ADVERTISEMENT

ಬೆರಗಿನ ಬೆಳಕು: ಧ್ವನಿಗೆ ಪ್ರತಿಧ್ವನಿ

ಡಾ. ಗುರುರಾಜ ಕರಜಗಿ
Published 28 ಏಪ್ರಿಲ್ 2022, 19:31 IST
Last Updated 28 ಏಪ್ರಿಲ್ 2022, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಧ್ವನಿತ ಪ್ರತಿಧ್ವನಿತ ಮನುಜ ಜೀವಿತವೆಲ್ಲ |
ಕುಣಿವುದವನೆದೆ ಜಗತ್ಪ್ರಕೃತಿ ಪಾಡುವವೊಲ್ ||
ಇನಿದಕೊಲವಳಲಿಗನುತಾಪ; ಸೆಣಸಿಗೆ ಬೀರ |
ಘನಗರ್ಜಿತಕೆ ದೈನ್ಯ – ಮಂಕುತಿಮ್ಮ || 617 ||

ಪದ-ಅರ್ಥ: ಕುಣಿವುದವನೆದೆ=ಕುಣಿವುದು+ಅವನ+ಎದೆ, ಜಗತ್ಪ್ರಕೃತಿ=ಜಗತ್+ಪ್ರಕೃತಿ, ಪಾಡುವವೊಲ್=ಹಾಡಿದಂತೆ,ಇನಿದಕೊಲವಳಲಿಗನುತಾಪ=ಇನಿದಕೆ(ಪ್ರೀತಿಗೆ)+ಒಲವು+ಅಳಲಿಗೆ(ದು:ಖಕ್ಕೆ)+ಅನುತಾಪ (ಅನುಕಂಪ, ಕರುಣೆ), ಸೆಣಸಿಗೆ=ಹೋರಾಟಕ್ಕೆ, ಬೀರ=ವೀರ, ಘನಗರ್ಜಿತಕೆ=ಘನ+ಗರ್ಜಿತಕೆ(ಗರ್ಜನೆಗೆ)

ವಾಚ್ಯಾರ್ಥ: ಮನುಷ್ಯನ ಬದುಕೆಲ್ಲ ಪ್ರಕೃತಿಯ ಧ್ವನಿಗೆ ಪ್ರತಿಧ್ವನಿ ನೀಡುವುದು. ಪ್ರಕೃತಿ ಹಾಡಿದಂತೆ ಅವನ ಎದೆ ಕುಣಿಯುತ್ತದೆ. ಪ್ರೀತಿಗೆ ಒಲವು, ನೋವಿಗೆ ಅನುಕಂಪ, ಹೋರಾಟಕ್ಕೆ ಶೌರ್ಯ, ಅಬ್ಬರದ ಗರ್ಜನೆಗೆ ದೈನ್ಯ ಹೀಗೆ ಅವನ ಪ್ರತಿಕ್ರಿಯೆಗಳು ನಡೆಯುತ್ತವೆ.

ADVERTISEMENT

ವಿವರಣೆ: ಮನುಷ್ಯ ಮತ್ತು ಪ್ರಕೃತಿ ಪರಸ್ಪರ ಕನ್ನಡಿ ಇದ್ದಂತೆ. ಪ್ರಕೃತಿಯಂತೆಯೇ ಮನುಷ್ಯ ವ್ಯವಹರಿಸುತ್ತಾನೆ. ಅತ್ಯಂತ ಸುಂದರವಾದ ಪ್ರಕೃತಿದೃಶ್ಯವನ್ನು ಕಂಡಾಗ ನಮಗರಿವಿಲ್ಲದಂತೆಯೇ,ಓಹ್, ಆಹಾ, ಎಂಬ ಉದ್ಗಾರಗಳು ಹೊರಡುತ್ತವೆ. ಮನಸ್ಸು ಉಲ್ಹಾಸಭರಿತವಾಗುತ್ತದೆ. ನಿಸರ್ಗದ ಸೌಂದರ್ಯ ಮನತುಂಬುತ್ತದೆ, ಪ್ರಕೃತಿಯೆಂದರೆ ನಿಸರ್ಗಮಾತ್ರವಲ್ಲ, ನಮ್ಮ ಕಣ್ಣಿಗೆ ಕಾಣುವ
ಎಲ್ಲ ಭೌತಿಕ ಪ್ರಪಂಚವೂ ಪ್ರಕೃತಿಯೇ. ಅಂತೆಯೇ ಸಂತೋಷದ ಸಂದರ್ಭಗಳಲ್ಲಿ, ಸುಂದರ ವ್ಯಕ್ತಿಗಳನ್ನು ಕಂಡಾಗ, ಸುಂದರ ಘಟನೆಗಳಿಗೆ ಸಾಕ್ಷಿಯಾದಾಗ ಮನಸ್ಸು ಅರಳುತ್ತದೆ. ಹಿಂದೆ ಮಡಿಕೇರಿಯಲ್ಲಿ ಭೂಕುಸಿತವಾಗಿ ಹಳ್ಳಿಗೆಹಳ್ಳಿಯೇ ಸರಿದು ಹೋಗಿ ಅನಾಹುತವಾಯಿತು, ಪ್ರಾಣ ಹಾನಿಯಾಯಿತು. ಅದನ್ನು ಕಂಡ, ಕೇಳಿದ ಎಲ್ಲರ ಮನಸ್ಸಿಗೆ ತಳವಳವಾಯಿತು, ದು:ಖವಾಯಿತು. ಸಾವಾದ ಮನೆಗೆ ಹೋದವರ ಕಣ್ಣುಗಳೆಲ್ಲ ಹನಿಗಟ್ಟುತ್ತವೆ. ಹಿಮವತಪರ್ವತಗಳನ್ನು ಕಂಡಾಗ, ಸಮುದ್ರದ
ಆಳವನ್ನು ಗ್ರಹಿಸಿದಾಗ ನಮಗೆ ತಿಳಿಯದಂತೆ ಮನಸ್ಸು ಗೌರವದಿಂದ ಭಯದಿಂದ ಬಾಗುತ್ತದೆ.

ಅದಕ್ಕೇ ಕಗ್ಗ, ಪ್ರಕೃತಿ ಹಾಡಿದಂತೆ ಮನುಷ್ಯನ ಮನಸ್ಸು ಕುಣಿಯುತ್ತದೆ ಎನ್ನುತ್ತದೆ. ಪ್ರಕೃತಿಯ
ಧ್ವನಿಗೆ ಮನುಷ್ಯನ ಭಾವನೆಗಳು ಪ್ರತಿಧ್ವನಿಯಾಗುತ್ತವೆ. ಹಿಂದೆ ಋಷಿಗಳು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗುತ್ತಿದ್ದರು. ಹಿಮಾಲಯದ ಶಾಂತಿ ಅವರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿತ್ತು. ಕುರುಕ್ಷೇತ್ರದ ಯುದ್ಧಕ್ಷೇತ್ರದಲ್ಲಿ ನಿಂತವರಿಗೆ ಕ್ರೌರ್ಯ ಮಾತ್ರ ದೊರೆತೀತು. ಕಗ್ಗ ಮನಸ್ಸು ಪ್ರಕೃತಿಗೆ ಪ್ರತಿಧ್ವನಿಸುವುದನ್ನು ಹೇಳುವ ರೀತಿ ಚೆನ್ನ. ಇನಿದಾದಕ್ಕೆ ಒಲವು, ದು:ಖಕ್ಕೆ ಅನುಕಂಪೆ, ಹೋರಾಟಕ್ಕೆ ವೀರ, ಘನವಾದ ಗರ್ಜನೆಗೆ ದೈನ್ಯ ಹೀಗೆ ಧ್ವನಿತಕ್ಕೆ ಪ್ರತಿಧ್ವನಿತವಾಗಿರುವುದು ಮನುಷ್ಯ ಜೀವನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.