ADVERTISEMENT

ಬೆರಗಿನ ಬೆಳಕು: ಬದುಕೊಂದು ಕದನ

ಡಾ. ಗುರುರಾಜ ಕರಜಗಿ
Published 23 ಮಾರ್ಚ್ 2022, 19:30 IST
Last Updated 23 ಮಾರ್ಚ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬದುಕು ಕದನದ ತೆರನೆ; ನೋಡೆ ಲೀಲೆಯ ಕದನ |
ಮೊದಲುಮುಗಿವುಗಳಿರದ ಚಿತ್ರಲೀಲೆಯದು ||
ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ|
ಸದರದಾಟವೆ ಮುಖ್ಯ – ಮಂಕುತಿಮ್ಮ || 591 ||

ಪದ-ಅರ್ಥ: ತೆರನೆ=ತರಹ, ಮೊದಲುಮುಗಿವುಗಳಿರದ=ಮೊದಲು+ಮುಗಿವುಗಳು (ಅಂತ್ಯ)+ಇರದ, ಇದರೊಳೆಂದಿಗುಮಿರದು=ಇದರೊಳ್+ಎಂದಿಗುಂ+ಇರದು, ಸೋಲ್ಗೆಲವು=ಸೋಲು+ಗೆಲುವು, ಕಡೆಯೆಣಿಕೆ=ಕೊನೆಯ ಲೆಕ್ಕ, ಸದರದಾಟ=ಸದರದ (ಸಲುಗೆಯ)+ಆಟ.

ವಾಚ್ಯಾರ್ಥ: ಜೀವನ ಒಂದು ಕದನವಿದ್ದಂತೆ. ಅದನ್ನು ಗಮನಿಸಿದರೆ ಅದು ಒಂದು ಲೀಲೆಯ ಕದನ. ಇದು ಕೊನೆಮೊದಲಿಲ್ಲದ ದೃಶ್ಯಲೀಲೆ. ಇದರಲ್ಲಿ ಎಂದಿಗೂ ಕೊನೆಯಲ್ಲಿ ಸೋಲು, ಗೆಲುವುಗಳೆಂಬುದು ಇಲ್ಲ. ಇಲ್ಲಿ ಸಲುಗೆಯ ಆಟವೇ ಮುಖ್ಯ.

ADVERTISEMENT

ವಿವರಣೆ: ಇಡೀ ಪ್ರಪಂಚದ ಇತಿಹಾಸವೇ ನಿರಂತರ ಕದನದ ವಾರ್ತೆ. ವಚನಭಂಡಾರಿ ಶಾಂತರಸ ಇದನ್ನು ಧ್ವನಿಪೂರ್ಣವಾಗಿ ಹೇಳುತ್ತಾನೆ.

ಅಂಗಕೋಟೆ, ಭುಜ ಆಳುವೇರಿ, ತಲೆತೆನೆ, ಕಣ್ಣು ಅಂಬುಗಂಡಿ, ಕಾದುವ ಅರಸು ಅಸುರಾಜ, ಕೂಟದ ಮನ್ನೆಯರು ಐದು ಮಂದಿ.
ಎಂಟು ಘಟೆಯಾನೆ, ಪಂಶವಿಂಶತಿ ಕುದುರೆ, ಆಳು ಪರಿವಾರ ಕರಣಂಗಳ ಮೊತ್ತ ಕೂಡಿ ಇರಿಯಿತ್ತು. ಅರಿರಾಜ ತಮವಿರೋಧಿಯೊಡನೆ ಮುರಿದ, ಅಸುರಾಜ ಪಶುಪತಿಯ ಗೆದ್ದ. ಎನಗಾಯಿತ್ತು ಹೇಳಾ, ಅಲೇಖನಾದ ಶೂನ್ಯ ಕಲ್ಲಿನೊಳಗಾದನೆ?

ಈ ವಚನದ ಅಧ್ಯಾತ್ಮಿಕ ಅರ್ಥದ ಆಳಕ್ಕೆ ಹೋಗುವುದು ಪ್ರಸಕ್ತದಲ್ಲಿ ಅಗತ್ಯವಿಲ್ಲ. ಆದರೆ ವಚನ ಒಂದು ಯುದ್ಧವನ್ನು ಕಣ್ಣ ಮುಂದೆ ತರುತ್ತದೆ. ಕೊನೆಗೆ ಜೀವದ ರಾಜ (ಅಸುರಾಜ) ಪಶುಪತಿಯ ಮನಸ್ಸನ್ನು ಗೆದ್ದ. ಈ ಯುದ್ಧದಲ್ಲಿ ಭಾಗಿಗಳಾದವರು ಯಾರು? ದೇಹವೇ ಕೋಟೆ, ಭುಜ ಆಳು. ಅರಸ ಹೋರಾಟ ಮಾಡುವಾಗ ಅವನ ಜೊತೆಗೆ ಐದು ಕೂಟದ ಮನ್ನೆಯರು ಅಂದರೆ ನಾಯಕರಿದ್ದಾರೆ. ಎಂಟು ಆನೆಗಳು, ಇಪ್ಪತ್ತೈದು ಕುದುರೆಗಳು, ಆಳು, ಪರಿವಾರ ಮತ್ತು ಉಪಕರಣಗಳೊಂದಿಗೆ ಯುದ್ಧ ನಡೆಯಿತು. ಅರಸನ ಕೂಟದ ಮನ್ನೆಯರು ಪಂಚೇಂದ್ರಿಯಗಳು. ನಮ್ಮನ್ನು ದಿಕ್ಕುದಿಕ್ಕುಗಳಿಗೆ ಅಲೆಸುವ ಪ್ರಚಂಡ ಅಸ್ತ್ರಗಳು ಪಂಚೇಂದ್ರಿಯಗಳು. ಅವುಗಳೊಂದಿಗೆ ಎಂಟು ಮದದಾನೆಗಳು. ಇವು ಎಂಟು ವಿಧದ ಮದಗಳು, ಅಹಂಕಾರಗಳು. ಪಂಚವಿಂಶತಿ ಕುದುರೆಗಳೆಂದರೆ ಇಪ್ಪತ್ತೈದು ತಾತ್ವಿಕ ನೆಲೆಗಳು. ಇವೆಲ್ಲವುಗಳು ಯುದ್ಧಸಾಮಗ್ರಿಗಳು. ಇದು ಸತ್ಯ-ಅಸತ್ಯಗಳ, ಜ್ಞಾನ-ಅಜ್ಞಾನಗಳ, ಮೃತ್ಯು-ಚಿರಂಜೀವಿತ್ವದ ನಡುವಿನ ಹೋರಾಟ. ಈ ಹೋರಾಟ ಕೇವಲ ವ್ಯಕ್ತಿಗಳ ನಡುವಿನದ್ದಲ್ಲ. ಹಾಗೇನಾದರೂ ಇದ್ದರೆ ಯುದ್ಧಕ್ಕೊಂದು ಮುಕ್ತಾಯವಿರುತ್ತಿತ್ತು.

ಕಗ್ಗ ತಿಳಿಸುತ್ತದೆ, ಈ ಕದನ, ಲೀಲೆಯ ಕದನ, ಮೊದಲು ಮುಗಿವುಗಳಿರದ ಕದನ. ಇದೊಂದು ಕಣ್ಣಿಗೆ ಕಾಣಿಸುವ, ಅನುಭವಿಸುವ ಲೀಲೆ. ಇದರಲ್ಲಿ ಸೋಲು-ಗೆಲುವು ಎಂಬುದಿಲ್ಲ. ಕೆಲವು ಬಾರಿ ಒಂದು ಗೆದ್ದಂತೆ ತೋರಿದರೂ ಕಾಲಕ್ರಮದಲ್ಲಿ ಇನ್ನೊಂದು ವಿಜಯಿಯಾದದ್ದು ಕಾಣುತ್ತದೆ. ಕೊನೆಯ ಲೆಕ್ಕದಲ್ಲಿ ಸೋಲು-ಗೆಲವು ಎನ್ನುವುದಕ್ಕೆ ಅರ್ಥವೇ ಇಲ್ಲ. ಆದ್ದರಿಂದ ಈ ಅನಂತಕಾಲದಲ್ಲಿ ಬಿಂದುವನಂತಿರುವ ನಾವು ಮಾಡಬಹುದಾದದ್ದೇನು? ಈ ಕದನದಲ್ಲಿ, ಕುತೂಹಲದ ಹೋರಾಟದಲ್ಲಿ, ಪ್ರೀತಿಯಿಂದ, ಸದರದಿಂದ ಆಟವಾಡಿ, ಸಂತೋಷಪಟ್ಟು ತೆರಳುವುದು. ಇದು ಆಟವೆಂಬುದನ್ನು ಮರೆಯದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.