ADVERTISEMENT

ಬೆರಗಿನ ಬೆಳಕು | ತಾಳ್ಮೆಯೇ ಪಕ್ವತೆ

ಡಾ. ಗುರುರಾಜ ಕರಜಗಿ
Published 19 ಡಿಸೆಂಬರ್ 2022, 21:45 IST
Last Updated 19 ಡಿಸೆಂಬರ್ 2022, 21:45 IST
   

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? |
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ||
ವೇಳೆಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? |
ತಾಳುಮೆಯೆ ಪರಿಪಾಕ-ಮಂಕುತಿಮ್ಮ || 781 ||

ಪದ-ಅರ್ಥ: ಕಾಳನುದಯದಿ=ಕಾಳನು+ಉದಯದಿ, ಬಿತ್ತೆ=ಬಿತ್ತಿದರೆ, ಪಾಲುಂಟು=ಪಾಲು+ಉಂಟು, ಕಾಲಂಗೆ=ಕಾಲನಿಗೆ, ವೇಳೆಗಡು=ವೇಳೆಯ ಮಿತಿ, ಮರೆತಾತುರದಿನ್=ಮರೆತು+
ಆತುರದಿನ್(ಆತುರತೆಯಿಂದ), ಪಕ್ಕಹುದೆ=ಪಕ್ಕು(ಪಕ್ವ)+ಅಹುದೆ, ತಾಳುಮೆಯೆ=ತಾಳ್ಮೆಯೇ
ವಾಚ್ಯಾರ್ಥ: ಬೆಳಿಗ್ಗೆ ಕಾಳನ್ನು ಬಿತ್ತಿ ಸಂಜೆಗೆ ಪೈರನ್ನು ಪಡೆಯಬಹುದೆ? ಕೃಷಿಯಲ್ಲಿ ಕಾಲನಿಗೆ ಪಾಲಿದೆ. ಸಮಯದ ಮಿತಿಯನ್ನು ಮರೆತು ಆತುರಪಟ್ಟರೆ ಅಡುಗೆ ಪಕ್ವವಾದೀತೇ?ತಾಳ್ಮೆಯೇಪಕ್ವತೆಯ ಗುರುತು.


ವಿವರಣೆ: ತಾಳ್ಮೆ ಎನ್ನುವುದು ಮನಸ್ಸಿನ ಸ್ಥಿತಿ. ಜೀವನದಲ್ಲಿ ಎಲ್ಲವೂ ನಾವು ಎಣಿಸಿದಂತೆಯೇ ನಡೆಯುವುದಿಲ್ಲ. ನಾವು ಎಂದೆಂದೂ ಕಲ್ಪಿಸಿಕೊಳ್ಳದ ಘಟನೆಗಳು ನಡೆದುಬಿಡುತ್ತವೆ. ಯಾವ ಘಟನೆಗಳು ಖಂಡಿತವಾಗಿಯೂ ನಡೆದೇ ತೀರುತ್ತವೆಂದು ತಿಳಿದಿದ್ದ ಘಟನೆಗಳು ನಡೆಯುವುದೇ ಇಲ್ಲ. ಹಾಗೆ ಅನಿರೀಕ್ಷಿತವಾಗಿ ನಡೆದ ಘಟನೆಗಳನ್ನು ನಾವು ಹೇಗೆ ಕಾಣುತ್ತೇವೆ ಎನ್ನುವುದು ಮುಖ್ಯ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮಾನವಾಗಿ ಅವುಗಳನ್ನು ಸ್ವೀಕರಿಸಬೇಕಾದರೆ ಸ್ಥಿತಪ್ರಜ್ಞತೆ ಬೇಕು. ಈ ಸ್ಥಿತಪ್ರಜ್ಞತೆಯ ಮೂಲವೇ ತಾಳ್ಮೆ. ನಾವು ಜಾನಪದ ಕಥೆಯಲ್ಲಿ ಕೇಳಿದ್ದೇವೆ. ತಾಯಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ನೀರು ತರಲುಹೋಗುತ್ತಾಳೆ. ಮಗುವಿನ ಜವಾಬ್ದಾರಿಯನ್ನು ತನ್ನ ಪ್ರೀತಿಯ ಮುಂಗುಸಿಗೆ ಒಪ್ಪಿಸಿದ್ದಾಳೆ. ಆಗ ನಾಗರಹಾವೊಂದು ತೊಟ್ಟಿಲಿನ ಬಳಿಗೆ ಬಂದಾಗ ಮುಂಗುಸಿ ಸೆಣಸಾಡಿ ಹಾವನ್ನು ಕೊಂದು, ಹೆಮ್ಮೆಯಿಂದ ತೋರಲು ಬಾಗಿಲಿಗೆ ಬರುತ್ತದೆ. ಅದರ ಬಾಯಿಯ ರಕ್ತವನ್ನು ಕಂಡು, ಮಂಗುಸಿಯೇ ತನ್ನ ಮಗುವನ್ನು ಕಚ್ಚಿರಬೇಕೆಂದು ಆತುರದಿಂದ ತಾನು ತಂದ ತುಂಬಿದ ನೀರಿನ ಕೊಡವನ್ನು ಅದರ ಮೇಲೆ ಹಾಕಿ ಕೊಂದುಬಿಡುತ್ತಾಳೆ. ನಂತರ ಸತ್ಯ ತಿಳಿದು ಗೋಳಾಡುತ್ತಾಳೆ.

ADVERTISEMENT

ಯಾವಾಗ ತಾಳ್ಮೆ ಕಳೆದುಕೊಳ್ಳುತ್ತೇವೆಯೋ ಗೋಳಾಟವೇ ಗತಿ. ಈ ತಾಳ್ಮೆಯ ಅವಶ್ಯಕತೆಯನ್ನು ಕಗ್ಗ ತಿಳಿಸುತ್ತದೆ. ಅದಕ್ಕೆ ಕೆಲವು ಉದಾಹರಣೆಗಳನ್ನು ನೀಡುತ್ತದೆ. ನೆಲದಲ್ಲಿ ಕಾಳು ಊರಿದ ದಿನವೇ ಸಂಜೆಗೆ ಪೈರು ಬಂದು ಬಿಡುತ್ತದೆಯೇ? ಕಾಳು ಸಸಿಯಾಗಿ, ಬೆಳೆದು ಹೂವು-ತಳೆದು, ಹಣ್ಣಾಗುವುದಕ್ಕೆ ನಿರ್ದಿಷ್ಟ ಸಮಯ ಬೇಕು. ಹೀಗೆ ಕೃಷಿಯಲ್ಲಿ ಸಮಯಕ್ಕೆ ಒಂದು ದೊಡ್ಡ ಪಾಲಿದೆ. ಅದೇ ರೀತಿ ಅಡುಗೆ ಮಾಡುವಾಗ ಅವಸರ ತರವಲ್ಲ. ಆಹಾರ ಬೇಯಬೇಕಾದರೆ ಒಂದಷ್ಟು ಸಮಯ ಬೇಕು. ಅವಸರ ಮಾಡಿದರೆ, ಅಡುಗೆ ಬೇಯದೆ, ಅರೆಬೆಂದು ತಿನ್ನಲು ಅನರ್ಹವಾಗುತ್ತದೆ. ಹಾಗಾದರೆ, ಇದಕ್ಕೆಲ್ಲ ಒಂದೇ ಪರಿಹಾರ. ಅದು ತಾಳ್ಮೆಯನ್ನು ಹೊಂದುವುದು. ಅದೇ ಬದುಕಿನ ಪರಿಪಾಕ. ಅದಕ್ಕೇ ತಾಳಿದವನು ಬಾಳಿಯಾನು ಎಂಬ ಮಾತು ಬಂದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.