ADVERTISEMENT

ಬೆರಗಿನ ಬೆಳಕು: ನಿಷ್ಠಾ ಸಮನ್ವಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 16:27 IST
Last Updated 25 ಆಗಸ್ಟ್ 2021, 16:27 IST
ಬೆರಗಿನ ಬೆಳಕು- ಗುರುರಾಜ ಕರಜಗಿ
ಬೆರಗಿನ ಬೆಳಕು- ಗುರುರಾಜ ಕರಜಗಿ   

ತಾಯೊ ತಂಗಿಯೊ ಎನಿಪ ಶುಚಿಯ ಸೌಮ್ಯದ ಸೊಬಗು |
ಪ್ರೇಯಸಿಯ ಕರೆವೊಲಾತರವಡಿಪ ಬೆಡಗು ||
ಈಯೆರಡು ಸಮದ ರುಚಿ ನಿನ್ನನಿಬ್ಬಗೆಗೊಳಿಸೆ |
ಧ್ಯೇಯ ನಿನಗಾವುದೆಲೊ ? - ಮಂಕುತಿಮ್ಮ || 453 ||

ಪದ-ಅರ್ಥ: ಕರೆವೊಲಾತುರವಡಿಪ= ಕರೆವವೊಲು (ಕರೆಯುವ ರೀತಿಯಂತೆ)+ ಆತುರವಡಿಪ (ಆತುರಪಡಿಸುವ), ನಿನ್ನನಿಬ್ಬಗೆಗೊಳಿಸೆ= ನಿನ್ನನ್ನು+ ಇಬ್ಬಗೆಗೊಳಿಸೆ

ವಾಚ್ಯಾರ್ಥ: ತಾಯಿ, ತಂಗಿಯ ವಿಷಯದಲ್ಲಿರುವ ಸೌಂದರ್ಯದ ಸೊಬಗು ಸೌಮ್ಯವಾದದ್ದು ಮತ್ತು ಶುಚಿಯಾದದ್ದು. ಪ್ರೇಯಸಿಯ ಸೊಬಗು ಮಾತ್ರ ಅವಳ ಕರೆಯಂತೆ ಆತುರಪಡಿಸುವುದು. ಅದೊಂದು ಬೆಡಗು. ಈ ಎರಡೂ ಬಗೆಯ ಸೌಂದರ್ಯಗಳು ನಿನ್ನನ್ನು ವಿಭಿನ್ನವಾಗಿ ಸೆಳೆದಾಗ ನಿನ್ನ ಧ್ಯೇಯವಾವುದು?

ADVERTISEMENT

ವಿವರಣೆ: ಸೃಷ್ಟಿಯಲ್ಲಿರುವ ಪ್ರೀತಿ ಸಹಜವಾದದ್ದು. ಈ ಪ್ರೀತಿಗೆ ಹಲವು ಮುಖಗಳು. ಪ್ರೀತಿ ತಲುಪಬಹುದಾದ ಅತ್ಯಂತ ಎತ್ತರದ, ಅತ್ಯಂತ ಉತ್ಕಟದ, ಅತ್ಯಂತ ನಿಷ್ಕಾಮ ಮತ್ತು ಅತ್ಯಂತ ನಿರ್ಮಲ ಸ್ಥಿತಿಯನ್ನು ತಾಯಿಯಲ್ಲಿ ಕಾಣಬಹುದು. ಅದನ್ನು ತಾಯಿಯಲ್ಲಷ್ಟೇ ಕಾಣಬಹುದು. ಅದು ವಾತ್ಯಲ್ಯಭಾವ. ಕಕ್ಕುಲತೆ ಎನ್ನುವುದು ಅಣ್ಣ- ತಂಗಿ, ಅಕ್ಕ-ತಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಹೀಗೆ ಒಡಹುಟ್ಟಿದವರ ನಡುವೆ ಇರುವ ಪ್ರೀತಿ. ಅದಕ್ಕೂ ಅಗಾಧವಾದ ಶಕ್ತಿ ಇದೆ. ಸ್ನೇಹ ಎನ್ನುವುದು, ಹೆಸರೇ ಹೇಳುವಂತೆ ಸ್ನೇಹಿತರ ಮಧ್ಯೆ ವಿಜೃಂಭಿಸಬಲ್ಲ ಭಾವದ್ರವ್ಯ. ಒಂದೇ ಊರು, ಭಾಷೆ, ಒಂದೇ ರೀತಿಯ ಆಚಾರ–ವಿಚಾರಗಳೂ ಬಾಂಧವ್ಯ ಪ್ರೀತಿಯಡಿ ಹೃದಯಗಳನ್ನು ಬಂಧಿಸುತ್ತವೆ. ಮಣ್ಣು, ಸಂಸ್ಕೃತಿಯ ಅಭಿಮಾನ ದೇಶಪ್ರೇಮವಾಗುವುದು ಪ್ರೀತಿಯ ಮತ್ತೊಂದು ಮುಖ.

ಮತ್ತೊಂದು ರಭಸದ, ಆತುರದ ಪ್ರೀತಿ, ಹದಿಹರೆಯದಲ್ಲಿ ಉಕ್ಕುವಂಥದ್ದು. ಅದು ಪ್ರಮುಖವಾಗಿ ದೇಹಾಕರ್ಷಣೆಯುಳ್ಳದ್ದು. ಅದನ್ನು ಪ್ರಣಯ ಪ್ರೀತಿ ಎನ್ನಬಹುದು. ಅದರ ಸೆಳೆತ, ಬೆಡಗು ತುಂಬ ಹೆಚ್ಚು. ಇಷ್ಟು ತರಹದ ಪ್ರೀತಿಗಳಲ್ಲಿ ಯಾವುದು ಸರಿ, ಯಾವುದು ಹೆಚ್ಚು ಪ್ರಬಲವಾದದ್ದು? ಪ್ರತಿಯೊಂದು ಪ್ರೀತಿಯೂ ಅದರದೇ ಆದ ಸಂದರ್ಭದಲ್ಲಿ ಸರಿಯಾದದ್ದೇ. ಆದರೆ ಅವುಗಳ ನಡುವೆ ತಾಕಲಾಟ ಬಂದರೆ? ಇದೇ ಪ್ರಶ್ನೆಯನ್ನು ಕಗ್ಗ ಕೇಳುತ್ತದೆ. ತಾಯಿ ಅಥವಾ ಸಹೋದರಿಯ ಪ್ರೀತಿ ತುಂಬ ಶುಚಿಯಾದದ್ದು. ಅದರದು ಸೌಮ್ಯದ ಸೊಗಸು. ಪ್ರೇಯಸಿಯ ಕರೆ ಸೌಮ್ಯವಾದದ್ದಲ್ಲ. ಅದು ಉದ್ವೇಗದ್ದು, ಆತುರದ್ದು, ತೀವ್ರವಾದ ಸೆಳೆತವುಳ್ಳದ್ದು. ಇವೆರಡೂ ಇಬ್ಬಗೆಯಾಗಿ ನಮ್ಮನ್ನು ವಿರುದ್ಧವಾಗಿ ಎಳೆದಾಡಿದಾಗ ನಮ್ಮ ಅವಸ್ಥೆ ಏನಾದೀತು? ಯಾವುದರೆಡೆಗೆ ನಾವು ಮನಸ್ಸನ್ನು ನೀಡಬೇಕು? ಇದಕ್ಕೆ ಉತ್ತರವಾಗಿ ಇದೇ ಸರಿಯೆಂದು ಹೇಳಲಾಗುವುದಿಲ್ಲ. ನಮ್ಮ ಜೀವನದ ನಿಷ್ಠೆಗಳಲ್ಲಿ ಯಾವದೊಂದನ್ನು ಬಿಡಲಾಗುವುದಿಲ್ಲ. ಯಾವುದನ್ನು ಮಿತಿ ಮೀರಿ ಬೆಳೆಸಲಾಗುವುದಿಲ್ಲ. ಈ ಮಿತಿ ವಿವೇಚನೆಯ ಮೂಲಕ ಸಾಧಿಸಬಹುದಾದ ನಿಷ್ಠಾಸಮನ್ವಯವೇ ಅದಕ್ಕೊಂದು ಉಪಾಯ. ಮಾಸ್ತಿಯವರನ್ನು ತರುಣಿಯೊಬ್ಬಳು ತುಂಟತನದಿಂದ ಕೇಳಿದಳು, ‘ಸರ್, ನಿಮ್ಮ ಬದುಕಿನಲ್ಲಿ ಯಾವುದಾದರೂ ಹೆಣ್ಣನ್ನು ಪ್ರೀತಿಸಿದ್ದಿರಾ?’ ಅವರು ಬಾಯಿ ತುಂಬ ನಕ್ಕು, ‘ಹೌದಮ್ಮ, ನಾನು ಬಹಳ ಜನ ಹೆಣ್ಣುಮಕ್ಕಳನ್ನು ಪ್ರೀತಿಸಿದ್ದೇನೆ. ಅವರಲ್ಲಿ, ನನ್ನ ತಾಯಿ, ತಂಗಿ, ಮಗಳು, ಹೆಂಡತಿ ಎಲ್ಲರೂ ಸೇರಿದ್ದಾರೆ. ತಾಯಿಯ ಪ್ರೀತಿ, ಹೆಂಡತಿಯ ಪ್ರೇಮಕ್ಕೆ ಅಡ್ಡಬರಲಿಲ್ಲ, ಮಗಳ ಪ್ರೀತಿ, ತಂಗಿಯ ಒಲುಮೆಗೆ ಅಡಚಣೆಯಾಗಲಿಲ್ಲ’.

ಇಬ್ಬಗೆಯಾಗಿ ಎರಡು ಪ್ರೀತಿಗಳು ಸೆಳೆದಾಗ ಈ ಸಮನ್ವಯವೇ ಸರಿಯಾದ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.