ADVERTISEMENT

ಬೆರಗಿನ ಬೆಳಕು | ರಸಿಕತೆ

ಡಾ. ಗುರುರಾಜ ಕರಜಗಿ
Published 20 ಮಾರ್ಚ್ 2020, 19:45 IST
Last Updated 20 ಮಾರ್ಚ್ 2020, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು |
ಕೀಳದೆನಿಪವನೊರಟ, ಮಂಕ, ಕಲ್ಲೆದೆಗ ||
ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದರಿವ |
ಮೇಲೆನಿಪವನೆ ರಸಿಕ – ಮಂಕುತಿಮ್ಮ || 265 ||

ಪದ-ಅರ್ಥ: ಪೆರ್ಚಿಪನು=ಹೆಚ್ಚಿಸುವನು, ಖೇಲಕ=ಆಟವನ್ನು ಆಡಿಸುವವ, ಸೂತ್ರಧಾರ, ಕೀಳದೆನಿಪವನೊರಟ=ಕೀಳು+ಅದು+ಎನಿಪವನು(ಎನ್ನುವವನು)+ಒರಟ, ಕಲ್ಲೆದೆಗ=ಕಲ್ಲು ಹೃದಯದವ, ಜಗದರಿವ=ಜಗದ+ಅರಿವ, ಮೇಲೆನಿಪವನೆ=ಮೇಲ್(ಉತ್ತಮ)+ಎನಿಪವನೆ(ಎನ್ನುವವನೆ, ಎನಿಸುವವನೆ)

ವಾಚ್ಯಾರ್ಥ: ಸೂತ್ರಧಾರನೊಬ್ಬ ಬದುಕಿನ ಸಿರಿಸೊಗಸುಗಳನ್ನು ಹೆಚ್ಚಿಸುತ್ತಾನೆ. ಅದನ್ನು ತಿಳಿಯದೆ ಅದು ಕೀಳು ಎಂದು ಭಾವಿಸುವವನು ಒರಟ, ದಡ್ಡ ಹಾಗೂ ಕಲ್ಲು ಹೃದಯಿ. ತನ್ನ ಶಕ್ತಿಯಿಂದ, ಜ್ಞಾನದಿಂದ, ಮಾತಿನಿಂದ ಆ ಜಗತ್ತನ್ನು ಅರಿದು ಅದನ್ನು ಉನ್ನತಿಗೊಳಿಸುವವನು ರಸಿಕ.

ADVERTISEMENT

ವಿವರಣೆ: ಒಬ್ಬ ಸೂತ್ರಧಾರ ಈ ಸೊಗಸಾದ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಅದು ಈಗ ಬೆಳೆದು ಬೆಳೆದು ಅತ್ಯಂತ ಶ್ರೀಮಂತವಾಗಿದೆ. ಅದರ ಸೊಗಸು ನೂರ್ಮಡಿಯಾಗಿದೆ, ಕಣ್ಣು ಸೆಳೆಯುತ್ತದೆ. ಇಂತಹ ಸುಂದರ ಪ್ರಪಂಚವನ್ನೂ ನೀರಸ ಎನ್ನುವವರಿದ್ದಾರೆ. ‘ಏನಿದ್ದರೇನು? ಇದು ಒಂದು ನೀರಮೇಲಣ ಗುಳ್ಳೆ. ಇದು ಶಾಶ್ವತವೇ?’ ಎಂದು ಗೊಣಗುತ್ತಾರೆ. ಅದು ಗುಳ್ಳೆ ಹೌದೋ, ಅಲ್ಲವೋ, ಅದು ನಮಗಿಂತ ಹೆಚ್ಚು ಕಾಲ ಬದುಕಬಲ್ಲದ್ದೋ? ಹಾಗಿದ್ದರೆ ಅದರ ಅಸ್ಥಿರತೆಯ ಬಗ್ಗೆ ಕೊರಗು ಏಕೆ? ಅದಕ್ಕೇ ಈ ಕಗ್ಗ ಹೇಳುತ್ತದೆ, ಈ ಪ್ರಪಂಚವನ್ನು ಕೀಳು ಎನ್ನುವವನು ಒರಟ. ಅವನಿಗೆ ಬದುಕಿನ ಸೊಗಸು, ಸ್ವಾರಸ್ಯ ತಿಳಿದಿಲ್ಲ. ಅದನ್ನು ಅನುಭವಿಸುವ ಬಗೆಯೂ ಗೊತ್ತಿಲ್ಲ. ಅವನು ಒರಟು ಮಾತ್ರವಲ್ಲ, ಮಂಕ, ದಡ್ಡ. ಯಾಕೆಂದರೆ ಕಣ್ಣ ಮುಂದೆಯೇ ಬೆರಗು ಹುಟ್ಟಿಸುವಂಥ ವೈಭವ ಅರಳಿ ನಿಂತಿರುವಾಗ ಅದನ್ನು ಕಾಣದಿರುವವನು ಮಂಕನೇ. ಅವನು ಕಲ್ಲು ಹೃದಯಿಯೂ ಹೌದು. ಈ ಪ್ರಪಂಚದಲ್ಲಿ ಮೊರೆಯಿಡುತ್ತಿರುವ ಪ್ರೀತಿ, ಅಂತಃಕರಣ, ಸಂತೋಷ, ದುಃಖ, ಸಂಭ್ರಮಗಳು ತಟ್ಟದಿದ್ದರೆ ಅವನು ನಿಜವಾಗಿಯೂ ಕಲ್ಲು ಹೃದಯಿ.

ಹಾಗಾದರೆ ರಸಿಕ ಯಾರು? ಯಾವನು ತನ್ನ ಶಕ್ತಿಯಿಂದ, ತಿಳಿವಿನಿಂದ, ಮಾತಿನಿಂದ ಜಗತ್ತನ್ನು ಅರಿಯುತ್ತಾನೋ ಮತ್ತು ಅದರ ಸೌಂದರ್ಯವನ್ನು, ಶ್ರೀಮಂತಿಕೆಯನ್ನು ಹೆಚ್ಚಿಸುತ್ತಾನೋ ಅವನು ರಸಿಕ. ಕೆಲವರು ಪುರುಷ ಪ್ರಯತ್ನದಿಂದ, ಜಗತ್ತನ್ನು ಮುನ್ನಡೆಸಿದವರು. ನಮ್ಮಲ್ಲಿ ಕೆಲವರು ಧೈರ್ಯದ ಯಾವ ಕೆಲಸಕ್ಕೂ ಮುನ್ನುಗ್ಗುವುದಿಲ್ಲ. ‘ನಮಗೆ ಯಾಕೆ ಬೇಕು? ಅದೇನಾಗುತ್ತದೋ ಆಗಲಿಬಿಡಿ’ ಎಂದು ತಟಸ್ಥರಾಗುತ್ತಾರೆ. ಅವರನ್ನು ನಾನು ಬುದ್ಧಿಗೇಡಿಗಳು ಎನ್ನುತ್ತೇನೆ. ಅವರು ಬುದ್ಧಿಗೇಡಿಗಳಲ್ಲ. ಬುದ್ಧಿ ಇದೆ, ಆದರೆ ಹೇಡಿತನವೂ ಹೇರಳವಾಗಿದೆ. ಅದು Intellectual cowardice, ಬುದ್ಧಿಹೇಡಿತನ. ಅದರಿಂದ ಪ್ರಪಂಚ ವೃದ್ಧಿಯಾಗುವುದಿಲ್ಲ. ಅದಕ್ಕೇ ಭಗವದ್ಗೀತೆಯಲ್ಲಿ ಕೃಷ್ಣ, ಅರ್ಜುನನನ್ನು ಪ್ರಚೋದಿಸುತ್ತಾನೆ,

ತಸ್ಮಾದ್ಯುಧ್ಪಸ್ಪ ಭಾರತ ||
ಯುಧ್ಯಸ್ವ ವಿಗತಜ್ಪರ ||

ಹೋರಾಡು, ನಿರಾಳವಾಗಿ ಯುದ್ಧ ಮಾಡು ಎನ್ನುತ್ತಾನೆ. ಕೆಲವರು ಹೀಗೆ ಶಕ್ತಿಯಿಂದ ಹೋರಾಡಿದರೆ ಕೆಲವರು ಜ್ಞಾನದಿಂದ, ತಿಳಿವಳಿಕೆಯಿಂದ ಬದುಕನ್ನು ಬೆಳೆಸಿದ್ದಾರೆ. ಮತ್ತೆ ಕೆಲವರು ತಮ್ಮ ಮಾತುಗಳಿಂದ, ಕಾವ್ಯಗಳಿಂದ, ನಾಟಕಗಳಿಂದ, ಬರಹಗಳಿಂದ ಪ್ರಪಂಚವನ್ನು ಊರ್ಜಿತಗೊಳಿಸಿದ್ದಾರೆ. ಅವರೆಲ್ಲರೂ ರಸಿಕರು. ಧೂಳಿಕಣದಂತೆ ಬಂದು ಯಾರಿಗೂ ತಿಳಿಯದಂತೆ, ಕಾಣಿಕೆ ಕೊಡದೆ ಧೂಳಿನಂತೆ ಅಡಗಿ ಹೋಗುವುದಕ್ಕಿಂತ ರಸಿಕರಾಗಿ ಪ್ರಪಂಚನ್ನು ಶ್ರೀಮಂತಗೊಳಿಸಿ ಹೋಗುವುದು ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.