ADVERTISEMENT

ಬೆರಗಿನ ಬೆಳಕು: ಕುಕರ್ಮ ಫಲ

ಡಾ. ಗುರುರಾಜ ಕರಜಗಿ
Published 25 ನವೆಂಬರ್ 2020, 21:06 IST
Last Updated 25 ನವೆಂಬರ್ 2020, 21:06 IST
   

ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಅವನಿಗೆ ಬ್ರಹ್ಮದತ್ತಕುಮಾರನೆಂಬ ಮಗ ಹುಟ್ಟಿದ. ಅದೇ ದಿನ ಬೋಧಿಸತ್ವ ಪುರೋಹಿತನಿಗೆ ಮಗನಾಗಿ ಹುಟ್ಟಿದ. ಅವನಿಗೆ ಸಂಕಿಚ್ಚ ಕುಮಾರ ಎಂದು ಹೆಸರಾಯಿತು. ಇಬ್ಬರೂ ಮಕ್ಕಳು ಜೊತೆ ಜೊತೆಯಲ್ಲೇ ಬೆಳೆದರು, ತಕ್ಕಶಿಲೆಗೆ ಹೋಗಿ ಶಿಕ್ಷಣ ಪಡೆದು ಬಂದರು. ಬ್ರಹ್ಮದತ್ತ ಕುಮಾರನನ್ನು ಉಪರಾಜನನ್ನಾಗಿ ಮಾಡಿದ ರಾಜ.

ಕೆಲದಿನಗಳು ಕಳೆದ ಮೇಲೆ ಒಂದು ದಿನ ಯುವರಾಜ ಚಿಂತಿಸಿದ. ತಾನು ಈಗ ಕೇವಲ ಉಪರಾಜ. ನನ್ನ ತಂದೆಗೆ ಅಪಾರವಾದ ಐಶ್ವರ್ಯ, ಅಧಿಕಾರವಿದೆ. ಅದು ನನಗೆ ದೊರೆಯುವುದು ತಂದೆ ಕಾಲವಾದ ಮೇಲೆ. ಅವರ ಆರೋಗ್ಯ ಚೆನ್ನಾಗಿದೆ. ಆದ್ದರಿಂದ ನನಗೆ ಬೇಗನೆ ರಾಜಪಟ್ಟ ದೊರಕುವುದು ಕಷ್ಟ. ನಾನು ಮುದುಕನಾದ ಮೇಲೆ ರಾಜಪದವಿ ದೊರಕಿದರೆ ಏನು ಪ್ರಯೋಜನ? ಆದ್ದರಿಂದ ತಂದೆಯನ್ನು ಕೊಂದು ತಾನು ರಾಜನಾಗುವುದೇ ಒಳ್ಳೆಯದು. ಈ ವಿಚಾರವನ್ನು ಬಾಲ್ಯ ಸ್ನೇಹಿತ ಸಂಕಿಚ್ಚ ಕುಮಾರನಿಗೂ ಹೇಳಿದ. ಆದರೆ ಆತ, ‘ಪಿತೃಕೊಲೆ ಮಹಾ ಪಾಪ. ಅದನ್ನು ಮಾಡಲೇ ಬೇಡ’ ಎಂದು ಸ್ಪಷ್ಟವಾಗಿ ಹೇಳಿದ. ಆದರೆ ರಾಜಕುಮಾರ ಅವನನ್ನು ತನ್ನ ಜೊತೆಗೆ ಈ ಕಾರ್ಯದಲ್ಲಿ ಸೇರಿಕೊಳ್ಳಲು ಪದೇಪದೇ ಪೀಡಿಸುತ್ತಲೇ ಇದ್ದ. ಇದರಿಂದ ಪಾರಾಗಬೇಕು ಎಂದುಕೊಂಡು ಸಂಕಿಚ್ಚ ಕುಮಾರ ಹಿಮಾಲಯಕ್ಕೆ ಹೋಗಿ ಪ್ರವ್ರಜಿತನಾಗಿ ಆಶ್ರಮ ಕಟ್ಟಿಕೊಂಡು ಉಳಿದ. ಆ ಸುದ್ಧಿಯನ್ನು ಕೇಳಿ ಅನೇಕ ಕುಲಪುತ್ರರು ಅವನ ಬಳಿಗೇ ಹೋಗಿ ಪ್ರವ್ರಜ್ಜೆ ಸ್ವೀಕರಿಸಿ ಸಾಧನೆಯ ಮಾರ್ಗ ಹಿಡಿದರು.

ಇತ್ತ ರಾಜಕುಮಾರ, ತಂದೆಯನ್ನು ಕೊಂದು ತಾನೇ ರಾಜನಾದ. ಒಂದೆರಡು ವರ್ಷಗಳವರೆಗೆ ಸುಖ, ಭೋಗಗಳಲ್ಲಿ ತೇಲಾಡಿದ. ಆದರೆ ದಿನ ಕಳೆದಂತೆ ಮನಸ್ಸಿನಲ್ಲಿ ಅಪರಾಧಿ ಭಾವ ಜಾಗೃತವಾಗಿ ಭಯ ಮೊಳೆಯತೊಡಗಿತು. ಚಿತ್ತ ಶಾಂತಿ ಕರಗಿ ಹೋಗಿ, ನಿದ್ರೆ ಕಾಣದೆ ಕೊರಗತೊಡಗಿದ. ಆಗ ಆತ ಸಂಕಿಚ್ಚ ಕುಮಾರನನ್ನು ನೆನೆಸಿಕೊಂಡ. ಆ ನನ್ನ ಮಿತ್ರ ಪಿತೃಘಾತಕ ಕಾರ್ಯ ಮಾಡಬೇಡ ಎಂದು ತಡೆದ. ನಾನು ಒತ್ತಾಯ ಮಾಡಿದಾಗ ತಾನು ನಿರ್ದೋಷಿಯಾಗಿಯೇ ಉಳಿಯಬೇಕೆಂದು ಎಲ್ಲಿಗೋ ಹೋಗಿಬಿಟ್ಟ. ಅತ ನನ್ನೊಂದಿಗೆ ಇದ್ದಿದ್ದರೆ ತಂದೆಯ ಕೊಲೆಯನ್ನು ಮಾಡಲು ಬಿಡುತ್ತಿರಲಿಲ್ಲ. ಆತ ಎಲ್ಲಿದ್ದಾನೋ? ಎಲ್ಲಿ ಸಂಚಾರ ಮಾಡುತ್ತಿದ್ದಾನೋ? ಅವನ ಸುಳಿವು ದೊರೆತರೆ ಅವನನ್ನು ಕರೆಸಿಕೊಳ್ಳಬೇಕು ಎಂದು ಚಿಂತಿಸಿದ.

ADVERTISEMENT

ಹಿಮಾಲಯದಲ್ಲಿ ಸಂಕಿಚ್ಚ ಕುಮಾರನಿಗೆ ಸ್ನೇಹಿತನ ಚಿಂತೆಯ ಸುಳಿವು ಸಿಕ್ಕಿತು. ತಾನು ರಾಜನ ಬಳಿಗೆ ಹೋಗಿ ಧರ್ಮೋಪದೇಶ ಮಾಡಿ ಬರಬೇಕು ಎಂದುಕೊಂಡು ತನ್ನ ಜೊತೆಗೆ ಐದುನೂರು ತಪಸ್ವಿಗಳನ್ನು ಕರೆದುಕೊಂಡು ರಾಜನ ಉದ್ಯಾನದಲ್ಲಿ ಇಳಿದ. ರಾಜ ಬಂದು ಅವನ ದರ್ಶನ ಪಡೆದು ಕುಳಿತ. ಸಂಕಿಚ್ಚ ಕುಮಾರ ಹೇಳಿದ, ‘ಗೆಳೆಯಾ, ನೀನು ಮಾಡಿದ ಅತಿಚಾರಕ್ಕೆ ಶಿಕ್ಷೆ ಆಗಿಯೇ ತೀರುತ್ತದೆ. ಅಧರ್ಮ ತರುವ ನರಕದ ಸಂಕಟವನ್ನು ಯಾರೂ ತಪ್ಪಿಸಲಾರರು. ಆದರೆ ಇನ್ನು ಮುಂದಾದರೂ ಧರ್ಮಕಾರ್ಯ ಮಾಡಿದರೆ ಅನುತಾಪ ಕಡಿಮೆಯಾದೀತು. ಆದ್ದರಿಂದ ಧರ್ಮಾಚರಣೆಯನ್ನು ಮಾಡು’. ರಾಜ ಧರ್ಮಮಾರ್ಗಿಯಾದ. ಆದರೆ ಮಾಡಿದ ಪಾಪಕ್ಕೆ ಶಿಕ್ಷೆ ತಪ್ಪಲಿಲ್ಲ.

ಅಧರ್ಮ ಮಾಡುವಾಗ ಅದು ತರುವ ತಕ್ಷಣದ ಲಾಭ ಸಂತೋಷ ಕೊಡುತ್ತದೆ ಆದರೆ ಮುಂದೆ ಅದು ಆ ಸಂತೋಷವನ್ನು ಬಡ್ಡಿ ಸಮೇತ ಕಿತ್ತುಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.