ADVERTISEMENT

ಬೆರಗಿನ ಬೆಳಕು: ಆರೋಗ್ಯ ಭಾಗ್ಯ

ಡಾ. ಗುರುರಾಜ ಕರಜಗಿ
Published 7 ಫೆಬ್ರುವರಿ 2023, 1:03 IST
Last Updated 7 ಫೆಬ್ರುವರಿ 2023, 1:03 IST
   

ಆರೋಗ್ಯಭಾಗ್ಯವನು ಮನಕೆ ತನುಗೆಂತಂತೆ |
ಹಾರಯಿಸುವೊಡೆ ಹಲವು ಸರಳ ನೀತಿಗಳ ||
ಧಾರಯಿಸು ನೆನಪಿನಲಿ ನುಡಿಯಲ್ಲಿ ನಡತೆಯಲಿ |
ಪಾರಾಗು ಸುಳಿಯಿಂದ – ಮಂಕುತಿಮ್ಮ || 816 ||

ಪದ-ಅರ್ಥ: ತನುಗೆಂತಂತೆ=ತನುಗೆ(ದೇಹಕ್ಕೆ)+ಎಂತೋ+ಅಂತೆ, ಹಾರಯಿಸುವೊಡೆ=ಬಯಸುವುದಾದರೆ, ಧಾರಯಿಸು=ನಡೆಸು, ಧರಿಸು.
ವಾಚ್ಯಾರ್ಥ: ದೇಹಕ್ಕೆ ಆರೋಗ್ಯ ಭಾಗ್ಯವನ್ನು ಪಡೆಯುವುದಾದರೆ ಹಲವು ಸರಳ ನೀತಿಗಳನ್ನು ಪಾಲಿಸುವಂತೆ ಮನಸ್ಸಿನ ಆರೋಗ್ಯದ ಭಾಗ್ಯಕ್ಕೂ ನುಡಿಯಲ್ಲಿ, ನಡತೆಯಲ್ಲಿ ಸರಳ ನೀತಿಗಳನ್ನು ಪಾಲಿಸಿ ಬದುಕಿನ ಸುಳಿಯಿಂದ ಪಾರಾಗು.
ವಿವರಣೆ: ಆರೋಗ್ಯವೆಂದರೆ, ಕಾಯಿಲೆ ರಹಿತವಾಗಿರುವುದು ಎಂಬ ನಂಬಿಕೆ ಬಹಳಷ್ಟು ಜನರಲ್ಲಿ ಇದೆ. ಆದರೆ ನಮ್ಮ ಸರ್ವತೋಮುಖ ಆರೋಗ್ಯದಲ್ಲಿ ಮಾನಸಿಕ ಆರೋಗ್ಯವೂ ಬಹಳ ಮುಖ್ಯವಾದದ್ದು. ದೇಹಕ್ಕೆ ನೀಡಿದ ವ್ಯಾಯಾಮ, ದೈಹಿಕ ಚಟುವಟಿಕೆಗಳಿಂದ ಮಾನಸಿಕ ಆರೋಗ್ಯಕ್ಕೂ ಪ್ರಯೋಜನವಾಗುತ್ತದೆಂಬುದು ಸತ್ಯ. ಆದರೆ ಕೇವಲ ಅದೇ ಮಾತ್ರ ಸಾಲದು. ಮನಸ್ಸಿನ ಆರೋಗ್ಯಕ್ಕೂ ಕೆಲವು ಸರಳ ನೀತಿಗಳನ್ನು ಅನುಸರಿಸಬೇಕಾಗುತ್ತದೆ. ಮನಸ್ಸು ಒಂದು ರೀತಿಯಲ್ಲಿ ಜಗಳಗಂಟ ಬಂಡಾಯಕೋರ. ಯಾವುದನ್ನು ಬೇಡವೆಂದು ತೀರ್ಮಾನಿಸುತ್ತೀರೋ, ಅದನ್ನೇ ಬೇಡುತ್ತದೆ. ಅದನ್ನೇ ಬೆಂಬತ್ತಿ ಹೋಗುತ್ತದೆ. ಸುರೆ ಕುಡಿಯುವುದು, ತಂಬಾಕು ಸೇವಿಸುವುದು ದೇಹದ ಆರೋಗ್ಯಕ್ಕೆ ಹಾನಿಕರ ಎಂದು ಯಾರಿಗೆ ಗೊತ್ತಿಲ್ಲ? ಆದರೆ ಬಹುಜನರು ಅದಕ್ಕೆ ದಾಸರಾಗಿರುವುದು ಮನಸ್ಸಿನ ಸೆಳೆತದಿಂದಾಗಿ. ಅದಕ್ಕೇ ಬದುಕಿನ ಸಫಲತೆಗೂ, ವಿಫಲತೆಗೂ ಮನಸ್ಸೇ ಕಾರಣ. ಮನಸ್ಸಿನ ಆರೋಗ್ಯಕ್ಕೆ ಅನೇಕ ನೀತಿ, ವಿಧಾನಗಳಿವೆ.ಅವುಗಳಲ್ಲಿ ಕೆಲವು, ಪ್ರಾಣಾಯಾಮ, ಧ್ಯಾನ, ಜಪ ಇತ್ಯಾದಿಗಳು. ಈ ಕ್ರಿಯಾಶೀಲವಾದ ಪ್ರಪಂಚದಲ್ಲಿ ನಿಷ್ಕ್ರಿಯವಾದ ಸ್ಥಿತಿ ಎನ್ನುವುದು ಇಲ್ಲವೇ ಇಲ್ಲ. ಆದರೂ ಮನಸ್ಸು ಶಾಂತ, ನೀರವ ಸ್ಥಿತಿಗಾಗಿ ತವಕಿಸುತ್ತದೆ. ಸ್ವಲ್ಪ ಹೊತ್ತಾದರೂ ಆ ನಿಸ್ಪಂದ ಸ್ಥಿತಿಯಲ್ಲಿ ಇರಬಯಸುತ್ತದೆ. ಜಾಗ್ರತಾವಸ್ಥೆಯಲ್ಲೇ, ಪ್ರಯತ್ನಪೂರ್ವಕವಾಗಿ ಆಲೋಚನಾ ವೃತ್ತಿಗಳನ್ನೆಲ್ಲ ಹಂತ ಹಂತವಾಗಿ ಕಡಿಮೆ ಮಾಡುತ್ತ, ಕೊನೆಯಲ್ಲಿ ಒಂದೇ ವೃತ್ತಿಯು ಮನಸ್ಸಿನಲ್ಲಿ ಉಳಿಯುವಂತೆ ಮಾಡುವುದೇ ಧ್ಯಾನ. ವೃತ್ತಿ ಎಂದರೆ ಅಲೆ. ಅಲೆ ಯಾವಾಗಲೂ ಸ್ಥಿರವಾಗಿರುವುದಿಲ್ಲ.

ಎದ್ದು, ಎದ್ದು ಬೀಳುತ್ತದೆ. ಧ್ಯಾನದಲ್ಲೂ ವೃತ್ತಿಗಳು ಏಳುತ್ತಲೇ ಇರುತ್ತವೆ. ಆದರೆ ಎಲ್ಲ ವೃತ್ತಿಗಳ ವಿಷಯವೂ ಒಂದೇ ಆಗಿರುತ್ತದೆ. ಶ್ರೀರಾಮಕೃಷ್ಣರು ಧ್ಯಾನಾವಸ್ಥೆಯ ಬಗ್ಗೆ ಒಂದು ಸುಂದರವಾದ ಉದಾಹರಣೆಯನ್ನು ನೀಡುತ್ತಾರೆ. ಸೂಜಿಗೆ ದಾರವನ್ನು ಪೋಣಿಸುವಾಗ, ದಾರದ ತುದಿಗೆ ನೀರು ಹಚ್ಚಿಯೋ, ಬೆರಳುಗಳಿಂದ ತಿರುಪಿಯೋ, ಚೂಪಾಗಿ ಮಾಡಿ ಆನಂತರ ಸೂಜಿಯ ದಾರವನ್ನು ರಂಧ್ರದಲ್ಲಿ ಪೋಣಿಸುತ್ತೇವೆ. ದಾರದ ಎಳೆಗಳು ಹರಡಿಕೊಂಡಿದ್ದರೆ ದಾರವನ್ನು ರಂಧ್ರದಲ್ಲಿ ಪೋಣಿಸುವುದು ಸಾಧ್ಯವಿಲ್ಲ. ಹಾಗೆಯೇ ಮನಸ್ಸಿನ ಎಲ್ಲ ಶಕ್ತಿಗಳು ಬೇರೆ ಬೇರೆ ಆಲೋಚನೆಗಳಲ್ಲಿ ಹರಡಿಹೋಗಿದ್ದರೆ ಏಕಾಗ್ರತೆ ಸಾಧ್ಯವಿಲ್ಲ. ಕಗ್ಗ ಹೇಳುತ್ತದೆ, ದೇಹಾರೋಗ್ಯಕ್ಕೆ ವ್ಯಾಯಾಮಗಳನ್ನು ಮಾಡುವಂತೆ ಮನಸ್ಸಿನ ಆರೋಗ್ಯಕ್ಕೂ ನಿನ್ನ ಮಾತಿನಲ್ಲಿ, ನಡೆಯಲ್ಲಿ ಕೆಲವು ನೀತಿಗಳನ್ನು ಅನುಸರಿಸಬೇಕಾಗುತ್ತದೆ. ಹೀಗೆ ದೇಹ, ಮನಸ್ಸುಗಳನ್ನು ಹದವಾಗಿ ಇಟ್ಟುಕೊಂಡಾಗ ಬದುಕು ಸೃಷಿ ್ಟಸುವ ಸುಳಿಗಳಿಂದ ಪಾರಾಗಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.