ADVERTISEMENT

ಬೆರಗಿನ ಬೆಳಕು | ಧನ್ಯರು

ಡಾ. ಗುರುರಾಜ ಕರಜಗಿ
Published 17 ಫೆಬ್ರುವರಿ 2022, 20:00 IST
Last Updated 17 ಫೆಬ್ರುವರಿ 2022, 20:00 IST
   

ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ |
ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ ||
ಅನುರೂಪದಿಂದ ವಾಸ್ತವಗೊಳಿಪ ಕೃತಿ ಚತುರ |
ಧನಿಯರಿವರೆಲ್ಲಿಹರೊ? – ಮಂಕುತಿಮ್ಮ || 567 ||

ಪದ-ಅರ್ಥ: ಪೂರ್ಣದಿನೊರೆಯಲರಿತ=ಪೂರ್ಣದಿ(ಪೂರ್ಣವಾಗಿ)+ಒರೆಯಲು=(ತಿಳಿಸಲು, ವ್ಯಕ್ತಪಡಿಸಲು)+ಅರಿತ, ಇನಿತನುಂ=ಸ್ವಲ್ಪವಾದರೂ, ರೂಪಿಸಲರಿತ=ರೂಪಿಸಲು+ಅರಿತ, ಅನುರೂಪದಿಂದ=ಬಯಸಿದಂತೆಯೆ, ವಾಸ್ತವಗೊಳಿಪ=ವಾಸ್ತವಕ್ಕೆ ತರುವ, ಧನಿಯರಿವರೆಲ್ಲಿಹರೊ=ಧನಿಯರು(ಧನ್ಯರು)+ಇವರು+ಎಲ್ಲಿಹರೊ.

ವಾಚ್ಯಾರ್ಥ: ಮನಸ್ಸಿನಲ್ಲಿ ಉದಿಸಿದ ಭಾವನೆಗಳನ್ನು ಸಂಪೂರ್ಣವಾಗಿ ವರ್ಣಿಸಬಲ್ಲ ಕವಿ, ಮನದಲ್ಲಿ ರೂಪಿತವಾದ ಚಿತ್ರವನ್ನು ಒಂದು ಚೂರೂ ವ್ಯತ್ಯಾಸವಾಗದಂತೆ ರೂಪಿಸಬಲ್ಲ ಶಿಲ್ಪಿ, ಬಯಸಿದ್ದನ್ನು ಅದೇ ರೀತಿ ವಾಸ್ತವಕ್ಕೆ ತರಬಲ್ಲ ಕಾರ್ಯಚತುರ, ಇಂತಹಧನ್ಯರುಎಲ್ಲಿದ್ದಾರೋ?

ADVERTISEMENT

ವಿವರಣೆ: ತಲ್ಲೀನತೆ ಎನ್ನುವ ಮನೋವಿಕಾರ ಮೊದಲು ಕವಿಯ ಮನಸ್ಸಿನಲ್ಲಾಗುತ್ತದೆ. ಈ ಮಾಯೆಯನ್ನೇ ‘ರಸ’ ಎಂದು ಕರೆಯುತ್ತಾರೆ. ಅದು ಮುಂದೆ ಕಾವ್ಯರೂಪದಲ್ಲಿ ಉಕ್ಕಿ, ಹರಿದು, ವಾಚಕನ ಹೃದಯವನ್ನು ಪ್ರವೇಶಿಸಿ, ಇಂಥದೇ ರಸವನ್ನು ಅಲ್ಲಿ ಹುಟ್ಟಿಸುತ್ತದೆ. ಹೀಗೆ ರಸೋತ್ಪಾದನೆಯನ್ನು ಮಾಡುವವನೇ ಕವಿ. ಆದರೆ ಅದು ತುಂಬ ಕಷ್ಟದ ಕೆಲಸ. ಮನುಷ್ಯನ ಮನೋವ್ಯಾಪಾರಗಳು ಅಳತೆಗೂ, ತೂಕಕ್ಕೆ ಸಿಕ್ಕುವವಲ್ಲ. ಅದರಲ್ಲಿಯೂ ಕವಿಯ ಅಂತರಂಗವು ಅತ್ಯಂತ ಸೂಕ್ಷ್ಮವಾದದ್ದು. ಅದರ ರಹಸ್ಯವನ್ನು ಬಾಹ್ಯಕ್ಕೆ ತಿಳಿಸಲು ಬಹುವಾದ ಪ್ರಯತ್ನ ಬೇಕು. ಅಷ್ಟಾದರೂ ಮೂಲಭಾವನೆ ನಿಖರವಾಗಿ ಪ್ರಕಟವಾದೀತೆಂದು ಹೇಳುವುದು ಕಷ್ಟ. ಭಾವನೆಗಳ ಪ್ರಕಟಣೆಗೆ ಭಾಷೆಯೊಂದೇ ವಾಹಕ. ಆದರೆ ಭಾಷೆ ಒಂದು ಒರಟು ಯಾನ. ಕವಿಯ ಎಷ್ಟೋ ಭಾವನೆಗಳು ಪ್ರಕಾಶಕ್ಕೆ ಬಾರದೆ ಒಳಗೇ ಉಳಿದುಬಿಡುತ್ತವೆ. ಸಮರ್ಥವಾಗಿ ಭಾವನೆಗಳನ್ನು ಹೊರಗೆ ತರುವ ಕವಿ ಧನ್ಯ.

ಇದೇ ರೀತಿ ಒಬ್ಬ ಶಿಲ್ಪ ಅಥವಾ ವರ್ಣಚಿತ್ರ ಕಲಾವಿದನಿಗೂ ಆಗುತ್ತದೆ. ಮನಸ್ಸಿನಲ್ಲಿ ಹೊಳೆದ ಆಕೃತಿ ಅಥವಾ ಚಿತ್ರವನ್ನು ಶಿಲ್ಪಕ್ಕೋ, ಕ್ಯಾನವಾಸ್‌ಗೋ ಇಳಿಸುವಾಗ ಕೆಲವು ಬದಲಾವಣೆಗಳಾಗುತ್ತವೆ. ಅದು ಕಲ್ಲಿನ ಗುಣದಿಂದಾಗಬಹುದು, ಆ ಕ್ಷಣದ ಆವೇಶದಿಂದಾಗಬಹುದು. ಮನದ ಚಿತ್ರವನ್ನೇ ಇರುವಂತೆಯೇ ಇಳಿಸಬಲ್ಲ ಶಿಲ್ಪಿ ಕೂಡ ಧನ್ಯ. ಮೂಲಚಿಂತನೆಗೂ, ಅದರ ಪುನರ್ ನಿರ್ಮಾಣದಲ್ಲೂ ಆಗುವ ವ್ಯತ್ಯಾಸ ಕೇವಲ ಕಲೆ ಮತ್ತು ಸಾಹಿತ್ಯದಲ್ಲಲ್ಲ. ಸಮಾಜಕಾರ್ಯದಲ್ಲೂ ಅದೇ ಸಮಸ್ಯೆ ಬರುತ್ತದೆ. ಇದೇ ಸಂಕಲ್ಪಕ್ಕೂ ಕಾರ್ಯಸಿದ್ಧಿಗೂ ಇರುವ ವ್ಯತ್ಯಾಸ. ಮನುಷ್ಯ ಯಾವುದೋ ಕಾರ್ಯವನ್ನು ಮಾಡಲು ಸಂಕಲ್ಪ ಮಾಡುತ್ತಾನೆ. ನಂತರ ಸಂಕಲ್ಪವನ್ನು ಪೂರ್ತಿಮಾಡಲು ಶ್ರಮಿಸುತ್ತಾನೆ. ಬಹಳಷ್ಟು ಜನರಿಗೆ ಅದು ಸಾಧ್ಯವಾಗುವುದಿಲ್ಲ.

ಮೈಸೂರು ಮಹಾರಾಜರು ಮತ್ತು ಕೋಲಾರದ ಬಂಗಾರದ ಗಣಿಯ ಮಾಲಿಕರಾದ ಜಾನ್ ಟೇಲರ್ ನಡುವೆ ಒಂದು ಒಪ್ಪಂದವಾಯಿತು. ಒಂದು ನಿಗದಿಯಾದ ದಿನದಂದು ಟೇಲರ್ ಕಂಪನಿಗೆ ವಿದ್ಯುತ್ ಪೂರೈಸಬೇಕಿತ್ತು. ಆದರೆ ಮಡಿಕೇರಿಯಲ್ಲಿ ಭಾರೀ ಮಳೆಯಾಗಿ ಕಾವೇರಿಗೆ ಪ್ರವಾಹ ಬಂದು, ದಂಡೆ ಒಡೆದು ನೀರು ಶಿವಸಮುದ್ರದ ಕಡೆಗೆ ಹೋಗುವುದು ಕಷ್ಟವಾಯಿತು. ಆದರೆ ಸರ್. ವಿಶ್ವೇಶ್ವರಯ್ಯ ಹಗಲು ರಾತ್ರಿ ದುಡಿದು, 5000 ಜನರನ್ನು ನೇಮಿಸಿಕೊಂಡು, ನದಿಗೆ ದಂಡೆ ಕಟ್ಟಿ, ನೀರನ್ನು ತಿರುಗಿಸಿ ಅದೇ ದಿನ ವಿದ್ಯುತ್‌ನ್ನು ಪೂರೈಸಿ ಮಹಾರಾಜರ ಮಾತು ನಡೆಸಿದರು. ಸಂಕಲ್ಪವನ್ನು ಸಂಪೂರ್ಣವಾಗಿ ಸಾಕಾರಗೊಳಿಸಿದರು.

ಕಗ್ಗ ಹೇಳುತ್ತದೆ, ಮನದ ಭಾವನೆಗಳನ್ನೆಲ್ಲ ಅಕ್ಷರಕ್ಕಿಳಿಸುವ ಕವಿ, ಅಂತರ್ಯದ ಚಿತ್ರಗಳನ್ನು ಸಾಕಾರಗೊಳಿಸಿದ ಶಿಲ್ಪಿ, ಸಂಕಲ್ಪಗಳನ್ನೆಲ್ಲ ಈಡೇರಿಸಿದ ಕಾರ್ಯಚತುರ ಇವರೆಲ್ಲಧನ್ಯರು. ಅಂಥವರು ಎಲ್ಲಿದ್ದಾರೆ? ಎಷ್ಟಿದ್ದಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.