ADVERTISEMENT

ಬೆರಗಿನ ಬೆಳಕು: ಅನುಭವದ ದೀಪ

ಡಾ. ಗುರುರಾಜ ಕರಜಗಿ
Published 19 ಜನವರಿ 2022, 14:55 IST
Last Updated 19 ಜನವರಿ 2022, 14:55 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಜನಿಯಿಕುಂ ಜ್ಞಾನನವನೀತವದೆ ಸುಖದಂ ||
ಗಿಣಿಯೋದು ಪುಸ್ತಕ ಜ್ಞಾನ, ನಿನ್ನನುಭವವೆ |
ನಿನಗೆ ಧರುಮದ ದೀಪ – ಮಂಕುತಿಮ್ಮ || 544 ||

ಪದ-ಅರ್ಥ: ಪಾಲೊಳು=ಹಾಲಿನಲ್ಲಿ, ಜನಿಯಿಕುಂ=ಹುಟ್ಟುವುದು, ಜ್ಞಾನನವನೀತವದೆ=ಜ್ಞಾನ+ನವನೀತ(ಬೆಣ್ಣೆ)+ಅದೆ, ಸುಖದಂ=ಸುಖವನ್ನು ನೀಡುವುದು, ಗಿಣಿಯೋದು=ಗಿಣಿಪಾಠ, ಧರುಮದ=ಧರ್ಮದ.
ವಾಚ್ಯಾರ್ಥ: ಅನುಭವವೆಂಬ ಹಾಲಿನಲ್ಲಿ ವಿಚಾರಗಳ ಮಂಥನವಾದಾಗ ಜ್ಞಾನವೆಂಬ ಬೆಣ್ಣೆ ಹೊರಬರುತ್ತದೆ. ಅದು ಸುಖಕರವಾದದ್ದು. ಬರೀ ಪುಸ್ತಕದಿಂದ ಪಡೆದ ಜ್ಞಾನ ಗಿಳಿಪಾಠ. ನಿನ್ನ ಅನುಭವವೆ ನಿನಗೆ ಧರ್ಮದ ದೀಪ.

ವಿವರಣೆ: ಅವರೊಬ್ಬ ನಾಟಿ ವೈದ್ಯರು. ಊರೂರು ಅಲೆದು ಔಷಧಿ ಕೊಡುವವರು. ಮಗನನ್ನು ಇಂಗ್ಲೆಂಡಿಗೆ ಕಳುಹಿಸಿ ವೈದ್ಯನನ್ನಾಗಿಸಿದರು. ಒಂದು ತುರ್ತುಕರೆ. ತಂದೆ ಓಡಿದರು. ಇಂಗ್ಲೆಂಡ್ ವೈದ್ಯನೂ ಹಿಂಬಾಲಿಸಿದ. ಮಗುವಿಗೆ ವಿಪರೀತ ಜ್ವರ. ವೈದ್ಯರು ನಾಡಿ ಹಿಡಿದು ನೋಡಿ ಅಬ್ಬರಿಸಿದರು “ನಿಮಗೆ ಪಥ್ಯ ಮಾಡಲು ಹೇಳಿದ್ದೆ. ಮಗುವಿಗೆ ಬಾಳೆಹಣ್ಣು ತಿನ್ನಿಸಿದ್ದೀರಿ”. ಪಾಲಕರು ಇಲ್ಲವೆಂದರು. ವೈದ್ಯರು, “ಸುಳ್ಳು ಹೇಳಬೇಡಿ. ನನಗೆ ನಾಡಿಯಲ್ಲಿ ಬಾಳೆಹಣ್ಣು ತಿಂದದ್ದು ಗೊತ್ತಾಗುತ್ತದೆ” ಎಂದರು. ಮಗುವಿನ ತಾಯಿ, “ಹೌದು ವೈದ್ಯರೆ, ಮಗು ಕೇಳಿತು ಎಂದು ಎರಡು ಬಾಳೆಹಣ್ಣು ಕೊಟ್ಟೆ” ಎಂದೊಪ್ಪಿದಳು. ವೈದ್ಯರು ಔಷಧಿ ಕೊಟ್ಟು ಮರಳಿದರು. ವೈದ್ಯ ಮಗ ಕೇಳಿದ, “ಅಪ್ಪಾ, ನಿನಗೆ ನಾಡಿಯಲ್ಲಿ ಬಾಳೆಹಣ್ಣು ಹೇಗೆ ಗೊತ್ತಾಯಿತು? ನನಗೆ ಇಂಗ್ಲೆಂಡಿನಲ್ಲೂ ಇದನ್ನು ಕಲಿಸಲಿಲ್ಲ”. ಅಪ್ಪ ನಕ್ಕರು “ಮಗನೇ ಅದು ಅನುಭವ. ನಾನು ನಾಡಿ ನೋಡುವಾಗ ಹಾಸಿಗೆ ಎತ್ತಿ ನೋಡಿದೆ. ಹಳ್ಳಿಯ ಜನ, ಸ್ವಚ್ಛತೆಯ ಕಡೆಗೆ ಗಮನ ಕಡಿಮೆ. ಮಗುವಿಗೆ ಕೊಟ್ಟ ಬಾಳೆಹಣ್ಣಿನ ಸಿಪ್ಪೆಗಳು ಹಾಸಿಗೆಯ ಕೆಳಗಿದ್ದವು” ಎಂದರು.

ADVERTISEMENT

ಮರುದಿನ ಮತ್ತೊಂದು ತುರ್ತು ಕರೆ. ತಂದೆ ಇಲ್ಲ. ಮಗನೇ ಓಡಿದ. ಅಲ್ಲಿಯೂ ಮಗುವಿಗೆ ಜ್ವರವೇರಿದೆ. ಈತ ನಾಡಿ ಹಿಡಿದು, ಹಾಸಿಗೆಯ ಅಕ್ಕಪಕ್ಕ, ಕೆಳಗೆ ನೋಡಿದ ನಂತರ ಅಬ್ಬರಿಸಿದ, “ನೀವು ಮಗುವಿಗೆ ಪಥ್ಯಮಾಡಿಸಿಲ್ಲ. ಚರ್ಮದ ತುಣುಕು ತಿನ್ನಿಸಿದ್ದೀರಿ”. ಪಾಲಕರು ಗಾಬರಿಯಾದರು. ಈತನ ತಲೆ ಸರಿ ಇಲ್ಲವೆಂದು ಅವನ ತಂದೆಗೆ ದೂರಿದರು. ತಂದೆ ವಿಷಯ ತಿಳಿದು ಮಗನಿಗೆ ಹೇಳಿದರು. “ನೀನು ಮೂರ್ಖ. ನಾನು ಬಾಳೆಹಣ್ಣು ಹೇಳಿದೆ ಎಂದು ನೀನು ಚರ್ಮ ಎಂದೆಯಾ? ಅದು ಚಮ್ಮಾರನ ಮನೆ. ಚರ್ಮದ ಚೂರುಗಳು ಅಲ್ಲಲ್ಲಿ ಬಿದ್ದಿರುತ್ತವೆ. ಅವನ್ನು ತಿನ್ನಲಾಗುತ್ತದೆಯೇ? ಬರೀ ಪುಸ್ತಕದ ಓದು ಸಾಕು. ಇನ್ನು ಮುಂದೆ ಲೋಕಾನುಭವ ಪಡೆ”. ಮಗ ಒಪ್ಪಿದ.

ಯಾವುದೋ ಒಂದು ವಿಷಯವನ್ನೋ, ಘಟನೆಯನ್ನೋ ನೋಡುತ್ತೇವೆ. ಅದರ ಗ್ರಹಿಕೆ ನಮ್ಮಲ್ಲಿ ಏನೋ ಒಂದು ಪರಿಣಾಮವನ್ನುಂಟು ಮಾಡುತ್ತದೆ. ಅದೇ ಅನುಭವ. ಅನುಭವೆಂಬುದು ಹಾಲಿದ್ದಂತೆ. ಅದನ್ನು ವಿಚಾರವೆಂಬ ಕಡೆಗೋಲಿನಿಂದ ಕಡೆದಾಗ, ಜ್ಞಾನವೆಂಬ ಬೆಣ್ಣೆ ಬರುತ್ತದೆ. ಆ ಜ್ಞಾನವೇ ನಮಗೆ ಬದುಕಿನಲ್ಲಿ ಸುಖವನ್ನು ನೀಡುತ್ತದೆ. ಪುಸ್ತಕದ ಓದು ಗಿಣಿಪಾಠ ಎನ್ನುತ್ತದೆ ಕಗ್ಗ. ಹೀಗೆಂದರೆ ಪುಸ್ತಕದ ಓದು ಬೇಡವೆಂದಲ್ಲ. ಪುಸ್ತಕದಲ್ಲಿ ಓದಿದ್ದು ನಡವಳಿಕೆಯಲ್ಲಿ ವ್ಯಕ್ತವಾದರೆ ಅದು ಪ್ರಯೋಜನಕಾರಿ. ಅದು ಜ್ಞಾನವಾಗಿ ಅನುಭವವಾಗುತ್ತದೆ. ಶ್ರೀ ರಾಮಕೃಷ್ಣ ಪರಮಹಂಸರು ಶಾಸ್ತ್ರಗ್ರಂಥಗಳನ್ನು ಓದಲಿಲ್ಲ, ದೊಡ್ಡ ವಾಗ್ಮಿಗಳಲ್ಲ, ಉಪನ್ಯಾಸ ನೀಡಲು ದೇಶ ಸುತ್ತಲಿಲ್ಲ. ಬಹುಪಾಲು ಆಯುಷ್ಯವನ್ನು ದಕ್ಷಿಣೇಶ್ವರದ ದೇವಾಲಯದಲ್ಲೇ ಕಳೆದರು. ಅವರು ಉಪನಿಷತ್ತುಗಳನ್ನು ಓದದೇ ಹೋದರೂ, ಅನುಭವದಿಂದ ಅವರು ಮಾತನಾಡಿದ್ದೆಲ್ಲ ಉಪನಿಷತ್ತಾಯಿತು. ನಮ್ಮ ಜೀವನದಲ್ಲಿ ಧರ್ಮದ ದಾರಿ ತೋರುವುದು ಈ ಅನುಭವದ ದೀಪವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.