ADVERTISEMENT

ಬೆರಗಿನ ಬೆಳಕು | ಶ್ರೇಷ್ಠ ಗುಣಗಳು

ಡಾ. ಗುರುರಾಜ ಕರಜಗಿ
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST
ಗುರುರಾಜ ಕರ್ಜಗಿ
ಗುರುರಾಜ ಕರ್ಜಗಿ   

ಒಂದು ಜನ್ಮದಲ್ಲಿ ಬೋಧಿಸತ್ವ ಬ್ರಾಹ್ಮಣಕುಲದಲ್ಲಿ ಹುಟ್ಟಿ ಸರ್ವಕಲೆಗಳನ್ನು, ವಿದ್ಯೆಗಳನ್ನು ಕಲಿತು ಬಂದು ರಾಜನಿಗೆ ಸರಿಯಾಗಿ ಬೋಧಿಸಿ ಅವನನ್ನು ಒಬ್ಬ ಅತ್ಯಂತ ಆದರ್ಶ ರಾಜನನ್ನಾಗಿ ಮಾಡಿದ. ನಿತ್ಯವೂ ಬೋಧಿಸತ್ವ ನೀಡುವ ಉಪನ್ಯಾಸಗಳಿಗೆ ರಾಜನೊಂದಿಗೆ ಸಹಸ್ರಾರು ಜನ ಬಂದು ಸೇರುತ್ತಿದ್ದರು.

ಆ ನಗರದಲ್ಲಿ ಒಬ್ಬ ಮುದಿ ಬ್ರಾಹ್ಮಣ ಭಿಕ್ಷೆ ಬೇಡಿ ಸಾವಿರ ಕಹಾಪಣಗಳನ್ನು ಕೂಡಿಸಿದ್ದ. ಅವುಗಳನ್ನು ಮತ್ತೊಬ್ಬ ಬ್ರಾಹ್ಮಣನ ಮನೆಯಲ್ಲಿಟ್ಟು ಮತ್ತೆ ಭಿಕ್ಷೆ ಬೇಡಲು ಹೋದ. ಆಗ ಈ ಬ್ರಾಹ್ಮಣನ ಮನೆಯವರು ಆ ಸಾವಿರ ಕಹಾಪಣಗಳನ್ನು ಬಳಸಿಬಿಟ್ಟರು. ಮುದಿ ಬ್ರಾಹ್ಮಣ ಬಂದು ಹಣ ಕೇಳಿದಾಗ, ಹಣದ ಬದಲಾಗಿ ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟುಬಿಟ್ಟರು. ಈ ಮುದುಕ ಬ್ರಾಹ್ಮಣ ತರುಣಿ ಹೆಂಡತಿಯೊಡನೆ ಒಂದು ಮನೆ ಮಾಡಿ ವಾಸವಾಗಿದ್ದ. ತರುಣಿ ಹೆಂಡತಿಗೆ ಮುದಿಗಂಡನಿಂದ ಯಾವ ದೇಹತೃಪ್ತಿಯೂ ಸಿಗದೆ ಆಕೆ ಮತ್ತೊಬ್ಬ ಬ್ರಾಹ್ಮಣ ತರುಣನೊಂದಿಗೆ ಅನಾಚಾರ ಮಾಡತೊಡಗಿದಳು.

ಈ ಮುದುಕನನ್ನು ಊರಿನಿಂದ ದೂರ ಮಾಡಿದರೆ ತಾನು ತರುಣನೊಂದಿಗೆ ನಿರಾಳವಾಗಿರಬಹುದೆಂದುಕೊಂಡು, ‘ಯಜಮಾನ, ನನಗೆ ಮನೆಯ ಕೆಲಸ ಮಾಡಲು ಶಕ್ತಿ ಇಲ್ಲ. ಒಬ್ಬ ದಾಸಿಯನ್ನು ಇಟ್ಟುಕೋ. ಅದಕ್ಕಾಗಿ ನಾಲ್ಕು ನಗರಗಳನ್ನು ಸುತ್ತಿ ಸಾಕಷ್ಟು ಹಣ ಸಂಗ್ರಹ ಮಾಡಿಕೊಂಡು ಬಾ’ ಎಂದಳು. ಈಕೆಯ ಮೋಸವನ್ನರಿಯದ ಮುದಿ ಬ್ರಾಹ್ಮಣ ಹೊರಟು ನಿಂತ. ಹೆಂಡತಿ ಅವನಿಗೆ ಒಂದು ಚೀಲದಲ್ಲಿ ಒಂದಿಷ್ಟು ತಂಬಿಟ್ಟು ಮತ್ತು ಒಂದೆರಡು ಮಡಕೆಗಳಲ್ಲಿ ಹಾಲನ್ನು ತುಂಬಿಸಿ ಕಳುಹಿಸಿ ಕೊಟ್ಟಳು. ಈತ ಒಂದು ದಿನದಲ್ಲಿ ತಿರುಗಾಡಿ ಏಳುನೂರು ಕಹಾಪಣಗಳನ್ನು ಸಂಗ್ರಹ ಮಾಡಿ ಮರಳಿ ಬರುವಾಗ ಕಾಡಿನಲ್ಲಿ ಮರದ ಕೆಳಗೆ ಕುಳಿತು ತಂಬಿಟ್ಟು ತಿಂದ. ಅರ್ಧ ಕುಡಿಕೆ ಹಾಲು ಕುಡಿದು ನೀರು ಕುಡಿಯಲು ಹೋದ. ಆಗ ಅವನ ಚೀಲದ ಬಾಯಿ ತೆರೆದೇ ಇತ್ತು. ಮರದ ಮೇಲಿದ್ದ ವಿಷಪೂರಿತ ಕೃಷ್ಣಸರ್ಪ ಕೆಳಗಿಳಿದು ಬಂದು ಚೀಲದಲ್ಲಿ ಸೇರಿಕೊಂಡು ಹಾಲು ಕುಡಿಯಿತು. ಮರಳಿ ಬಂದ ಮುದುಕ ಚೀಲದ ಬಾಯಿ ಕಟ್ಟಿ ತಲೆಯ ಮೇಲೆ ಹೊತ್ತುಕೊಂಡು ಹೊರಟ. ಇದನ್ನು ಗಮನಿಸಿದ ವೃಕ್ಷದೇವತೆ ‘ಬ್ರಾಹ್ಮಣ, ದಾರಿಯಲ್ಲಿ ಚೀಲ ಬಿಚ್ಚಿದರೆ ನೀನು ಸಾಯುತ್ತೀ, ಮನೆಗೆ ಹೋದರೆ ನಿನ್ನ ಹೆಂಡತಿ ಸಾಯುತ್ತಾಳೆ’ ಎಂದಿತು. ಮುದುಕ ಗಾಬರಿಯಾದ. ಏನು ಮಾಡಲೂ ತೋರದೆ ಬೋಧಿಸತ್ವನ ಬಳಿಗೆ ಹೋಗಿ ಎಲ್ಲವನ್ನೂ ವಿವರವಾಗಿ ತಿಳಿಸಿದ. ಆತ ವೃಕ್ಷದೇವತೆಯ ಮಾತನ್ನು ಚಿಂತಿಸಿದ. ಯಾರು ಚೀಲ ಬಿಚ್ಚುತ್ತಾರೋ ಅವರು ಸಾಯುತ್ತಾರೆ ಎಂದ ಕಾರಣ ಚೀಲದಲ್ಲಿ ವಿಷಪೂರಿತವಾದ ಹಾವು ಸೇರಿರಬೇಕು ಎಂದು ತಿಳಿದ. ಬೋಧಿಸತ್ವ ಸೇವಕರಿಗೆ ಹೇಳಿ ಚೀಲವನ್ನು ದೂರವಿಟ್ಟು ಹಾವನ್ನು ಹೊರಗೆ ಕಳುಹಿಸಿಬಿಟ್ಟ. ನಂತರ ದೂತರಿಗೆ ಹೇಳಿ ಮುದಿ ಬ್ರಾಹ್ಮಣ ಬೇರೆ ಊರಿಗೆ ಹೋದಾಗ ಅವನ ಮನೆಗೆ ಯಾರು ಬರುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿ ಎಂದ. ಆಮೇಲೆ ತರುಣ ಬ್ರಾಹ್ಮಣನನ್ನು ಕರೆಸಿ, ‘ಈತನೇ ನಿನ್ನ ಹೆಂಡತಿಯೊಂದಿಗೆ ಅನಾಚಾರ ಮಾಡುತ್ತಿದ್ದ. ನಿನಗೆ ಈ ಹೆಂಡತಿ ಬೇಕೇ ಅಥವಾ ಆಕೆಯನ್ನು ದೇಶಭ್ರಷ್ಟಳಾಗಿ ಮಾಡಿಸಲೇ?’ ಎಂದು ಕೇಳಿದ. ಅದಕ್ಕೆ ಮುದುಕ ‘ನನಗೆ ಇದೇ ಹೆಂಡತಿ ಇರಲಿ. ಆಕೆಯ ತಪ್ಪಲ್ಲ, ಅದು ನನ್ನ ಅಶಕ್ತತೆ. ಆಕೆಯನ್ನು ಹೊರಗೆ ಹಾಕಿದರೆ ಬದುಕು ಹಾಳಾಗಿ ಹೋಗುತ್ತದೆ’ ಎಂದ. ಹೆಂಡತಿಗೆ ದುಃಖವಾಯಿತು. ಇಷ್ಟು ಒಳ್ಳೆಯ ಮನುಷ್ಯನನ್ನು ಕೇವಲ ಕಾಮ ವಾಸನೆಗಾಗಿ ಮೋಸ ಮಾಡಿದೆನಲ್ಲ ಎಂದು ತಿಳಿದು ಅಳುತ್ತ ಕಾಲು ಹಿಡಿದುಕೊಂಡಳು. ಮುಂದೆ ಅವರು ಸುಖವಾಗಿದ್ದರು.

ADVERTISEMENT

ಮನುಷ್ಯನಿಗಿರಬೇಕಾದ ಅತ್ಯಂತ ಶ್ರೇಷ್ಠ ಗುಣಗಳಲ್ಲಿ ಎರಡು ಮುಖ್ಯವಾದವು. ಮೊದಲನೆಯದು ಮಾತ್ಸರ್ಯರಹಿತನಾಗಿರುವುದು, ಎರಡನೆಯದು ದೋಷಿಗಳಿಗೆ ಕ್ಷಮೆ ನೀಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.