿವುಗಳನ್ನು ಕೆರಳಿಸುತ್ತ, ಸವಿಗಳನ್ನು ಕಲಿಸುವ ಈ ಸೃಷ್ಟಿಯೇ ರುಚಿಗೆ ಗುರು.

ವಿವರಣೆ: ಅದೊಂದು ಅತಿ ದೊಡ್ಡದಾದ ಮಕ್ಕಳ ಆಟಿಕೆಯ ಅಂಗಡಿ. ಅದರ ವಿಶಾಲವಾದ ಕಟ್ಟಡದಲ್ಲಿ ಹತ್ತಾರು ಸಾವಿರ ಬಣ್ಣಬಣ್ಣದ ಚಿಕ್ಕ, ದೊಡ್ಡ ಆಟಿಕೆಗಳು, ಆಡದ ವಸ್ತುಗಳನ್ನು ಕೂಡಿಹಾಕಿದ್ದಾರೆ. ಅಲ್ಲಿ ಮಕ್ಕಳನ್ನು ಬಿಟ್ಟರೆ ಏನಾದೀತು? ಪುಟ್ಟ, ಪುಟ್ಟ ಮಕ್ಕಳಿಗೆ ಸಂತೋಷದಿಂದ ದಿಕ್ಕು ತಪ್ಪಿದಂತಾದೀತು. ನಿನಗೆ ಯಾವುದು ಬೇಕೋ, ಎಷ್ಟು ಬೇಕೋ ಆರಿಸಿಕೋ ಎಂದು ಹೇಳಿದರೆ ಒಂದು ಮಗು ತನ್ನ ಮನಸೆಳೆದ ಒಂದು ವಸ್ತುವಿನೆಡೆಗೆ ಓಡುತ್ತದೆ, ಮತ್ತೊಂದು ಮಗು ಮತ್ತೊಂದರೆಡೆಗೆ, ಒಂದನ್ನು ಕೈಯಲ್ಲಿ ಹಿಡಿದಾಗ ಮತ್ತೊಂದು ಗಮನ ಸೆಳೆಯುತ್ತದೆ. ಮತ್ತೆ ಆ ಕಡೆಗೆ ಧಾವಂತ. ಕೊನೆಗೆ ಎರಡೂ ಕೈಗಳಲ್ಲಿ ಹಿಡಿದುಕೊಳ್ಳಲಾರದಷ್ಟು ಸಾಮಾನುಗಳನ್ನು ಹಿಡಿದುಕೊಂಡು ಮತ್ತಷ್ಟು ಹಿಡಿಯಲು ಆಸೆ ಇದ್ದೂ ತೆಗೆದುಕೊಳ್ಳಲಾರದ್ದಕ್ಕೆ ದುಃಖಪಡುವುದನ್ನು ಕಾಣಬಹುದು. ಅವರವರ ಇಚ್ಛೆಗೆ, ಆಸೆಗೆ ತಕ್ಕುದಾದ ಸಾವಿರಾರು ವಸ್ತುಗಳು ಅಲ್ಲಿವೆ. ಈ ಅಂಗಡಿ ಮಕ್ಕಳಲ್ಲಿ ಅದೆಷ್ಟು ಆಸೆಗಳನ್ನು ಹುಟ್ಟಿಸುತ್ತದಲ್ಲವೇ?

ADVERTISEMENT

ಈ ಸೃಷ್ಟಿಯೂ ಒಂದು ಅನನ್ಯವಾದ, ಅಸಾಮಾನ್ಯವಾದ ಅಂಗಡಿ. ಮಕ್ಕಳ ಹಾಗೆ ನಾವು ಓಡಾಡುತ್ತಿದ್ದೇವೆ. ಇಲ್ಲಿರುವ ವಸ್ತುಗಳೋ, ವಿಧವಿಧವಾದ ರೂಪದಿಂದ, ಹೊಳಪಿನಿಂದ ಕಂಗೊಳಿಸುತ್ತಿವೆ. ಅವು ಕಣ್ಣಿಗೆ ಮಾತ್ರವಲ್ಲ, ಮೂಗಿಗೆ ಸುಗಂಧ, ಪರಿಮಳಗಳನ್ನು ನೀಡುತ್ತ; ಕಿವಿಗೆ ಕಲ್ಪನಾತೀತವಾದ ಎಲ್ಲ ವಿಧದ ಸ್ವರ, ರಾಗಗಳನ್ನು ಕೊಡುತ್ತ; ಹುಳಿ, ಕಾರ, ಸಿಹಿ, ಒಗರು, ಉಪ್ಪು ಮೊದಲಾದ ರುಚಿಗಳ ರಾಶಿಯನ್ನೇ ನಮ್ಮ ನಾಲಿಗೆಯ ಮೇಲಿಡುತ್ತ; ಚರ್ಮಕ್ಕೆ ಅತ್ಯಂತ ಹಿತವಾದ, ಮಧುರವಾದ ಕೆಲವೊಮ್ಮೆ ಒರಟಾದ ಸ್ಪರ್ಶ ಸುಖವನ್ನು ಈಯುತ್ತ ನಮ್ಮ ಪಂಚೇಂದ್ರಿಯಗಳನ್ನು ಮರುಳು ಮಾಡಿ ಬಿಟ್ಟಿದೆ. ಈ ರೂಪ, ರಸ, ಗಂಧ, ನಾದ, ಸ್ಪರ್ಶಗಳ ಪರಸ್ಪರ ಯೋಜನೆಗಳೊಂದಿಗೆ ಪ್ರಕೃತಿ ನಮ್ಮ ಮುಂದೆ ರಸದ ಧಾರೆಯನ್ನೇ ಹರಿಸಿದೆ.

ಹೀಗೆ ಉತ್ಪನ್ನವಾದ ರಸಗಳು ನಮಗೆ ತೃಪ್ತಿಯನ್ನು ನೀಡುತ್ತವೆಯೇ? ಇಲ್ಲ, ಅವು ಮತ್ತಷ್ಟು ಹಸಿವನ್ನು ಉದ್ರೇಕಿಸುತ್ತವೆ, ಇನ್ನಷ್ಟು ಹೊಸ ಹಸಿವೆಯನ್ನು ಹುಟ್ಟುಹಾಕುತ್ತವೆ. ಒಂದು ರಸದ ರುಚಿ ನಾಲಿಗೆಗೆ ತಗುಲಿತೋ, ಅದು ಅದನ್ನೇ ಬಯಸುತ್ತದೆ. ಕೆಲವು ಕಾಲದ ನಂತರ ಆ ಸವಿ ನೀರಸವೆನ್ನಿಸಿ ಮತ್ತೊಂದು ಹೊಸ ಸೊಗಸಿಗೆ ಹೊಸ ಸವಿಗೆ ಹಾತೊರೆಯುತ್ತದೆ.

ಪ್ರತಿ ಬಾರಿಗೂ ಹೊಸದನ್ನು ಅನುಭವಿಸಬೇಕೆನ್ನುವ ಮಾನವನ ಆಸೆಗೆ ಕಾರಣ ಯಾವುದು? ಇದೇ ಪ್ರಕೃತಿ. ನಮಗೆ ಕಾಣುವಂತೆ ವಿಧವಿಧವಾದ ರಸವನ್ನು ನಮ್ಮ ಮುಂದೆ ಸುರಿದು, ಅದನ್ನು ಅನುಭವಿಸುವಂತೆ ಮಾಡಿ, ಹೊಸದನ್ನು ಪಡೆಯುವಂತೆ ಪ್ರೋತ್ಸಾಹಿಸಿ, ರುಚಿಗಳ ಬಗ್ಗೆ ನಮಗೆ ತಿಳಿಸಿ ಗುರುವಾಗಿರುವುದು ಇದೇ ಪ್ರಕೃತಿ. ಅದು ನಮಗೆ ಆಕರ್ಷಣೆಯೂ ಹೌದು, ಗುರುವೂ ಹೌದು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.