ADVERTISEMENT

ಬೆರಗಿನ ಬೆಳಕು: ಇದೂ ಕಳೆದು ಹೋಗುತ್ತದೆ

ಡಾ. ಗುರುರಾಜ ಕರಜಗಿ
Published 28 ಸೆಪ್ಟೆಂಬರ್ 2022, 19:31 IST
Last Updated 28 ಸೆಪ್ಟೆಂಬರ್ 2022, 19:31 IST
   

ಕಡಲ್ಗಳೊಂದಾದೊಡಂ, ಪೊಡವಿ
ಹಬೆಯಾದೊಡಂ |
ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ ||
ಕಡಲ ನೆರೆ ತಗ್ಗುವುದು, ಪೊಡವಿ
ಧೂಳಿಳಿಯುವುದು |
ಗಡುವಿರುವುದೆಲ್ಲಕಂ – ಮಂಕುತಿಮ್ಮ || 725 ||

ಪದ-ಅರ್ಥ: ಕಡಲ್ಗಳೊಂದಾದೊಡಂ=ಕಡಲ್ಗಳು(ಸಮುದ್ರಗಳು)+ಒಂದು +ಆದೊಡಂ, ಪೊಡವಿ=ಭೂಮಿ, ಹಬೆಯಾದೊಡಂ=ಹಬೆ (ಆವಿ)+ಆದೊಡಂ(ಆದರೂ),ಬಿಡದಿರೊಳನೆಮ್ಮದಿಯ=ಬಿಡದಿರು+ಒಳ+ನೆಮ್ಮದಿಯ,
ಧೂಳಿಳಿಯುವುದು=ಧೂಳು+ಇಳಿಯುವುದು, ಗಡುವಿರುವುದೆಲ್ಲಕಂ=ಗಡವು(ನಿಗದಿತ
ವೇಳೆ)+ಇರುವುದು+ಎಲ್ಲಕಂ (ಎಲ್ಲಕ್ಕೂ).

ವಾಚ್ಯಾರ್ಥ: ಉಕ್ಕೇರಿ ಪ್ರಪಂಚದ ಎಲ್ಲ ಸಮುದ್ರಗಳು ಒಂದಾದರೂ, ಭೂಮಿ ಆವಿಯಾದರೂ ನಿನ್ನ ಅಂತರಂಗದ ನೆಮ್ಮದಿಯನ್ನು ಕಳೆದುಕೊಳ್ಳಬೇಡ. ಗಾಬರಿಯಾಗಬೇಡ. ಎಲ್ಲದಕ್ಕೂ ಅದರದೇ ಸಮಯವಿದೆ. ನಂತರ ಸಮುದ್ರದ ನೆರೆ ಇಳಿದು ಶಾಂತವಾಗುತ್ತದೆ. ಭೂಮಿ ತಂಪಾಗಿ ಧೂಳು
ಕಳೆಯುತ್ತದೆ.
ವಿವರಣೆ: ಸೂಫೀ ಸಂತ ಕವಿ ಜಲಾಲುದ್ದೀನ್ ರೂಮಿ ಮತ್ತು ಫರೀದುದ್ದೀನ್ ಅತ್ತಾರ ಇಬ್ಬರೂ ಒಂದು ಸುಂದರ ಕಥೆಯನ್ನು ಬರೆದಿದ್ದಾರೆ. ಆ ಕಥೆಯಲ್ಲಿ ಒಬ್ಬ ತರುಣ, ವಿದ್ವಾಂಸ ಮರಾಂಜಬ್ ಮರುಭೂಮಿಯಲ್ಲಿ ಪ್ರವಾಸ ಮಾಡುತ್ತಿದ್ದ. ನಡೆನಡೆದು ನೆಲೆಸಿಗದೆ ಕಂಗಾಲಾಗಿದ್ದ. ಸಂಜೆಯ ಹೊತ್ತಿಗೆ ಒಂದು ಊರು ಕಂಡಿತು. ಅಲ್ಲೊಬ್ಬ ಅತ್ಯಂತ ಶ್ರೀಮಂತ ರೈತ. ಆತ ಈ ತರುಣನಿಗೆ ಇರುವುದಕ್ಕೆ ಮತ್ತು ಊಟಕ್ಕೆ ವ್ಯವಸ್ಥೆ ಮಾಡಿದ. ತರುಣನನ್ನು ನಾಲ್ಕೆಂಟು ದಿನ ಇಟ್ಟುಕೊಂಡು ಪ್ರೀತಿಯಿಂದ ನೋಡಿಕೊಂಡ.

ADVERTISEMENT

ತರುಣ ಯಜಮಾನನ ಶ್ರೀಮಂತಿಕೆ ಮತ್ತು ಕರುಣೆಯನ್ನು ಕಂಡು ಬೆರಗಾದ. ಅಲ್ಲಿಂದ ಹೊರಡುವ ಮುನ್ನ ಯಜಮಾನನಿಗೆ ತನ್ನ ಗೌರವ, ಕೃತಜ್ಞತೆಗಳನ್ನು ತೋರಿಸಿ, ಅವನ ಶ್ರೀಮಂತಿಕೆಯನ್ನು ಹೊಗಳಿದ. ಯಜಮಾನ ಮುಗುಳ್ನಕ್ಕು, “ಇದೂ ಕಳೆದು ಹೋಗುತ್ತದೆ” ಎಂದ. ಅರ್ಥವಾಗದೆ ತರುಣ ಹೊರಟ. ವರ್ಷಗಳು ಉರುಳಿದವು. ವಿದ್ವಾಂಸ ಮತ್ತೆ ಅದೇ ಮರಾಂಜಬ್ ಮರುಭೂಮಿಯಲ್ಲಿ ಸಾಗಿ ತಾನು ಹಿಂದೆ ಇದ್ದ ಶ್ರೀಮಂತನ ಮನೆಗೆ ಬಂದ. ಅಲ್ಲಿಯ ಅವಸ್ಥೆ ಕಂಡು ಗಾಬರಿಯಾದ. ಮಹಾಪೂರ ಬಂದು ಅವನ ಹೊಲ, ಆಸ್ತಿಯೆಲ್ಲ ಕೊಚ್ಚಿ ಹೋಗಿದೆ. ಈಗ ಅವನೇ ನಿರಾಶ್ರಿತನಾಗಿ ಬೇರೆಯವರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ವಿದ್ವಾಂಸನಿಗೆ ಅತ್ಯಂತ ದುಃಖವಾಯಿತು. ಅದನ್ನು ಯಜಮಾನನಿಗೆ ಹೇಳಿದಾಗ ಆತ ಅದೇ ಹಿಂದಿನ ಪ್ರೀತಿಯ ನಗೆಯನ್ನು ಬೀರಿ, “ಇದೂ ಕಳೆದು ಹೋಗುತ್ತದೆ” ಎಂದ! ಈಗ ವಿದ್ವಾಂಸನಿಗೆ ವಯಸ್ಸಾಗಿದೆ. ಅವನನ್ನು ಒಬ್ಬ ರಾಜ ಕರೆಸಿಕೊಂಡ. ಹೆಂಡತಿ ಮಕ್ಕಳನ್ನು ಕಳೆದುಕೊಂಡು ಆತ ದುಃಖಿತನಾಗಿದ್ದಾನೆ. ಅವನಿಗೆ ಸಮಾಧಾನಬೇಕಿದೆ. ವಿದ್ವಾಂಸ ಒಂದು ಬಂಗಾರದ ಉಂಗುರವನ್ನು ಮಾಡಿಸಿ ಅದರ ಮೇಲೆ “ಇದೂ ಕಳೆದುಹೋಗುತ್ತದೆ” ಎಂದು ಕೆತ್ತಿಸಿದ್ದ. ರಾಜನಿಗೆ ಸಮಾಧಾನವಾಯಿತು. ಈ ಹೇಳಿಕೆ, ಅಹಂಕಾರದಲ್ಲಿದ್ದವರಿಗೆ ಎಚ್ಚರಿಕೆಯನ್ನು ಮತ್ತು ದುಃಖದಲ್ಲಿದ್ದವರಿಗೆ ಸಾಂತ್ವನವನ್ನು ನೀಡುತ್ತದೆ. ಈ ಕಗ್ಗದ ತಾತ್ವರ್ಯವೂ ಅದೇ. ಸಮುದ್ರಗಳು ಉಕ್ಕೇರಲಿ, ಭೂಮಿ ಆವಿಯಾಗಲಿ, ನಿನ್ನ ಮನಸ್ಸಿನ ಸ್ಥಿಮಿತತೆಯನ್ನು ಕಳೆದುಕೊಳ್ಳಬೇಡ. ಯಾಕೆಂದರೆ ಯಾವುದೂ ಶಾಶ್ವತವಲ್ಲ. ಅದೂ ಕಳೆದುಹೋಗುತ್ತದೆ. ಸಮುದ್ರದ ನೆರೆತ ನಿಂತು ಶಾಂತವಾಗುತ್ತದೆ. ಭೂಮಿ ತಂಪಾಗುತ್ತದೆ. ಎಲ್ಲದಕ್ಕೂ ಒಂದು ಸಮಯ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.