ADVERTISEMENT

ಬೆರಗಿನ ಬೆಳಕು: ಪುರುಷತನದ ವಿಜಯ

ಡಾ. ಗುರುರಾಜ ಕರಜಗಿ
Published 24 ಮಾರ್ಚ್ 2022, 19:31 IST
Last Updated 24 ಮಾರ್ಚ್ 2022, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನರಜೀವನದ ರಣದಿ ವಿಧಿಯ ಬಲವೊಂದು ಕಡೆ |
ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ||
ಉರುಬುತಿರೆ ಪರುಷಂಗೆ ನಲುಮೆಯುಳಿತವೆ ಗೆಲವು |
ಪುರುಷತನವೇ ವಿಜಯ – ಮಂಕುತಿಮ್ಮ || 592 ||

ಪದ-ಅರ್ಥ: ಬಲವೊಂದು=ಬಲವು+ಒಂದು, ಚಿರವಿವೇಕದಿ=ದೀರ್ಘವಾದ ವಿವೇಕ, ಉರುಬು=ರಭಸ, ತೀವ್ರತೆ, ನಲುಮೆಯುಳಿತವೆ=ನಲುಮೆಯ+ಉಳಿತವೆ.

ವಾಚ್ಯಾರ್ಥ: ಮನುಷ್ಯನ ಬದುಕಿನ ರಣಾಂಗಣದಲ್ಲಿ ವಿಧಿಯ ಶಕ್ತಿ ಒಂದು ಕಡೆ. ಅವನ ವಿವೇಕದಿಂದ ಬೆಳೆದ ನಲುಮೆ-ಸಂತೋಷಗಳು ಮತ್ತೊಂದು ಕಡೆ ತೀವ್ರವಾಗುತ್ತಿರಲು, ನಲುಮೆಯನ್ನು ಉಳಿಸಿಕೊಳ್ಳುವುದೇ ಗೆಲುವು. ಹಾಗೆ ಸಂತೋಷವನ್ನು ಉಳಿಸಿಕೊಳ್ಳುವ ಪೌರುಷವೇ ವಿಜಯ.

ADVERTISEMENT

ವಿವರಣೆ: ವಿಧಿ ಮಾಡುವ ಕೆಲಸವನ್ನು ಅದು ಮಾಡಲಿ. ಅದು ನಮ್ಮ ಅಪೇಕ್ಷೆಯಂತೆ ಕೆಲಸ ಮಾಡದಿರುವುದರಿಂದ ಅದರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು. ಅದು ಬೇಕಾದ್ದನ್ನು ಮಾಡಲಿ. ನಮ್ಮ ಬಳಿ ಇರುವುದು ಪ್ರಯತ್ನ, ಸಾಧನೆ. ಅದನ್ನು ಬಲಪಡಿಸಬೇಕು. ನಮ್ಮ ಮನಸ್ಸಿನಲ್ಲಿಯ ಕಸವನ್ನು ತೆಗೆದೊಗೆಯಬೇಕು. ಅವಶ್ಯವಿಲ್ಲದ ಭಯಗಳನ್ನು ನೀಗಬೇಕು. ಆಗ ನಮಗೆ ದೊರಕುವ ಬಲಿಷ್ಠ ಆಯುಧ ಕ್ಷೇಮಕರವಾದ ವಿವೇಕ. ಅದನ್ನು ಬಳಸಿ ಪೌರುಷ ಪ್ರಯತ್ನದಿಂದ ನಮ್ಮ ಬದುಕಿನಲ್ಲಿ ಸಂತೋಷ, ನಲುಮೆಗಳನ್ನು ತುಂಬಿಕೊಳ್ಳಬೇಕು.

ಈಗ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ದೈವದ ಭೀತಿಯಿಂದ ತತ್ತರಿಸುತ್ತಿದ್ದ ಗ್ರೀಕ್ ಜನರನ್ನು ಧನಾತ್ಮಕವಾಗಿ ಪ್ರೇರೇಪಿಸಿದವನು ವೃದ್ಧ ತತ್ವಜ್ಞಾನಿ ಡಯೋಜೆನಿಸ್. ಅವನು ತನ್ನ ಮನೆಯ ಮುಂದೆ ಎಲ್ಲರಿಗೂ ಕಾಣುವಂತೆ ಒಂದು ಶಾಸನವನ್ನು ಬರೆಯಿಸಿ ಹಾಕಿದ್ದನಂತೆ. ಅದನ್ನು ಡಿ.ವಿ.ಜಿ ಅನುವಾದ ಮಾಡಿದ್ದು ಹೀಗೆ –

ದೈವ ಕಥೆಗಳ ನೆನೆದು ಮನಕೆ ಕಳವಳ ಬೇಡ;
ಸಾವೇನು ನವಕವಚ; ಜೀವಕಳಬೇಡ;
ಪೌರುಷದ ಯತ್ನದಿಂದೊಳಿತ ಸಾಧಿಸಬಹುದು;
ಮೀರಿಬಿಹ ಕೆಡುಕ ಧೈರ್ಯದೆ ಸಹಿಸಲಹುದು.

ಈ ವಿವೇಕವೇ ದೈವದ ನಡೆಯನ್ನು ಧೈರ್ಯವಾಗಿ ಎದುರಿಸಿಯೂ ಬದುಕಿನಲ್ಲಿ ನಲುಮೆ, ಸಂತೋಷಗಳನ್ನು ಉಳಿಸುತ್ತದೆ. ಪೌರುಷತ್ವದ ಬಗ್ಗೆ ಹೇಳುವಾಗ ಕೇವಲ ಅದರಿಂದಲೇ ಪ್ರಪಂಚ ಸ್ವರ್ಗವಾದೀತೆಂದು ಹೇಳಿದರೆ ತಪ್ಪಾಗುತ್ತದೆ. ಆ ಪುರುಷತನದ ಪ್ರಯತ್ನ ದೈವದ ಬೆಂಕಿಯ ನಡೆಯಲ್ಲೂ, ಪ್ರೀತಿಯ, ಶ್ರದ್ಧೆಯ ಮಲ್ಲಿಗೆಯ ಮಾಲೆಯನ್ನು ಜತನದಿಂದ ಕಾಪಿಡುತ್ತದೆ.

1940 ರಲ್ಲಿ 12 ವರ್ಷದ ಮೇಯರ್ ಹರ್ಶ ಪೋಲಂಡ್‌ನಲ್ಲಿದ್ದ. ಅವನು ಯಹೂದ್ಯನಾದ್ದರಿಂದ ಹಿಟ್ಲರ್‌ನ ನಾಝಿ ಸೈನಿಕರು ಅವನನ್ನು ಬಂಧಿಸಿ ಜರ್ಮನಿಯ ಹತ್ಯಾಕಾಂಡಗಳಿಗೆ (Concentration camp) ಕರೆದೊಯ್ದರು. ಆ ನಿರ್ನಾಮ ಶಿಬಿರಗಳಲ್ಲಿ ಹನ್ನೊಂದು ಲಕ್ಷ ಜನರ ಮಾರಣ ಹೋಮ ನಡೆದಿತ್ತು. ಹರ್ಶನ ಕುಟುಂಬದ ಉಳಿದವರು – ಅವನ ತಾಯಿ, ತಂದೆ, ಸಹೋದರಿ ಮತ್ತು ಮೂವರು ಸಹೋದರರನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಹತ್ಯಾಕಾಂಡದ ಉತ್ತುಂಗದಲ್ಲಿ ಹರ್ಶನನ್ನು ಭಯಂಕರವಾದ ಅಶ್ಪಿಟ್ಜ್ ಕ್ಯಾಂಪಿಗೆ ಕಳುಹಿಸಿದರು. ಅಲ್ಲಿ ಅರವತ್ತು ಲಕ್ಷ ಯಹೂದ್ಯರ ಕೊಲೆಯಾಗಿತ್ತು. ಅಲ್ಲಿ ಸಾವಿನ ದೇವತೆಯೆಂದು ಹೆಸರಾಗಿದ್ದ, ಮಹಾ ಕ್ರೂರಿ ವೈದ್ಯ ಮೆಂಗಲೆಯನ್ನು ಕಂಡರು. ಹದಿನೆಂಟು ತಿಂಗಳು ನರಕವನ್ನು ಅನುಭವಿಸಿ ಕೊನೆಗೆ ಯುದ್ಧ ಮುಗಿದು, ಬಿಡುಗಡೆಯಾದಾಗ ಆತನ ತೂಕ ಇಪ್ಪತ್ತೈದು ಕಿಲೋ ಗ್ರಾಂ ಇತ್ತು. ಆದರೆ ಹೊರ ಬಂದ ಮೇಲೆ ಹರ್ಶ, ಶಾಲೆ ಶಾಲೆಗಳಿಗೆ, ಸಮುದಾಯಗಳಿಗೆ ಭೆಟ್ಟಿ ನೀಡಿ ಆತ್ಮೀಯತೆಯ ಬಗ್ಗೆ, ಸ್ನೇಹದ, ನಲುಮೆಯ ಬಗ್ಗೆ ಮಾತನಾಡಿ ಜನರನ್ನು ಪ್ರೇರೇಪಿಸಿದರು. ಇದನ್ನೇ ಕಗ್ಗ ಪುರಷತನದ ವಿಜಯ ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.