ADVERTISEMENT

ಪ್ರತಿಯೊಂದು ಹಿಂಸೆಗೆ ಶಿಕ್ಷೆ ತಪ್ಪದು

ಡಾ. ಗುರುರಾಜ ಕರಜಗಿ
Published 28 ನವೆಂಬರ್ 2018, 19:19 IST
Last Updated 28 ನವೆಂಬರ್ 2018, 19:19 IST
   

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುವಾಗ ಬೋಧಿಸತ್ವ ಪಟ್ಟದ ರಾಣಿಯ ಗರ್ಭದಲ್ಲಿ ಜನಿಸಿದ. ಅವನು ಬೆಳೆದು ತಕ್ಷಶಿಲೆಗೆ ಹೋಗಿ ಸಕಲವಿದ್ಯಾ ಪಾರಂಗತನಾಗಿ ವಾರಾಣಸಿಗೆ ಬಂದ. ಅವನ ತಂದೆ ಕಾಲವಾದ ಮೇಲೆ ಅವನೇ ರಾಜನಾಗಿ ಧರ್ಮದಿಂದ ಹಲವಾರು ವರ್ಷ ಆಡಳಿತ ನಡೆಸಿದ.

ಒಮ್ಮೆ ಕೋಸಲರಾಜ ಅಪಾರವಾದ ದಂಡನ್ನು ತಂದು ವಾರಣಾಸಿಯ ಮೇಲೆ ದಾಳಿ ಮಾಡಿ ರಾಜನನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಂಡ. ಪಟ್ಟದರಾಣಿಯನ್ನು ಹಿಡಿದು ತನ್ನ ಪಟ್ಟದರಸಿಯಾಗುವಂತೆ ಒತ್ತಾಯಿಸಿದ. ಆಕೆ ಒಪ್ಪದಿದ್ದಾಗ ಅವಳನ್ನು ಸೆರೆಯಲ್ಲಿಟ್ಟುಬಿಟ್ಟ.

ಯುದ್ಧ ನಡೆಯುತ್ತಿದ್ದಾಗ ತನ್ನ ಗಂಡ ಸೋಲಬಹುದೆಂಬ ಸಂಶಯ ಬಂದಾಗ ಬುದ್ಧಿವಂತಳಾದ ರಾಣಿ ತನ್ನ ತರುಣ ಮಗನನ್ನು ವಿಶ್ವಾಸಿಕರೊಂದಿಗೆ ಕೋಟೆಯಿಂದ ರಹಸ್ಯವಾಗಿ ಹೊರಗೆ ಕಳುಹಿಸಿಬಿಟ್ಟಿದ್ದಳು.

ADVERTISEMENT

ಆ ತರುಣನಿಗೆ ಜನರ ಸಹಾನುಭೂತಿಯಿತ್ತು. ಅವನು ನಿಧಾನವಾಗಿ ಊರಿನಿಂದ ಊರಿಗೆ ತೆರಳಿ ಜನರನ್ನು ಕೂಡಿಸಿಕೊಂಡು ತನ್ನದೇ ಆದ ಸೈನ್ಯವನ್ನು ಕಟ್ಟಿದ. ನಂತರ ಸೈನ್ಯ ಸಾಕಷ್ಟು ದೊಡ್ಡದಾದಾಗ ಕೊಟೆಯನ್ನು ಮುತ್ತಿ ರಾಜನಿಗೊಂದು ಸಂದೇಶ ಕಳುಹಿಸಿದ, ‘ನಮ್ಮ ರಾಜ್ಯವನ್ನು ಗೌರವದಿಂದ ಒಪ್ಪಿಸು ಇಲ್ಲವೇ ಯುದ್ಧಕ್ಕೆ ಸಿದ್ಧನಾಗು’. ಕೋಸಲರಾಜ ಅಟ್ಟಹಾಸದಿಂದ ನಕ್ಕ. ಇಡೀ ಕೋಟೆಯೇ ನನ್ನ ಕೈಯಲ್ಲಿ ಇರುವಾಗ ಹೊರಗಿನಿಂದ ಈ ತರುಣ ಏನು ಮಾಡಿಯಾನು? ‘ಯುದ್ಧಕ್ಕೇ ಬಾ’ ಎಂದು ಹೇಳಿ ಕಳುಹಿಸಿದ.

ತರುಣ ರಾಜಕುಮಾರ ಕೋಟೆಗೆ ಮುತ್ತಿಗೆ ಹಾಕಿದ. ಜೈಲಿನಲ್ಲಿದ್ದ ಇವನ ತಾಯಿ ರಾಣಿಗೆ ಬಹಳ ಜನರ ಸಂಪರ್ಕವಿತ್ತು. ಅವರಿಗೆ ಆಕೆಯ ಬಗ್ಗೆ ತುಂಬ ಗೌರವ. ಆಕೆ ತನ್ನ ನಂಬಿಕಸ್ಥನಿಂದ ಮಗನಿಗೊಂದು ಸಂದೇಶ ಕಳುಹಿಸಿದಳು. ‘ನೀನು ಯುದ್ಧ ಮಾಡಿ ಪ್ರಾಣಹಾನಿಮಾಡುವುದು ಬೇಡ. ವಾರಾಣಸಿಯನ್ನು ಎಲ್ಲ ಕಡೆಯಿಂದ ಮುತ್ತಿಬಿಡು. ಒಳಗೆ ನೀರು, ಹಾಲು, ಸೌದೆ, ಆಹಾರ ಯಾವುದೂ ಬರದಂತೆ ತಡೆದುಬಿಡು. ಈ ರಾಜ ಕುಸಿದು ಹೋಗುತ್ತಾನೆ’.

ಮಗ ಅಂತೆಯೇ ಕೋಟೆಯ ಒಳಗೆ ಒಂದು ಸೊಳ್ಳೆಯೂ ಹೋಗದಂತೆ ತಡೆದ. ಕೋಟೆಯ ಒಳಗಿದ್ದ ವಾರಾಣಸಿಯ ಜನಕ್ಕೆ ಬದುಕು ಅಸಹನೀಯವಾಯಿತು. ಮೊದಲೇ ವಾರಣಾಸಿಯ ಜನರಿಗೆ ಹೊರಗಿನವನಾದ ಕೋಸಲರಾಜನ ಬಗ್ಗೆ ಕೋಪವಿತ್ತು. ಈ ಏಳುದಿವಸಗಳ ನರಕವಾಸ ಸಾಕಾಗಿತ್ತು. ಊರಜನರೆಲ್ಲ ಬಂಡೆದ್ದರು. ಕೋಟೆಯನ್ನು ಕಾಪಾಡಲು ಸೈನಿಕರೆಲ್ಲ ಕೋಟೆಯಲ್ಲಿದ್ದಾಗ ಸಾವಿರಾರು ಜನರು ಅರಮನೆಗೆ ನುಗ್ಗಿ ರಾಜನನ್ನು ಕೊಂದು ಅವನ ತಲೆಯನ್ನು ತೆಗೆದುಕೊಂಡು ಹೋಗಿ ತಮ್ಮ ತರುಣ ರಾಜಕುಮಾರನಿಗೆ ಕೊಟ್ಟರು.

ಆತ ಮರಳಿಬಂದು ರಾಜ್ಯವನ್ನು ಸ್ವೀಕಾರ ಮಾಡಿ, ತಾಯಿಯನ್ನು ಸೆರೆಮನೆಯಿಂದ ಬಿಡಿಸಿದ. ಮುಂದೆ ಆತ ಚೆನ್ನಾಗಿ ರಾಜ್ಯಭಾರ ಮಾಡಿ ಆಯುಷ್ಯ ತೀರಿದ ಮೇಲೆ ಕರ್ಮಾನುಸಾರ ಪರಲೋಕಕ್ಕೆ ಹೋದ. ಅವನನ್ನು ಏಳು ವರ್ಷಗಳ ಕಾಲ ಕುಂಭೀ ನರಕಕ್ಕೆ ಹಾಕಲಾಯಿತು. ಯಾವ ಅನ್ಯಾಯಕ್ಕೆ ತನಗೆ ಈ ಶಿಕ್ಷೆ ಎಂದು ಆತ ಕೇಳಿದಾಗ ದೇವದೂತರು ಹೇಳಿದರು, ‘ನೀನು ಏಳುದಿನಗಳ ಕಾಲ ಕೋಟೆಯನ್ನು ಮುತ್ತಿ ಅಷ್ಟೊಂದು ಜನರಿಗೆ ಕಷ್ಟ ಕೊಟ್ಟಿದ್ದಕ್ಕೆ ನಿನಗೆ ಈ ಏಳುವರ್ಷಗಳ ಶಿಕ್ಷೆ’.

ಬುದ್ಧ ಹೇಳಿದ, ‘ಒಳ್ಳೆಯ ಕಾರ್ಯ ಮಾಡಲೆಂದೋ, ನಿಮ್ಮ ಹಕ್ಕು ಸ್ಥಾಪಿಸಲೆಂದೋ ಮಾಡಿದ ಕಾರ್ಯದಿಂದ ಬೇರೆಯವರಿಗೆ ಹಿಂಸೆಯಾದರೆ ಅದಕ್ಕೂ ಶಿಕ್ಷೆ ತಪ್ಪಲಾರದು’.

ಹಾಗಾದರೆ ಮಾಡಲೇಬೇಕಾದ ಕೆಲಸವನ್ನೇ ಮಾಡದ ಪರಪೀಡಕರಾದ ಅಧಿಕಾರಿಗಳಿಗೆ, ಅಧಿಕಾರದಲ್ಲಿರುವವರಿಗೆ ಅದೆಷ್ಟು ಶತಮಾನಗಳ ಶಿಕ್ಷೆ ಕಾದಿದೆಯೋ?

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.