ADVERTISEMENT

ಬಿಡದ ಬಾಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 19:30 IST
Last Updated 12 ಫೆಬ್ರುವರಿ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- |
ರೂಳಿಗವ ತಪ್ಪಿಸುವ ಜಾಣನೆಲ್ಲಿಹನು ? ||
ಊಳಿಗವೊ ಕಾಳಗವೊ ಕೂಳ್ಕರೆಯೊ ಗೋಳ್ಕರೆಯೊ |
ಬಾಳು ಬಾಳದೆ ಬಿಡದು – ಮಂಕುತಿಮ್ಮ || 249 ||

ಪದಅರ್ಥ:ಬಾಳೆನ್ನುತಿರ್ದೊಡೆಯುಮದರೂಳಿಗವ=ಬಾಳು+ಎನ್ನುತ+ಇರ್ದೊಡೆಯುಂ(ಇದ್ದರೂ)+ಅದರ+ಊಳಿಗವ
(ಸೇವೆಯ), ಕೂಳ್ಕರೆ=ಕೂಳ್(ಊಟದ)+ಕರೆ, ಗೋಳ್(ಗೋಳಿನ)+ಕರೆ.

ವಾಚ್ಯಾರ್ಥ: ಈ ಬಾಳೆಲ್ಲ ಹಾಳು, ಹಾಳು ಎನ್ನುತ್ತಿದ್ದರೂ ಅದರ ಸೇವೆಯನ್ನು ತಪ್ಪಿಸುವ ಜಾಣನೆಲ್ಲಿದ್ದಾನೆ? ಅದು ಹಸಿವಿನ ಕರೆಯೋ, ಗೋಳಾಟದ ಕರೆಯೋ, ಅದು ಸೇವೆಯೋ, ಕಾದಾಟವೋ ಏನಾದರಾಗಲಿ ಬಾಳನ್ನು ಬಾಳದೆ ಇರುವುದಕ್ಕಾಗದು.

ADVERTISEMENT

ವಿವರಣೆ: ನಮ್ಮ ಸುತ್ತಮುತ್ತ ಬದುಕಿರುವ, ನಾವು ಕಂಡಿರುವ, ಕೇಳಿರುವ ಜನರ ಬದುಕುಗಳನ್ನು ಒಂದು ಕ್ಷಣ ಗಮನಿಸಿ ನೆನೆಸಿಕೊಳ್ಳಿ. ಅವರ ಬದುಕಿಗೆ ಏನೇನು ಕಾರಣಗಳಿವೆ, ಉದ್ದೇಶಗಳಿವೆ. ಒಬ್ಬ ಬಡಮನುಷ್ಯ ಎರಡು ಹೊತ್ತಿನ ಅನ್ನಕ್ಕಾಗಿ ಹೋರಾಡುತ್ತಾನೆ, ಯಾರ ಯಾರದೋ ಸೇವೆ ಮಾಡುತ್ತಾನೆ. ಮನಸ್ಸಿಗೆ ಒಪ್ಪದ ಕಾರ್ಯಗಳು, ಅಪಮಾನಗಳನ್ನು ಸಹಿಸಿಕೊಳ್ಳಬೇಕಾದ ಕೆಲಸಗಳನ್ನೆಲ್ಲ ಮಾಡುತ್ತಾನೆ. ಅದೆಲ್ಲ ಕೇವಲ ತನ್ನ ಹಾಗೂ ತನ್ನ ಪರಿವಾರದವರು ಬದುಕಿ, ಬೆಳೆಯುವುದಕ್ಕೆ. ಅವನಿಗೆ ಬದುಕು ಸಾಕು, ಸಾಕು ಎನ್ನುವಂತಾಗಿದೆ. ತನ್ನ ಬಳಿಯೂ ಬೇಕಾದಷ್ಟು ಹಣವಿದ್ದರೆ ಸುಖವಾಗಿರುತ್ತಿದ್ದೆ ಎಂದು ಭಾವಿಸುತ್ತಾನೆ. ಶ್ರೀಮಂತರೆಲ್ಲ ಸುಖವಾಗಿದ್ದಾರೆ ಎಂದುಕೊಳ್ಳುತ್ತಾನೆ. ಆದರೆ ಶ್ರೀಮಂತನ ಕಥೆಯೇ ಬೇರೆ. ಕೋಟಿ ಇದ್ದವನಿಗೆ ನೂರು ಕೋಟಿ ಹಂಬಲ, ನೂರಿದ್ದವನಿಗೆ ಸಾವಿರ ಕೋಟಿಯ ಅಪೇಕ್ಷೆ. ಅದಕ್ಕೆ ಮಿತಿ ಏನಾದರೂ ಇದೆಯೇ? ನಂತರ, ಹಣ ಬಂದರೆ ಅದನ್ನು ಕಾಪಿಡುವ ಭಯ. ಅದನ್ನು ಯಾರಾದರೂ ಅಪಹರಿಸಿಯಾರೋ ಅಥವಾ ಸರ್ಕಾರದ ಕಣ್ಣಿಗೆ ಬಿದ್ದರೆ ಮುಖಭಂಗವಾಗುವ ಭಯ. ಅದಕ್ಕೆ ಸಾಕ್ರೆಟಿಸ್ ಹೇಳುತ್ತಿದ್ದ, ‘ಕಡಿಮೆ ಹಣ ಕೆಟ್ಟದ್ದು. ಆದರೆ ಹೆಚ್ಚಿನ ಹಣ ಭಯಂಕರವಾದದ್ದು’ ಶ್ರೀಮಂತನಿಗೂ ಬದುಕಿನ ಒತ್ತಡ ಸಾಕಾಗಿದೆ.

ತೀರ ಸಣ್ಣ ಕೆಲಸದಲ್ಲಿದ್ದವನಿಗೆ ಒಂದು ರೀತಿಯ ಕೀಳರಿಮೆ. ನನ್ನದೇನು ಕೆಲಸ? ಬರೀ ಚಾಕರಿ ತಾನೆ? ಸಾಕು ಈ ಊಳಿಗದ ಕೆಲಸ ಎಂದುಕೊಳ್ಳುತ್ತಾನೆ. ನನಗೆ ತುಂಬ ಆತ್ಮೀಯರಾಗಿದ್ದವರೊಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಒಂದು ದಿನ ಸಂಜೆ ರಾತ್ರಿ ಊಟಕ್ಕೆ ಕರೆದಿದ್ದರು. ಅವರು ಹೇಳಿದಂತೆ ರಾತ್ರಿ ಎಂಟೂವರೆಗೆ ಅವರ ಮನೆ ತಲುಪಿದೆ. ಮನೆಯ ಮುಂದೆ, ಅಂಗಳದಲ್ಲಿ, ಮನೆಯಲ್ಲಿ ಎಲ್ಲಿ ನೋಡಿದಲ್ಲಿ ಜನ! ಗುಂಪು ಗುಂಪಾಗಿ ಅವರನ್ನು ಭೇಟಿಯಾದವರು ಕೆಲವರು, ಒಬ್ಬೊಬ್ಬರಾಗಿ ಕರೆದು ಮಾತನಾಡಿಸಿದವರು ಕೆಲವರು. ರಾತ್ರಿ ಹನ್ನೊಂದು ಗಂಟೆಯಾದರೂ ಜನ ನೆರೆದೇ ಇದ್ದರು. ಕೊನೆಗೊಮ್ಮೆ ಅವರ ಕಾರ್ಯದರ್ಶಿ ಅವರನ್ನು ಜನರಿಂದ ಪಾರುಮಾಡಿ ಕರೆದುಕೊಂಡು ಬಂದ. ನನ್ನ ನೋಡಿದ ತಕ್ಷಣ, “ದಯವಿಟ್ಟು ಕ್ಷಮಿಸಿ, ನೀವು ಬರುವುದನ್ನೇ ಮರೆತಿದ್ದೆ. ಏನು ಮಾಡುವುದು ನಮ್ಮ ಕೆಲಸಾನೇ ಹೀಗೆ. ಒಮ್ಮೊಮ್ಮೆ ಸಾಕಪ್ಪಾ ಸಾಕು, ಇದನ್ನೆಲ್ಲ ಬಿಟ್ಟು ಹಳ್ಳಿಗೆ ಹೋಗಿಬಿಡಬೇಕೆಂದು ಅನ್ನಿಸುತ್ತದೆ” ಎಂದರು. ಅವರಿಗೂ ಕೆಲಸ ಸಾಕಾಗಿದೆ.

ಸಾಕು, ಸಾಕು ಈ ಬಾಳು ಎನ್ನುತ್ತಿದ್ದರೆ ಅದನ್ನು ಯಾರಿಂದಲೂ ತಪ್ಪಿಸಿಕೊಳ್ಳುವುದು ಸಾಧ್ಯವಿದೆಯೆ? ಹೊಟ್ಟೆಗಾಗಿಯೋ, ಹಣಕ್ಕಾಗಿಯೋ, ಅಂತಸ್ತಿಗಾಗಿಯೋ, ಅಧಿಕಾರಕ್ಕಾಗಿಯೋ, ಅಧ್ಯಾತ್ಮ ಸಾಧನೆಗಾಗಿಯೋ ಬದುಕಿನ ಹೋರಾಟ ನಡೆದೇ ಇದೆ. ಈ ಬಾಳನ್ನು ಬಾಳದೆ ಇರುವುದು ಸಾಧ್ಯವಿಲ್ಲ. ಹೀಗೆ ಬದುಕಲೇಬೇಕಾದ ಬದುಕನ್ನು ಧನಾತ್ಮಕವಾಗಿ ಚಿಂತಿಸಿ, ಒಳ್ಳೆಯದಕ್ಕೇ ದುಡಿದು, ಒಳ್ಳೆಯದನ್ನೇ ಮಾಡಿ ಸುಂದರವಾಗಿಸಿಕೊಳ್ಳುವುದು ಮೇಲಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.