ADVERTISEMENT

ಪರಸತ್ವ ಮಹಿಮೆ ಅನುಭವದಲ್ಲಿ

ಡಾ. ಗುರುರಾಜ ಕರಜಗಿ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST

ಕುರುಡನಿನ ಚಂದ್ರರನು ಕಣ್ಣಿಂದ ಕಾಣುವನೆ ? !
ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ||
ನರನುಮಂತೆಯೆ ಮನಸಿನನುಭವದಿ ಕಾಣುವನು |
ಪರಸತ್ತ್ವ ಮಹಿಮೆಯನು – ಮಂಕುತಿಮ್ಮ||55||

ಪದ-ಅರ್ಥ: ಕುರುಡನಿನಚಂದ್ರರನು-ಕುರುಡನು+ಇನ
(ಸೂರ್ಯ)+ಚಂದ್ರರನ್ನು, ಬಿಸಿಲುತಣಿವುಗಳ=ಬಿಸಿಲು
(ಬಿಸಿಯಾದದ್ದು)+ತಣಿವು(ತಂಪು)ಗಳ,
ವಾಚ್ಯಾರ್ಥ: ಅಂಧನು ಸೂರ್ಯಚಂದ್ರರನ್ನು ಕಣ್ಣಿಂದ ನೋಡುವನೇ? ಆತ ತನಗಾದ ಸ್ಪರ್ಶದಿಂದ ಬಿಸಿ ಮತ್ತು ತಂಪುಗಳನ್ನು ಅರಿಯುತ್ತಾನೆ. ಹಾಗೆಯೇ ಮನುಷ್ಯನೂ ತನ್ನ ಮನಸ್ಸಿನ ಅನುಭವದಿಂದ ಪರಸತ್ವದ ಮಹಿಮೆಯನ್ನು ಕಾಣುತ್ತಾನೆ,
ವಿವರಣೆ: ಕುರುಡನಿಗೆ ದೃಷ್ಟಿದೋಷ ಇರಬಹುದು. ಆದರೆ ಸ್ಪರ್ಶದೋಷ ಇಲ್ಲವಲ್ಲ? ಹಾಗೆ ನೋಡಿದರೆ ಅವರಲ್ಲಿ ಸ್ಪರ್ಶಜ್ಞಾನ ಹೆಚ್ಚು ಚುರುಕಾಗಿರುತ್ತದೆ. ಮೈಗೆ ಸೋಂಕುವ ಬಿಸಿ, ತಂಪುಗಳಿಂದ ಆತ ಹಗಲು ರಾತ್ರಿಗಳನ್ನು ಅರಿಯಬಲ್ಲ. ನಮಗಿರುವ ಇಂದ್ರಿಯಗಳಿಂದ ಭೌತಿಕ ಜಗತ್ತನ್ನು ನಾವು ಕಾಣಬಹುದು, ಅರ್ಥೈಸಿಕೊಳ್ಳಬಹುದು. ಆದರೆ ಪರವಸ್ತುವನ್ನು ಕಾಣುವುದು ಹೇಗೆ? ಭಗವದ್ಗೀತೆಯ ಮೂರನೆಯ ಅಧ್ಯಾಯದಲ್ಲಿ – ಯೋ ಬುದ್ಧೇಃ ಪರತಸ್ತು ಸಃಎಂಬ ಮಾತು ಬರುತ್ತದೆ. ಅಂದರೆ ಪರತತ್ವ ಬುದ್ಧಿಯನ್ನು ಮೀರಿದ್ದು. ಬುದ್ಧಿಯಿಂದ ಅದನ್ನು ಗ್ರಹಿಸುವುದು ಸಾಧ್ಯವಿಲ್ಲ. ಪರತತ್ವಶಾಸ್ತ್ರ ಅನುಭವ ಪ್ರಧಾನವಾದ ಶಾಸ್ತ್ರ. ಹೃದಯವು ಅನುಭವದ ಸ್ಥಾನ. ಮನಸ್ಸು ಬುದ್ಧಿಗಳೆರಡೂ ಕೆಲಸ ಮಾಡಿದ್ದರ ಫಲಿತಾಂಶ ಅನುಭವವಾಗುವುದು ಹೃದಯದಲ್ಲಿ.

ಸಚರಾಚರವಾದ ಪ್ರಪಂಚ ಕಣ್ಣಿಗೆ ಕಾಣುತ್ತದೆ. ಆದರೆ ಇದಕ್ಕೆ ಕಾರಣವಾದ ಪರತತ್ವ ಕಣ್ಣಿಗೆ ಕಾಣದು. ಏಕೆ? ಅದು ನಿರ್ಗುಣ, ನಿರಾಕಾರವಾದದ್ದರಿಂದ ಕಾಣಲಾರದು. ಅದನ್ನು ಹುಡುಕಲೆಣಿಸುವುದು ಬಳಲಿಸುವ ಹವ್ಯಾಸ. ವಿಗ್ರಹ ಕಾಣುತ್ತದೆ, ದೇವರು ಕಾಣುವುದಿಲ್ಲ. ನಾವು ವಿಗ್ರಹದ ಮುಂದೆ ನಿಂತಾಗ, ಮಂಗಳಾರತಿಯಾಗುವಾಗ ಕಣ್ಣು ಮುಚ್ಚುತ್ತೇವೆ. ಏಕೆ? ಕಾಣುವ ವಿಗ್ರಹವನ್ನು ಕಣ್ಣಿನಿಂದ ನೋಡಿ, ಮನಸ್ಸಿನಲ್ಲಿ ತುಂಬಿಕೊಂಡು ನಂತರ ಕಣ್ಣು ಮುಚ್ಚಿ ವಿಗ್ರಹದ ಹಿಂದಿರುವ ಚೈತನ್ಯವನ್ನು, ಪರವಸ್ತುವನ್ನು ಕಾಣುವ ಪ್ರಯತ್ನ ಮಾಡುತ್ತೇವೆ, ಅದನ್ನು ಅನುಭವಿಸುತ್ತೇವೆ. ಅಲ್ಲಮಪ್ರಭುವಿನ ಮಾತು ಅತ್ಯಂತ ಮನನೀಯವಾದದ್ದು-
ಕಂಡುದ ಹಿಡಿಯಲೊಲ್ಲದೆ
ಕಾಣದುದನರಸಿ ಹಿಡಿದಿಹೆನೆಂದಡೆ
ಸಿಕ್ಕದೆಂಬ ಬಳಲಿಕೆಯ ನೋಡಾ !
ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ.

ADVERTISEMENT

ಮೊದಲು ಬುದ್ಧಿಯಿಂದ ಕಂಡದ್ದನ್ನು ಮನದಲ್ಲಿ ಹಿಡಿಯಬೇಕು, ನಂತರ ಗುರುಗಳನ್ನು ನಂಬಿ, ಶಾಸ್ತ್ರಗಳನ್ನು ಅಧ್ಯಯನಮಾಡಿ, ಅವೆಲ್ಲವುಗಳನ್ನು ಮೀರಿ, ಮನಸ್ಸನ್ನು ಬರಿದು ಮಾಡಿದಾಗ, ಕಲ್ಪನೆಗಳು, ಊಹೆಗಳಿಲ್ಲದ ಶುದ್ಧ ಅನುಭವ ಮಾತ್ರ ಉಳಿಯುತ್ತದೆ. ಆ ಪರಿಶುದ್ಧ ಮನದಲ್ಲಿ ಅನುಭವದ ರೂಪದಲ್ಲಿ ಪರಸತ್ವದ ಅವತರಣವಾಗುತ್ತದೆ. ಧನ್ಯತಮ ಆ ಗಳಿಗೆ! ಧನ್ಯ ಆ ಜೀವನ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.