ADVERTISEMENT

ಬೆರಗಿನ ಬೆಳಕು: ದ್ವಂದ್ವಗಳ ಸಮನ್ವಯತೆ

ಡಾ. ಗುರುರಾಜ ಕರಜಗಿ
Published 10 ಆಗಸ್ಟ್ 2021, 19:30 IST
Last Updated 10 ಆಗಸ್ಟ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬಿಂದು ವಿಸರಗಳನುವು, ವಂಕುಸರಲಗಳನುವು |
ಚೆಂದ ಕಣ್ಣಿಗೆ ವರ್ಣ ವಿವಿಧಂಗಳನುವು ||
ಚೆಂದ ವೇಗ ಸ್ತಿಮಿತದನುವು, ಹುಳಿಯುಪ್ಪನುವು |
ದ್ವಂದ್ವದನುವುಗಳಿಂದ – ಮಂಕುತಿಮ್ಮ || 448 ||

ಪದ-ಅರ್ಥ: ವಿಸರ= ವಿಸ್ತಾರ, ಅನುವು= ಅವಕಾಶ, ಹೊಂದಾಣಿಕೆ, ವಂಕು=ವಕ್ರ, ವರ್ಣವಿವಿಧಂಗಳನವು= ವರ್ಣವಿವಿಧಂಗಳ+ ಅನುವು, ಸ್ತಿಮಿತ= ಸ್ಥಿಮಿತ, ಹುಳಿಯುಪ್ಪನುವು= ಹುಳಿ+ ಉಪ್ಪಿನ+ ಅನುವು, ದ್ವಂದ್ವದನುವುಗಳಿಂದ=ದ್ವಂದ್ವದ+ ಅನುವುಗಳಿಂದ

ವಾಚ್ಯಾರ್ಥ: ಚುಕ್ಕೆ ಮತ್ತು ವಿಸ್ತಾರಗಳ ಹೊಂದಾಣಿಕೆ, ವಕ್ರ ಮತ್ತು ನೇರಗಳ ಹೊಂದಾಣಿಕೆ, ವಿವಿಧ ಬಣ್ಣಗಳ ಹೊಂದಾಣಿಕೆ ಕಣ್ಣಿಗೆ ತುಂಬ ಚೆಂದ. ಅಂತೆಯೇ ವೇಗ ಮತ್ತು ಸ್ಥಿಮಿತಗಳ ನಡುವಿನ ಹೊಂದಾಣಿಕೆ, ಹುಳಿ ಮತ್ತು ಉಪ್ಪುಗಳ ಹೊಂದಾಣಿಕೆ. ಈ ದ್ವಂದ್ವಗಳ ಹೊಂದಾಣಿಕೆಯೇ ಅಂದ.

ADVERTISEMENT

ವಿವರಣೆ: ಸಾಮಾನ್ಯ ಅರ್ಥದಲ್ಲಿ ದ್ವಂದ್ವವೆಂದರೆ ತಾಕಲಾಟ, ಪರಸ್ಪರ ವಿರೋಧ ಮತ್ತು ಹೊಂದಾಣಿಕೆಯಾಗದಂಥವುಗಳು ಎಂಬ ಭಾವನೆ ಬರುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ದ್ವಂದ್ವಗಳು ಎನ್ನಿಸಿದವುಗಳು ಒಂದಕ್ಕೊಂದು ಪೂರಕವಾಗಿಯೇ ಇವೆ. ರಾತ್ರಿ ಇರುವುದರಿಂದ ಹಗಲಿಗೊಂದು ಅರ್ಥವಿದೆ. ಸದಾಕಾಲ ಹಗಲೇ ಇರುವುದಾದರೆ ರಾತ್ರಿಯ ಇರುವಿಕೆಯೇ ಇಲ್ಲ. ಮರುದಿನ ಬೆಳಗಾದೀತು ಎಂಬ ನಂಬಿಕೆಯೇ ರಾತ್ರಿಯನ್ನು ಸುಖಕರವಾಗಿಸುತ್ತದೆ. ರಾತ್ರಿಯ ನೆನಪು ಹಗಲನ್ನು ಹಸಿರಾಗಿಡುತ್ತದೆ ಸಾವಿರುವುದರಿಂದ ಬದುಕಿಗೊಂದು ಅರ್ಥ. ದುಃಖವಿರುವುದರಿಂದ ಸುಖದ ಸಂತೋಷ ಹೆಚ್ಚು. ಶ್ರೀರಾಮನ ಬಗ್ಗೆ ವಾಲ್ಮೀಕಿ ಹೇಳುವ ಮಾತು ಹೀಗಿದೆ.

ವಿಷ್ಣುನಾ ಸದೃಶೋ ವಿರ್ಯೇ ಸೋಮವತ್ ಪ್ರಿಯದರ್ಶನ:|
ಕಾಲಾಗ್ನಿ ಸದೃಶ: ಕ್ರೋಧೇ ಕ್ಷಮಯಾ ಪೃಥವೀ ಸಮ:||

‘ರಾಮನು ಪರಾಕ್ರಮದಲ್ಲಿ ವಿಷ್ಣುವಿನಂಥವನು ಆದರೂ ನೋಟದಲ್ಲಿ ಚಂದ್ರನಂತೆ ಪ್ರಿಯನಾದವನು. ಕೋಪಗೊಂಡಾಗ ಆತ ಪ್ರಳಯಾಗ್ನಿ. ಆದರೆ ಕ್ಷಮಿಸುವದರಲ್ಲಿ ಭೂಮಾತೆಯಂಥವನು’. ಭವಭೂತಿಯ ಇನ್ನೊಂದು ಮಾತು ಹೀಗಿದೆ ‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ ಲೋಕೋತ್ತರಾಣಾಂ ಚೇತಾಂಸಿ ಕೋಹಿ ವಿಜ್ಞಾತುಮರ್ಹತಿ|| ‘ಲೋಕೋತ್ತರರಾದ ಮಹಾನುಭಾವರ ಹೃದಯವನ್ನು ಹೇಗೆ ತಾನೇ ಕಂಡುಕೊಳ್ಳಲಾದೀತು? ಅದು ವಜ್ರಕ್ಕಿಂತ ಕಠಿಣವಾಗಿರುವಂತೆ, ಹೂವಿಗಿಂತ ಮೃದುವೂ ಆಗಿರುವಂಥದ್ದು’. ಕಾಠಿಣ್ಯ ಮತ್ತು ಮೃದುತ್ವ, ಪ್ರಳಯಾಗ್ನಿ ಕೋಪ ಮತ್ತು ಭೂತಾಯಿಯ ಕ್ಷಮಾಗುಣ, ಇವು ಪರಸ್ಪರ
ವಿರುದ್ಧವೆನ್ನಿಸುವಂಥವುಗಳು. ಆದರೆ ಮಹಾಪುರುಷರಲ್ಲಿ, ಪ್ರಕೃತಿಯಲ್ಲಿ ಅವು ಒಂದಕ್ಕೊಂದು ಪೂರಕವಾದವು.

ಸಮಗ್ರದರ್ಶನದಲ್ಲಿ ಯಾವುದೂ ದ್ವಂದ್ವ ಅಥವಾ ವಿರೋಧವಲ್ಲ. ವಿಸ್ತಾರದಲ್ಲಿ ಬಿಂದು ವಿಶಿಷ್ಟ. ನೇರವಾದದ್ದರ ನಡುವೆ ವಕ್ರಗತಿ ತುಂಬ ಚೆಂದ. ವಾಹನದಲ್ಲಿ ಬರೀ ಬ್ರೇಕ್ ಇದ್ದರೆ ಮುಂದೆ ಸಾಗದು. ಬರೀ ವೇಗವರ್ಧಕ (accelerator) ಇದ್ದರೆ ಅಪಾಯ ತಪ್ಪದು. ನಿಂಬೆಹಣ್ಣಿನ ಹುಳಿ ಪಾನಕಕ್ಕೆ ಎಷ್ಟು ಬೇಕೋ ಅಷ್ಟೇ ಸಕ್ಕರೆ, ಉಪ್ಪೂ ಬೇಕು. ಹೀಗೆ ಪರಸ್ಪರ ವಿರೋಧಿಗಳೆಂದು ತೋರುವುವು ಸೇರಿದಾಗ ಸುಂದರ ಸಮನ್ವಯತೆ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.