ADVERTISEMENT

ಬೆರಗಿನ ಬೆಳಕು: ಅನುಭವ -ಸತ್ಯದ ಅಳತೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 19:30 IST
Last Updated 3 ಮಾರ್ಚ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಎನಿತೆನಿತ್ತು ವಿಕಾರ ಪರಿಣಾಮಗಳ ನಮ್ಮ |

ಮನಕಾಗಿಪುವೊ ಲೋಕರೂಪಶಕ್ತಿಗಳು ||

ಅನಿತನಿತು ಸತ್ಯತೆಯವಕ್ಕುಂಟು ಜೀವಿತದಿ |

ADVERTISEMENT

ಅನುಭವವೆ ದಿಟದಳತೆ – ಮಂಕುತಿಮ್ಮ || 393 ||

ಪದ-ಅರ್ಥ: ಎನಿತೆನಿತ್ತು=ಎಷ್ಟೆಷ್ಟು,
ಮನಕಾಗಿಪುವೊ=ಮನಕೆ+ಆಗಿಪುವೊ, ಸತ್ಯತೆಯವಕ್ಕುಂಟು=ಸತ್ಯತೆ+ಅವಕ್ಕೆ+ಉಂಟು, ಅನಿತನಿತು=ಅಷ್ಟಷ್ಟು, ದಿಟದಳತೆ=ದಿಟದ
(ಸತ್ಯದ)+ಅಳತೆ

ವಾಚ್ಯಾರ್ಥ: ಲೋಕದ ರೂಪಗಳು, ಶಕ್ತಿಗಳು ಎಷ್ಟೆಷ್ಟು ವಿಕಾರಗಳನ್ನು ಪರಿಣಾಮಗಳನ್ನು ನಮ್ಮ ಮನಸ್ಸುಗಳಿಗೆ ಮುಟ್ಟಿಸುತ್ತವೊ, ಅಷ್ಟಷ್ಟೇ ಸತ್ಯತೆಯೂ ಅವುಗಳಲ್ಲಿದೆ. ನಮ್ಮ ಅನುಭವ ಸತ್ಯದ ಅಳತೆ.

ವಿವರಣೆ: ತಂದೆ ಅಸಾಧ್ಯ ಕುಡುಕ. ಮನೆಯಲ್ಲಿ ಬಡತನ. ಗಳಿಸಿ ಬಂದ ದುಡ್ಡೆಲ್ಲ ಗಡಂಗಿಗೇ. ಮನೆಗೆ ಬಂದು ಹೆಂಡತಿ ಮಕ್ಕಳಿಗೆ ಶಿಕ್ಷೆ. ಸದಾ ಕೂಗಾಟ, ಬಡಿದಾಟ. ಇದೇ ಮನೆಯ ವಾತಾವರಣ. ಅವನಿಗೆ ಇಬ್ಬರು ಮಕ್ಕಳು. ಒಬ್ಬ ದೊಡ್ಡವನಾಗಿ, ಓದಿ, ಸುಪ್ರೀಂಕೋರ್ಟಿನಲ್ಲಿ ನ್ಯಾಯಾಧೀಶನಾದ. ಮತ್ತೊಬ್ಬ ಸರಣಿ ಕೊಲೆಗಳನ್ನು ಮಾಡಿ, ಸಿಕ್ಕುಬಿದ್ದು, ಜೀವಾವಧಿ ಶಿಕ್ಷೆಯನ್ನು ಹೊಂದಿ ಜೈಲಿನಲ್ಲಿ ಕೊಳೆಯುತ್ತಿದ್ದ. ಒಬ್ಬ ಪರ್ತಕರ್ತನಿಗೆ ಇದು ಕುತೂಹಲದ ವಿಷಯವೆನ್ನಿಸಿ ಜೈಲಿನಲ್ಲಿದ್ದ ಕೊಲೆಗಾರನ ಸಂದರ್ಶನ ಮಾಡಿದ. ನೀನು ಯಾಕೆ ಹೀಗಾದೆ ಎಂದು ಕೇಳಿದ. ಆತ ಹೇಳಿದ, ‘ಇದಕ್ಕೆ ನನ್ನ ತಂದೆಯೇ ಕಾರಣ. ದಿನದಿನವೂ ಕುಡಿದು ಬಂದು ಹಿಂಸೆಯನ್ನು ಮಾಡುತ್ತಿದ್ದ. ಅವನನ್ನು ಗಮನಿಸಿ, ಗಮನಿಸಿ ನಾನು ಅವನಂತೆಯೇ ಆದೆ’. ಪರ್ತಕರ್ತ ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನು ಸಂದರ್ಶಿಸಿ ‘ನಿಮ್ಮ ಈ ಉನ್ನತ ಸಾಧನೆಗೆ ಏನು ಕಾರಣ?’ ಎಂದು ಕೇಳಿದ. ಉತ್ತರ ಆಶ್ಚರ್ಯವನ್ನು ತಂದಿತ್ತು. ‘ನನ್ನ ಸಾಧನೆಗೆ ನನ್ನ ತಂದೆಯೇ ಕಾರಣ. ಅವರು ನಿತ್ಯ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದುದು ಅವರಿಗೆ ದೊರೆತ ಸ್ನೇಹಿತರು ಮತ್ತು ಕುಡಿತವೇ ಕಾರಣವಾಗಿತ್ತು. ಅವೆರಡು ಇಲ್ಲದಿದ್ದರೆ ಅವರೂ ಚೆನ್ನಾಗಿಯೇ ಬದುಕುತ್ತಿದ್ದರು. ಆದ್ದರಿಂದ ನಾನು ಅವರ ಹಾಗೆ ಆಗಬಾರದೆಂದು ತೀರ್ಮಾನಿಸಿ ಒಳ್ಳೆಯ ಸ್ನೇಹಿತರು ಮತ್ತು ಒಳ್ಳೆಯ ವಿಚಾರಗಳನ್ನು ಆರಿಸಿಕೊಂಡೆ’ ಎಂದರು.

ಇಬ್ಬರೂ ಬಂದಿದ್ದು ಒಂದೇ ವಾತಾವರಣದಿಂದ. ಆದರೆ ಪರಿಣಾಮ ಮಾತ್ರ ಪೂರ್ತಿ ಬೇರೆಯಾದದ್ದು. ಪ್ರಪಂಚದಲ್ಲಿರುವ ರೂಪಗಳು ಮತ್ತು ಶಕ್ತಿಗಳು ಸದಾಕಾಲ ನಮ್ಮ ಮನಸ್ಸಿನ ಮೇಲೆ ಪರಿಣಾಮಗಳನ್ನು ಮಾಡುತ್ತಲೇ ಇರುತ್ತವೆ. ಆ ಅನುಭವಗಳೇ ನಮಗೆ ಸತ್ಯದ ದರ್ಶನವನ್ನು ಮಾಡಿಸುತ್ತವೆ. ಬದುಕು ಮತ್ತು ಅನುಭವಗಳ ನಡುವೆ ಅನೂಹ್ಯವಾದ ಸ್ನೇಹವಿದೆ. ಇವುಗಳ ನಡುವಿನ ವಾಹಕ ಮನಸ್ಸು. ಮನಸ್ಸು ಲೋಕ ಜೀವನದ ಶಕ್ತಿಗಳನ್ನು ಹೇಗೆ ಸ್ವೀಕರಿಸುತ್ತದೆಯೋ ಅದೇ ನಮ್ಮ ಅನುಭವವಾಗುತ್ತದೆ. ನಮ್ಮ ಅನುಭವವೇ ನಮಗೆ ಸತ್ಯ. ಇಲ್ಲದಿದ್ದರೆ ಒಂದೇ ಘಟನೆ, ಬೇರೆ ಬೇರೆ ಪರಿಣಾಮಗಳನ್ನು ನೀಡುವುದು ಹೇಗೆ? ವ್ಯಕ್ತಿಗಳ ಮೇಲೆ ಪ್ರಪಂಚದ ಗುಣಭೇದಗಳು ಮಾಡುವ ಪರಿಣಾಮದಿಂದ ಜನತೆಯ ನಾನಾತ್ಮ-ವಂಶಗಳು, ಕುಲಗಳು, ಜಾತಿಗಳು, ಚಿಂತನೆಗಳು.

ಕಗ್ಗ ಈ ಮಾತನ್ನು ಒತ್ತುಕೊಟ್ಟು ಹೇಳುತ್ತದೆ. ನಮ್ಮ ಮನಸ್ಸಿಗಾದ ಪ್ರತಿಯೊಂದು ಅನುಭವವೂ ಸತ್ಯದರ್ಶನವೇ. ಪ್ರತಿಯೊಬ್ಬರಿಗೂ ಅವರವರ ಪ್ರಕೃತಿಯಂತೆ ಅನುಭವ ಬೇರೆ ಬೇರೆಯಾಗಿರುವುದರಿಂದ ಅವರ ಸತ್ಯದ ಅಳತೆಯೂ ಬೇರೆಯೇ. ಅನುಭವವೇ ಸತ್ಯದ ಅಳತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.