ADVERTISEMENT

ಮಾನವನ ಶಾಶ್ವತ ಧರ್ಮ

ಡಾ. ಗುರುರಾಜ ಕರಜಗಿ
Published 3 ಜನವರಿ 2020, 19:59 IST
Last Updated 3 ಜನವರಿ 2020, 19:59 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು |
ಹಾಲೊಡೆಯೆ ಕಡೆದದನು ತಕ್ರವಾಗಿಪುದು ||
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು |
ಬಾಳಿಗಿದೆ ಚಿರಧರ್ಮ – ಮಂಕುತಿಮ್ಮ || 232 ||

ಪದ- ಅರ್ಥ: ತಕ್ರ=ಮಜ್ಜಿಗೆ
ವಾಚ್ಯಾರ್ಥ: ಬೀಳುವುದನ್ನು ಎತ್ತಿ ನಿಲ್ಲಿಸುವುದು, ಬಿದ್ದುದನ್ನು ಕಟ್ಟುವುದು, ಹಾಲು ಒಡೆದರೆ ಅದನ್ನು ಕಡೆದು ಮಜ್ಜಿಗೆ ಮಾಡುವುದು, ಹಾಳಾಗಿದ್ದದ್ದನ್ನು ತೆಗೆದು ಹಾಕುವುದು, ಹಳೆಯದಾದದ್ದನ್ನು ಹೊಸತನ್ನಾಗಿಸುವುದು ಇದೇ ಮನುಷ್ಯ ಜೀವನದ ಶಾಶ್ವತಧರ್ಮ

ವಿವರಣೆ: ಆದಿಕಾಲದಿಂದ ಮಾನವನ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸದಾಕಾಲದ ಬೆಳವಣಿಗೆಯೇ ಕಾಣುತ್ತದೆ. ಹೇಗೆ ಹೇಗೋ ಗುಹೆಯಲ್ಲಿ ವಾಸಿಸುತ್ತಿದ್ದ ಮನುಷ್ಯ ಇಂದು ಸುಂದರವಾದ ನೆಲೆಗಳನ್ನು ಕಂಡುಕೊಂಡಿದ್ದಾನೆ. ಕಾಡಿನಲ್ಲಿ ನಡೆದು ಹೋಗದೆ ಬೇರೆ ಗತಿಯಿಲ್ಲದವನು ಇಂದು ಅತೀ ಶೀಘ್ರವಾಗಿ ಚಲಿಸುವ, ಅತ್ಯಂತ ಆರಾಮದಾಯಕ ವಾಹನ ಸೌಕರ್ಯಗಳನ್ನು ಮಾಡಿಕೊಂಡಿದ್ದಾನೆ. ಬೆತ್ತಲೆಯಾಗಿ ತಿರುಗಾಡುತ್ತಿದ್ದವನು ಇಂದು ಆಕರ್ಷಕವಾದ, ವಾತಾವರಣದ ಏರುಪೇರುಗಳಿಗೆ ಸರಿಯಾಗಿ ರಕ್ಷಣೆ ನೀಡುವ ಬಟ್ಟೆ ಬರೆಗಳನ್ನು ಮಾಡಿಕೊಂಡಿದ್ದಾನೆ.

ADVERTISEMENT

ಇವುಗಳು ಹೊರಗೆ ಕಾಣಿಸುವ ಬದಲಾವಣೆಗಳು. ಇವುಗಳಂತೆ ಮಾನವನ ಭಾಷೆಗಳು ಬೆಳೆದಿವೆ. ಮೊದಲು ಕೇವಲ ಆಂಗಿಕವಾಗಿ ನಂತರ ಪ್ರಾಣಿಗಳಂತೆ ಅರಚಿ ಸಂವಹನ ಮಾಡುತ್ತಿದ್ದವನಿಗೆ ಇಂದು ಅನೇಕ ಭಾಷೆಗಳು ದೊರೆತಿವೆ. ಪ್ರಾಣಿಗಳಂತೆಯೇ ಬೇಟೆಯಾಡಿ ಹಸೀಮಾಂಸ ತಿನ್ನುತ್ತಿದ್ದವನು ಇಂದು ಸೋಪಜ್ಞತೆಯಿಂದ ತರತರಹದ ಆಹಾರವನ್ನು ಕಂಡುಕೊಂಡಿದ್ದಾನೆ. ಅವನ ನಡವಳಿಕೆಯಲ್ಲಿ ಬದಲಾವಣೆಗಳಾಗಿವೆ.

ಇಂದು ಒಂಟಿಯಾಗಿಯೇ ಬದುಕದೆ ಸಮಾಜವಾಗಿ ಇರಲು ವ್ಯವಸ್ಥೆ ಮಾಡಿಕೊಂಡಿದ್ದಾನೆ. ತನ್ನನ್ನೇ ಆಳಿಕೊಳ್ಳಲು ಸರ್ಕಾರದ ವ್ಯವಸ್ಥೆಯಾಗಿದೆ. ಹಿಂದೆ ಯಾವುದು ಕೇವಲ ವ್ಯಕ್ತಿಶಃ ಅಗತ್ಯತೆಯಾಗಿತ್ತೋ ಅದು ಇಂದು ಸಮಷ್ಟಿಯ ವ್ಯವಸ್ಥೆಯಾಗಿದೆ, ರಾಜ್ಯಗಳು, ರಾಷ್ಟ್ರಗಳು ನಿರ್ಮಾಣವಾಗಿವೆ, ಎಲ್ಲರೂ ಸರಿಯಾಗಿ ಬದುಕುವುದಕ್ಕೆ ಎಲ್ಲರೂ ಅನುಸರಿಸಬೇಕಾದ ನಿಯಮಗಳಾಗಿವೆ, ನಿಯಮಗಳನ್ನು ಪಾಲಿಸದವರಿಗೆ ಶಿಕ್ಷೆ ನೀಡಲು ನ್ಯಾಯಾಲಯಗಳಿವೆ, ವ್ಯಕ್ತಿಯ, ರಾಜ್ಯದ ರಾಷ್ಟ್ರದ ರಕ್ಷಣೆಗೆ ಸೈನ್ಯಗಳಿವೆ.

ಅಂದರೆ ಇದುವರೆಗಿನ ಮನುಷ್ಯನ ಬದುಕಿನ ವ್ಯವಸ್ಥೆ ತುಂಬ ಏರಿಕೆಯನ್ನು ಕಂಡಿದೆ. ಎಲ್ಲದರಲ್ಲೂ ಪರಿಷ್ಕಾರ, ಉನ್ನತಿ ಒಡೆದು ಕಾಣುತ್ತದೆ. ಬಾಳಿನ ಧರ್ಮವೇ ಇದು. ಅದು ಯಾವುದಾದರೂ ವ್ಯವಸ್ಥೆ ಕುಸಿದುಬೀಳುತ್ತಿದ್ದರೆ ಅದನ್ನು ತಡೆದು ನಿಲ್ಲಿಸುತ್ತದೆ. ನಿರಂಕುಶರಾಗಿ ತಮ್ಮತಮ್ಮಲ್ಲೇ ಹೊಡೆದಾಡಿಕೊಂಡು ಸಾಯುತ್ತಿದ್ದಾಗ ಅದನ್ನು ತಡೆದು ಸಂಯಮದಿಂದ ವರ್ತಿಸುವಂತೆ ರಾಷ್ಟ್ರೀಯ, ಅಂತರರಾಷ್ಟ್ರೀಯ ನಿಯಮಗಳು, ಸಂಸ್ಥೆಗಳು ಬಂದವು. ಅಂತೆಯೇ ಬಿದ್ದು ಹೋದವುಗಳನ್ನು ಕಟ್ಟಲಾಗಿದೆ.

ಮೊದಲನೆ ಮಹಾಯುದ್ದದ ನಂತರ ಸ್ಥಾಪಿತವಾದ 'ಲೀಗ್ ಆಫ್ ನೇಶನ್ಸ' ಎರಡನೆಯ ಮಹಾಯುದ್ಧವನ್ನು ತಡೆಯಲು ಅಸಾಧ್ಯವಾಗಿ ಕುಸಿದುಹೋದಾಗ ಮತ್ತೆ ಕಟ್ಟಲ್ಪಟ್ಟಿದ್ದು ‘ಯುನೈಟೆಡ್ ನೇಶನ್ಸ ಆರ್ಗನೈಸೇಶನ್’. ಹಾಗೆಯೇ ತೀರಾ ಕೆಟ್ಟುಹೋದ, ಬದಲಾವಣೆ ಅಸಾಧ್ಯವೆನ್ನಿಸಿದ್ದನ್ನು ಮನುಷ್ಯ ತೆಗೆದೇ ಹಾಕಿದ್ದಾನೆ. ಇದು ಕೆಟ್ಟು ಹೋದ ಹಾಲನ್ನು ಹೊರಗೆ ಚೆಲ್ಲುವುದಕ್ಕಿಂತ ಅದನ್ನು ಕಡೆದು ಮಜ್ಜಿಗೆಯನ್ನಾಗಿ ಮಾಡಿ ಬಳಸುವ ಬುದ್ಧಿವಂತಿಕೆ. ಹೀಗೆ ಸತತವಾಗಿ ಹಳೆಯದಾದದ್ದನ್ನು ಬದಲಿಸುತ್ತಾ ಹೊಸದನ್ನಾಗಿ ಮಾಡುವುದೇ ಮಾನವನ ಶಾಶ್ವತವಾದ ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.