ADVERTISEMENT

ಕಷ್ಟದ ಸಮಸ್ಯೆ

ಡಾ. ಗುರುರಾಜ ಕರಜಗಿ
Published 13 ಡಿಸೆಂಬರ್ 2018, 20:08 IST
Last Updated 13 ಡಿಸೆಂಬರ್ 2018, 20:08 IST

ಸೃಷ್ಟು ಸಂಕಲ್ಪ ಲಿಪಿಯೆಲ್ಲ ನಮ್ಮೆದುರಿಲ್ಲ |
ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ||
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ ?|
ಕ್ಲಿಷ್ಟದ ಸಮಸ್ಯೆಯದು – ಮಂಕುತಿಮ್ಮ || 67 ||

ಪದ-ಅರ್ಥ:ಸೃಷ್ಟು-ಸೃಷ್ಟಿ ಮಾಡಿದವನು, ಸೃಷ್ಟಿಕರ್ತ, ಸಂಕಲ್ಪಲಿಪಿಯೆಲ್ಲ =ಸಂಕಲ್ಪಲಿಪಿ(ನಕ್ಷೆ)+ಎಲ್ಲ, ದೃಷ್ಟಿಗೋಚರವದರೊಳೊಂದು=ದೃಷ್ಟಿಗೋಚರ(ಕಣ್ಣಿಗೆ ಕಾಣುವ)+ಅದರೊಳೊಂದು, ನಷ್ಟ=ಕಳೆದು ಹೋದದ್ದು, ಕೆಟ್ಟದ್ದು, ಶಿಷ್ಟ=ಉಳಿದದ್ದು, ಒಳ್ಳೆಯದು.

ವಾಚ್ಯಾರ್ಥ:ಸೃಷ್ಟಿಕರ್ತನ ಸೃಷ್ಟಿಯ ಸಂಪೂರ್ಣ ನಕ್ಷೆ ನಮ್ಮ ಎದುರಿನಲ್ಲಿ ಇಲ್ಲ. ಅದರೊಳಗೆ ಒಂದು ಗೆರೆ ಮಾತ್ರ ನಮ್ಮ ದೃಷ್ಟಿಗೆ ನಿಲುಕುತ್ತಿದೆ. ಅಷ್ಟರಿಂದಲೇ ಇದು ಸರಿಯಲ್ಲ, ಅದು ಸರಿ ಎನ್ನುವುದೇ? ಇದು ನಿಜವಾಗಿಯೂ ಕಷ್ಟವಾದ ಸಮಸ್ಯೆ.

ADVERTISEMENT

ವಿವರಣೆ:ಒಮ್ಮೆ ಸ್ನೇಹಿತರ ಒತ್ತಾಯದಿಂದ ಅವರೊಡನೆ ಒಂದು ಸಿನಿಮಾ ನೋಡಲು ಹೋದೆ. ದಾರಿಯಲ್ಲಿ ಏನೇನೋ ತೊಂದರೆಗಳು ಬಂದು ಸಿನಿಮಾಗೃಹ ತಲುಪುವಷ್ಟರಲ್ಲಿ ಸಿನಿಮಾದ ಅರ್ಧಭಾಗ ಮುಗಿದುಹೋಗಿತ್ತು. ದುಡ್ಡು ಕೊಟ್ಟ ತಪ್ಪಿಗೆ ಎಲ್ಲರೂ ಸಹಿಸಿಕೊಂಡು ಕುಳಿತೆವು. ಆ ಸಿನಿಮಾದಲ್ಲಿ ಒಬ್ಬ ಮುದುಕಿ. ಪಾಪ! ತುಂಬ ಅಸಹಾಯಕಳಂತೆ ಕಂಡಳು. ಆಕೆಯನ್ನು ಉಳಿದವರು ಸರಿಯಾಗಿ ಗೋಳು ಹುಯ್ದುಕೊಳ್ಳುತ್ತಿದ್ದರು. ಆಕೆ ಒದ್ಡಾಡುತ್ತಿದ್ದಳು. ಆದರೆ ವಿಚಿತ್ರವೆಂದರೆ ಆಕೆಗೆ ತೊಂದರೆಯಾದಷ್ಟೂ, ಗೋಳಾಡಿದಷ್ಟೂ ಸಿನಿಮಾ ಮಂದಿರದಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಂತೋಷ ಪಡುತ್ತಿದ್ದರು! ಇದೆಂಥ ಜನ, ಮುದುಕಿಗೆ ತೊಂದರೆಯಾದರೆ ಇವರು ಸಂತೋಷ ಪಡುತ್ತಾರಲ್ಲ?

ಪಕ್ಕದವರನ್ನು ಕೇಳಿದೆ. ಅವರು ಹೇಳಿದರು, ‘ಸ್ವಾಮಿ, ನೀವು ಸಿನಿಮಾದ ಮೊದಲ ಭಾಗ ನೋಡಿಲ್ಲ. ಈ ಮುದುಕಿ ಅದೆಷ್ಟು ಆಟ ಆಡಿ ಅದೆಷ್ಟು ಜನರಿಗೆ ಪ್ರಾಣ ಹೈರಾಣ ಮಾಡಿದ್ದಳು. ಈಗ ಅನುಭವಿಸುತ್ತಿದ್ದಾಳೆ’. ಅಂದರೆ ಮೊದಲರ್ಧವನ್ನು ನೋಡದ ನನಗೆ ಎರಡನೆಯ ಅರ್ಧವನ್ನು ಸರಿಯಾಗಿ ಗ್ರಹಿಸಲು ಆಗಲಿಲ್ಲ.

ಇದು ಒಂದು ಸಿನಿಮಾ ಕಥೆಯ ಸ್ಥಿತಿಯಾದರೆ ಇಡೀ ಸೃಷ್ಟಿಯನ್ನು ಅರ್ಥಮಾಡಿಕೊಳ್ಳಲು ಹೊರಟವರ ಪರಿಸ್ಥಿತಿ ಏನು? ಇದು ಎಂದಿನಿಂದಲೋ ಇದ್ದ ಸೃಷ್ಟಿ. ನಾವು ಮೊನ್ನೆ ಮೊನ್ನೆ ಬಂದವರು, ಬೇಗನೇ ಇಲ್ಲಿಂದ ಹೋಗುವವರು. ನಮಗೆ ಸೃಷ್ಟಿಕರ್ತನ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಆತ (ಅದು) ಈ ವಿಶ್ವವನ್ನು ರಚನೆ ಮಾಡಿದ್ದೇಕೆ? ಅದರಿಂದ ಇರುವ ಅಪೇಕ್ಷೆ ಏನು? ಯಾವುದೂ ತಿಳಿದಿಲ್ಲ. ನಮ್ಮ ಬದುಕು ಈ ಸೃಷ್ಟಿಯಲ್ಲಿ ಒಂದು ಕ್ಷಣವೂ ಅಲ್ಲ. ಅಷ್ಟರಲ್ಲಿ ನಮಗೆ ಕಂಡದ್ದನ್ನು ನೋಡಿ ಪ್ರಪಂಚ ಹೀಗೆಯೇ ಎಂದು ತೀರ್ಮಾನಿಸಲು ಪ್ರಯತ್ನಿಸುತ್ತೇವೆ.

ಅದಕ್ಕೆ ಕಗ್ಗ ಹೇಳುತ್ತದೆ, ಇಡೀ ಸೃಷ್ಟಿಯ ನೀಲನಕ್ಷೆ ನಮಗೆ ಕಂಡಿಲ್ಲ. ಆದರೆ ನಮ್ಮ ಬದುಕಿನ ಅರೆಕ್ಷಣದಲ್ಲಿ ಅದರದೊಂದು ಗೆರೆ ಮಾತ್ರ ಕಂಡಹಾಗೆ ಭಾಸವಾಗುತ್ತದೆ. ಅಷ್ಟರ ಆಧಾರದ ಮೇಲೆ ಅದು ಸರಿ, ಇದು ತಪ್ಪು ಎಂದು ತೀರ್ಮಾನ ಕೊಡುವುದು ಸರಿಯೇ? ಇಲ್ಲಿ ಇನ್ನೊಂದು ಸಮಸ್ಯೆ ಇದೆ. ನಾವು ಅರೆಕ್ಷಣದಲ್ಲಿ ಕಂಡದ್ದಾದರೂ ಸ್ಪಷ್ಟವಾಗಿದೆಯೇ? ನಮ್ಮಲ್ಲಿ ಅವಿಭಾಜ್ಯ
ವಾಗಿರುವ, ಅನಿವಾರ್ಯವಾಗಿರುವ ಸತ್ವ, ರಜಸ್, ತಮಸ್ಸುಗಳ ಪೊರೆ ನಮ್ಮ ಕಣ್ಣುಗಳನ್ನು ಆವರಿಸಿಕೊಂಡಿವೆ. ಹೀಗಾಗಿ ನಮ್ಮ ದೃಷ್ಟಿಯೂ ಮಂದವೇ.

ಹೀಗೆ ಮಂದ ದೃಷ್ಟಿಯಿಂದ, ಅರೆಕ್ಷಣ ಮಾತ್ರ ಕಂಡ, ಈ ಅನಾದಿ ವಿಶ್ವದ ಒಂದು ಎಳೆಯನ್ನು ಮಾತ್ರ ನೋಡಿ ಅದು ಒಳ್ಳೆಯದು, ಇದು ಕೆಟ್ಟದ್ದು ಎಂದು ಹೇಳುವುದು ಬಹಳ ಕಷ್ಟದ ಕೆಲಸ. ನಲ್ಲಿಯಲ್ಲಿ ಹನಿಹನಿಯಾಗಿ ಬಿದ್ದ ನೀರನ್ನು ಕಂಡು ಪ್ರಚಂಡವಾದ ಜಲಾಶಯದ ನೀರನ್ನು ವರ್ಣಿಸಹೊರಟ ಪ್ರಯತ್ನ ಇದು. ಅದನ್ನೇ ಕಗ್ಗ ಕ್ಲಿಷ್ಟದ ಸಮಸ್ಯೆ ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.