ADVERTISEMENT

ಬೋಧನೆಯ ಅವಶ್ಯಕತೆ

ಡಾ. ಗುರುರಾಜ ಕರಜಗಿ
Published 12 ಡಿಸೆಂಬರ್ 2019, 20:00 IST
Last Updated 12 ಡಿಸೆಂಬರ್ 2019, 20:00 IST
   

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಬ್ರಾಹ್ಮಣಕುಲದಲ್ಲಿ ಹುಟ್ಟಿದ್ದ. ಆತ ತಕ್ಕಶಿಲೆಗೆ ಹೋಗಿ ಸಕಲವಿದ್ಯೆಗಳನ್ನು ಕಲಿತು ಬಂದ. ಆತ ಆಚಾರ್ಯರೊಬ್ಬರನ್ನು ಆಶ್ರಯಿಸಿ ಮುಂದೆಕಲಿಯುತ್ತಲೇಇದ್ದ. ಅವನ ಹೆಸರು ಕಾರಂಡಿಯ.

ಅವನ ಗುರುಗಳಾದ ಆಚಾರ್ಯರಿಗೆ ಒಂದು ವಿಚಿತ್ರ ಹವ್ಯಾಸವಿತ್ತು. ಅವರಿಗೆ ಜನರ ಬಗ್ಗೆ ವಿಪರೀತ ಕಳಕಳಿ ಹಾಗೂ ವಿಶೇಷ ಪ್ರೀತಿ. ಎಲ್ಲ ಜನರೂ ಒಳ್ಳೆಯವರಾಗಿ ಬಿಡಬೇಕು ಎಂಬುದು ಅವರ ಅಪೇಕ್ಷೆ. ಅದಕ್ಕೆ ಅವರು ಎಲ್ಲರಿಗೂ, ದಾರಿಯಲ್ಲಿ ಸಿಕ್ಕವರಿಗೂ ಧರ್ಮಬೋಧೆ ಮಾಡುವುದಲ್ಲದೆ, ‘ನಾಳೆ ಆಶ್ರಮಕ್ಕೆ ಬಂದು ಬಿಡು, ನಿನಗೆ ದೀಕ್ಷೆ ಕೊಡುತ್ತೇನೆ. ನೀನು ಅತ್ಯಂತ ಧಾರ್ಮಿಕ ಮನುಷ್ಯನಾಗುತ್ತೀ’ ಎಂದು ಹೇಳಿ ದುಂಬಾಲು ಬೀಳುತ್ತಿದ್ದರು. ಅವರನ್ನು ಭೇಟಿಯಾದ ಬಹಳಷ್ಟು ಜನರು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಕ್ಕು ಮುಂದೆ ಹೋಗಿಬಿಡುತ್ತಿದ್ದರು. ಕೆಲವರು ಇದೇನು ಪೀಡೆ ಎಂದು ಸಿಟ್ಟು ಮಾಡಿಕೊಳ್ಳುತ್ತಿದ್ದರು.

ಆಗ ಆಚಾರ್ಯರ ಶಿಷ್ಯರು ಗುರುಗಳಿಗೆ ಹೇಳಿ ನೋಡಿದರು, ‘ಗುರುಗಳೇ ನೀವು ಯಾಕೆ ಕಂಡಕಂಡವರಿಗೆ ದೀಕ್ಷೆ ನೀಡಬೇಕೆನ್ನುತ್ತೀರಿ? ಬೇಕಾದವರು ಬಂದು ಕೇಳಲಿ. ಉಳಿದವರ ಉಸಾಬರಿ ನಮಗೇಕೆ?’. ಆಚಾರ್ಯರಿಗೆ ಈ ಮಾತಿನಿಂದ ಬೇಸರವಾದರೂ ತಮ್ಮ ದಿನನಿತ್ಯದ ಅಭ್ಯಾಸವನ್ನು ಬಿಡಲಿಲ್ಲ. ಹೀಗಿರುವಾಗ ಒಂದು ದಿನ ಹತ್ತಿರದ ಹಳ್ಳಿಯಲ್ಲಿ ಒಂದು ಧರ್ಮ ಸಂಕೀರ್ತನೆಯನ್ನು ಆಯೋಜಿಸಲಾಗಿತ್ತು. ಅದಕ್ಕೆ ಅಲ್ಲಿಯ ಜನ ಆಚಾರ್ಯರನ್ನು ಹಾಗೂ ಶಿಷ್ಯರನ್ನು ಆಮಂತ್ರಿಸಿದ್ದರು. ಗುರುಗಳು ಶಿಷ್ಯರನ್ನು ಕರೆದು, ‘ಈ ಕಾರ್ಯಕ್ರಮವನ್ನು ನೀವೆಲ್ಲರೂ ಹೋಗಿ ನಡೆಸಿ ಬನ್ನಿ. ಬರುವಾಗ ಅವರು ನಮಗೆ ನೀಡುವ ಕಾಣಿಕೆಯನ್ನು ತೆಗೆದುಕೊಂಡು ಬನ್ನಿ’ ಎಂದು ಹೇಳಿದರು. ಶಿಷ್ಯರು ಅದರಂತೆ ಹೋಗಿ ಕಾರ್ಯಕ್ರಮವನ್ನು ನಡೆಸಿ ಅವರು ಕೊಟ್ಟ ಕಾಣಿಕೆಗಳನ್ನು ತೆಗೆದುಕೊಂಡು ಮರಳಿ ಬರುತ್ತಿರುವಾಗ ದಾರಿಯಲ್ಲಿ ಕಾಡು ಬಂದಿತು. ದಾರಿಯ ಬದಿಯಲ್ಲಿ ಒಂದು ಆಳವಾದ ಕಣಿವೆ, ಬುಡಕಾಣದಷ್ಟು ಆಳದ ಕಣಿವೆ. ಅಲ್ಲಿ ಕಾರಂಡಿಯ ನಿಂತುಬಿಟ್ಟ. ಸುತ್ತಮುತ್ತ ಇದ್ದ ಸಣ್ಣಪುಟ್ಟ ಕಲ್ಲುಗಳನ್ನು ತಂದು ತಂದು ಕಣಿವೆಯಲ್ಲಿ ಬೀಸಾಡತೊಡಗಿದ. ಅವನು ಜೊತೆಗಾರರು ಕೇಳಿದರೆ, ‘ಕಲ್ಲುಗಳನ್ನು ಹಾಕಿ ಈ ಕಣಿವೆಯಲ್ಲಿ ತುಂಬಿಬಿಡುತ್ತೇನೆ’ ಎಂದ.ಅವರು ಎಷ್ಟು ಹೇಳಿದರೂ ಈತ ಕೇಳಲೊಲ್ಲ. ಅವರು ಆಶ್ರಮಕ್ಕೆ ಹೋಗಿ ಗುರುಗಳಿಗೆ ವಿಷಯ ತಿಳಿಸಿದರು. ಗುರುಗಳು ಬಂದು, ‘ಏನಪ್ಪಾ ಕಾರಂಡಿಯ, ಈ ಪರ್ವತದ ಕಂದರಗಳನ್ನು ತುಂಬಲು ಕಲ್ಲು ಹಾಕುತ್ತಿದ್ದೀಯಾ, ಏನು ಲಾಭ ನಿನಗೆ ಇದರಿಂದ?’ ಎಂದು ಕೇಳಿದರು. ಆಗ ಕಾರಂಡಿಯ, ‘ಗುರುಗಳೇ, ಏನಾದರಾಗಲಿ, ಎಲ್ಲ ಕಂದರಗಳನ್ನು ಕಲ್ಲುಗಳಿಂದ ತುಂಬಿ ಇಡೀ ಭೂಮಿಯನ್ನೇ ಚಪ್ಪಡಿಯಂತೆ ಹರಡಿ ಸಮ ಮಾಡಿ ಬಿಡುತ್ತೇನೆ’ ಎಂದ. ಆಗ ಗುರುಗಳು ನಗುತ್ತ ಹೇಳಿದರು, ‘ಹುಚ್ಚಾ, ನೀನು ಬದುಕಿರುವತನಕ ಕಲ್ಲುಗಳನ್ನು ಹಾಕುತ್ತಲೇ ಇದ್ದರೂ ಒಂದು ಕಂದರವನ್ನು ತುಂಬಲಾರೆ, ಇನ್ನು ಪ್ರಪಂಚದ ಎಲ್ಲ ಕಂದರಗಳನ್ನು ಹೇಗೆ ತುಂಬುತ್ತೀ? ಅದೂ ಅಲ್ಲದೆ ಈ ಕೆಲಸವನ್ನು ಮಾಡಲು ನಿನಗೆ ಯಾರಾದರೂ ಕೇಳಿದ್ದರೇ?’.

ADVERTISEMENT

ಆಗ ಕಾರಂಡಿಯ ಹೇಳಿದ, ‘ಗುರುಗಳೇ ನಾನು ಒಬ್ಬನೇ ಒಂದು ಕಂದಕವನ್ನು ಮುಚ್ಚಲು ಅಸಮರ್ಥನಾದರೆ ಒಬ್ಬರೇ ಗುರುಗಳು ಪ್ರಪಂಚದ ಎಲ್ಲರನ್ನೂ ಹೇಗೆ ಒಳ್ಳೆಯವರನ್ನಾಗಿ ಮಾಡಲು ಸಾಧ್ಯವೇ? ಹಾಗೆ ಅವರನ್ನೆಲ್ಲ ಸರಿ ಮಾಡಲು ಅವರಿಗೆ ಯಾರು ಹೇಳಿದರು?’ ಗುರುಗಳಿಗೆ ತಿಳಿಯಿತು ತಾವು ಮಾಡುವುದು ಸರಿಯಲ್ಲವೆಂದು. ತನ್ನ ಶಿಷ್ಯನಿಗೆ ಸಮಾಧಾನ ಮಾಡಿ ಕರೆದುಕೊಂಡು ಬಂದರು.

ಬದಲಾವಣೆ ಸಿದ್ಧವಿರುವವರಿಗೆ ಜ್ಞಾನ ಬೋಧನೆ ಬೇಕು. ಅದು ಬೇಡವೇ ಬೇಡ ಎನ್ನುವವರಿಗೆ ಬೋಧನೆ ಮಾಡುವುದು ಅನವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.