ADVERTISEMENT

ಬೆರಗಿನ ಬೆಳಕು | ಅಹಂಪ್ರಜ್ಞೆಯ ಕರಗುವಿಕೆ

ಡಾ. ಗುರುರಾಜ ಕರಜಗಿ
Published 14 ಫೆಬ್ರುವರಿ 2022, 20:00 IST
Last Updated 14 ಫೆಬ್ರುವರಿ 2022, 20:00 IST
   

ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ |
ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ||
ಎಲೆನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |
ತಿಳಿದದನು ನೆರವಾಗು – ಮಂಕುತಿಮ್ಮ || 563 ||

ಪದ-ಅರ್ಥ: ಬಿಳಲಲ್ಲ=ಬಿಳಲು+ಅಲ್ಲ, ತಳಿರಲ್ಲ=ತಳಿರು(ಚಿಗುರು)+ಅಲ್ಲ, ಮಲರಲ್ಲ=ಮಲರು(ಹೂವು)+ಅಲ್ಲ, ಎಲೆಯೊಳೊಂದು=ಎಲೆಯೊಳು+ಒಂದು ತಿಳಿದದನು=ತಿಳಿದು+ಅದನು.

ವಾಚ್ಯಾರ್ಥ: ಬಿಳಲು ಅಲ್ಲ, ಬೇರಲ್ಲ, ಮುಖ್ಯ ಕಾಂಡ, ಮುಂಡವೂ ಅಲ್ಲ, ಚಿಗುರಲ್ಲ, ಹೂವಲ್ಲ, ಕಾಯಿ ಹಣ್ಣೂ ಅಲ್ಲ. ನೀನು ಕೇವಲ ಒಂದು ಎಲೆ. ವಿಶ್ವವೃಕ್ಷದೊಳಗಿರುವ ಅನೇಕ ಎಲೆಗಳಲ್ಲಿ ಒಂದು ಎಲೆ ನೀನು. ಅದನ್ನು ತಿಳಿದು ನೆರವಾಗು.

ADVERTISEMENT

ವಿವರಣೆ: ಇದು ಕಗ್ಗದ ವಿಶೇಷತೆ. ಹಿಂದಿನ ಕಗ್ಗದಲ್ಲಿ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ನೀನು ಸಣ್ಣವನು ಎಂದುಕೊಳ್ಳಬೇಡ. ಇಡೀ ವಿಶ್ವವೃಕ್ಷದೊಳಗೆ ನಿನಗೊಂದು ಸ್ಥಾನವಿದೆ. ವೃಕ್ಷ ನಿನ್ನದೆ ಎಂದು ಆತ್ಮವಿಶ್ವಾಸವನ್ನು ತುಂಬುತ್ತದೆ. ಆದರೆ ಮನುಷ್ಯನಿಗೊಂದು ಅಹಂಪ್ರಜ್ಞೆ ಇದೆ. ಯಾವಾಗ ‘ನಾನು’ ಎಂಬುವುದು ದೊಡ್ಡದಾಯಿತೋ ಆಗ ಆತ ನಿಧಾನವಾಗಿ ಎಲ್ಲರಿಗೂ ಪರಿಕೀಯನಾಗುವುದರ ಜೊತೆಗೆ ತನಗೂ ಪರಕೀಯನಾಗುತ್ತಾನೆ. ತಾನೊಬ್ಬನೇ ಶ್ರೇಷ್ಠ ಎನ್ನುವ ಭಾವನೆ ಒಂಟಿತನವನ್ನುಂಟು ಮಾಡುತ್ತದೆ. ಮರದಿಂದ ಬೇರೆಯಾದ ಕೊಂಬೆ ಕ್ರಮೇಣ ಒಣಗಿ ಹೋಗುವಂತೆ ಅಹಂಕಾರದಿಂದ ಕೂಡಿದ ಮನುಷ್ಯ, ಸಮಾಜದಿಂದ ಬೇರೆಯಾಗಿ ದುರಹಂಕಾರಿಯಾಗುತ್ತಾನೆ. ಈ ಕಗ್ಗ ದುರಂಹಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತದೆ.

ಇದೊಂದು ಮಹಾನ್ ವಿಶ್ವವೃಕ್ಷ. ಅದು ಕೊನೆ ಮೊದಲಿಲ್ಲದ ಬೃಹತ್‌ವೃಕ್ಷ. ಈ ವೃಕ್ಷದ ಬೇರು ನೀನಲ್ಲ, ಬಿಳಲಲ್ಲ, ಮುಂಡ, ಕಾಂಡವೂ ಅಲ್ಲ, ಅದರ ಚಿಗುರಲ್ಲ, ಹೂವು, ಕಾಯಿ, ಹಣ್ಣು ಯಾವುದೂ ನೀನಲ್ಲ. ಈ ವೃಕ್ಷಕ್ಕೆ ಕೋಟ್ಯಾಂತರ ಎಲೆಗಳಿವೆ. ಅಷ್ಟೊಂದು ಎಲೆಗಳಲ್ಲಿ ನೀನು ಕೇವಲ ಒಂದು ಎಲೆ ಮಾತ್ರ. ಅದನ್ನು ತಿಳಿದು, ಅಹಂಕಾರವನ್ನು ಕರಗಿಸಿಕೊಂಡು ವಿಶ್ವವೃಕ್ಷದ ಕಾರ್ಯದಲ್ಲಿ ಸಹಕಾರಿಯಾಗು. ನೀನೊಬ್ಬನಿಲ್ಲದಿದ್ದರೆ ವೃಕ್ಷಕ್ಕೆ ಯಾವ ತೊಂದರೆಯೂ ಇಲ್ಲ. ಬಹುಶ: ನೀನು ಉದುರಿ ಹೋದರೆ ಮರಕ್ಕೆ ಗೊತ್ತು ಕೂಡ ಆಗಲಿಕ್ಕಿಲ್ಲ. ಆದ್ದರಿಂದ ವಿನಯದಿಂದ ವಿಶ್ವಜೀವನದಲ್ಲಿ ಮಿಳಿತನಾಗು ಎನ್ನುತ್ತದೆ ಕಗ್ಗ. ಈ ಸಂದೇಶ ನಮಗೆಲ್ಲ ಪ್ರಯೋಜನಕಾರಿಯಾದದ್ದು. ಇಡೀ ಪ್ರಪಂಚದ ವ್ಯವಸ್ಥೆಯಲ್ಲಿ ನಾನೊಂದು ಅತ್ಯಂತ ಚಿಕ್ಕ ಅಂಶ. ಈ ಸ್ವಸ್ಥಾನ ಪರಿಜ್ಞಾನದಿಂದ ವ್ಯವಹರಿಸಿದರೆ ಬದುಕು ಬಂಗಾರವಾಗುತ್ತದೆ. ಆದರೆ ‘ನಾನು’ ಎಂಬುದು ದೊಡ್ಡದಾದರೆ ಪೆಟ್ಟು ಬೀಳುತ್ತದೆ.

ನಹುಷ ಅಸಾಮಾನ್ಯ ಚಕ್ರವರ್ತಿ, ಪರಾಕ್ರಮಶಾಲಿ. ಇಂದ್ರ ಕೂಡ ಅವನ ಸಹಾಯವನ್ನು ಅಪೇಕ್ಷಿಸಿದ. ಒಂದು ಬಾರಿ ಇಂದ್ರಸ್ಥಾನ ಖಾಲಿಯಾದಾಗ ಅದನ್ನು ತುಂಬಲು ನಹುಷ ಮಾತ್ರ ಶಕ್ತ ಎಂದು ದೇವಗುರು ಬೃಹಸ್ಪತಿ ಹೇಳಿದಾಗ ಎಲ್ಲರೂ ಒಪ್ಪಿ ಅವನನ್ನು ಇಂದ್ರಸ್ಥಾನದಲ್ಲಿ ಕೂಡ್ರಿಸಿದರು. ಮಾನವ, ಇಂದ್ರನಾಗುವುದು ಸಾಮಾನ್ಯವೇ? ಇದು ನಹುಷನಿಗೆ ಅಹಂಕಾರವನ್ನು ತಂದಿತು. ಅದು ಅವನನ್ನು ಎಲ್ಲರಿಂದ ಬೇರ್ಪಡಿಸಿತು. ಅಹಂಕಾರದ ಪರಮಾವಧಿಯಾಗಿ ಆತ ಇಂದ್ರನ ಪತ್ನಿಯಾದ ಶಚಿದೇವಿಯನ್ನೇ ಬಯಸಿದ. ನಂತರ ಋಷಿಗಳ ಶಾಪಕ್ಕೆ ಗುರಿಯಾಗಿ ಹೆಬ್ಬಾವಾಗಿ ಭೂಲೋಕದಲ್ಲಿ ಬಿದ್ದು ಶತಮಾನಗಳವರೆಗೆ ಪರಿತಪಿಸಿದ. ಕಗ್ಗ ಆತ್ಮವಿಶ್ವಾಸ ಮತ್ತು ಅಹಂಕಾರದ ವ್ಯತ್ಯಾಸವನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಆತ್ಮವಿಶ್ವಾಸ ನಮ್ಮ ಆಂತರ್ಯದ ದರ್ಶನ. ಆದರೆ ಅಹಂಕಾರ ನಾನು ಮಾತ್ರ ಮಾಡಬಲ್ಲೆ ಎನ್ನುತ್ತದೆ. ಅಹಂಕಾರರಹಿತನಾಗಿ ಕೆಲಸ ಮಾಡಿದರೆ ವಿಶ್ವಪ್ರಜ್ಞೆಯಲ್ಲಿ ಮನುಷ್ಯ ಒಂದಾಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.