ADVERTISEMENT

ಬ್ರಹ್ಮ ಭಂಡಾರವೆಂಬ ಗಂಟು

ಡಾ. ಗುರುರಾಜ ಕರಜಗಿ
Published 28 ಡಿಸೆಂಬರ್ 2018, 4:31 IST
Last Updated 28 ಡಿಸೆಂಬರ್ 2018, 4:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |

ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||

ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |

ADVERTISEMENT

ಒಂಟಿಸಿಕೊ ಜೀವನವ – ಮಂಕುತಿಮ್ಮ || 73 ||

ಪದ-ಅರ್ಥ:ಅಂಟಿಲ್ಲವೆನಗಿದರೊಳೆನ್ನದಿರದೆಂದುಂ=ಅಂಟಿಲ್ಲ+ಎನಗೆ+ಇದರೊಳು+ಎನ್ನದಿರು+

ಅದೆಂದುಂ(ಯಾವತ್ತಿಗೂ), ಒಂಟಿಸಿಕೊ=ಹೊಂದಿಸಿಕೊ.

ವಾಚ್ಯಾರ್ಥ:ಬ್ರಹ್ಮ ರಚಿಸಿದ ಈ ಭಂಡಾರ ಬರೀ ನಂಟು, ತಂಟೆಗಳ ಗಂಟು. ನನಗೆ ಇದರಲ್ಲಿ ಯಾವುದೂ ಅಂಟಿಲ್ಲ ಎಂದು ಎಂದೆಂದಿಗೂ ಹೇಳದಿರು. ಒಳ ಜಗತ್ತಿಗೆ ನೀನು ಒಂಟಿ ಆದರೆ ಹೊರಪ್ರಪಂಚಕ್ಕೆ ಗಟ್ಟಿಯಾದ ಆಳು. ಅದರಂತೆ ಜೀವನವನ್ನು ಹೊಂದಿಸಿಕೊ.

ವಿವರಣೆ: ಬ್ರಹ್ಮನ ಈ ಭಂಡಾರವನ್ನು ಕೆಸರಿನ ಹೊಂಡ ಎಂದು ಅಧ್ಯಾತ್ಮದಲ್ಲಿ ಕರೆಯುತ್ತಾರೆ. ಅದರಲ್ಲಿ ಆಳವಾಗಿ ಕಾಲಿಟ್ಟರೆ ಪಾರಾಗುವುದು ದುರ್ಲಭ. ಇಲ್ಲಿರುವ ಮೋಹದ ನಂಟುಗಳು, ಅದಕ್ಕಾಗಿ ತಂಟೆಗಳು. ಅವು ನಮ್ಮನ್ನು ಯಾವ ಪರಿಯಿಂದ ಕಾಡುತ್ತವೆಂಬುದನ್ನು ಪ್ರಭುದೇವರು ಅತ್ಯಂತ ಮಾರ್ಮಿಕವಾಗಿ ತಮ್ಮ ಬೆಡಗಿನ ವಚನದಲ್ಲಿ ಹೇಳುತ್ತಾರೆ.

ಸಂಸಾರವೆಂಬ ಹೆಣ ಬಿದ್ದಿರೆ

ತಿನಬಂದ ನಾಯ ಜಗಳವ ನೋಡಿರೆ !

ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿದೆ.

ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ!

ನನ್ನದು ಎಂದು ಭ್ರಮಿಸಿರುವ ನೆಲ, ಮನೆ, ಹಣ, ಐಶ್ವರ್ಯ, ಅಧಿಕಾರಿ ಇವೆಲ್ಲ ಚೇತನರಹಿತವಾದವು. ಆದ್ದರಿಂದ ಅವು ಹೆಣವೇ. ಅವುಗಳಿಗಾಗಿ ಒದ್ದಾಡುವ, ಹೋರಾಡುವ ಮನುಷ್ಯರೆಲ್ಲ ನಾಯಿಗಳೇ. ನನ್ನದು, ನನ್ನದು ಎಂದು ಹೊಡೆದಾಡಿ ಒಂದು ದಿನ ಸತ್ತು ಹೋಗುತ್ತಾರೆ. ಆದರೆ ನನ್ನದು ಎಂದು ಭಾವಿಸಿದ ವಸ್ತುಗಳು ಯಾರೊಬ್ಬರಿಗೂ ಸೇರದೆ ಹಾಗೆಯೇ ಉಳಿದುಬಿಡುತ್ತವೆ. ಹೀಗೆ ಮನುಷ್ಯರೆಂಬ ನಾಯಿಗಳು ಹೋರಾಡುವುದನ್ನು ಕಂಡ ಅಚೇತನವಾದ ವಸ್ತುಗಳೆಂಬ ಹೆಣ ಎದ್ದು ನಗುತ್ತಿದೆ! ಆದರೆ ಈ ನಂಟು ತಂಟೆಗಳಿಂದ ಪಾರಾಗುವುದೂ ಕಷ್ಟ. ಅವು ಯಾರನ್ನಾದರೂ ಸೆಳೆದುಬಿಡುತ್ತವೆ. ವಿಷ್ಣು ಒಮ್ಮೆ ನಾರದರನ್ನು ಕೇಳಿದನಂತೆ, ‘ಭೂಲೋಕದಲ್ಲಿ ಅಷ್ಟು ಕಷ್ಟಪಡುತ್ತ ಮಾನವರು ಏಕಿದ್ದಾರೆ? ಅಲ್ಲಿ ಏನು ಅಂಥ ಸುಖ?‘ ನಾರದ ಹೇಳಿದ, ‘ಭಗವಂತ, ನೀನೇ ಒಮ್ಮೆ ಅಲ್ಲಿ ಹೋಗಿ ಬಿಡು’, ಭಗವಂತ ಹಂದಿಯಾಗಿ ಭೂಮಿಗೆ ಬಂದ. ಅವನಿಗೆ ಸುಂದರವಾದ ಹಂದಿ ಹೆಂಡತಿಯಾಗಿ ದೊರಕಿತು. ಅದರಿಂದ ಮಕ್ಕಳು . ಕೆಸರು ರಾಡಿಯಲ್ಲಿ ಇಡೀ ಸಂಸಾರ ಮುಳುಗಿ ಸಂತೋಷದಲ್ಲಿತ್ತಂತೆ. ನಾರದ ಬಂದು ‘ಏನು ಪ್ರಭು ಹೀಗೆ ಕೆಸರಿನಲ್ಲಿ ಸಿಕ್ಕು ಬಿದ್ದಿದ್ದೀ? ಸಾಕಿನ್ನು ವೈಕುಂಠಕ್ಕೆ ಬಂದು ಬಿಡು’. ವಿಷ್ಣು ಹೇಳಿದ, ‘ನಾರದ, ಇಲ್ಲಿ ನನ್ನ ಪರಿವಾರದೊಂದಿಗೆ ಎಷ್ಟು ಸುಖವಾಗಿದ್ದೇನೆ ಗೊತ್ತೇ? ನಿನಗೆ ಇದು ಕೆಸರು, ರಾಡಿ ಎನ್ನಿಸಬಹುದು. ಆದರೆ ವೈಕುಂಠದಲ್ಲೂ ನನಗೆ ಈ ಸುಖ ದೊರಕುತ್ತಿರಲಿಲ್ಲ’. ಆದ್ದರಿಂದ ನಾನು ಈ ಪ್ರಪಂಚಕ್ಕೆ ಅಂಟಿಕೊಂಡಿಲ್ಲ ಎಂದು ಹೇಳುವುದು ತುಂಬ ಕಷ್ಟ. ಹಾಗಾದರೆ ಬದುಕುವುದು ಹೇಗೆ? ಆತ್ಮೋನ್ನತಿಗೆ ಎರಡು ಬದುಕನ್ನು ಕಟ್ಟಿಕೊಳ್ಳಬೇಕು. ಒಂದು ಅಂತರಂಗದ ಬದುಕು ಅದರಲ್ಲಿ ಏಕಾಂಗಿಯಾಗಿರಬೇಕು ಮತ್ತು ಅಂತರ್ಮುಖಿಯಾಗಿರಬೇಕು. ಎರಡನೆಯದು ಪ್ರಾಪಂಚಿಕ ಬದುಕು. ಅಲ್ಲಿ ಎಲ್ಲರನ್ನು ಕಟ್ಟಿಕೊಂಡು ಪ್ರಪಂಚದ ಬೆಳವಣಿಗೆಗೆ ಭಂಟನಾಗಿ ದುಡಿಯಬೇಕು. ಈ ಎರಡಕ್ಕೂ ನಮ್ಮ ಬದುಕನ್ನು ಹೊಂದಿಸಿಕೊಳ್ಳಬೇಕು. ಇದು ಕಗ್ಗದ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.