ADVERTISEMENT

ಬೆರಗಿನ ಬೆಳಕು: ಭಯಂಕರ ಸಂಚು

​ಪ್ರಜಾವಾಣಿ ವಾರ್ತೆ
Published 4 ಮೇ 2021, 20:20 IST
Last Updated 4 ಮೇ 2021, 20:20 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನಮ್ಮಿಂದ ಸೋತು ಓಡಿಹೋದ ಬ್ರಹ್ಮದತ್ತ ರಾಜ ತನ್ನ ಮಗಳನ್ನು ವಿದೇಹ ರಾಜನಿಗೆ ಯಾಕೆ ಕೊಡಬಯಸುತ್ತಾನೆ? ತನ್ನಿಂದ ಅಪಮಾನಿತನಾದ ಕೇವಟ್ಟನಿಗೆ ಈ ಸಂಬಂಧದಿಂದ ಏನು ಲಾಭ? ಎಂದೆಲ್ಲ ಮಹೋಷಧಕುಮಾರ ಚಿಂತಿಸಿದ. ಅವನ ಚಾಣಾಕ್ಷ ದೂತರೂ ಈ ಯೋಜನೆಯನ್ನು ಮಾಡಿದ್ದು ಯಾರು ಎಂಬುದನ್ನು ಹೇಳಲಿಲ್ಲ. ಆದರೆ ಒಂದು ವಿಷಯ ಮಾತ್ರ ತಿಳಿಯಿತು. ಈ ಯೋಜನೆಯನ್ನು ಮಾಡಿದ್ದು ಅರಮನೆಯ ಮೇಲಂತಸ್ತಿನಲ್ಲಿ ಮತ್ತು ಕೇವಲ ರಾಜ ಮತ್ತು ಮಂತ್ರಿ ಕೇವಟ್ಟರಿಬ್ಬರೇ ಇದ್ದರು. ಇವರೊಂದಿಗೆ ಇದ್ದದ್ದು ರಾಜನ ಪ್ರೀತಿಯ ಮೈನಾ ಪಕ್ಷಿ. ಇಷ್ಟು ವಿಷಯ ಸಾಕಾಯಿತು ಮಹೋಧಕುಮಾರನಿಗೆ.

ತಕ್ಷಣವೇ ತಾನು ಸಾಕಿದ ಅತ್ಯಂತ ಬುದ್ಧಿವಂತನಾದ ಮಾಢವನೆಂಬ ಗಿಳಿಮರಿಯನ್ನು ಕರೆದು ಹೇಳಿದ, ‘ನನ್ನ ಪ್ರೀತಿಯ ಗಿಳಿಮರಿ, ನೀನು ಈಗ ಒಂದು ಮುಖ್ಯ ಕೆಲಸವನ್ನು ಮಾಡಬೇಕು. ರಾಜ ಬ್ರಹ್ಮದತ್ತನ ಅರಮನೆಗೆ ಹೋಗಿ ಮೇಲಿನ ಅಂತಸ್ತಿನಲ್ಲಿರುವ ಹೆಣ್ಣು ಮೈನಾದೊಂದಿಗೆ ಸ್ನೇಹ ಮಾಡಿಕೊಂಡು, ಅಂದು ರಾಜ ಮತ್ತು ಮಂತ್ರಿಗಳ ನಡುವೆ ಆದ ಚರ್ಚೆಯ ವಿಷಯವನ್ನು ತಿಳಿದು ಬಾ’. ಗಿಳಿಮರಿ ಹಾರಿ ಬ್ರಹ್ಮದತ್ತನ ಅರಮನೆ ಸೇರಿತು. ಅತ್ಯಂತ ಮೃದು-ಮಧುರ ಮಾತುಗಳಿಂದ ಮೈನಾದ ಪ್ರೀತಿಯನ್ನು ಒಂದೇ ದಿನದಲ್ಲಿ ಸಂಪಾದಿಸಿತು.

ಮೈನಾ ಗಿಳಿಯಿಂದ ಆಕರ್ಷಿತವಾಗಿ ತನಗೆ ದೊರೆತ ರುಚಿಯಾದ ಪಾಯಸವನ್ನು, ಹಣ್ಣುಗಳನ್ನು ಗಿಳಿಗೆ ನೀಡಿತು. ಮೈನಾ ಒಲವಿನಿಂದ ಕೇಳಿತು, ‘ಗಿಳಿಯೇ ನೀನು ಯಾರು? ಎಲ್ಲಿಂದ ಬಂದೆ? ಏನು ನಿನ್ನ ಕಥೆ?’. ಬುದ್ಧಿವಂತ ಗಿಳಿ ಒಂದು ಮನೋವೇದಕವಾದ ಕಥೆಯನ್ನೇ ಕಟ್ಟಿತು. ‘ನಾನು ಮತ್ತು ನನ್ನ ಹೆಂಡತಿ ತುಂಬ ಸಂತೋಷವಾಗಿ ಒಬ್ಬ ರಾಜನ ಅರಮನೆಯಲ್ಲಿದ್ದೆವು. ನನ್ನ ಅತ್ಯಂತ ಸುಂದರಳಾದ ಪತ್ನಿ ಗರ್ಭಿಣಿಯಾಗಿದ್ದಳು. ಒಂದು ದಿನ ರಾಜನ ಈಜುಕೊಳದಲ್ಲಿ ನಾವಿಬ್ಬರೂ ಮನಸಾರೆ ಕ್ರೀಡಿಸಿ ಹೊರಬಂದು ಕುಳಿತಾಗ ಒಂದು ರಣಹದ್ದು ಹಾರಿಬಂದು ಆಕೆಯನ್ನು ಹಿಡಿದುಕೊಂಡು ಹೋಗಿಬಿಟ್ಟಿತು.

ADVERTISEMENT

ನಾನು ಎಷ್ಟೇ ಆರ್ತತೆಯಿಂದ ಅತ್ತು, ಕಾಡಿ, ಬೇಡಿದರೂ ಅದು ಕರುಣೆ ತೋರದೆ ಕತ್ತು ಕತ್ತರಿಸಿ ಕೊಂದು ಹಾಕಿತು. ಅದನ್ನು ಕಂಡ ರಾಜ, ಮತ್ತೊಬ್ಬಳನ್ನು ಮದುವೆಯಾಗು ಎಂದು ಎಷ್ಟೋ ಹಕ್ಕಿಗಳನ್ನು ತಂದರೂ ನನ್ನ ಮನಸ್ಸಿಗೆ ಸಮಾಧಾನವಾಗದೆ, ಒದ್ದಾಡುತ್ತ, ಹಾರಿ ಇಲ್ಲಿಗೆ ಬಂದಿದ್ದೇನೆ. ನಿನ್ನನ್ನು ನೋಡಿ, ಮನಸ್ಸಿಗೆ ಎಷ್ಟೋ ಹಾಯೆನ್ನಿಸಿದೆ’ ಎಂದು ನಿಟ್ಟಿಸಿರುಬಿಟ್ಟಿತು. ಮೈನಾ ಕರುಣೆಯಿಂದ ಗಿಳಿಯನ್ನು ಸಂತೈಸಿತು. ಎರಡೂ ಬೇರೆ ಜಾತಿಯ ಪಕ್ಷಿಗಳಾದರೂ ಅವು ಅತ್ಯಂತ ಪ್ರಿಯವಾಗಿಬಿಟ್ಟವು. ಗಿಳಿ, ಮೈನಾಕ್ಕೆ ಹೇಳಿತು, ‘ನಿನಗಿಂತ ಸುಂದರವಾದ, ಮೃದುಭಾಷಿಯಾದ ಹೆಂಡತಿಯನ್ನು ನಾನು ಪಡೆಯುವುದು ಸಾಧ್ಯವಿಲ್ಲ. ಆದ್ದರಿಂದ ನನ್ನ, ನಿನ್ನ ನಡುವೆ ಯಾವ ರಹಸ್ಯಗಳೂ ಇರಲಾರವು. ಈ ಅರಮನೆಯ ಸಂಭ್ರಮವನ್ನು ಕಂಡರೆ, ಏನೋ ದೊಡ್ಡ ಉತ್ಸವ ನಡೆಯುವಂತಿದೆ‘.

ಆಗ ಮೈನಾ, ‘ಹೌದು, ಸಂಭ್ರಮ ನಡೆಯುತ್ತದೆ. ನಡೆಯದಿದ್ದರೆ ಚೆನ್ನಾಗಿತ್ತು’ ಎಂದಿತು. ಯಾಕೆ ಎಂದು ಕೇಳಿದಾಗ, ‘ಮದುವೆಯ ಯೋಜನೆ ಹೊರಗೆ ತೋರುತ್ತದೆ. ಆದರೆ ಒಳಗೆ ಮಾತ್ರ ಭಾರೀ ಅನಾಹುತವಿದೆ. ನಮ್ಮ ರಾಜ ಮತ್ತು ಕುಹಕಿ ಮಂತ್ರಿ ಕೇವಟ್ಟ ರಾಜಕುಮಾರಿಯ ಮದುವೆಯ ನೆವಮಾಡಿ ವಿದೇಹರಾಜ ಮತ್ತು ಮಹೋಷಧಕುಮಾರರನ್ನು ಇಲ್ಲಿಗೆ ನಿಶ್ಚಯ ಕಾರ್ಯಕ್ಕೆ ಕರೆಸಿ ಕೊಲ್ಲುವ ಹೊಂಚು ಹಾಕಿದ್ದಾರೆ’ ಎಂದಿತು. ವಿಷಯವನ್ನು ತಿಳಿದ ಗಿಳಿ, ‘ನಾನು ನಮ್ಮ ರಾಜನಿಗೆ ಹೇಳಿ ಬಂದು ನಿನ್ನನ್ನು ಮದುವೆಯಾಗಿ ಕರೆದುಕೊಂಡು ಹೋಗುತ್ತೇನೆ’ ಎಂದು ಒಪ್ಪಿಸಿ, ಹಾರಿ ಬಂದು ಮಹೋಷಧಕುಮಾರನಿಗೆ ವಿಷಯ ತಿಳಿಸಿತು. ಇದರ ಸಂಶಯವಿದ್ದ ಕುಮಾರ, ಈ ಹೊಂಚಿನಿಂದ ರಾಜನನ್ನು ಪಾರು ಮಾಡಲು ಹೊಸ ಚಿಂತನೆಯನ್ನು ಮಾಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.