ADVERTISEMENT

ಬೆರಗಿನ ಬೆಳಕು | ಮನದ ಹದ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 20:24 IST
Last Updated 3 ಮಾರ್ಚ್ 2020, 20:24 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಸಾವತ್ತಿಯಲ್ಲಿ ಐದು ನೂರು ಜನ ಪ್ರವ್ರಜಿತರು ಬೋಧಿಸತ್ವನ ನೇತೃತ್ವದಲ್ಲಿ ಬದುಕಿ ಸಾಧನೆಗಳನ್ನು ಮಾಡುತ್ತಿದ್ದರು. ಅವರ ಮನಸ್ಸಿನಲ್ಲಿ ಆಗಾಗ ಬರುತ್ತಿದ್ದ ದೋಷಗಳನ್ನು ಬೋಧಿಸತ್ವ ಧ್ಯಾನದಿಂದ ಅರಿಯುತ್ತಿದ್ದ. ಅವುಗಳನ್ನು ಸರಿಪಡಿಸಿ ಪ್ರವ್ರಜಿತರ ಮನಸ್ಸುಗಳನ್ನು ದೋಷರಹಿತವನ್ನಾಗಿ ಮಾಡಲು ಆಗಾಗ ಬೋಧನೆ ಮಾಡುತ್ತಿದ್ದ. ಒಂದು ದಿನ ಆತ ಆ ಸಮೂಹಕ್ಕೆ ಹೇಳಿದ, ‘ನಿಮ್ಮ ಮನಸ್ಸನ್ನು ಸದಾಕಾಲ ವೀಣೆಯ ತಂತಿಯಂತೆ ಸರಿಯಾದ ಹದದಲ್ಲಿ ಇಟ್ಟುಕೊಂಡಿರಬೇಕು. ತುಂಬ ಬಿಗಿಯಾದರೆ ಹರಿದುಹೋಗುತ್ತದೆ, ಸಡಿಲವಾದರೆ ವೀಣೆಯ ಧ್ವನಿ ಕರ್ಕಶವಾಗುತ್ತದೆ. ಎಲ್ಲ ಸಮಯದಲ್ಲೂ ಮನಸ್ಸನ್ನು ಗಮನಿಸುತ್ತಲೇ ಇರಬೇಕು. ಅಲ್ಲಿ ಸ್ವಲ್ಪವಾದರೂ ದೋಷದ ಛಾಯೆ ಕಂಡುಬಂದರೆ ತಕ್ಷಣವೇ ಎಚ್ಚೆತ್ತುಕೊಂಡು ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಹೀಗೆ ಮನಸ್ಸು ಸಿದ್ಧಸ್ಥಿತಿಯಲ್ಲಿದ್ದಾಗ ಪ್ರತ್ಯೇಕ ಬುದ್ಧತ್ವ ದೊರಕುತ್ತದೆ’. ಬೋಧೆಯ ನಂತರ ಕಳಿಂಗ ರಾಷ್ಟ್ರ ರಾಜನ ಕಥೆಯನ್ನು ಹೇಳಿದ.

ಕಳಿಂಗದ ದಂತಪುರ ನಗರದಲ್ಲಿ ಕರಂಡು ಎಂಬ ರಾಜನಿದ್ದ. ಆತ ಒಂದು ಬಾರಿ ತನ್ನ ದೊಡ್ಡ ಪರಿವಾರದೊಂದಿಗೆ ಉದ್ಯಾನವನಕ್ಕೆ ಹೋಗುತ್ತಿದ್ದ. ಆನೆಯ ಮೇಲೆ ಕುಳಿತಿದ್ದ ರಾಜ ಸಾಗುತ್ತಿದ್ದಾಗ ಒಂದು ಮಾವಿನ ಮರದ ಕೆಳಗೆ ಹೋಗಬೇಕಾಗಿ ಬಂತು. ಅದು ಹಣ್ಣಿನ ಕಾಲ. ಮರದ ತುಂಬೆಲ್ಲ ಮಾವಿನಹಣ್ಣುಗಳು ಸುರಿದಿದ್ದವು. ರಾಜ ಆನೆಯ ಮೇಲೆ ಕುಳಿತಂತೆಯೇ ಕೈಚಾಚಿ ಒಂದು ಹಣ್ಣನ್ನು ಕಿತ್ತುಕೊಂಡ. ಹಾಗೆಯೇ ಇನ್ನೊಂದು ನಾಲ್ಕಾರು ಹಣ್ಣುಗಳನ್ನು ಕಿತ್ತು ತಮ್ಮ ಪರಿವಾರದ ಕೆಲವರಿಗೆ ಕೊಟ್ಟ. ನಂತರ ಮುಂದೆ ಸಾಗಿ ಉದ್ಯಾನವನದ ಮಂಗಲಶಿಲೆಯ ಮೇಲೆ ಕುಳಿತುಕೊಂಡು ಮಂತ್ರಿಗಳೊಡನೆ ವಿರಾಮವಾಗಿ ಮಾತನಾಡತೊಡಗಿದ.

ರಾಜ ಮುಂದೆ ಹೋದ ಮೇಲೆ ಅವನ ಹಿಂದಿದ್ದ ಪರಿವಾರದವರು ಬಿಟ್ಟಾರೆಯೆ? ರಾಜನೇ ಹಣ್ಣು ಕಿತ್ತು ಮಾದರಿ ಹಾಕಿದ ಮೇಲೆ ಹಿಂಬಾಲಕರು ಅತ್ಯಂತ ಉತ್ಸಾಹದಿಂದ ಮರವನ್ನೇರಿ, ಕೋಲಿನಿಂದ ಹಣ್ಣುಗಳನ್ನೆಲ್ಲ ಹೊಡೆದು ಕೆಡವಿದರು. ಮತ್ತೆ ಕೆಲವರು ಕೊಂಬೆಗಳನ್ನು ಮುರಿದು, ಎಲೆಗಳನ್ನು ತರಿದು, ಗಿಡವನ್ನು ಪೂರ್ತಿ ಬೋಳುಮಾಡಿದರು. ಕೆಳಗೆ ಬಿದ್ದಿದ್ದ ಹಸಿಕಾಯಿಗಳನ್ನು ತುಳಿದು, ಕುಟ್ಟಿ ಹಾಳು ಮಾಡಿದರು.

ADVERTISEMENT

ಸಂಜೆಯವರೆಗೆ ಉದ್ಯಾನವನದಲ್ಲಿ ಕ್ರೀಡಿಸಿದ ರಾಜ ಮತ್ತೆ ಅರಮನೆಗೆ ಮರಳಿ ಅದೇ ದಾರಿಯಲ್ಲಿ ಹೊರಟ. ಆನೆಯ ಮೇಲೆ ಬರುವಾಗ ಬೆಳಿಗ್ಗೆ ತಾನು ಕಂಡಿದ್ದ ಮಾವಿನಮರದ ಬಳಿ ಬಂದಾಗ ಅದನ್ನು ಕಂಡು ಆಶ್ಚರ್ಯಪಟ್ಟ. ಬೆಳಿಗ್ಗೆ ಫಲಭಾರದಿಂದ ಸುಂದರವಾದ ಪರ್ವತದಂತೆ ಕಂಗೊಳಿಸುತ್ತಿದ್ದ ಮಾವಿನಮರ ಈಗ ಬೋಳು ಗುಡ್ಡದಂತಾಗಿದೆ. ಫಲರಹಿತವಾಗಿ, ಯುದ್ಧದಲ್ಲಿ ಗಾಯಗೊಂಡು ನಿತ್ರಾಣನಾದ ಸೈನಿಕನಂತಾಗಿದೆ. ಅದು ಏಕೆ ಹೀಗಾಯಿತು ಎಂದು ರಾಜ ಕ್ಷಣಕಾಲ ಚಿಂತಿಸಿದ. ಫಲವಿಲ್ಲದ ಸಮಯದಲ್ಲಿ ನಾನು ಮರದ ಹತ್ತಿರ ಬಂದಿದ್ದರೆ ಮರಕ್ಕೆ ಯಾವ ಆಪತ್ತೂ ಇರುತ್ತಿರಲಿಲ್ಲ. ಅದರಲ್ಲಿ ತುಂಬಿದ್ದ ಹಣ್ಣುಗಳೇ ಆಕರ್ಷಣೆಯ ಕೇಂದ್ರಗಳಾಗಿ, ಜನರೆಲ್ಲ ಅವುಗಳನ್ನು ಅಪೇಕ್ಷಿಸಿ, ಕಿತ್ತಿದ್ದರಿಂದ ಮರಕ್ಕೆ ಈ ತೊಂದರೆ ಬಂದಿತು. ಅದರ ಫಲಗಳೇ ಕಷ್ಟಕ್ಕೆ ಕಾರಣವಾದವು. ಮನುಷ್ಯರ ಬದುಕೂ ಈ ಮರದಂತೆಯೆ. ಫಲಭರಿತ ಮರದಂತೆ ಹಣವಂತರಿಗೇ ಭಯ, ಬಡವರಿಗಲ್ಲ. ಹಾಗಾದರೆ ನನ್ನ ಹಣ, ಅಧಿಕಾರ, ದರ್ಪಗಳೂ ಕೂಡ ಬೇರೆಯವರಿಗೆ ಆಕರ್ಷಣೆಯಾಗಿ ನನಗೆ ಅಪಾಯಕಾರಿಯಾದರೆ ಆಶ್ಚರ್ಯವಿಲ್ಲ. ಹೀಗೆ ಫಲಭರಿತ ಮರವನ್ನು ಮನದಲ್ಲಿ ನೆನೆಸಿಕೊಂಡು, ನಾನಿನ್ನು ಹೀಗಿರುವುದು ನನ್ನ ಬದುಕಿನ ಏಳಿಗೆಗೆ ಒಳ್ಳೆಯದಲ್ಲ, ಪ್ರವ್ರಜಿತನಾಗುತ್ತೇನೆ ಎಂದು ಆ ಕ್ಷಣದಲ್ಲೇ ಎಲ್ಲವನ್ನೂ ತೊರೆದು ಪ್ರವ್ರಜಿತನಾಗಿ ಹಿಮಾಲಯಕ್ಕೆ ನಡೆದುಬಿಟ್ಟ.

ಬೋಧಿಸತ್ವ ಹೇಳಿದ, ‘ಮನಸ್ಸನ್ನು ಹದವಾಗಿಟ್ಟುಕೊಂಡಿದ್ದರಿಂದ ರಾಜ ಒಂದು ಘಟನೆಗೇ ತನ್ನನ್ನು ಪರಿವರ್ತಿಸಿಕೊಂಡ. ನೀವೂ ಹಾಗೆಯೇ ಇರಬೇಕು’ ಈ ಮಾತು ನಮಗೂ ಅನ್ವಯವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.