ADVERTISEMENT

ಬೆರಗಿನ ಬೆಳಕು: ಆಳದಲ್ಲಿ ನೆಲೆ ನಿಂತ ನೆನಪುಗಳು

ಡಾ. ಗುರುರಾಜ ಕರಜಗಿ
Published 3 ಜನವರಿ 2021, 20:00 IST
Last Updated 3 ಜನವರಿ 2021, 20:00 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ವನದಿ ನಿರ್ಜನದಿ ಮೌನದಿ ತಪವನೆಸಗುವನ ನೆನಪಿನಲಿ ಪಿಂತಿನನುಭವವುಳಿಯದೇನು? ||
ಇನಿನೋಟ ಸವಿಯೂಟ ಕಿನಿಸು ಕರುಬುಗಳಾಟ |
ಕನಲುತಿಹುವಾಳದಲಿ - ಮಂಕುತಿಮ್ಮ || 372 ||

ಪದ-ಅರ್ಥ: ತಪವನೆಸಗುವನ=ತಪವ(ತಪಸ್ಸನ್ನ) +ಎಸಗುವನ(ಮಾಡುವನ), ಪಿಂತಿನನುಭವವುಳಿಯದೇನು=ಪಿಂತಿನ(ಹಿಂದಿನ)+ಅನುಭವ+
ಉಳಿಯದೇನು, ಇನಿನೋಟ=ಪ್ರೀತಿಯನೋಟ, ಕಿನಿಸು=ಕೋಪ, ಕರುಬುಗಳಾಟ=ಕರುಬುಗಳ(ಹೊಟ್ಟೆಕಿಚ್ಚಿನ)+ಆಟ, ಕನಲುತಿಹುವಾಳದಲಿ= ಕನಲುತಿಹವು(ಕುದಿಯುತ್ತಿಹವು)+ಆಳದಲಿ

ವಾಚ್ಯಾರ್ಥ: ಕಾಡಿನಲ್ಲಿ, ನಿರ್ಜನ ಪ್ರದೇಶದಲ್ಲಿ ಮೌನವಾಗಿ ತಪಸ್ಸು ಮಾಡುವವನ ನೆನಪಿನಲ್ಲಿ ಹಿಂದಿನ ಅನುಭವಗಳು ಉಳಿಯುವುದಿಲ್ಲವೆ? ಆತ ಕಂಡ ಪ್ರೀತಿಯ ನೋಟ, ಸವಿಯಾದ ಊಟ, ಸಿಟ್ಟು, ಅಸೂಯೆಗಳ ಆಟ ಅವನ ಮನದಾಳದಲ್ಲಿ ಕುಳಿತು ಕುದಿಯುತ್ತಿರುತ್ತವೆ.

ADVERTISEMENT

ವಿವರಣೆ: ಮಾನವನ ಮನಸ್ಸೊಂದು ವಿಸ್ಮಯ. ಮನುಷ್ಯನೆಂದರೆ ಅವನ ನೆನಪುಗಳ ಒಟ್ಟು ಮೊತ್ತ. ಮನಃಶಾಸ್ತ್ರಜ್ಞರ ಪ್ರಕಾರ ಯಾವ ಅನುಭವವನ್ನೂ ನಾವು ಕಳೆದುಕೊಳ್ಳುವುದಿಲ್ಲ. ನಮ್ಮ ಪ್ರತಿಯೊಂದು ಅನುಭವ ಅದು ಎಂದೂ ಅಳಿಯದ ಸಂಗ್ರಹವಾಗಿ ಉಳಿದೇ ಬಿಡುತ್ತದೆ. ಅದು ಎಂದೋ ಒಂದು ಸಲ ಥಟ್ಟನೆ ಕೆಳಗಿನಿಂದೆದ್ದು ಧುತ್ತೆಂದು ಮುಂದೆ ಬಂದು ಬಿಡುತ್ತದೆ. ಅದೊಂದು ತಳವಿಲ್ಲದ ಅಕ್ಷಯಪಾತ್ರೆ. ಒಂದು ರೀತಿಯಲ್ಲಿ ಮಧ್ಯಮವರ್ಗದವರು ಕಟ್ಟಿಸಿದ ಅಟ್ಟವಿದ್ದಂತೆ. ಬೇಕಾದ, ಬೇಡವಾದ ಸಹಸ್ರ ವಸ್ತುಗಳು ಅಲ್ಲಿ ಬಿದ್ದಿವೆ. ಏನನ್ನೋ ಹುಡುಕಲು ಹೋದಾಗ ಮತ್ತಾವುದೋ ಅನಿರೀಕ್ಷಿತವಾಗಿ ಕೈಗೆ ಸಿಗುತ್ತದೆ. ‘ಓಹ್, ಇದು ಇಲ್ಲಿಯೇ ಇದೆ ನೋಡು. ಕಳೆದು ಹೋಗಿದೆ ಎಂದುಕೊಂಡಿದ್ದೆ’ ಎನ್ನುವುದಿಲ್ಲವೆ? ಹಾಗೆಯೇ ಯಾವುದೋ ಅನುಭವ ಕಳೆದುಹೋಗಿದೆ ಎಂದು ಭಾವಿಸಿದಾಗ, ಮತ್ತಾವುದೋ ಸಂದರ್ಭದಲ್ಲಿ ಅದು ತಕ್ಷಣ ನೆನಪಾಗುತ್ತದೆ. ನಾವು ಎಲ್ಲಿಯೇ ಹೋದರೂ, ಯಾವುದೇ ಹಂತದಲ್ಲಿದ್ದರೂ ಬಾಲ್ಯದ ನೆನಪುಗಳು ಒತ್ತೊತ್ತಾಗಿ ಬರುತ್ತವೆ. ನಮ್ಮ ಎಷ್ಟೋ ನೆನಪುಗಳಿಗೆ ನಾವು ಸದಾ ಪ್ರತಿಕ್ರಿಯೆ ತೋರುವುದರಿಂದ ಅವು ಮರುಜೀವ ಪಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಗೊಂದಲಕ್ಕೊಳಗಾದ ನೆನಪುಗಳು ಬೇರೆ ಆಕಾರವನ್ನು ಪಡೆದು ನಮ್ಮನ್ನೇ ಬೆಚ್ಚಿಸುತ್ತವೆ. ಹದಿಮೂರು ವರ್ಷಗಳ ವನವಾಸದಲ್ಲಿ ಮನವನ್ನು ಕ್ರೋಧ, ದ್ವೇಷಗಳಲ್ಲಿ ಕುದಿಸಿ, ಸಿದ್ಧಗೊಳಿಸಿಕೊಂಡಿದ್ದ ಅರ್ಜುನನಿಗೆ, ಯುದ್ಧದ ಸಮಯದಲ್ಲಿ ಬಾಲ್ಯದ ನೆನಪುಗಳು ನುಗ್ಗಿ ಬಂದು ಕಂಗೆಡಿಸುತ್ತವೆ. ತಾತ ಭೀಷ್ಮರೆದೆಗೆ ತೀಕ್ಷ್ಣವಾದ ಬಾಣಗಳನ್ನು ಬಿಡುವಾಗ ಅವರು ತನ್ನನ್ನು ಎತ್ತಿ ಆಡಿಸಿದ ಪ್ರೇಮಮಯ ಪ್ರಸಂಗಗಳು ಎದ್ದು ನಿಂತು ಹೃದಯಕ್ಕೆ ಗರಗಸವನ್ನು ಇಡುತ್ತವೆ. ನವಕೋಟಿಯನ್ನು ತಿರಸ್ಕರಿಸಿ, ದಾಸರಾಗಿ ಹೊರಟ ಪುರಂದರದಾಸರಿಗೆ ಆಗಾಗ, ತಮ್ಮ ವೈರಾಗ್ಯಕ್ಕೆ ಕಾರಣಳಾಗಿದ್ದ ಹೆಂಡತಿಯ ನೆನಪು ಬರದಿರುವುದು ಸಾಧ್ಯವೆ? ಇಲ್ಲದಿದ್ದರೆ ‘ಹೆಂಡತಿಯ ಸಂತತಿ ಸಾವಿರವಾಗಲಿ’ ಎಂದದ್ದೇಕೆ?

ಕಗ್ಗ ಅದನ್ನೇ ಕೇಳುತ್ತದೆ. ಸಂಸಾರವೇ ಬೇಡವೆಂದು ಕಾಡಿನಲ್ಲಿ ಏಕಾಂಗಿಯಾಗಿ, ಮೌನದಲ್ಲಿ ತಪಸ್ಸು ಮಾಡುವವನಿಗೆ, ತನ್ನ ಅನುಭವದಲ್ಲಿ ಬಂದ ಒಲವಿನ ಕಣ್ಣಿನೋಟ, ಉಂಡ ಊಟದ ರುಚಿ, ತಾನು ಹಿಂದೆ ಮಾಡಿದ, ಕಂಡ, ದ್ವೇಷ, ಅಸೂಯೆಗಳ ಆಟ ಕಣ್ಣ ಮುಂದೆ ಬರಲಾರವೆ? ಅವೆಲ್ಲ ಆಳದಲ್ಲಿ ಕುದಿಯುತ್ತ ಕುಳಿತಿವೆ. ನಾವು ಅವುಗಳನ್ನು ಒತ್ತಡದಲ್ಲಿ ಅದುಮಿ ಇಡಬಹುದು. ಆದರೆ ಅವು ಸರಿಯಾದ ಸಮಯದಲ್ಲಿ ಥಟ್ಟನೆ ಎದ್ದು ನಿಲ್ಲುವುದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.