ADVERTISEMENT

ಬೆರಗಿನ ಬೆಳಕು: ಬದುಕಿನ ಶ್ರೀಮಂತಿಕೆ

ಡಾ. ಗುರುರಾಜ ಕರಜಗಿ
Published 22 ಮಾರ್ಚ್ 2021, 19:30 IST
Last Updated 22 ಮಾರ್ಚ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಇರುವನ್ನಮೀ ಬಾಳು ದಿಟವದರ ವಿವರಣೆಯ |
ಹೊರೆ ನಮ್ಮ ಮೇಲಿಲ್ಲ ನಾವದರ ಸಿರಿಯ |
ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದೆ |
ಪುರಷಾರ್ಥ ಸಾದನೆಯೊ – ಮಂಕುತಿಮ್ಮ ||398||

ಪದ-ಅರ್ಥ: ಇರುವನ್ನಮೀ= ಇರುವನ್ನ (ಇರುವ ತನಕ)+ ಈ, ದಿಟವದರ= ದಿಟ (ಸತ್ಯ)+ ಅದರ, ಪಿರಿದಾಗಿಸಲು= ಹಿರಿದಾಗಿಸಲು.

ವಾಚ್ಯಾರ್ಥ: ಇರುವವರೆಗೆ ಈ ಬಾಳು ಸತ್ಯ. ಅದರ ವಿವರಣೆಯ ಜವಾಬ್ದಾರಿ ನಮ್ಮದಲ್ಲ. ಅದರ ಶ್ರೀಮಂತಿಕೆಯನ್ನು ಹೆಚ್ಚು ಮಾಡಲು ಯುಕ್ತಿಯಿಂದ ದುಡಿಯುತ್ತ ಪುರುಷಾರ್ಥ ಸಾಧನೆಯನ್ನು ಮಾಡಬೇಕು.

ADVERTISEMENT

ವಿವರಣೆ: ನಾವು ಯಾರೂ ಅರ್ಜಿ ಹಾಕಿಕೊಂಡು ಭೂಮಿಗೆ ಬಂದವರಲ್ಲ. ನಮಗೆ ತಂದೆ-ತಾಯಿಯರ ಆಯ್ಕೆ ಇರಲಿಲ್ಲ. ನಾವು ಹುಟ್ಟು ಜಾತಿ, ಸಾಮಾಜಿಕ ಸ್ಥಿತಿ, ಆರ್ಥಿಕ ಪರಿಸ್ಥತಿ ಯಾವುದೂ ನಮ್ಮ ಆಯ್ಕೆ ಆಗಿರಲಿಲ್ಲ. ಹುಟ್ಟಿ ಬೆಳೆದ ಸ್ಥಳ ಕೂಡ ನಮ್ಮ ಇಚ್ಛೆಯಂತಲ್ಲ. ಹುಟ್ಟಿ ಬಂದ ಮೇಲೆ ಬದುಕಿರುವವರೆಗೆ ಹೇಗೆ ಬದುಕುತ್ತೇವೆ ಎಂಬುದು ಮಾತ್ರ ನಮ್ಮ ಆಯ್ಕೆ. ಬದುಕಿ ಇರುವ ಅವಧಿ ಸಣ್ಣದು. ನಮಗೆ ಎರಡು ದಾರಿಗಳಿವೆ. ಒಂದು, ಇರುವ ಬದುಕನ್ನು, ಇರುವ ಅವಕಾಶಗಳನ್ನು ಬಳಸಿಕೊಂಡು ಸಂತೋಷಿಸುತ್ತ ಬೆಳೆಯುವುದು. ಮತ್ತೊಂದು, ಪ್ರತಿಯೊಂದರ, ಪ್ರತಿಯೊಬ್ಬರ ಬಗ್ಗೆ ಗೊಣಗುತ್ತ, ಕೊರಗುತ್ತ ಸವೆಯುವುದು. ನಮ್ಮ ಕೆ.ಎಸ್. ನರಸಿಂಹಸ್ವಾಮಿಯವರ ಕವನ ‘ಇಕ್ಕಳ’ ಗೊಣಗುಭಟ್ಟರ ಮನಃಸ್ಥಿತಿಯನ್ನು ಚೆನ್ನಾಗಿ ತಿಳಿಸುತ್ತದೆ. ಚಳಿಗಾಲ ಬಂದಾಗ ‘ಎಷ್ಟು ಚಳಿ’ ಎಂದರು, ಬಂತಲ್ಲ ಬೇಸಿಗೆ ‘ಕೆಟ್ಟ ಬಿಸಿಲು’ ಎಂದರು, ಮಳೆ ಬಿತ್ತೊ, ‘ಬಿಡದಲ್ಲ ಶನಿ’ ಎಂಬ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!- ಚಿಗುರ ಚಿನ್ನದ ನಡುವೆ ಹೂವ ಬಯಸುವರು, ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು, ‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.

ಈ ಬದುಕು ಸತ್ಯ. ಅದರ ವಿವರಣೆಯನ್ನು ನೀಡುವ ಜವಾಬ್ದಾರಿ ನಮ್ಮದಲ್ಲ. ನಮ್ಮ ಜವಾಬ್ದಾರಿ ಏನಿದ್ದರೂ ಅದು ಈ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸುವುದು. ಯುಕ್ತಿಯಿಂದ, ಎಚ್ಚರಿಕೆಯಿಂದ, ಪ್ರೀತಿಯಿಂದ ನಮ್ಮ ಪುರುಷಾರ್ಥಗಳ ಸಾಧನೆಯನ್ನು ಮಾಡಿಕೊಳ್ಳುವುದು. ಹೀಗೆ ಸಂಭ್ರಮದ ಬದುಕಿಗೆ ಮೂಲಸಾಮಗ್ರಿ ಧನಾತ್ಮಕ ಚಿಂತನೆ. ಪ್ರಪಂಚದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇವೆ. ಯಾವುದನ್ನು ಆರಿಸಿಕೊಳ್ಳಬೇಕೆಂಬುದು ನಮಗೆ ಬಿಟ್ಟದ್ದು. ದಾಸರು ಹೇಳಿದರು, ‘ನೀರ ಮೇಲಣ ಗುಳ್ಳೆ ನಿಜವಲ್ಲೊ ಹರಿಯೆ’, ‘ಯಾಕೆನ್ನ ಈ ರಾಜ್ಯಕೆಳೆತಂದೆ ಹರಿಯೆ, ಸಾಕಲಾರದೆ ಎನ್ನ ಯಾಕೆ ಪುಟ್ಟಿಸಿದೆ’, ‘ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ’. ಇವೆಲ್ಲ ನಮ್ಮ ಬದುಕು ಅಶಾಶ್ವತ, ಇದನ್ನು ನಂಬಿ ಕೆಡಬೇಡ ಎಂಬ ಋಣಾತ್ಮಕತೆಯನ್ನು ಹೇಳಿದಂತೆನ್ನಿಸಿದರೂ ಅದೇ ದಾಸರು, ‘ತಲ್ಲಣಿಸದಿರು ಕಂಡ್ಯ ತಾಳು ಮನವೆ’. ‘ಮಾನವ ಜನ್ಮ ದೊಡ್ಡದು, ಅದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರಾ’ ‘ಈಸಬೇಕು, ಇದ್ದು ಜೈಸಬೇಕು’ ಎಂದೂ ಧನಾತ್ಮಕತೆಯನ್ನು ಬೋಧಿಸಿದರು. ನಾವಿರುವಲ್ಲಿ ಕಸದ ಗುಂಡಿಯೂ ಇದೆ, ಗುಲಾಬಿ ತೋಟವೂ ಇದೆ. ಯಾಕೆ ಕಸದ ಗುಂಡಿಯ ಪಕ್ಕದಲ್ಲಿ ನಿಂತು ಕೊಳಕು ವಾಸನೆ ಎಂದು ಗೊಣಗಬೇಕು? ಎದ್ದು ಗುಲಾಬಿ ತೋಟಕ್ಕೆ ಹೋಗಿ ಹೂಗುಚ್ಛ ಮಾಡಿಕೊಂಡು ಸಂಭ್ರಮ ಪಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.