ADVERTISEMENT

ಬೆರಗಿನ ಬೆಳಕು: ಕನಸಿನಲ್ಲಿ ಕಂಡ ಅನುಭವದ ಮೊನೆ

ಡಾ. ಗುರುರಾಜ ಕರಜಗಿ
Published 23 ಫೆಬ್ರುವರಿ 2021, 18:36 IST
Last Updated 23 ಫೆಬ್ರುವರಿ 2021, 18:36 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು |
ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ||
ಜಳ್ಳು ಸುಖದು:ಖವಿರಬಹುದಾದೊಡದರ ಮೊನೆ |
ಮುಳ್ಳಹುದು ಜೀವಕ್ಕೆ – ಮಂಕುತಿಮ್ಮ || 390 ||

ಪದ-ಅರ್ಥ: ಚೆಲ್ಲಿತಲ್ಲವೆ= ಚೆಲ್ಲಿತು+ಅಲ್ಲವೆ, ಘಟವನವನೊದೆಯೆ= ಘಟವನು+ಅವನು+ಒದೆಯೆ, ಸುಖದು:ಖವಿರಬಹುದಾದೊಡದರ= ಸುಖದು:ಖ+ಇರಬಹುದು+ಆದೊಡೆ+ಅದರ,

ವಾಚ್ಯಾರ್ಥ: ತಿರುಕನ ಕನಸು ಕವನದಲ್ಲಿಯ ತಿರುಕನು ಕಂಡ ಸುಂದರವಾದ ಕನಸು ಸುಳ್ಳಲ್ಲ. ಅವನು ಮಡಕೆಯನ್ನು ಒದ್ದಾಗ ಹಿಟ್ಟು ಚೆಲ್ಲಿತಲ್ಲವೆ? ನಮಗೆ ಬರುವ ಸುಖ-ದು:ಖಗಳು ಜೊಳ್ಳೇ ಇರಬಹುದು. ಆದರೆ ಅವುಗಳ ಮೊನೆ ಬದುಕಿಗೆ ಮುಳ್ಳಾಗುತ್ತವೆ.

ADVERTISEMENT

ವಿವರಣೆ: ನಾವು ನಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಒಮ್ಮೆ ವಿರಾಮವಾಗಿ ಕುಳಿತು ಬದುಕನ್ನು ತಿರುಗಿ ನೋಡಿದಾಗ ಜೋಕಾಲಿಯಂಥ ಪ್ರಯಾಣ ಮನ ತುಂಬುತ್ತದೆ. ಬಾಲ್ಯದಲ್ಲಿ ಪಟ್ಟ ಕಷ್ಟ, ಬಡತನ, ಅದರಲ್ಲೇ ದೊರೆತ ಶಿಕ್ಷಣ, ಪ್ರೀತಿ ನೀಡಿದ ಗುರು, ಕಲಿಕೆಯಲ್ಲಿ ಪ್ರಶಸ್ತಿ ಪಡೆದ ಸಂಭ್ರಮ, ಆಗ ಆದ ಅಪಘಾತದ ನೋವು, ಒಳ್ಳೆಯ ಕೆಲಸ ಸಿಕ್ಕ ಸಂತೋಷ, ಮದುವೆಯ ಮಧುರಕ್ಷಣ, ಸಂಬಂಧಿಗಳ, ಆತ್ಮೀಯರ ಸಾವಿನ ದು:ಖ, ಹೊಸ ಮನೆ, ಮಕ್ಕಳು ಬೆಳೆಯುತ್ತ ನೀಡಿದ ಆನಂದ, ಕೆಲಸದಲ್ಲಿ ತೊಂದರೆ, ಮಧ್ಯವಯಸ್ಸು ದಾಟಿದಂತೆ ಬೆನ್ನತ್ತಿ ಬರುವ ಆರೋಗ್ಯ ಸಮಸ್ಯೆಗಳು, ಮಕ್ಕಳ ಸಾಧನೆಗಳು, ಅವರ ಮದುವೆ, ಹೊಂದಾಣಿಕೆಯಲ್ಲಿ ಕಿರಿಕಿರಿ, ಮನೆಬಿಟ್ಟು ಹೊರಗೆ ಹೋದ ಮಕ್ಕಳು, ಅದರಿಂದ ಅಪಾರ ಸಂಕಟ, ಮನೆಯಲ್ಲಿ ಮತ್ತೆ ಏಕಾಂಗಿ ಬದುಕು. ಸಂಭ್ರಮಸಿ ಕಟ್ಟಿಸಿದ ದೊಡ್ಡ ಮನೆ ಈಗ ಭೂತಬಂಗಲೆ, ಈ ಕ್ಷಣದಲ್ಲೇ ಮಕ್ಕಳು ಕಳುಹಿಸಿದ ಮೊಮ್ಮಗನ ಫೋಟೊ ಕಂಡ ಸಂತಸ, ಮತ್ತೆ ಹೊಸ ಚಿಗುರನ್ನು ಕಂಡು ಮುದಗೊಂಡ ಮನಸ್ಸು.

ಇಂದು ನಿಂತು, ಹಿಂದೆ ನೋಡಿದಾಗ ಇವೆಲ್ಲ ಆದದ್ದು ಒಂದು ಕನಸೇ ಎನ್ನಿಸುವುದಿಲ್ಲವೇ? ಎಷ್ಟು ಬೇಗ ಬದುಕು ಸರಿದು ಹೋಯಿತಲ್ಲ! ಹೋದದ್ದು ತಿಳಿಯಲೇ ಇಲ್ಲ. ಈಗ ನಮಗದು ಕನಸು ಎನ್ನಿಸಿದರೂ, ಆಗಿನ ಪ್ರತಿಯೊಂದು ಘಟನೆ ನೀಡಿದ ಸುಖದು:ಖಗಳ ಮೊನೆ ಇಂದಿಗೂ ಚುಚ್ಚುತ್ತವೆ. ದು:ಖವಂತೂ ಮೊನಚಾದ ಚುಚ್ಚಿಗೆಯೇ, ಅಂತೆಯೇ ಸುಖವೂ ಒಂದು ಚೂಪಾದ ಮೊನೆ. ಅದೊಂದು ಹಿತವಾದ ಕೆರೆತ. ಕೆರೆತ ರೋಗದ ಲಕ್ಷಣ.

ಇದು ಒಬ್ಬ ವ್ಯಕ್ತಿಯ ಜೀವನದ ಚಿತ್ರಣ. ಇದನ್ನು ಇಡೀ ಪ್ರಪಂಚಕ್ಕೆ ಅನ್ವಯಿಸಿದರೆ, ಇದುವರೆಗೂ ನಾವು ಯಾವುದನ್ನು ಇತಿಹಾಸವೆಂದು ಕರೆಯುತ್ತೇವೋ ಅದೆಲ್ಲ ಒಂದು ಕನಸಿನಂತೆ ಭಾಸವಾಗುತ್ತದೆ. ರಾಮ ನಿಜವಾಗಿ ಇದ್ದಾನೇ? ಕೃಷ್ಣ? ಬುದ್ಧ, ಮಹಾವೀರ? ಅವರೆಲ್ಲ ಬಂದು, ಬೆಳಕು ನೀಡಿ ಹೋದದ್ದು ಸತ್ಯವೇ ಎಂದು ಕೇಳುವಂತಾಗುತ್ತದೆ. ಅದರಂತೆ ಮನುಷ್ಯರು ಮನುಷ್ಯತ್ವವನ್ನು ಮರೆತು ರಾಕ್ಷಸರಂತೆ ಮಲೆತು ಲಕ್ಷಾಂತರ ಬದುಕುಗಳನ್ನು ಆಹುತಿಕೊಟ್ಟಿದ್ದೂ ನಿಜವೇ?

ಬದುಕು ಕನಸಲ್ಲ. ಕನಸಿನಂತೆ ಕಂಡರೂ ಅದು ನೀಡಿದ ಸುಖದು:ಖಗಳ ಅನುಭವ ನಮ್ಮ ಬದುಕನ್ನು ಬದಲಿಸುತ್ತದೆ. ಈ ಕಗ್ಗ ಮುಪ್ಪಿನ ಷಡಕ್ಷರಿ ಬರೆದ ತಿರುಕನ ಕನಸಿನ ಪದ್ಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಬಹುದೊಡ್ಡ ಸತ್ಯವನ್ನು ಹೇಳುತ್ತದೆ. ತಿರುಕ ಕಂಡದ್ದು ಸುಂದರವಾದ ಕನಸೇ ಇರಬಹುದು. ಆದರೆ ಒದ್ದಾಗ ಮಡಕೆ ಒಡೆದು ಹಿಟ್ಟು ಚೆಲ್ಲಿದ್ದು ಸುಳ್ಳಲ್ಲ. ಅಂತೆಯೇ ಬದುಕಿನಲ್ಲಿ ಕನಸಿನಂತೆ ಬಂದು ಹೋದ ಸಂತೋಷ ಮತ್ತು ದು:ಖದ ಘಟನೆಗಳು ಮುಳ್ಳಿನಂತೆ ಮನವನ್ನು ತಟ್ಟುವುದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.