ADVERTISEMENT

ಬೆರಗಿನ ಬೆಳಕು | ಜೀವನ ಪಾಠ

ಡಾ. ಗುರುರಾಜ ಕರಜಗಿ
Published 29 ಜುಲೈ 2020, 21:35 IST
Last Updated 29 ಜುಲೈ 2020, 21:35 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಒಂದು ಬಾರಿ ಬುದ್ಧ ಎರಡು ಪುಟ್ಟ ಕಥೆಗಳನ್ನು ಹೇಳಿದ.

ವಾರಾಣಸಿಯ ಹೊರಭಾಗದಲ್ಲಿ ಕುರಿ ಕಾಯುವವರು ನೂರಾರು ಕುರಿಗಳನ್ನು ಸಾಕಿಕೊಂಡಿದ್ದರು. ಅವರು ಕುಡಿದು ನಿರ್ಲಕ್ಷ್ಯದಿಂದ ಇರುವಾಗ ಎರಡು ಟಗರುಗಳು ಕಾದಾಡತೊಡಗಿದವು. ಅವು ಎದುರುಬದರಾಗಿ ಓಡಿ ಬಂದು ತಮ್ಮ ತಲೆಗಳಿಂದ ಢಿಕ್ಕಿ ಹೊಡೆಯುತ್ತಿದ್ದವು. ಮರದ ಮೇಲೆ ಕುಳಿತಿದ್ದ ಪಕ್ಷಿ ಇದನ್ನು ಕಂಡು ಸುಮ್ಮನಿರಲಾರದೆ ಕೆಳಗೆ ಬಂದು, ‘ಯಾಕಪ್ಪಾ, ಸುಮ್ಮನೆ ಹೊಡೆದಾಡಿ ಸಾಯುತ್ತೀರಿ? ಹೀಗೆ ಕಾದಾಡಿದರೆ ನಿಮ್ಮ ತಲೆ ಒಡೆಯುವುದಿಲ್ಲವೇ? ಕಾದಾಟವನ್ನು ಬಿಡಿ’ ಎಂದು ಎರಡೂ ಟಗರುಗಳನ್ನು ಕೇಳಿಕೊಂಡಿತು. ಅವು ಪಕ್ಷಿಯ ಮಾತನ್ನು ಕೇಳಿಯಾವೇ? ತಮ್ಮ ಪಾಡಿಗೆ ಢಿಕ್ಕಿ ಹೊಡೆಯುತ್ತಲೇ ಇದ್ದವು. ಪಕ್ಷಿ ಹೋರಾಟವನ್ನು ತಡೆಯಲು ಟಗರುಗಳ ಬೆನ್ನ ಮೇಲೆ, ತಲೆಯ ಮೇಲೆ ಕುಳಿತು, ‘ಹೋರಾಡಬೇಡಿ, ಹಿಂಸೆ ತರವಲ್ಲ’ ಎಂದು ಹೇಳುತ್ತ ತನ್ನೆರಡೂ ರೆಕ್ಕೆಗಳನ್ನು ಅಗಲಿಸಿ ಟಗರುಗಳ ತಲೆಗಳ ನಡುವೆ ಬಂದು ಅವುಗಳನ್ನು ತಡೆಯಲು ಪ್ರಯತ್ನಿಸಿತು. ಆದರೆ ಟಗರುಗಳ ತಲೆಗಳು ಅಪ್ಪಳಿಸಿದಾಗ ನಡುವೆ ಜಜ್ಜಿ ಹೋಗಿ ಪಕ್ಷಿ ಸತ್ತು ಹೋಯಿತು.

ವಾರಾಣಸಿಗೆ ಕೆಲವು ಕುರಿ ಕಳ್ಳರು ಬಂದು ಸೇರಿದರು. ಒಂದು ರಾತ್ರಿ ಅವರೊಂದು ಮೇಕೆಯನ್ನು ಕದ್ದು, ಅದರ ಬಾಯಿಯನ್ನು ಕಟ್ಟಿ ಕಾಡಿಗೆ ಒಯ್ದರು. ಮರುದಿನ ಅದನ್ನು ಕೊಂದು ತಿನ್ನುವುದು ಅವರ ಯೋಜನೆಯಾಗಿತ್ತು. ಅದನ್ನು ತಂದು ಒಂದು ಬಿದಿರ ಮೆಳೆಯಲ್ಲಿಟ್ಟರು. ಅದನ್ನು ಕೊಲ್ಲಬೇಕೆಂದಾಗ ತಮ್ಮಲ್ಲಿ ಒಬ್ಬರ ಬಳಿಯಲ್ಲೂ ಯಾವ ಆಯುಧವೂ ಇರದಿದ್ದುದು ತಿಳಿಯಿತು. ಆಯುಧವಿಲ್ಲದೆ ಅದನ್ನು ಕೊಂದರೂ ಮಾಂಸವನ್ನು ತೆಗೆದುಕೊಳ್ಳುವುದು ಸಾಧ್ಯವಿಲ್ಲವಲ್ಲ. ಆದ್ದರಿಂದ ಈ ಮೇಕೆಯನ್ನು ಬಿಟ್ಟುಬಿಡೋಣ. ಅದರ ಆಯುಷ್ಯ ಇನ್ನೂ ಗಟ್ಟಿಯಾಗಿದೆ ಎಂದು ಅದನ್ನು ಬಿಟ್ಟುಬಿಟ್ಟರು. ಮೇಕೆಗೆ ಭಯಂಕರ ಸಂತೋಷವಾಯಿತು. ಸಾವಿನ ಬಾಯಿಯಿಂದ ಹೊರಬಂದೆನಲ್ಲ ಎಂದು ಸಂಭ್ರಮದಿಂದ ಕೂಗುತ್ತ ಕುಣಿದಾಡತೊಡಗಿತು.

ADVERTISEMENT

ಆದರೆ ಹಿಂದಿನ ದಿನ ಬಿದಿರಿನ ಬುಟ್ಟಿಗಳನ್ನು ಮಾಡುವವನು. ಬಿದಿರನ್ನು ಸೀಳಿ ಮನೆಗೆ ತೆಗೆದುಕೊಂಡು ಹೋಗುವಾಗ, ಮತ್ತೆ ನಾಳೆಗೆ ಬೇಕಲ್ಲ ಎಂದು ತನ್ನ ಆಯುಧಗಳನ್ನು ಬಿದಿರ ಮೆಳೆಯೊಳಗೇ ಇಟ್ಟು ಹೋಗಿದ್ದ. ಈ ಹುಚ್ಚು ಮೇಕೆ ಪಾರಾದ ಸಂಭ್ರಮದಲ್ಲಿ ಹಾರಾಡುತ್ತಿದ್ದಾಗ ಅದರ ಹಿಂಗಾಲು ಆಯುಧಗಳ ಚೀಲಕ್ಕೆ ಬಡಿದು ಕೆಳಗೆ ಬಿತ್ತು. ಅದರಲ್ಲಿದ್ದ ಕತ್ತಿ ನೆಲದ ಮೇಲಿನ ಕಲ್ಲಿಗೆ ಹೊಡೆದು ಠಣ್ ಎಂದು ಸದ್ದಾಯಿತು. ಸಪ್ಪಳವನ್ನು ಕೇಳಿ ಮೇಕೆಯನ್ನು ಕದ್ದ ಕಳ್ಳರು ಬಂದು ನೋಡಿದರು. ಅನಾಯಾಸವಾಗಿ ಆಯುಧ ದೊರೆತದ್ದದ್ದು ನೋಡಿ ಸಂತೋಷದಿಂದ ಮೇಕೆಯನ್ನು ಕೊಂದು ತಿಂದರು.

ಇವೆರಡು ಕಥೆಗಳನ್ನು ಹೇಳಿ ಬುದ್ಧ ಹೇಳಿದ, ‘ಮೂರ್ಖರು, ಉಗ್ರರು ಹೊಡೆದಾಡುವಾಗ ಬುದ್ಧಿ ಹೇಳಲು ಹೋಗಬಾರದು. ಅವರು ತಿಳುವಳಿಕೆಯ ಮಾತನ್ನು ಕೇಳದಿರುವುದು ಮಾತ್ರವಲ್ಲ, ಹೇಳಿದವರಿಗೇ ತೊಂದರೆ ಮಾಡಿಯಾರು. ಮತ್ತೆ ಯಾವಾಗಲಾದರೂ ಸಂತೋಷವಾದರೆ ಅತಿಯಾದ ಸಂಭ್ರಮಪಡುವುದು ಬೇಡ ಮತ್ತು ಅತಿಯಾದ ಮಾತು ಬೇಡ. ಇವೆರಡೂ ಸಂತೋಷವನ್ನು ದುಃಖದ ಕೂಪಕ್ಕೆ ತಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.