ADVERTISEMENT

ಬೆರಗಿನ ಬೆಳಕು: ಮತ್ತೊಂದು ಸಫಲ ಉಪಾಯ

ಡಾ. ಗುರುರಾಜ ಕರಜಗಿ
Published 28 ಏಪ್ರಿಲ್ 2021, 21:27 IST
Last Updated 28 ಏಪ್ರಿಲ್ 2021, 21:27 IST
   

ತಮ್ಮ ರಾಜನ ಸೈನ್ಯ ತಾನು ಸೋತಿದ್ದೇನೆಂದು ಭಾವಿಸಿ ಓಡುತ್ತಿದೆ ಎಂಬುದು ಕೇವಟ್ಟನಿಗೆ ಹೊಳೆಯಿತು. ಮಹೋಷಧಕುಮಾರ ಎಲ್ಲರಿಗೂ ಕೇಳುವಂತೆ ಜೋರಾಗಿ ಕೂಗಿದ, ‘ಏಳಿ ಆಚಾರ್ಯ, ನಾನು ತುಂಬ ಚಿಕ್ಕವನು, ನಿಮ್ಮ ಮೊಮ್ಮಗನ ವಯಸ್ಸಿನವನು. ನನಗೆ ನಮಸ್ಕಾರ ಮಾಡಬೇಡಿ’. ಆಗ ಎಲ್ಲರಿಗೂ ಕೇವಟ್ಟ ಸೋತು ಹೋದ ಎಂಬುದು ಖಚಿತವಾಯಿತು. ಆದರೆ ಕುಮಾರ ಅವನನ್ನು ಬಿಡದೆ ನೆಲಕ್ಕೆ ಮತ್ತಷ್ಟು ಅವನ ಮುಖವನ್ನು ಉಜ್ಜಿ, ಅವನಿಗೆ ಮಾತ್ರ ಕೇಳುವಂತೆ, ‘ಮೂರ್ಖ, ನೀನು ನನ್ನಿಂದ ನಮಸ್ಕಾರವನ್ನು ಅಪೇಕ್ಷಿಸುತ್ತಿದ್ದೆಯಾ?’ ಎಂದು ಬುಸುಗುಟ್ಟುತ್ತಾ, ಅವನ ಕತ್ತು ಹಿಡಿದು ಬೆಕ್ಕಿನ ಮರಿಯನ್ನು ಎಸೆದುಬಿಡುವಂತೆ ದೂರ ಎಸೆದ. ಕೇವಟ್ಟ ಗಾಬರಿಯಾಗಿ, ಮುಖದ ರಕ್ತವನ್ನು ಒರೆಸಿಕೊಳ್ಳುತ್ತ ತನ್ನ ರಾಜನ ಕಡೆಗೆ ಓಡಿದ.

‘ಸ್ವಾಮಿ, ನಾನು ಸೋತಿಲ್ಲ, ಕುಮಾರನಿಗೆ ನಮಸ್ಕಾರ ಮಾಡಿಲ್ಲ. ಆತ ಮೋಸ ಮಾಡಿದ್ದಾನೆ’ ಎಂದು ಕೂಗುತ್ತ ರಾಜನ ಬೆನ್ನು ಹತ್ತಿದ. ಅನೇಕ ಬಾರಿ ಬೇಡಿಕೊಂಡ ಮೇಲೆ ರಾಜ ಕುದುರೆಯನ್ನು ನಿಲ್ಲಿಸಿ, ಓಡುತ್ತಿರುವ ಸೈನ್ಯವನ್ನು ತಡೆದ. ನಡೆದದ್ದೆನ್ನೆಲ್ಲ ವಿವರಿಸಿದ ಕೇವಟ್ಟ ಹೊಸ ಉಪಾಯವೊಂದನ್ನು ನೀಡಿದ. ‘ನಾವು ಕೋಟೆಯ ಮುತ್ತಿಗೆಯನ್ನು ಮುಂದುವರೆಸೋಣ. ಕೋಟೆಯ ಒಳಗಿನ ನೀರು, ಆಹಾರ ಬಹುಕಾಲ ಇರದು. ಅವರು ನಮಗೆ ಶರಣಾಗಲೇ ಬೇಕು’ ಎಂದು ಒಪ್ಪಿಸಿದ. ಈ ಮಾತು ತಿಳಿದು ಕುಮಾರ, ಇವರನ್ನು ಬಹುಕಾಲ ಇಲ್ಲಿ ಉಳಿಸುವುದು ಸರಿಯಲ್ಲ, ಅವರನ್ನು ಭೇದದಿಂದ ಬೇಗ ಓಡಿಸಬೇಕು ಎಂದು ಯೋಚಿಸಿದ. ತಮ್ಮಲ್ಲಿ ಅತ್ಯಂತ ಹಿರಿಯನಾದ ಅಮಾತ್ಯ ಅನುಕೇವಟ್ಟನನ್ನು ಕರೆದು ಹೇಳಿದ, ‘ಆಚಾರ್ಯ, ನಿಮ್ಮಿಂದ ಒಂದು ಕೆಲಸವಾಗಬೇಕು. ನೀವು ನಮ್ಮ ರಾಜರಿಗೆ ಅತ್ಯಂತ ಪ್ರೀತಿಪಾತ್ರರೆಂಬುದು ವೈರಿ ರಾಜನಾದ ಬ್ರಹ್ಮದತ್ತನಿಗೂ ಗೊತ್ತಿದೆ. ಆದ್ದರಿಂದ ನೀವು ಕೋಟೆಯ ಮೇಲೇರಿ ವೈರಿ ನಾಯಕರಿಗೆ ಕೇಳಿಸುವಂತೆ, ‘ಚಿಂತೆ ಮಾಡಬೇಡಿ, ಕೋಟೆಯೊಳಗೆ ಜನ ಅನ್ನ, ನೀರಿಲ್ಲದೆ ಸಾಯುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯ ನಿಮ್ಮ ವಶವಾಗುತ್ತದೆ’ ಎಂದು ಕೂಗುತ್ತಿರಿ. ಆಗ ನಮ್ಮ ಸೈನ್ಯದ ನಾಯಕರು ಅವರಿಗೆ ಕಾಣುವಂತೆ, ನಿಮ್ಮನ್ನು ಹೆಡಮುರಿಗೆ ಕಟ್ಟಿ, ಹೊಡೆಯುವಂತೆ ನಡೆಸುತ್ತ, ಒಂದು ಬೆತ್ತದ ಬುಟ್ಟಿಯಲ್ಲಿ ನಿಮ್ಮನ್ನು ಕೂರಿಸಿ ಕೋಟೆಯ ಹೊರಗೆ ವೈರಿ ಪಾಳಯದಲ್ಲಿ ಇಳಿಸಿಬಿಡುತ್ತಾರೆ. ಅವರು ತಮ್ಮನ್ನು ಬ್ರಹ್ಮದತ್ತನ ಬಳಿಗೆ ಕರೆದೊಯ್ಯುತ್ತಾರೆ. ಅಲ್ಲಿ ನಮ್ಮ ರಾಜರನ್ನು, ನನ್ನನ್ನು ಚೆನ್ನಾಗಿ ತೆಗಳಿ, ನಿಮಗೆ ಈ ರಾಜ್ಯದ ಬಗ್ಗೆ ಇದ್ದ ದ್ವೇಷವನ್ನು ಅವರು ನಂಬುವಂತೆ ಮಾಡಬೇಕು.

‘ಮುಂದೇನು ಮಾಡಬೇಕು?’ ಎಂದು ಅನುಕೇವಟ್ಟ ಕೇಳಿದ. ಕುಮಾರ ‘ಆಚಾರ್ಯ, ನೀವು ಆ ನೂರು ರಾಜರನ್ನು ಕೂಡಿಸಿ, ಕೇವಟ್ಟ ಅವರನ್ನು ಹೇಗೆ ಕೊಲ್ಲಿಸಲು ಯೋಜನೆ ಹಾಕಿದ್ದ ಎನ್ನುವುದನ್ನು ತಿಳಿಸಿ, ಅವರ ಮನ ಒಡೆದು, ಅವರು ತಮ್ಮ ತಮ್ಮ ರಾಜ್ಯಗಳಿಗೆ ಹೋಗುವಂತೆ ಮಾಡಿ, ನಂತರ ರಾಜನಿಗೆ, ‘ಸ್ವಾಮೀ, ನನಗೆ ಕಂದಕದಲ್ಲಿ ಎಲ್ಲಿ ಮೊಸಳೆಗಳಿವೆ, ಎಲ್ಲಿ ಇಲ್ಲ ಗೊತ್ತಿದೆ’ ಎಂದು ಹೇಳಿ ಸೈನಿಕರನ್ನು ಮೊಸಳೆ ಇರುವ ಕಂದಕದಲ್ಲೇ ಇಳಿಸುವಂತೆ ಮಾಡಬೇಕು. ಯಾಕೆ ಹೀಗೆ ಎಂದು ರಾಜ ಕೇಳಿದರೆ, ‘ನಿಮ್ಮ ಪುರೋಹಿತ ಕೇವಟ್ಟ ಲಂಚ ಪಡೆದು ಸ್ಥಳ ಬದಲಾಯಿಸಲು ಹೇಳಿದ್ದಾನೆ’ ಎಂದು ಹೇಳಿ. ಈಗ ನೂರು ರಾಜಕುಮಾರರು ಮತ್ತು ಅವರ ಸೈನ್ಯ ಇಲ್ಲದಿದ್ದುದರಿಂದ ಬ್ರಹ್ಮದತ್ತನ ಸೈನ್ಯ ಚಿಕ್ಕದಾಗಿರುತ್ತದೆ. ರಾಜ ಬ್ರಹ್ಮದತ್ತನಿಗೆ, ‘ರಾಜಾ ಈ ಮಹೋಷಧಕುಮಾರ ಭಯಂಕರ ಮಾಯಾವಿ. ಇಂದು ರಾತ್ರಿ ಸೈನ್ಯದ ಮೇಲೆ ಬೆಂಕಿಯ ಮಳೆ ಕರೆಯುತ್ತಾನೆ. ಎಲ್ಲರೂ ಓಡಿ ಪಾರಾಗೋಣ’ ಎಂದು ಹೇಳಿ. ಅವನು ಮತ್ತು ಅವನ ಸೈನ್ಯ ಹೆದರಿ ಓಡಿ ಹೋಗುತ್ತದೆ’ ಎಂದ. ಅನುಕೇವಟ್ಟ ಹಾಗೆಯೇ ಮಾಡಿದ. ಅಂತೆಯೇ ಬ್ರಹದತ್ತನ ಸೈನ್ಯ ತಮ್ಮ ಬಟ್ಟೆಬರೆಗಳನ್ನು ಬಿಟ್ಟು ಪಲಾಯನ ಮಾಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.