ADVERTISEMENT

ನೆರಳಿನ ಬದುಕು

ಡಾ. ಗುರುರಾಜ ಕರಜಗಿ
Published 9 ಅಕ್ಟೋಬರ್ 2019, 20:15 IST
Last Updated 9 ಅಕ್ಟೋಬರ್ 2019, 20:15 IST
   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಹತ್ತಿರದ ಹಳ್ಳಿಯಲ್ಲಿ ಗೃಹಸ್ಥನ ಮನೆಯಲ್ಲಿ ಹುಟ್ಟಿದ. ಅವನು ಬೆಳೆದಂತೆ ಕಳ್ಳತನದಲ್ಲಿ ನಿಪುಣನಾದ. ಇಡೀ ರಾಜ್ಯದಲ್ಲೇ ಅತ್ಯಂತ ಚಾಲೂಕಿನ ಹಾಗೂ ಬಲಿಷ್ಠನಾದ ಕಳ್ಳನೆಂದು ಹೆಸರು ಮಾಡಿದ. ಅವನನ್ನು ಹಿಡಿಯುವುದು ಅಸಾಧ್ಯವೆಂದೇ ತೋರುತ್ತಿತ್ತು. ಒಂದು ಬಾರಿ ಶ್ರೇಷ್ಠಿಯೊಬ್ಬರ ಮನೆಯಿಂದ ಭಾರೀ ಕಳ್ಳತನವನ್ನು ಮಾಡಿ ಮರೆಯಾಗಿದ್ದ ಬೋಧಿಸತ್ವ. ಅವನನ್ನು ಹಿಡಿಯಲು ರಾಜ ಹತ್ತಾರು ಜನರ ಗುಂಪುಗಳನ್ನು ರಚಿಸಿ ಜವಾಬ್ದಾರಿ ವಹಿಸಿದ. ಅಂತೂ ಒಂದು ಗುಂಪಿನವರು ಆತನನ್ನು ಹಿಡಿದು ಕೊತ್ವಾಲನಿಗೆ ಒಪ್ಪಿಸಿದರು. ರಾಜ ಕಳ್ಳನ ತಲೆ ಕತ್ತರಿಸಲು ಆಜ್ಞೆ ನೀಡಿದ.

ಕೊತ್ವಾಲ ಕಳ್ಳನ ಕೈಗಳನ್ನು ಕಟ್ಟಿಸಿ ಊರಿನಲ್ಲಿ ಮೆರವಣಿಗೆ ಮಾಡಿ ವಧಾಸ್ಥಾನಕ್ಕೆ ಕರೆದೊಯ್ಯುತ್ತಿದ್ದ. ಈ ದಾರಿಯಲ್ಲಿ ಸಾಮಾ ಎಂಬ ವೇಶ್ಯೆಯ ಮನೆ ಇತ್ತು. ಆಕೆ ಅಪಾರ ಸುಂದರಿ. ಅವಳಿಗಾಗಿ ಒಂದು ದಿನಕ್ಕೆ ಸಾವಿರ ನಾಣ್ಯವನ್ನು ಖರ್ಚು ಮಾಡಲು ಅನೇಕ ಶ್ರೀಮಂತರ ಪುತ್ರರು ಸಾಲುಗಟ್ಟಿ ನಿಂತಿದ್ದರು. ಆಕೆ ತನ್ನ ಮನೆಯ ಕಿಟಕಿಯಿಂದ ಕಳ್ಳನನ್ನು ನೋಡಿದಳು. ಅವಳಿಗೆ ಆತನ ಮೇಲೆ ತೀವ್ರವಾದ ಮೋಹವಾಯಿತು. ತಕ್ಷಣ ಆ ಕೊತ್ವಾಲನನ್ನು ಬರಹೇಳಿ ತನಗೆ ಕಳ್ಳ ಬೇಕು, ಅವನ ಬದಲಾಗಿ ಇನ್ನೊಬ್ಬರನ್ನು ಬಲಿಕೊಡು. ನಿನಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇನೆ ಎಂದು ಕೇಳಿದಳು. ಇಷ್ಟಲ್ಲದೇ ಬಲಿಗೆ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ ಎಂದಳು. ಅಂದು ತನ್ನ ಕಡೆಗೆ ಬಂದ ಒಬ್ಬ ಶ್ರೇಷ್ಠಿಯ ಮಗನಿಂದ ಸಾವಿರ ನಾಣ್ಯಗಳನ್ನು ಇಸಿದುಕೊಂಡು, ಅವನಿಗೊಂದು ವಿನಂತಿ ಮಾಡಿದಳು, “ಆರ್ಯ, ಇಂದು ರಾತ್ರಿ ದಯವಿಟ್ಟು ನನಗಾಗಿ ಈ ನಾಣ್ಯಗಳನ್ನು ತೆಗೆದುಕೊಂಡು ಹೋಗಿ ಕೊತ್ವಾಲನಿಗೆ ಕೊಡುತ್ತೀರಾ?” ಆಕೆಗಾಗಿ ಏನನ್ನಾದರೂ ಮಾಡಲು ಸಿದ್ಧನಿದ್ದ ತರುಣ ನಾಣ್ಯಗಳನ್ನು ಅತ್ಯುತ್ಸಾಹದಿಂದ ಕೊತ್ವಾಲನಿಗೆ ಕೊಟ್ಟ. ಕೊತ್ವಾಲ ಈ ತರುಣನನ್ನು ಕಟ್ಟಿಹಾಕಿ ಕಳ್ಳನನ್ನು ಸಾಮಾಳ ಮನೆಗೆ ತಂದು ಬಿಟ್ಟ. ಮರುದಿನ ಶ್ರೀಮಂತನ ಮಗನ ಮುಖಕ್ಕೆ ಬಟ್ಟೆ ಹಾಕಿ ಅವನೇ ಕಳ್ಳ ಎಂದು ವಧೆ ಮಾಡಿಬಿಟ್ಟ.

ಸಾಮಾಳ ಮನೆಗೆ ಬಂದ ಕಳ್ಳ ಸಂಭ್ರಮದಿಂದ, ಸಂತೋಷದಿಂದ ಕೆಲಕಾಲ ಬದುಕಿದ. ಈಗ ಸಾಮಾ ಯಾರೊಂದಿಗೂ ಸೇರದೆ ಕೇವಲ ಕಳ್ಳನೊಂದಿಗೇ ಇರುತ್ತಿದ್ದಳು. ಬೋಧಿಸತ್ವ ಯೋಚಿಸಿದ– ಈಕೆ ಹೇಗಿದ್ದರೂ ವೇಶ್ಯೆ, ಕೇವಲ ಪುರುಷರ ಹಣಕ್ಕಾಗಿ, ತನ್ನ ಇಚ್ಛೆಯಂತೆ ಆಟವಾಡುವವಳು. ಈಗಲೇನೋ ನನ್ನ ಮೇಲೆ ಪ್ರೀತಿ ತೋರುತ್ತಾಳೆ. ನಾಳೆ ಮತ್ತೊಬ್ಬನ ಮೇಲೆ ಮನಸ್ಸಾದರೆ ನನ್ನನ್ನು ಇಲ್ಲಿಂದ ಓಡಿಸಬಹುದು ಇಲ್ಲವೆ ಕೊಲ್ಲಿಸಬಹುದು. ಈಕೆ ತನ್ನ ಬಳಿಗೆ ಬಂದ ಶ್ರೀಮಂತನ ಮಗನನ್ನೇ ಕೊಲ್ಲಿಸಿದವಳು. ಆದ್ದರಿಂದ ಸಮಯ ನೋಡಿ ಆಕೆಯ ಎಲ್ಲ ಆಭರಣಗಳನ್ನು ಹೊಡೆದುಕೊಂಡು ದೂರ ಹೋಗಿಬಿಡಬೇಕು.

ADVERTISEMENT

ಒಂದು ದಿನ ಆಕೆಯನ್ನು ಕರೆದುಕೊಂಡು ಉದ್ಯಾನಕ್ಕೆ ಹೋದ. ಪರ್ವತಗಳನ್ನು ತೋರುವ ನೆಪದಲ್ಲಿ ಕಣಿವೆಯ ಹತ್ತಿರಕ್ಕೆ ನಡೆಸಿಕೊಂಡು ಹೋಗಿ ಅಪ್ಪಿಕೊಳ್ಳುವಂತೆ ಮಾಡಿ ತಳ್ಳಿಬಿಟ್ಟ. ಆಭರಣಗಳನ್ನೆಲ್ಲ ಎತ್ತಿಕೊಂಡು ದೂರದ ಊರಿಗೆ ಹೋಗಿಬಿಟ್ಟ. ಆದರೆ ಸಾಮಾ ಸಾಯಲಿಲ್ಲ. ಪ್ರಜ್ಞೆ ಮರಳಿದ ಮೇಲೆ ಆಕೆ ಅವನನ್ನು ಹುಡುಕಿಸಲು ಪ್ರಯತ್ನಿಸಿದಳು. ಹತ್ತಾರು ಜನ ದೂತರನ್ನು ಬೇರೆ ಬೇರೆ ಕಡೆಗೆ ಕಳುಹಿಸಿದಳು. ಒಂದು ದಿನ ಕಳ್ಳನಿಗೆ ಒಬ್ಬ ದೂತ ಸಿಕ್ಕ. ಸಾಮಾಳ ವಿಷಯವನ್ನು ಹೇಳಿದ. ಆಗ ಬೋಧಿಸತ್ವ ಹೇಳಿದ, “ಮಿತ್ರಾ, ದಯವಿಟ್ಟು ಸಾಮಾಳಿಗೆ ಹೇಳು. ಆಕೆ ನೀಡುವ ಹಣದಂತೆ ಆಕೆಯ ರೂಪವೂ ಶಾಶ್ವತವಲ್ಲ. ಆಕೆಗೆ ಪುರುಷರೊಂದು ಆಟದ ವಸ್ತು. ಯಾರಿಗೆ ಬದುಕಿನಲ್ಲಿ ಮತ್ತೊಬ್ಬರ ಬದುಕಿನೊಂದಿಗೆ ಆಟವಾಡುವುದು ಅಭ್ಯಾಸವಾಗುತ್ತದೋ ಅವರನ್ನು ಯಾರೂ ನಂಬುವುದಿಲ್ಲ”.

ಈ ಮಾತು ಇಂದಿಗೂ ಅಷ್ಟೇ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.