ADVERTISEMENT

ಬೆರಗಿನ ಬೆಳಕು | ದೈವ ತಿರುಗಿಸುವ ಬುಗುರಿ

ಡಾ. ಗುರುರಾಜ ಕರಜಗಿ
Published 26 ಜುಲೈ 2020, 21:09 IST
Last Updated 26 ಜುಲೈ 2020, 21:09 IST
   

ತಿರುತಿರುಗಿ ತಿರುಗುತ್ತೆ ಬುಗರಿ ತಾನೇ ಸೋತು |

ತಿರೆಗುರುಳುವುದು ತನ್ನ ಬಲವ ತಾಂ ಕಳೆದು ||
ನರನುಮಂತೆಯೆ ಸುತ್ತಿ ಸುತ್ತಿ ಕಡೆಗೊಂದು ದಿನ |
ತೆರುವನಸ್ಥಿಯ ಧರೆಗೆ – ಮಂಕುತಿಮ್ಮ || 316 ||

ಪದ-ಅರ್ಥ: ತಿರೆಗುರುಳುವುದು=ತಿರೆಗೆ(ಭೂಮಿಗೆ)+ಉರುಳುವುದು, ನರನುಮಂತೆಯೆ=ನರನೂ(ಮನುಷ್ಯನೂ)+ಅಂತೆಯೆ, ತೆರುವನಸ್ಥಿಯ=ತೆರುವನು(ಕೊಡುವನು)+ಅಸ್ಥಿಯ(ಮೂಳೆಗಳನ್ನು)

ADVERTISEMENT

ವಾಚ್ಯಾರ್ಥ: ಬುಗರಿ ತಿರುಗಿ ತಿರುಗಿ ಕೊನೆಗೆ ತಾನೇ ಶಕ್ತಿಯನ್ನು ಕಳೆದುಕೊಂಡು, ಸೋತು, ನೆಲಕ್ಕೆ ಬೀಳುತ್ತದೆ. ಮನುಷ್ಯನೂ ಹಾಗೆಯೇ ಸುತ್ತಿ, ಸುತ್ತಿ ಅಲೆದು ಕೊನೆಗೊಂದು ದಿನ ತನ್ನ ಮೂಳೆಗಳನ್ನು ಧರೆಗೆ ಅರ್ಪಿಸಿ ಮರೆಯಾಗುತ್ತಾನೆ.

ವಿವರಣೆ: ಇದೊಂದು ಅತ್ಯಂತ ಸುಂದರವಾದ ಪ್ರತಿಮೆ. ಬುಗರಿ ಮರದಿಂದ ಮಾಡಿದ ಆಟಿಕೆ. ಅದೊಂದು ಶಂಕುವಿನ ಆಕಾರದ ಮರದ ತುಂಡು. ಅದರ ತುದಿಯಲ್ಲಿ ಒಂದು ಮೊಳೆ. ಮೊಳೆಯ ಮೇಲ್ಭಾಗದಲ್ಲಿ ಸಣ್ಣ ಹಗ್ಗವನ್ನು ಸುತ್ತಲು ಅನುಕೂಲವಾಗುವಂತೆ ಜಾಡುಗಳನ್ನು ಮಾಡಿರುತ್ತಾರೆ. ಅದನ್ನು ತಿರುಗಿಸಲು ಮೊಳೆಯಿಂದ ಪ್ರಾರಂಭ ಮಾಡಿ ಮೇಲಿನವರೆಗೂ ತೆಳುವಾದ ಹಗ್ಗವನ್ನು ಬಿಗಿಯಾಗಿ, ಸರಿಯಾಗಿ ಸುತ್ತಬೇಕು. ಅದರ ಮತ್ತೊಂದು ತುದಿಯನ್ನು ಬೆರಳಿನ ಸಂದಿಯಲ್ಲಿ ಹಿಡಿದುಕೊಂಡು ಬೀಸಿ ಎಸೆಯುತ್ತ, ಹಗ್ಗವನ್ನು ಎಳೆದುಕೊಳ್ಳ
ಬೇಕು. ಎರಡೂ ಪ್ರಕ್ರಿಯೆಗಳು ಜೊತೆ ಜೊತೆಯಲ್ಲೇ ನಡೆಯಬೇಕು. ಬರೀ ಬೀಸಿದರೆ ಆಗದು, ಬರೀ ಹಗ್ಗ ಎಳೆದರೆ ಬುಗರಿ ತಿರುಗುವುದಿಲ್ಲ. ಎರಡೂ ಒಂದೇ ಕಾಲಕ್ಕೆ ಮಾಡಿದರೆ ಬುಗುರಿ ಗಾಳಿಯಲ್ಲಿಯೇ ಗರಗರನೇ ತಿರುಗುತ್ತ, ನೆಲಕ್ಕೆ ಅಪ್ಪಳಿಸಿ ಅಲ್ಲಿಯೂ ತಿರುಗುತ್ತದೆ. ಅದು ಎಷ್ಟು ವೇಗವಾಗಿ ತಿರುಗುತ್ತದೋ ಅಷ್ಟೇ ಹೊತ್ತು ಅದು ನೆಲದ ಮೇಲೆ ತಿರುಗುತ್ತದೆ. ನಂತರ ಬಲ ಕಳೆದುಕೊಂಡು ನೆಲದ ಮೇಲೆ ಬೀಳುತ್ತದೆ.

ಮನುಷ್ಯನೂ ಒಂದು ಬುಗುರಿಯಂತೆ. ಅವನ ಬದುಕಿನ ಉದ್ದೇಶ ತುದಿಗೆ ಇದ್ದ ಮೊಳೆಯಂತೆ. ಅದರ ಸುತ್ತಲೇ ಅದು ಗಿರಕಿ ಹೊಡೆಯುವುದು. ಬುಗುರಿ ತನ್ನಷ್ಟಕ್ಕೆ ತಾನೇ ತಿರುಗಲಾರದು. ಅದಕ್ಕೆ ದಾರ ಸುತ್ತುವ, ಬೀಸಿ ಒಗೆಯುವ, ಅದರೊಂದಿಗೇ ಹಗ್ಗವನ್ನು ಸೆಳೆಯುವುದು ಕಾಣದ ಕೈ. ಅದೇ ಬುಗುರಿಯ ವೇಗವನ್ನು, ಅದೆಷ್ಟು ಹೊತ್ತು ತಿರುಗಬೇಕೆನ್ನುವುದನ್ನು ತೀರ್ಮಾನಿಸುವುದು. ಹಾಗಾದರೆ ಬುಗುರಿಯ ಕರ್ತವ್ಯವೇನು? ದೈವದ ಕೈ ತಿರುಗಿಸಿದಷ್ಟು ತಿರುಗುವುದೇ?

ಆಗ ತಾನೇ ಹುಟ್ಟಿದ ಮನುಷ್ಯ ನೆಲದ ಮೇಲೆ ಬಿದ್ದ ಬುಗುರಿಯಂತೆ ಅಸಹಾಯಕ. ತಾನಾಗಿಯೇ ಏನನ್ನೂ ಮಾಡಲಾರದ ಸ್ಥಿತಿ. ಭಗವಂತ ಅದನ್ನು ಎತ್ತುತ್ತಾನೆ, ಮೋಹ, ಆಕರ್ಷಣೆಗಳ ಬಲೆ ಸುತ್ತುತ್ತಾನೆ. ಬೀಸಿ ಒಗೆದು ಶಕ್ತಿ ಕೊಡುತ್ತಾನೆ. ಆದರೆ ತನ್ನೆಡೆಗೆ ಮನಸ್ಸನ್ನು ಸೆಳೆಯುತ್ತಾನೆ. ಭಗವಂತ ನೀಡಿದ ಶಕ್ತಿ ಮತ್ತು ಆಕರ್ಷಣೆಗಳ ದ್ವಿವಿಧ ಮತ್ತು ವಿರೋಧೀ ಬಲಗಳ ನಡುವೆ ಸಿಕ್ಕ ಮನುಷ್ಯ ಜೀವ ಗರಗರನೆ ಸುತ್ತುತ್ತದೆ. ಸುತ್ತುವುದೇ ತನ್ನ ಕರ್ತವ್ಯವೆಂಬಂತೆ ತಿರುಗುತ್ತದೆ. ತನ್ನ ತಿರುಗುವಿಕೆಗೆ ತಾನೇ ಕಾರಣ ಎಂದು ಭ್ರಮಿಸುತ್ತದೆ. ಅದು ತನ್ನದೇ ಶಕ್ತಿ ಎಂದು ಬೀಗುತ್ತದೆ. ಆದರೆ ದೈವ ನೀಡಿದ ಶಕ್ತಿ ಮುಗಿದೊಡನೆ ಮತ್ತೆ ಅಸಹಾಯಕವಾಗಿ ನೆಲಕ್ಕೆ ಬಿದ್ದು ಚೈತನ್ಯರಹಿತವಾಗುತ್ತದೆ.

ಕಗ್ಗ ಇದನ್ನು ನೆನಪಿಡಲು ಹೇಳುತ್ತದೆ - ನಾನು ಬುಗುರಿ ಮಾತ್ರ, ಅದರ ತಿರುಗುವಿಕೆಯ ಶಕ್ತಿಗೆ, ತಿರುಗುವ ಕಾಲಕ್ಕೆ ಅದು ಉತ್ತರದಾಯಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.