ADVERTISEMENT

ಬೆರಗಿನ ಬೆಳಕು | ದ್ವಂದ್ವಾತೀತತೆ

ಡಾ. ಗುರುರಾಜ ಕರಜಗಿ
Published 16 ಆಗಸ್ಟ್ 2021, 20:15 IST
Last Updated 16 ಆಗಸ್ಟ್ 2021, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸೌಂದರ್ಯದೊಳ್ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ |
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ||
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ |
ಬಂಧಮೋಚನ ನಿನಗೆ – ಮಂಕುತಿಮ್ಮ || 450 ||

ಪದ-ಅರ್ಥ: ನೀನಾವುಭಯಗಳ=ನೀನು+
ಆ+ಉಭಯಗಳ, ಬಂಧಮೋಚನ=ಬಂಧದಿಂದ ಮುಕ್ತಿ.

ವಾಚ್ಯಾರ್ಥ: ಸೌಂದರ್ಯದಲ್ಲಿ, ಬಾಂಧವ್ಯದಲ್ಲಿ ದ್ವಂದ್ವವಿದೆ. ಲೋಕದ ಎಲ್ಲ ಸಹವಾಸಗಳಲ್ಲಿ ದ್ವಂದ್ವವಿದೆ. ಮುಂದೆ ನೀನು ಈ ಉಭಯ ದ್ವಂದ್ವಗಳನ್ನು ದಾಟಿ ಸಾಗಿದರೆ, ಬಂಧದಿಂದ ಮುಕ್ತಿ.

ADVERTISEMENT

ವಿವರಣೆ: ಬದುಕಿನಲ್ಲಿ ಎಲ್ಲೆಡೆಯೂ ದ್ವಂದ್ವವಿದೆ. ಕೆಲವರು ದ್ವಂದ್ವವನ್ನು ಸಮಸ್ಯೆಯೆಂದು ಭಾವಿಸುತ್ತಾರೆ. ದ್ವಂದ್ವಗಳು, ತೀರ್ಮಾನವನ್ನು ಮಾಡುವಲ್ಲಿ ಅಡ್ಡಿ ಬರುತ್ತವೆ ಎನ್ನುತ್ತಾರೆ. ನಿಜವಾಗಿ ನೋಡಿದರೆ ದ್ವಂದ್ವಗಳಿಲ್ಲದೆ ಬಾಳು ಸೊಗಸಾಗದು. ವೈವಿಧ್ಯಗಳೇ, ತೋರಿಕೆಯ ದ್ವಂದ್ವಗಳೇ ಸೌಂದರ್ಯದ ಮೂಲಗಳು. ಬೆಟ್ಟದ ಸೌಂದರ್ಯ ಬೇರೆ, ಕಣಿವೆಯ ಸೌಂದರ್ಯ ಬೇರೆ. ಎರಡೂ ಸೇರಿದಾಗ ಪ್ರಕೃತಿಯ ಸೌಂದರ್ಯ. ಆಯಾಸ ಮತ್ತು ವಿಶ್ರಾಂತಿ ಪರಸ್ಪರ ವಿರೋಧಿಗಳು ಎನ್ನಿಸುವುದಿಲ್ಲವೆ? ಆದರೆ ಆಯಾಸವಿಲ್ಲದೆ ವಿಶ್ರಾಂತಿ, ನಿದ್ರೆ ಸಾಧ್ಯವಿಲ್ಲ. ಆಯಾಸವೇ ನಿದ್ರೆಯ ಆತ್ಯಂತಿಕ ಸ್ನೇಹಿತ.

ಎಲ್ಲೋ ಓದಿದ ನೆನಪು. ತರುಣ ಛಾಯಾಗ್ರಾಹಕನೊಬ್ಬ ಗೀಜಗ ಗೂಡು ಕಟ್ಟುವುದನ್ನು ಚಿತ್ರವಾಗಿಸುತ್ತಿದ್ದ. ಇಡೀ ದಿನ ಅದರಿಂದ ಸ್ವಲ್ಪ ದೂರದಲ್ಲಿ ಕುಳಿತು ವಿಡಿಯೊ ತೆಗೆಯುತ್ತಿದ್ದ. ಪಕ್ಷಿಗಳು ತಾವು ಕಟ್ಟಿದ್ದ ಗೂಡಿನೊಳಗೆ ಮೂರು ಮೊಟ್ಟೆಗಳನ್ನಿಟ್ಟವು. ಆ ಮೊಟ್ಟೆಗಳು ಒಡೆದು ಮರಿಯಾಗುವುದನ್ನು ಚಿತ್ರಿಸಬೇಕೆಂದು ಆತ ತಾಳ್ಮೆಯಿಂದ ಕಾಯುತ್ತ ಕುಳಿತಿದ್ದ. ಆಗ ಹಕ್ಕಿಗಳು ವಿಚಿತ್ರವಾಗಿ ಕೂಗುತ್ತ ಹಾರಾಡತೊಡಗಿದವು. ಅವು ಗಾಬರಿಯಾದಾಗ ಮಾತ್ರ ಮಾಡುತ್ತವೆಂಬುದನ್ನು ತಿಳಿದ ಯುವಕ ಕತ್ತಿಯೊಂದನ್ನು ಹಿಡಿದು ನಿಧಾನಕ್ಕೆ ಮರದ ಬಳಿ ಹೋದ. ಹಕ್ಕಿಗಳು ಇವನನ್ನು ಕಂಡು, ‘ದಯವಿಟ್ಟು ಮೊಟ್ಟೆಗಳನ್ನು ಕಾಪಾಡು’ ಎನ್ನುವಂತೆ ಕಿರಿಚುತ್ತ ಅವನನ್ನೇ ನೋಡುತ್ತಿದ್ದವು. ಮರದ ಹಿಂದೆ ನೋಡಿದಾಗ ಒಂದು ಹೆಬ್ಬಾವು ಮರ ಏರುತಿತ್ತು. ಅದಕ್ಕೆ ಮೊಟ್ಟೆಗಳನ್ನು ತಿನ್ನುವ ಆಸೆ. ಹಕ್ಕಿಗಳೊಡನೆ ಬಾಂಧವ್ಯ ಬೆಳೆಸಿಕೊಂಡ ತರುಣನಿಗೆ ಹೇಗಾದರೂ ಮಾಡಿ ಮೊಟ್ಟೆಗಳನ್ನು ಉಳಿಸುವ ಹವಣಿಕೆ. ಒಂದು ಕೋಲು ತೆಗೆದುಕೊಂಡು ಹೆಬ್ಬಾವನ್ನು ಮರದಿಂದ ಕೆಳಗೆ ತಳ್ಳಲು ನೋಡಿದ. ತಕ್ಷಣ ಅವನ ಮನಸ್ಸು ಕೇಳಿತು. ‘ಏನು ಮಾಡುತ್ತಿದ್ದೀಯಾ? ಪಕ್ಷಿಗಳಿಗೆ ಉಪಕಾರ ಮಾಡಲು ಹೋಗಿ ಪಾಪ! ಹೆಬ್ಬಾವಿನ ಆಹಾರವನ್ನು ಕಸಿದುಕೊಳ್ಳುತ್ತಿದ್ದೀಯಾ? ಅದು ಪ್ರಕೃತಿಧರ್ಮ’. ಒಬ್ಬರಿಗೆ ಉಪಕಾರ ಮಾಡ ಹೊರಟರೆ ಇನ್ನೊಬ್ಬರಿಗೆ ಅಪಕಾರ! ಮೊಟ್ಟೆಗಳನ್ನು ರಕ್ಷಿಸುವುದು ಸರಿಯೇ? ಹಾವಿನ ನೈಸರ್ಗಿಕ ಆಹಾರವನ್ನು ಕಸಿದುಕೊಳ್ಳುವುದು ಸರಿಯೇ?

ಹೀಗೆ ಪ್ರಕೃತಿಯಲ್ಲಿ ಕ್ಷಣಕ್ಷಣಕ್ಕೂ ದ್ವಂದ್ವಗಳು ಸೇರಿಕೊಂಡಿವೆ. ವಿರೋಧಗಳೇ ದ್ವಂದ್ವವಾಗಬೇಕೆಂದಿಲ್ಲ. ತಾಯಿಯ ಮೇಲಿನ ಭಕ್ತಿ ಧರ್ಮಗುಣ; ಹೆಂಡತಿಯ ಮೇಲಿನ ಪ್ರೀತಿಯೂ ಧರ್ಮಗುಣವೇ. ಆದರೆ ಹೆಂಡತಿ ಮತ್ತು ತಾಯಿ ಕಾದಾಟಕ್ಕೆ ನಿಂತಾಗ ಮಾತೃಭಕ್ತಿ ಮತ್ತು ಹೆಂಡತಿಯ ಪ್ರೀತಿಯ ಗುಣಗಳು ಬೇರೆಯಾಗಿ ದ್ವಂದ್ವವಾಗುತ್ತವೆ. ನಾವು ಈ ದ್ವಂದ್ವಗಳ ಹಿಂದಿರುವ ಸಮರಸತೆಯನ್ನು ಗಮನಿಸುತ್ತ ಮುಂದುವರೆದರೆ ಮನಸಿಗೆ ನೆಮ್ಮದಿ, ಮುಕ್ತಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.