ADVERTISEMENT

ಬೆರಗಿನ ಬೆಳಕು | ಕಣ್ಣೀರಿನಿಂದ ಪರಿಶುದ್ಧತೆ

ಡಾ. ಗುರುರಾಜ ಕರಜಗಿ
Published 18 ಏಪ್ರಿಲ್ 2023, 23:30 IST
Last Updated 18 ಏಪ್ರಿಲ್ 2023, 23:30 IST
   

ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು|
ಮೆರುಗನೊಂದುವುದು ಪೊನ್ ಪುಟಕಾದ ಬಳಿಕ
ನರಜೀವವಂತು ಶುಚಿಯಹುದು ದು:ಖಾಶ್ರುವಿಂ |
ತರುವಾಯ ಪುನರುದಯ – ಮಂಕುತಿಮ್ಮ || 865 ||

ಪದ-ಅರ್ಥ: ಉರಿಯಾರಿ=ಉರಿ+ಆರಿ, ಮೆರುಗನೊಂದುವುದು=ಮೆರುಗನು+ಹೊಂದುವುದು, ಪೊನ್=ಬಂಗಾರ, ನರಜೀವವಂತು=ನರಜೀವವು+ಅಂತು, ಪುನರುದಯ=ಪುನರ್+ಉದಯ.

ವಾಚ್ಯಾರ್ಥ: ಬೇಸಿಗೆಯ ಉರಿ ಆರಿ, ಮಳೆಗರೆದ ಮೇಲೆ ಮತ್ತೆ ಸಸಿ ಬೆಳೆಯುತ್ತದೆ. ಪುಟಕ್ಕಿಟ್ಟ ಮೇಲೆಯೇ ಚಿನ್ನಕ್ಕೆ ಹೊಳಪು ಬರುವುದು. ಮನುಷ್ಯ ಜೀವವೂ ಹಾಗೆಯೇ. ದುಃಖದ ಕಣ್ಣೀರು ಸುರಿದ ಬಳಿಕ ಶುಚಿಯಾಗುತ್ತದೆ. ನಂತರ ಪುನಃ ಜೀವನದ ಉದಯವಾಗುತ್ತದೆ.

ವಿವರಣೆ: ಇದೊಂದು ಆಶಾವಾದವನ್ನು ತಿಳಿಸುವ ಕಗ್ಗ. ನೋವು ದುಃಖಗಳು ಯಾರನ್ನೂ ಬಿಟ್ಟಿದ್ದಲ್ಲ. ದು:ಖ ಬಂದಾಗ ಬದುಕು ಕುಸಿದೇ ಹೋದಂತೆ ಭಾಸವಾಗುತ್ತದೆ. ಮತ್ತೆ ಕೆಲದಿನಗಳ ನಂತರ ನಗು ಮೂಡುತ್ತದೆ. ದುಃಖವೆಂಬುದು ಮೋಡವಿದ್ದಂತೆ. ಯಾವಾಗಲೂ ಮೋಡವಿರುವುದು ಸಾಧ್ಯವೇ? ಬದುಕಿನ ದಾರಿಯ ಗಾಳಿ ಬೀಸಿದಾಗ ಕಾರ್ಮೋಡ ಕೂಡ ಸರಿದು ಹೋಗಿ ಸೂರ್ಯನ ಹೊಂಗಿರಣದ ದರ್ಶನವಾಗುತ್ತದೆ. ಕಾಳ್ಗಿಚ್ಚು ಕಾಡನ್ನು ಆವರಿಸಿದಾಗ ಎಲ್ಲವೂ ಸುಟ್ಟು ಕರಕಾಗಿ ಹೋಗುತ್ತದೆ. ಕಾಡಿನ ಜೀವದೃವ್ಯವೆಲ್ಲ ನಾಶವಾಗಿ ಹೋದಂತೆ ತೋರುತ್ತದೆ. ಆದರೆ ಮಳೆಗಾಲ ಬಂದಾಗ, ಭಗವಂತನ ಕೃಪೆ ಮಳೆ ಹನಿಯ ರೂಪದಲ್ಲಿ ಬಂದಂತೆ ನೆಲವನ್ನು ತಂಪುಮಾಡುತ್ತದೆ. ಸೃಷ್ಟಿಯ ಪುನರ್ ಸೃಷ್ಟಿಯ ತಹತಹಿಕೆ ಎಂಥದ್ದೆಂದರೆ, ಎಲ್ಲವೂ ನಾಶವಾದಂತೆ ತೋರಿದ ನೆಲದಾಳದಲ್ಲಿ ಚಿಗುರಲು ಬೀಜಗಳು ಸಿದ್ಧವಾಗಿ ನಿಂತಿವೆ.

ಒಂದು ವಾರದಲ್ಲಿ ಹಸುರೆಲ್ಲ ಹೊರಬಂದು, ನೆಲ ಸಸ್ಯಶ್ಯಾಮಲೆಯಾಗುತ್ತದೆ. ಮತ್ತೆ ಜೀವ ತುಡಿಯುತ್ತದೆ. ಭೂಮಿಯಿಂದ ಹೊರತೆಗೆದ ಬಂಗಾರ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ, ಆದರೆ ಅದಕ್ಕೆ ಪುಟಕೊಟ್ಟಾಗ ಮೆರಗು ಬರುತ್ತದೆ. ಪುಟ ಕೊಡುವುದೆಂದರೇನು? ಬಂಗಾರವನ್ನು ಬೆಂಕಿಗೆ ಹಾಕುವುದು. ಅದು ಬಂಗಾರಕ್ಕೆ ಕಷ್ಟವಲ್ಲವೆ? ನೋವು ತರುವುದಿಲ್ಲವೆ? ಆದರೆ ಬೆಂಕಿಯಲ್ಲಿ ಹಾಯ್ದು ಬರುವಾಗ ಬಂಗಾರಕ್ಕೆ ಏನೂ ಆಗುವುದಿಲ್ಲ. ಅದರಲ್ಲಿದ್ದ ಕಸರು, ಕಸ ಸುಟ್ಟು ಹೋಗಿ ಅದು ಪರಿಶುದ್ಧವಾಗುತ್ತದೆ. ಅಗ ಅದಕ್ಕೆ ಹೊಳಪು ಬರುತ್ತದೆ. ಆದ್ದರಿಂದ ಪುಟಕೊಡುವುದು ನೋವು ನೀಡುವ ಕಾರ್ಯವಲ್ಲ, ಚಿನ್ನವನ್ನು ಶುದ್ಧೀಕರಿಸುವ ಪ್ರಕ್ರಿಯೆ. ಕಗ್ಗದ ಮಾತು ತುಂಬ ಸುಂದರ. ಮೈಸುಟ್ಟುಕೊಂಡ ಕಾಡು ಹೇಗೆ ಒಂದು ಮಳೆಯಿಂದ ತನ್ನನ್ನು ಪುನರ್ ಸೃಷ್ಟಿಸಿಕೊಳ್ಳುತ್ತದೋ, ಬೆಂಕಿಯ ನೋವನ್ನುಂಡ ಚಿನ್ನ ಹೇಗೆ ಪರಿಶುದ್ಧವಾಗುತ್ತದೋ, ಅಂತೆಯೇ ಮನುಷ್ಯರೂ ಕೂಡ ದುಃಖದ ಮೂಸೆಯಲ್ಲಿ ಹಾದು ಬಂದು, ದುಃಖಾಶ್ರುಗಳನ್ನು ಹರಿಸಿ, ಅದರಿಂದ ಶುಚಿಯಾಗುತ್ತಾರೆ. ಪುಟಕೊಟ್ಟ ವ್ಯಕ್ತಿಗಳಾಗುತ್ತಾರೆ. ನೋವೆಲ್ಲ ಪಾವಕವಾಗುತ್ತದೆ. ಭಗವಂತ ಮನುಷ್ಯರನ್ನು ದುಃಖಸಾಗರದ ಆಳಕ್ಕೆ ಕರೆದೊಯ್ಯುವುದು ಅವರನ್ನು ಮುಳುಗಿಸಲಲ್ಲ, ಅವರನ್ನು ಪರಿಶುದ್ಧರನ್ನಾಗಿಸುವುದಕ್ಕೆ ಎಂಬುದು ನೆನಪಿರಬೇಕು. ಆಗ ಪಡುವ ನೋವು, ಪರಿಶುದ್ಧವಾಗುವ ಕಾರ್ಯ ಎಂಬುದು ಅರ್ಥವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT