ADVERTISEMENT

ಬೆರಗಿನ ಬೆಳಕು | ವಿವೇಕದ ಪ್ರಯೋಗಗಳು

ಡಾ. ಗುರುರಾಜ ಕರಜಗಿ
Published 19 ಏಪ್ರಿಲ್ 2023, 23:15 IST
Last Updated 19 ಏಪ್ರಿಲ್ 2023, 23:15 IST
   

ಆತುಮದ ಸಂಸ್ಥಿತಿಗೆ ದೈಹಿಕ ಸಮಾಧಾನ |
ಭೌತವಿಜ್ಞಾನದಾ ರಾಷ್ಟçಸಂಸ್ಥೆಗಳಾ ||
ನೂತನ ವಿವೇಕಪ್ರಯೋಗಗಳಿನಾದೀತು |
ಭೂತಿಸಂಪದ ಜಗಕೆ – ಮಂಕುತಿಮ್ಮ || 866 ||

ಪದ-ಅರ್ಥ: ಆತುಮದ=ಆತ್ಮದ, ಸಂಸ್ಥಿತಿಗೆ=ಸಮಸ್ಥಿತಿಗೆ, ವಿವೇಕ ಪ್ರಯೋಗಗಳಿನಾದೀತು=ವಿವೇಕ +ಪ್ರಯೋಗಗಳಿಂ+ಆದೀತು,
ಭೂತಿಸಂಪದ=ಭೂತಿ(ಸಮೃದ್ಧಿ)+ಸಂಪದ(ಸಂಪತ್ತು).

ವಾಚ್ಯಾರ್ಥ: ಆತ್ಮದ ಸಮಸ್ಥಿತಿಗೆ ದೈಹಿಕ ಸಮಾಧಾನ ಬೇಕು. ಅದರಂತೆ ಭೌತವಿಜ್ಞಾನದ, ರಾಷ್ಟçಸಂಸ್ಥೆಗಳ ವಿವೇಕಪೂರ್ಣವಾದ ಪ್ರಯೋಗಗಳಿಂದ ಜಗತ್ತಿಗೆ ಸಮೃದ್ಧಿ, ಸಂಪತ್ತು ದೊರಕೀತು.

ವಿವರಣೆ: ದೇಹ, ಆತ್ಮದ ಹೊದಿಕೆ. ಆತ್ಮವನ್ನು ಸಂಸ್ಥಿತಿಯಲ್ಲಿಡಲು ದೇಹ ಸುಸ್ಥಿತಿಯಲ್ಲಿರಬೇಕು. ದೇಹ ಸಂಪೂರ್ಣ ನಿರ್ಬಲವಾಗಿದ್ದರೆ, ಆತ್ಮಶಕ್ತಿ ಕೂಡ ಕುಂದುತ್ತದೆ. ದೇಹಶಕ್ತಿ ಬಲವಾಗಿರಬೇಕಾದರೆ ಪರಿಸರದ ಪ್ರಭಾವ ಹೆಚ್ಚು. ಒಳ್ಳೆಯ ಆಹಾರ, ಒಳ್ಳೆಯ ವಾತಾವರಣಗಳು ಮುಖ್ಯ.

ನಮ್ಮ ವಿಜ್ಞಾನ, ಮನುಷ್ಯನ ಆರೋಗ್ಯ ರಕ್ಷಣೆಗೆ ಬಹುದೊಡ್ಡ ಕಾಣಿಕೆಗಳನ್ನು ಕೊಡುತ್ತದೆ. ಆರೋಗ್ಯ ತಪಾಸಣೆಯ ವಿಧಿ ವಿಧಾನಗಳು ಆರೋಗ್ಯ ಕೆಡುವುದಕ್ಕೆ ಮೊದಲೇ ವಿಶ್ಲೇಷಣಾತ್ಮಕ ಪರೀಕ್ಷೆ ((diagnostic test)) ಮುಂದಾಗಬಹುದಾದದ್ದನ್ನೂ ತಿಳಿಸಿ, ಪರಿಹಾರೋಪಾಯಗಳನ್ನು ನೀಡಿ, ಆಯುಸ್ಸನ್ನು ವೃದ್ಧಿಸುತ್ತದೆ. ದೇಹವನ್ನು ಸರಿಯಾಗಿ, ಆರೋಗ್ಯಕರವಾಗಿ ಇಡುವುದಕ್ಕೆ ಎಷ್ಟೆಷ್ಟು ತರಹದ ಬಟ್ಟೆಗಳು, ಮನೆಗಳು, ಉಪಕರಣಗಳನ್ನು ಮನುಷ್ಯ ಕಂಡುಹಿಡಿದಿದ್ದಾನೆ! ವಾಹನಗಳ ಅನ್ವೇಷಣೆ ಮನುಷ್ಯನ ಪ್ರವಾಸವನ್ನು ಹೆಚ್ಚಿಸುವುದರೊಂದಿಗೆ ಅದರ ಅವಧಿಯನ್ನು ಕಡಿಮೆ ಮಾಡಿದೆ. ತಿಂಗಳುಗಟ್ಟಲೇ ಪ್ರಯಾಸದ ಪ್ರವಾಸವನ್ನು ಮಾಡುವುದರ ಬದಲಾಗಿ ಕೆಲವೇ ಗಂಟೆಗಳಲ್ಲಿ ಗಮ್ಯಸ್ಥಳವನ್ನು ತಲುಪಿಸುವ ವಿಮಾನಗಳಿವೆ.

ಇದರೊಂದಿಗೆ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ರೆಡ್ ಕ್ರಾಸ್ ಸಂಸ್ಥೆಗಳಂತಹ ಯೋಜನೆಗಳು ಮನುಷ್ಯನ ಬದುಕು, ಕಲಹವಿಲ್ಲದೆ, ಆರೋಗ್ಯದಿಂದ ಇರುವಂತೆ ಪ್ರಯತ್ನಿಸುತ್ತಿವೆ. ಪ್ರತಿಯೊಂದು ರಾಷ್ಟ್ರ ತನ್ನದೇ ಆದ ಸಂವಿಧಾನವನ್ನು ಮಾಡಿಕೊಂಡು ತನ್ನ ಪ್ರಜೆಗಳ ಜೀವನ ವ್ಯವಸ್ಥಿತವಾಗಿರುವಂತೆ, ನೆಮ್ಮದಿಯಾಗುವಂತೆ ಮಾಡಲು ಶ್ರಮಿಸುತ್ತಿವೆ. ಹೀಗೆ ವ್ಯಕ್ತಿಗಳು, ಸಂಸ್ಥೆಗಳು, ರಾಷ್ಟ್ರಗಳು ಸತತವಾಗಿ ಬದುಕು ಸಮೃದ್ಧವಾಗುವಂತೆ ಯೋಜಿಸುತ್ತಿವೆ. ಕಗ್ಗದ ಆಶಯ ತುಂಬ ಸುಂದರವಾದದ್ದು. ಎಲ್ಲ ಹೊಸ ಅವಿಷ್ಕಾರಗಳು, ಪ್ರಯತ್ನಗಳು, ಯೋಜನೆಗಳು “ವಿವೇಕ ಪ್ರಯೋಗ” ಗಳಾಗಬೇಕು. ಎಲ್ಲ ಪ್ರಯೋಗಗಳಲ್ಲಿ ವಿವೇಕವಿರಬೇಕು. ವಿವೇಕವಿಲ್ಲದ ಯಾವುದೇ ಪ್ರಯತ್ನ ಅನಾಹುತಕ್ಕೆ ದಾರಿ.

ಇತಿಹಾಸ, ಪುರಾಣಗಳು, ಈ ವಿವೇಕವಿಲ್ಲದ ನಡೆಗಳಿಂದ ಆದ ದುರ್ಭರ ಪ್ರಸಂಗಗಳಿಗೆ ಸಾಕ್ಷಿಯಾಗಿವೆ. ಮಹಾಯುದ್ಧಗಳು, ಕೋಮುಗಲಭೆಗಳು, ಉಗ್ರರಹಾವಳಿಗಳು ಏನನ್ನು ಸೂಚಿಸುತ್ತಿವೆ? ವಿವೇಕದಿಂದ ಯೋಜಿಸಿದ್ದರೆ ಇವುಗಳು ನಡೆಯುವ ಕಾರಣವಿಲ್ಲ. ಅದಕ್ಕೇ ಕಗ್ಗ ಒತ್ತು ಕೊಟ್ಟು ಹೇಳುತ್ತದೆ, ನಮ್ಮೆಲ್ಲ ಪ್ರಯೋಗಗಳು ವಿವೇಕದ ಆಧಾರದ ಮೇಲೆ ನಡೆದರೆ ಮಾತ್ರ ಪ್ರಪಂಚಕ್ಕೆ ಸಮೃದ್ಧಿ, ಸಂಪತ್ತು ಮತ್ತು ನೆಮ್ಮದಿ ದೊರಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT