ADVERTISEMENT

ಬೆರಗಿನ ಬೆಳಕು: ಮೈತ್ರಿಯ ಗುಟ್ಟು

ಡಾ. ಗುರುರಾಜ ಕರಜಗಿ
Published 10 ಮಾರ್ಚ್ 2021, 19:50 IST
Last Updated 10 ಮಾರ್ಚ್ 2021, 19:50 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಒಂದು ಟಗರು ಅರಮನೆಯ ಗಜಶಾಲೆಯಲ್ಲಿ, ಆನೆಗಳ ಮುಂದೆ ಹಾಕಿದ ಹುಲ್ಲಿನ ರಾಶಿಯಲ್ಲಿ ಒಂದಷ್ಟನ್ನು ತಿನ್ನುತ್ತಿತ್ತು. ಅದನ್ನು ಕಂಡ ಮಾವಟಿಗಳು ಅದನ್ನು ಹೊಡೆದು ಓಡಿಸಿದರು. ಇನ್ನೊಬ್ಬ ದೊಣ್ಣೆಯಿಂದ ಬೆನ್ನಿಗೆ ಹೊಡೆದ. ಸೊಂಟವನ್ನು ಬಾಗಿಸಿಕೊಂಡು ನೋವಿನಿಂದ ಕೂಗುತ್ತ ಅದು ಗಜಶಾಲೆಯ ಗೋಡೆಯ ಹಿಂದೆ ಮಲಗಿತು. ಅದೇ ದಿನ ರಾಜನ ಅಡುಗೆ ಮನೆಯಲ್ಲಿ ವಿಶೇಷ ಮೀನಿನ ಅಡುಗೆಯಾಗುತ್ತಿತ್ತು. ಹೊರಗೆ ನಿಂತಿದ್ದ ನಾಯಿಗೆ ಈ ವಾಸನೆಯ ಆಕರ್ಷಣೆಯನ್ನು ತಡೆದುಕೊಳ್ಳುವುದು ಅಸಾಧ್ಯವಾಯಿತು. ಅಡುಗೆಯವ ಬೇರೆಡೆಗೆ ನೋಡುತ್ತಿದ್ದಾಗ ಅಡುಗೆ ಮನೆಗೆ ನುಗ್ಗಿ, ಮುಚ್ಚಳವನ್ನು ತಳ್ಳಿ, ಮಾಂಸದ ತುಂಡನ್ನು ಬಾಯಿಯಲ್ಲಿ ಹಿಡಿದುಕೊಂಡಿತು. ಮುಚ್ಚಳ ಬಿದ್ದ ಸಪ್ಪಳ ಕೇಳಿ ಓಡಿಬಂದ ಅಡುಗೆಯವ ನಾಯಿಯನ್ನು ಕಂಡು ಬಾಗಿಲುಮುಚ್ಚಿ ಕೋಲಿನಿಂದ ಹೊಡೆದ. ಮಾಂಸದ ಚೂರನ್ನು ಅಲ್ಲಿಯೇ ಬಿಟ್ಟು ನಾಯಿ ಹೊರಗೆ ಹೋಗುವಾಗ ಮತ್ತೊಬ್ಬ ದೊಣ್ಣೆಯಿಂದ ಸೊಂಟದ ಮೇಲೆ ಪೆಟ್ಟು ಹಾಕಿದ. ನಾಯಿ ನೋವಿನಿಂದ ಅರಚುತ್ತ ಗಜಶಾಲೆಯ ಹಿಂದಿನ ಗೋಡೆಗೆ ಬಂದು ಕುಳಿತಿತು. ಅಲ್ಲಿಯೇ ಕುಳಿತಿದ್ದ ಟಗರು, ‘ಯಾಕಪ್ಪಾ, ಸೊಂಟ ಬಗ್ಗಿಸಿಕೊಂಡು ನಡೆಯುತ್ತಿದ್ದೀ? ವಾತರೋಗವೇ?’ ಎಂದು ಕೇಳಿತು. ನಾಯಿಗೆ ಕೋಪ ಬಂದು, ‘ನೀನೂ ಹಾಗೆಯೇ ನಡೆಯುತ್ತಿದ್ದೀಯಲ್ಲ, ನಿನಗೆ ರೋಗ ಬಂದಿದೆಯೇ?’ ಎಂದು ಒರಟಾಗಿ ಕೇಳಿತು. ಎರಡೂ ಪ್ರಾಣಿಗಳು ತಮಗಾದ ತೊಂದರೆಯನ್ನು ಹೇಳಿಕೊಂಡು ಅತ್ತವು. ಹಾಗಾದರೆ ಮುಂದೆ ನಮ್ಮ ಗತಿ ಏನು ಎಂದು ಚಿಂತಿಸಿದವು.

ಟಗರು ಹೇಳಿತು, ‘ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಇಬ್ಬರೂ ಸಂತೋಷವಾಗಿರಬಹುದು. ನೀನು ಗಜಶಾಲೆಗೆ ಹೋಗು. ನೀನು ಹುಲ್ಲು ತಿನ್ನುವವನಲ್ಲ. ಆದ್ದರಿಂದ ಮಾವಟಿಗೆ ನಿನಗೆ ಏನೂ ಮಾಡುವುದಿಲ್ಲ. ನೀನು ಅಲ್ಲಿಯೇ ಕುಳಿತುಕೊಂಡು ಮಾವಟಿಗ ಹೊರಗೆ ಹೋದಾಗ ನಾಲ್ಕಾರು ಪಿಂಡಿ ಹುಲ್ಲು ಎತ್ತಿಕೊಂಡು ಇಲ್ಲಿಗೆ ಬಾ. ನಾನು ಅಡುಗೆ ಮನೆಗೆ ಹೋಗುತ್ತೇನೆ. ನಾನು ಸಸ್ಯಾಹಾರಿಯಾದ್ದರಿಂದ ಅಡುಗೆಯವವನಿಗೆ ನನ್ನ ಮೇಲೆ ಸಂಶಯ ಬರುವುದಿಲ್ಲ. ಅಡುಗೆಯವ ಹೊರಗೆ ಹೋದಾಗ ನಾನು ನಾಲ್ಕಾರು ಮಾಂಸದ ತುಂಡುಗಳನ್ನು ಎತ್ತಿಕೊಂಡು ಬರುತ್ತೇನೆ’. ಇದೇ ಸರಿಯಾದ ಉಪಾಯವೆಂದು ಎರಡೂ ಪ್ರಾಣಿಗಳು ಒಪ್ಪಿ ಅದರಂತೆ ನಡೆದು ಸುಖವಾಗಿದ್ದವು. ಒಂದು ಸಂಜೆ ಮಿಥಿಲೆಯ ರಾಜ ವಿದೇಹ ಜಲಪಾನವಾದ ಮೇಲೆ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದ. ಅಲ್ಲಿ ಗಜಶಾಲೆಯ ಗೋಡೆಯ ಹಿಂದೆ ಒಂದು ಟಗರು ಮತ್ತು ನಾಯಿ ಅತ್ಯಂತ ಸ್ನೇಹದಿಂದಿರುವುದನ್ನು ಕಂಡ. ಅದು ಅವನಿಗೆ ಆಶ್ಚರ್ಯ ತಂದಿತು.

ಮರುದಿನ ರಾಜ ಈ ಪ್ರಶ್ನೆಯನ್ನು ಮಂತ್ರಿಗಳಿಗೆ ಕೇಳಿದ, ‘ಯಾಕೆ ಈ ಎರಡೂ ಪ್ರಾಣಿಗಳು ಶತ್ರುತ್ವವನ್ನು ಮರೆತು ಸ್ನೇಹಿಗಳಾಗಿವೆ?’ ಮಂತ್ರಿಗಳಿಗೆ ಉತ್ತರ ಹೊಳೆಯಲಿಲ್ಲ. ಮಹೋಷಧಕುಮಾರ ಒಂದು ದಿನದ ಅವಕಾಶ ಕೇಳಿದ. ಮಧ್ಯಾಹ್ನ ಅರಮನೆಗೆ ಹೋಗಿ, ರಾಜ ನಿನ್ನೆಯ ದಿನ ಏನನ್ನು ಗಮನಿಸಿದ ಎಂದು ರಾಣಿಯನ್ನು ಕೇಳಿದ. ಆಕೆ, ಆತ ಅರಮನೆಯ ಮಾಳಿಗೆಯ ಮೇಲೆ ನಿಂತು ಬಹಳ ಹೊತ್ತು ಗಜಶಾಲೆಯನ್ನು ನೋಡುತ್ತಿದ್ದುದನ್ನು ಹೇಳಿದಳು. ಈತ ಅಲ್ಲಿ ಹೋಗಿ ನೋಡಿದರೆ, ಗೋಡೆಯ ಹಿಂದೆ ಹುಲ್ಲಿನ ರಾಶಿ ಹಾಗೂ ಮಾಂಸ ತಿಂದು ಉಳಿದ ಎಲುಬುಗಳು ಕಂಡವು. ಕುಮಾರ ಬಂದು ರಾಜನಿಗೆ ಹೇಳಿದ, ‘ಬದುಕುವ ಆಸೆ, ವೈರಿಗಳನ್ನು ಸ್ನೇಹಿತರನ್ನಾಗಿ ಮಾಡುತ್ತದೆ. ಟಗರು ಮಾಂಸವನ್ನು ನಾಯಿಗೆ ತಂದುಕೊಟ್ಟರೆ, ನಾಯಿ ಟಗರಿಗೆ ಹುಲ್ಲು ತಂದು ಹಾಕುತ್ತದೆ’.

ADVERTISEMENT

ಪರಸ್ಪರ ವೈರತ್ವವನ್ನು ಹೊಂದಿದವರು ಯಾವುದೋ ಸಮಾನ ಅಪೇಕ್ಷೆಗಾಗಿ ಸ್ನೇಹಿತರಾಗಿರುವಂತೆ ವರ್ತಿಸುವುದನ್ನು ಇಂದಿಗೂ ಕಾಣುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.