ADVERTISEMENT

ಬೆರಗಿನ ಬೆಳಕು: ಬದುಕು ಗೊಂದಲಮಯವಲ್ಲ

ಡಾ. ಗುರುರಾಜ ಕರಜಗಿ
Published 15 ಮಾರ್ಚ್ 2022, 18:45 IST
Last Updated 15 ಮಾರ್ಚ್ 2022, 18:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? |
ಸಲಿಸದೊಂದನುವೊಂದನುಂ ದೈವ ಬಿಡದು ||
ಹೊಲಸೆಲ್ಲವೆಲ್ಲಪಾಳ್, ಬಾಳ್ಗೆ ತಳಹದಿಯಿಲ್ಲ |
ಗಲಿಬಿಲಿಯಿದೆನಬೇಡ – ಮಂಕುತಿಮ್ಮ || 585 ||

ಪದ-ಅರ್ಥ: ಸಲಿಸದೊಂದನುವೊಂದನು=ಸಲಿಸದೆ+ಒಂದನುಂ+ಒಂದನುಂ, ಹೊಲಸೆಲ್ಲವೆಲ್ಲಪಾಳ್=ಹೊಲಸು+ಎಲ್ಲ+ಎಲ್ಲ+ಪಾಳ್ (ಹಾಳು), ಬಾಳ್ಗೆ=ಬಾಳಿಗೆ, ಗಲಿಬಿಲಿಯಿದೆನ ಬೇಡ=ಗಲಿಬಿಲಿ+ಇದು+ಎನಬೇಡ.

ವಾಚ್ಯಾರ್ಥ: ಈ ಭೂಮಿಯಲ್ಲಿ ಹೆಣಗಾಡಿ, ಹೋರಾಡಿ ಫಲವೇನು? ದೈವಕ್ಕೆ ಪ್ರತಿಯೊಂದನ್ನೂ ಸಲಿಸದೆ ಇರಲಾಗದು. ಎಲ್ಲ ಹೊಲಸು, ಎಲ್ಲ ಹಾಳು, ಈ ಬಾಳಿಗೆ ತಳಹದಿಯೆ ಇಲ್ಲ, ಎಲ್ಲವೂ ಗಲಿಬಿಲಿ ಎನ್ನಬೇಡ.

ADVERTISEMENT

ವಿವರಣೆ: ಮೇಲ್ನೋಟಕ್ಕೆ ಈ ಕಗ್ಗ ನಿರಾಸೆಯನ್ನು ತೋರುತ್ತದೆ ಎನ್ನಿಸುತ್ತದೆ. ದೈವವನ್ನು ಮೀರುವುದು ಸಾಧ್ಯವಿಲ್ಲ. ನಮ್ಮಿಂದ ಪಡೆಯುವುದನ್ನೆಲ್ಲ ವಿಧಿ ಪಡೆದೇ ತೀರುತ್ತದೆ. ಆದ್ದರಿಂದ ಸುಮ್ಮನೆ ಹೊಡೆದಾಡಿ, ಒದ್ದಾಡಿ ಮಾಡುವ ಕೆಲಸಗಳಿಂದ ಏನು ಪ್ರಯೋಜನ? ಈ ಬಾಳೆ ಹೊಲಸು, ಹಾಳಾದದ್ದು. ಇದರಲ್ಲಿ ಯಾವ ತಳಪಾಯವೂ ಇಲ್ಲ. ಎಲ್ಲವೂ ಗೊಂದಲಮಯವಾದ ಪರಿಸ್ಥಿತಿ. ಆದರೆ ಕೊನೆಯ ಸಾಲಿನಲ್ಲಿ ಡಿ.ವಿ.ಜಿ ಯಾವಾಗಲೂ ಧನಾತ್ಮಕತೆಯನ್ನೇ ತುಂಬುತ್ತಾರೆ. ‘ಗಲಿಬಿಲಿಯಿದೆನಬೇಡ’. ಬಾಳನ್ನು ಒಂದು ಗೊಂದಲ, ಅವ್ಯವಸ್ಥೆ ಎನ್ನಬೇಡ, ಎಂದರೆ ಅದು ಅವ್ಯವಸ್ಥೆಯಲ್ಲ ಎಂದರ್ಥ. ನಮಗೆ ಸರಿಯಾಗಿ ಜೀವಿಸಲು ಬಂದರೆ ಅದು ವ್ಯವಸ್ಥೆ. ಬದುಕುವ ರೀತಿ ತಿಳಿಯದೆ ಹೋದರೆ ಅದು ಅವ್ಯವಸ್ಥೆ.

ಬಾಳು ನಿಷ್ಟ್ರಯೋಜಕ. ಹೋರಾಟ ನಿಷ್ಫಲ, ವಿಧಿಯ ಮುಂದೆ ಹೋರಾಟ ನಡೆದೀತೇ ಎಂದು ಚಿಂತೆ ಮಾಡಿ ಕಾರ್ಯವಿಮುಖರಾಗುವುದು ಹೇಡಿಗಳ ಮಾತು. ಹೌದು. ದೈವ ತನ್ನ ಪಾಲು ಕೇಳುತ್ತದೆ. ಹೋರಾಟಗಳು ವಿಫಲವಾಗುತ್ತವೆ. ಯಾವುದೂ ಸರಿ ಇಲ್ಲ ಎನ್ನಿಸುತ್ತದೆ. ಆದರೆ ಪರಿಶ್ರಮದ, ಮಹತ್ತಾದದ್ದರ ಅರಸುವಿಕೆ ಬದುಕಿಗೆ ಸಾರ್ಥಕ್ಯವನ್ನು ಕೊಡುತ್ತದೆ. ಆಕೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಡಗೇರಿಯವರು. ಓದು ಬರಹ ದೊರಕಲಿಲ್ಲ. ಬಡತನ ಕಾಡಿತು. ಆಕೆಗೆ ಹದಿನಾರು ವರ್ಷವಾದಾಗ ನಲವತ್ತೈದು ವರ್ಷದವನೊಡನೆ ಮದುವೆ. ಕೆಲ ವರ್ಷಗಳಲ್ಲೇ ಗಂಡ ತೀರಿ ಹೋದ. ಆಕೆ ಯಾರನ್ನೂ ಯಾಚಿಸದೆ ಕೃಷಿಯ ಮೊರೆ ಹೋದಳು. ತನ್ನ ಕಷ್ಟಗಳನ್ನು ಬದಿಗಿಟ್ಟು, ಸಮಾಜದ ಸುಧಾರಣೆಗೆ ಧುಮುಕಿದಳು, ಹೋರಾಡಿದಳು. ಅತಿಯಾದ ಮದ್ಯ ಸೇವನೆಯಿಂದ ಮಗ ಮಡಿದಾಗ ಎದೆಗುಂದದೆ, ಮದ್ಯಪಾನದ ವಿರುದ್ಧ ಹೋರಾಡಿದಳು. ಆಕೆಗೆ ಅಗಾಧವಾದ ನೆನಪಿನ ಶಕ್ತಿ. ಸಂಪ್ರದಾಯದ, ಸಮುದಾಯದ ಹಾಡುಗಳನ್ನು ಕಲಿತು ಹಾಡತೊಡಗಿದಳು. ಹಾಡುತ್ತ ಹಾಡುತ್ತ ಸಾವಿರಾರು ಅಪರೂಪದ ಹಾಡುಗಳ ಭಂಡಾರವೇ ಆದಳು. ತಾನು ಹುಟ್ಟಿ, ಬೆಳೆದು ಬಂದ ಹಾಲಕ್ಕಿ ಸಮುದಾಯದ ಸಂಸ್ಕೃತಿಯ ಚಲಿಸುವ ರಾಯಭಾರಿಯಾದಳು. ಆಕೆಯ ಸಾಹಸಗಾಥೆಯನ್ನು, ಹೋರಾಟವನ್ನು, ಸಂಸ್ಕೃತಿಯ ಸೇವೆಯನ್ನು ಭಾರತ ಸರಕಾರ ಗುರುತಿಸಿ ವಿನಮ್ರತೆಯಿಂದ 2017ರ ಪದ್ಮಶ್ರೀ ಪುರಸ್ಕಾರವನ್ನು ಸಲ್ಲಿಸಿತು.

ಇದು ಕಗ್ಗದ ಜೀವನೋತ್ಸಾಹದ ಮಾತು. ಈ ಎಲ್ಲ ಸಮಸ್ಯೆಗಳಿದ್ದರೂ ಬದುಕು ವ್ಯರ್ಥ, ಗೊಂದಲಮಯವೆನ್ನದೆ ಅದನ್ನು ಸಂಭ್ರಮವನ್ನಾಗಿಸುವುದು ಮುಖ್ಯ ಮತ್ತು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.