ADVERTISEMENT

ಅರಗಳಿಗೆಯ ಅನುಭವ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 19:45 IST
Last Updated 9 ಡಿಸೆಂಬರ್ 2019, 19:45 IST
   

ಅರೆಗಳಿಗೆಯನುಭವವೆ ಮಾನಸವ ಕರಗಿಸದೆ ? |
ಪರಿಪಕ್ವಗೊಳಿಸದೇನದು ಜೀವರಸವ ? ||
ಉರಿ ತಣಿಪುಗಳಿನಾತ್ಮಸಂಸ್ಕಾರಗಳನೆಸಪ |
ಪುರಳ ಪುಸಿಯೆನ್ನುವೆಯ – ಮಂಕುತಿಮ್ಮ || 221 ||

ಪದ-ಅರ್ಥ: ಅರೆಗಳಿಗೆಯನುಭವವೆ=ಅರೆಗಳಿಗೆಯ+ಅನುಭವವೆ, ಮಾನಸವ=ಮನಸ್ಸನ್ನು, ತಣಿಪುಗಳಿನಾತ್ಮಸಂಸ್ಕಾರಗಳನೆಸಪ=ತಣಿಪುಗಳಿಂದ(ತಂಪುಗಳಿಂದ)+ಆತ್ಮಸಂಸ್ಕಾರಗಳನು+ಎಸಪ
(ಎಸಗುವ), ಪುರಳ=ತಿರುಳು, ತಿಳುವಳಿಕೆ, ಜ್ಞಾನ, ಪುಸಿ=ಸುಳ್ಳು.

ವಾಚ್ಯಾರ್ಥ: ಅರ್ಧಗಳಿಗೆಯ ಅನುಭವ ಮನಸ್ಸನ್ನು ಕರಗಿಸಿ ಜೀವರಸವನ್ನು ಪರಿಪಕ್ವಗೊಳಿಸದೇ? ಕಷ್ಟ, ಸುಖಗಳಿಂದ ಆತ್ಮ ಸಂಸ್ಕಾರವನ್ನು ನೀಡುವ ತಿರುಳನ್ನು ನೀನು ಸುಳ್ಳು ಎಂದು ಬಗೆಯುತ್ತೀಯಾ?

ADVERTISEMENT

ವಿವರಣೆ: ಸೂಕ್ಷ್ಮವಾಗಿ ಗಮನಿಸಿದರೆ ಪ್ರಪಂಚದ ಮಹಾನ್ ವ್ಯಕ್ತಿಗಳ ಬದುಕಿನಲ್ಲಿ ಕಂಡು ಬಂದ ಬದಲಾವಣೆ, ತಿರುವು ಕ್ಷಣಾರ್ಧದಲ್ಲಿ ಆದವುಗಳು. ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಬೇಡ ಹೊಡೆದುರುಳಿಸಿದಾಗ ವಾಲ್ಮೀಕಿ ಮಹರ್ಷಿಯ ಮನದಲ್ಲಿ ಕುದಿದು ಉದಿಸಿದ ಕರುಣೆ ರಾಮಾಯಣವನ್ನು ಸೃಷ್ಟಿಸಿತು. ಸದಾ ಸಂತೋಷವನ್ನೇ, ಸಮೃದ್ಧಿಯನ್ನೇ ಕಾಣುತ್ತ ಬೆಳೆದಿದ್ದ ಸಿದ್ದಾರ್ಥ ಸಾಮಾನ್ಯರ ಬದುಕಿನ ಅನಿವಾರ್ಯಗಳಾದ ರೋಗ, ವೃದ್ಧಾಪ್ಯ, ಸಾವುಗಳನ್ನು ಕಂಡು ತಕ್ಷಣವೇ ಚಿಂತಿಸಿ ಬುದ್ಧನಾದದ್ದು ಪ್ರಪಂಚದ ವಿಸ್ಮಯಗಳಲ್ಲೊಂದು. ಪುಟ್ಟ ಶಂಕರ ತಂದೆ ಶಿವಗುರುವಿನ ಸಾವನ್ನು ಕಂಡು ತಲ್ಲಣಿಸಿ ಮನುಷ್ಯ ಜೀವನದ ಗುರಿಯನ್ನು ಕಂಡುಹಿಡಿಯಲು ಹೊರಟು ಆಚಾರ್ಯ ಶಂಕರಾಚಾರ್ಯರಾದದ್ದು ಒಂದು ಅನುಭವದ ಪರಿಪಾಕ. ರೇಲ್ವೆ ಸ್ಟೇಶನ್ ಮಾಸ್ಟರ್ ಆಗಿದ್ದ ಶರತ್‍ಚಂದ್ರ ಗುಪ್ತಾ ಎಂಬ ತರುಣ ಹತ್ರಾಸ್ ಸ್ಟೇಶನ್ನಿನಲ್ಲಿ ರೈಲಿನಿಂದ ಕೆಳಗಿಳಿದ ತರುಣ ಸನ್ಯಾಸಿಯ ಕಣ್ಣುಗಳನ್ನು ನೋಡಿ ಕ್ಷಣಾರ್ಧದಲ್ಲಿ ಅವುಗಳಿಗೆ ಸೆರೆಯಾಗಿ ಮುಂದೆ ವಿಶ್ವವಿಖ್ಯಾತರಾದ ಸ್ವಾಮಿ ವಿವೇಕಾನಂದರ ಪ್ರಥಮ ಶಿಷ್ಯ ಸ್ವಾಮಿ ಸದಾನಂದರಾದದ್ದು ಪವಾಡಸದೃಶ ಬದಲಾವಣೆ.

ಹೀಗೆ ಒಂದೊಂದು ಫಟನೆಗಳು ಹಲವರ ಬದುಕಿನಲ್ಲಿ ಜರುಗಿ ಕ್ಷಣಾರ್ಧದಲ್ಲಿ ಅವರ ಮನಸ್ಸನ್ನು ಕರಗಿಸುವುದು ಮಾತ್ರವಲ್ಲ, ಅವರ ಜೀವರಸವನ್ನೇ ಪರಿಪಕ್ವಗೊಳಿಸಿದ್ದನ್ನು ಕಂಡಿದ್ದೇವೆ, ಓದಿದ್ದೇವೆ. ನ್ಯೂಟನ್ನಿನ ತಲೆಯ ಮೇಲೆ ಬಿದ್ದ ಸೇಬುಹಣ್ಣು ಮಹಾನ್ ಸಿದ್ಧಾಂತಕ್ಕೆ ಕಾರಣವಾಯಿತು. ಬದುಕಿನಲ್ಲಿ ಬರುವ ದುಃಖದ, ಸುಖದ ಅನುಭವಗಳು ಬೆಂಕಿ ಹಾಗು ತಂಪು ಇದ್ದಂತೆ. ಅವು ನಮ್ಮನ್ನು ಕುದಿಸಿ, ಕರಗಿಸಿ, ಆರಿಸಿ ಆತ್ಮಸಂಸ್ಕಾರಗಳನ್ನು ನೀಡುತ್ತವೆ. ಈ ಆತ್ಮಸಂಸ್ಕಾರವನ್ನು ಪಡೆದ ಜೀವ ಉನ್ನತಿಯನ್ನು ಪಡೆಯುತ್ತದೆ. ಅನುಭವಗಳು ಪರಿವರ್ತನೆಯ ಸಾಧನಗಳು ಎನ್ನುವುದನ್ನು ನಿರಾಕರಿಸುವುದಕ್ಕೆ ಆಗುತ್ತದೆಯೆ?

ಹೀಗೆ ಒಂದು ಅಮೃತಕ್ಷಣ ನಮ್ಮ ಬಾಳಿನಲ್ಲಿ ಇಳಿದು ಬಂದರೆ ಅದು ಸುಂದರವಾದೀತು. ಆ ಅಮೃತಕ್ಷಣ ದಕ್ಕುವುದು ಪ್ರಯತ್ನಶೀಲರಿಗೆ, ಮನಸ್ಸನ್ನು ಸಿದ್ಧವಾಗಿಟ್ಟುಕೊಂಡವರಿಗೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.