ADVERTISEMENT

ಬೆರಗಿನ ಬೆಳಕು: ಎತ್ತರದ ಗುರಿ

ಡಾ. ಗುರುರಾಜ ಕರಜಗಿ
Published 22 ನವೆಂಬರ್ 2022, 19:01 IST
Last Updated 22 ನವೆಂಬರ್ 2022, 19:01 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಧಾರುಣಿಯ ನಡೆಗೆಯಲಿ ಮೇರುವಿನ ಗುರಿಯಿರಲಿ |

ಮೇರುವನು ಮರೆತಂದೆ ನಾರಕಕೆ ದಾರಿ ||
ದೂರವಾದೊಡದೇನು? ಕಾಲು ಕುಂಟಿರಲೇನು ? |
ಊರನೆನಪೇ ಬಲವೊ-ಮಂಕುತಿಮ್ಮ || 762 ||

ಪದ-ಅರ್ಥ: ಧಾರುಣಿಯ=ಭೂಮಿಯ, ಮೇರುವಿನ=ಪರ್ವತದ, ನಾರಕ=ನರಕ, ದೂರವಾದೊಡದೇನು=ದೂರವು+ಆದೊಡೆ+ಏನು,

ADVERTISEMENT

ವಾಚ್ಯಾರ್ಥ: ಜಗತ್ತಿನಲ್ಲಿ ಬದುಕುವಾಗ ಉನ್ನತವಾದ ಗುರಿ ಇರಲಿ. ಎಂದು ಈ ಔನ್ನತ್ಯವನ್ನು ಮರೆಯುತ್ತೇವೆಯೋ ಅಂದೇ ನರಕಕ್ಕೆ ದಾರಿ. ನಮ್ಮ ಗುರಿ ಅದೆಷ್ಟು ದೂರವಿದ್ದರೇನು, ಅಡಚಣೆಗಳು ಬಂದರೆನು, ಗುರಿಯ ನೆನಪೇ ಬಲವನ್ನು ನೀಡುತ್ತದೆ.

ವಿವರಣೆ: ಐಸಾಕ್ ಅಸಿಮೋವ್ ಎಂಬ ಒಬ್ಬ ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಲೇಖಕ ತನ್ನ ಪ್ರಮುಖ ಗ್ರಂಥದ ಮುನ್ನುಡಿಯಲ್ಲಿ ಒಂದು ಮಾತನ್ನು ಬರೆಯುತ್ತಾನೆ. “ಇಡೀ ಪ್ರಪಂಚದ ಇತಿಹಾಸವನ್ನು
ಗಮನಿಸಿದರೆ ಎಷ್ಟೋ ಲಕ್ಷ ಜನರಲ್ಲಿ ಒಬ್ಬ ಮಾತ್ರ ತನ್ನ ಹೆಜ್ಜೆಯ ಗುರುತನ್ನು ಮುಂದಿನ ತಲೆಮಾರಿಗೆ ಬಿಟ್ಟು ಹೋಗಿದ್ದಾನೆ. ಉಳಿದವರು ಹುಳಗಳಂತೆ, ಅನಾಮಧೇಯರಾಗಿ ಕರಗಿ ಹೋಗಿದ್ದಾರೆ”. ಯಾರಿಗೆ ಕೇವಲ ಹೊಟ್ಟೆ, ಬಟ್ಟೆ, ಮನೆಗಳ ಚಿಂತೆಗಿಂತ ಹೆಚ್ಚಿನದ್ದೇನಾದರೂ ಕಂಡಿತೋ, ಅವರು ಆ ಗುರಿಯ ಕಡೆಗೆ ಸಾಗಿದರು. ಯಾರು ತುಂಬ ಎತ್ತರದ ಗುರಿಗಳನ್ನು ಇಟ್ಟುಕೊಂಡು, ಅದನ್ನೇ ಜೀವನದ
ಪರಮಗುರಿಯೆಂದು ಅಹರ್ನಿಶಿ ದುಡಿದರೋ ಅವರು ಧೀರರಾದರು, ನಾಯಕರಾದರು, ಜಗದ್ವಂದ್ಯರಾದರು, ದೇವರಾದರು. ಪ್ರತಿಯೊಬ್ಬರಿಗೂ ಒಂದು ಗುರಿ ಇದ್ದೇ ಇದೆ ಎಂದು ನಂಬುತ್ತೇವೆ. ಆದರೆ ಬದುಕಿನಲ್ಲಿ ಒಂದೇ ಗುರಿ ಇರುವುದು ಅಸಾಧ್ಯ. ನಮಗಿರುವುದು ಗುರಿಗಳ ಸಾಲು. ಹತ್ತನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗೆ ಬರುವ ಪರೀಕ್ಷೆಯಲ್ಲಿ ಅತಿ ಹೆಚ್ಚು ಗುಣಗಳನ್ನು ಪಡೆಯುವ ಗುರಿ. ಅದು ಮುಗಿದ ಮೇಲೆ ಪಿ.ಯು. ಕಾಲೇಜಿನಲ್ಲಿ ಹೆಚ್ಚು ಮಾರ್ಕುಗಳನ್ನು ಪಡೆಯುವ ಗುರಿ, ಅಪೇಕ್ಷಿತ ಪದವಿಯನ್ನು ಹೊಂದುವ ಗುರಿ, ಉತ್ತಮ ಕೆಲಸದ ಗುರಿ, ಮದುವೆಯ ಗುರಿ, ಕೆಲಸದಲ್ಲಿ ಉನ್ನತಿಯ ಗುರಿ, ಮನೆ ಕಟ್ಟುವ, ದೊಡ್ಡ ಕಾರು ಕೊಳ್ಳುವ ಗುರಿ, ಹೀಗೆ ಗುರಿಗಳು ಬದಲಾಗುತ್ತಲೇ ಇರುತ್ತವೆ. ಇವೆಲ್ಲ ಸ್ವಕೇಂದ್ರಿತ ಗುರಿಗಳು. ಅವು ನಮ್ಮನ್ನು ಸುಖವಾಗಿ

ಇಡಬಲ್ಲವೇ ವಿನ: ದೊಡ್ಡವರರನ್ನಾಗಿ ಮಾಡಲಾರವು. ಅವು ಸ್ವಾರ್ಥಮೂಲವಾದವುಗಳು. ಈ ಪರಿಧಿಯನ್ನು ದಾಟಿ, ನಾನು, ನನ್ನದು ಎಂಬುದನ್ನು ಕೊಂಚ ಬದಿಗೆ ಸರಿಸಿ ಪರಕೇಂದ್ರಿತ
ಗುರಿಗಳನ್ನು ಗುರುತಿಸಿ, ಅವುಗಳನ್ನು ಬೆನ್ನಟ್ಟಿದರೆ ಬದುಕಿಗೆ ಸಾರ್ಥಕ್ಯ, ಜೀವ ಕೊಟ್ಟ ದೊರೆಯ ಋಣ ತೀರಿಸಿದ ಆನಂದ. ಅದಕ್ಕೇ ಕಗ್ಗ ತಿಳಿಸುತ್ತದೆ, ಜೀವನದ ನಡೆಗೆಯಲ್ಲಿ ಗುರಿ ಉದಾತ್ತವಾಗಿರಲಿ, ಕೇವಲ ಸ್ವಾರ್ಥಪೂರಿತವಾಗದಿರಲಿ. ಡಾ. ಕಲಾಂ ಹೇಳುತ್ತಿದ್ದರು, “ಸಣ್ಣ ಗುರಿ ಒಂದು ಅಪರಾಧ”. ಎಂದು ನಾವು ಉನ್ನತವಾದ ಆದರ್ಶಗಳ ಗುರಿಯನ್ನು ಮರೆಯುತ್ತೇವೆಯೋ ಅಂದೇ ನಮ್ಮ ಬದುಕು ಚಿಕ್ಕದಾಗಿ ಸೊರಗಿ ಹೋಗುತ್ತದೆ. ಅದನ್ನು ಕಗ್ಗ ‘ನಾರಕಕೆ ದಾರಿ’ ಎನ್ನುತ್ತದೆ. ಗುರಿ ದೊಡ್ಡದಿರಬಹುದು, ಕೆಲವೊಮ್ಮೆ ಅಸಾಧ್ಯವೆಂದೇ ತೋರಬಹುದು. ಆದರೆ ಪ್ರಯತ್ನವನ್ನು ಬಿಡದಿರಬೇಕು. ಆ ಗುರಿಯ ಸದಾ ಕಾಲದ ನೆನಪು, ನಮ್ಮ ಕೊರತೆಗಳನ್ನು, ಅನನುಕೂಲತೆಗಳನ್ನು ಮರೆಯಿಸಿ ಮತ್ತೆ ಉತ್ಸಾಹಿಗಳನ್ನಾಗಿ ಮಾಡುತ್ತದೆ. ಅದನ್ನು ಕಾವ್ಯಮಯವಾಗಿ ಕಗ್ಗ, “ಊರನೆನಪೇ ಬಲವೋ” ಎನ್ನುತ್ತದೆ. ಮಹತ್ತರವಾದ ಗುರಿ, ನಮ್ಮ ಊರು. ಅದರ ನೆನಪು ನಮ್ಮನ್ನು ಬಲವಾಗಿ ಪ್ರೇರೇಪಿಸಿ ಕಾರ್ಯೋನ್ಮುಖರನ್ನಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.