ADVERTISEMENT

ಬೆರಗಿನ ಬೆಳಕು: ಜಗದುದ್ಧಾರಕ್ಕಾಗಿ ಗುದ್ದಾಟ

ಡಾ. ಗುರುರಾಜ ಕರಜಗಿ
Published 26 ಜೂನ್ 2022, 19:45 IST
Last Updated 26 ಜೂನ್ 2022, 19:45 IST
ಬೆರಗಿನ ಬೆಳಕು
ಬೆರಗಿನ ಬೆಳಕು   

ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ|
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ||
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ -|
ನ್ನುದ್ಧಾರವೆಷ್ಟಾಯ್ತೊ?- ಮಂಕುತಿಮ್ಮ ||658||

ಪದ-ಅರ್ಥ: ಎದ್ದೆದ್ದು= ಎದ್ದು+ ಎದ್ದು, ಜಗವನ್ನೆನುತಿಹ= ಜಗವನು+ ಎನ್ನುತಿಹ,

ವಾಚ್ಯಾರ್ಥ: ಎದ್ದೆದ್ದು ಬೀಳುತ್ತಿದ್ದೀಯಾ, ಗುದ್ದಾಡಿ ಸೋಲುತ್ತಿದ್ದೀಯಾ, ಗದ್ದಲವನ್ನು ಎಲ್ಲೆಡೆಗೆ ತುಂಬಿ ಹೆಸರು ಮಾಡುತ್ತಿದ್ದೀಯಾ. ಜಗತ್ತನ್ನು ಉದ್ಧಾರ ಮಾಡುತ್ತೇನೆಂದು ಹೇಳುವ ಗೆಳೆಯನೆ, ನಿನ್ನ ಉದ್ದಾರವೆಷ್ಟಾಯಿತು, ನೋಡಿಕೊ.

ADVERTISEMENT

ವಿವರಣೆ: ತಾನೊಬ್ಬ ನಾಯಕ ಎಂದು ಅವನು ಭಾವಿಸಿದ್ದಾನೆ. ಈಗಿರುವ ವ್ಯವಸ್ಥೆಯಿಂದ ದೇಶದ ಉದ್ಧಾರ ಸಾಧ್ಯವಿಲ್ಲವೆಂದು ಘೋಷಿಸುತ್ತ, ಹೊಸದೊಂದು ವ್ಯವಸ್ಥೆಯನ್ನು ತರುತ್ತೇನೆ ಎಂದು ರೋಚಕವಾದ ಮಾತುಗಳನ್ನಾಡುತ್ತಾನೆ, ಜನರನ್ನು ಮರುಳು ಮಾಡುತ್ತಾನೆ. ಚಿತ್ರವಿಚಿತ್ರ ಸಮಾರಂಭಗಳನ್ನು, ಪಾದಯಾತ್ರೆಗಳನ್ನು ನಡೆಸುತ್ತ ಸದಾಕಾಲ ವರ್ತಮಾನ ಪತ್ರಿಕೆಗಳ ಮುಖಪುಟದಲ್ಲಿಯೇ ತನ್ನ ಭಾವಚಿತ್ರ ನಿತ್ಯ ಬರುವಂತೆ ನೋಡಿಕೊಳ್ಳುತ್ತಾನೆ. ತನ್ನ ಬೆಳವಣಿಗೆಗೆ ಅಡ್ಡಬರುವಂತೆ ತೋರುವ ಉಳಿದ ನಾಯಕರ ಅವಹೇಳನೆ ಮಾಡುತ್ತಾನೆ, ಏನೋ ಒಳಸಂಚು ಮಾಡಿ ಅವರ ಹೆಸರು ಕೆಡಿಸುತ್ತಾನೆ, ಜಾತಿಯನ್ನು ಎಳೆದು ತರುತ್ತಾನೆ. ಆತ ಜನರನ್ನು ಒಂದಾಗದಂತೆ ಜಗಳ ತಂದು ಕೋಲಾಹಲ ಎಬ್ಬಿಸುತ್ತಾನೆ. ಅವಶ್ಯಕತೆ ತೋರಿದರೆ ಒಂದಿಬ್ಬರ ಪ್ರಾಣಹರಣವನ್ನೂ ಗೊತ್ತಾಗದಂತೆ ಮಾಡಿಸುತ್ತಾನೆ. ಇದೆಲ್ಲ ಸಮಾಜದ ಉದ್ಧಾರಕ್ಕೆ.

ಇದು ಕೇವಲ ರಾಜಕೀಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ತಮಗೆ ಏನೂ ಬೇಡ ಎಂದು ಸಂ-ನ್ಯಾಸವನ್ನು ಪಡೆದ ಸನ್ಯಾಸಿಗಳು ಮಾಡುವ ಗುದ್ದಾಟ, ಗದ್ದಲ ಕಡಿಮೆಯೇ? ರಾಜಕೀಯಕ್ಕೆ ನೇರವಾಗಿ ಕಾಲಿಡದೆ, ಹಿಂದೆ ಕುಳಿತೇ ನಾಯಕರನ್ನು ಅಲುಗಾಡಿಸುವ, ಅವರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ಹುನ್ನಾರ ಕಣ್ಣಿಗೆ ಕಾಣುತ್ತದೆ. ಕೆಲವರ ರಾಜಕೀಯ ಆಸಕ್ತಿ ಯಾವ ಮಟ್ಟದ್ದೆಂದರೆ, ಅವರು ಮನಸ್ಸು ಮಾಡಿದರೆ ಸರ್ಕಾರವನ್ನೇ ಬದಲಿಸಬಹುದು ಎಂದುಕೊಳ್ಳುತ್ತಾರೆ. ಅವರನ್ನು ಕೇಳಿದರೆ, ಇದೆಲ್ಲ ಸಮಾಜದ, ದೇಶದ ಉದ್ಧಾರಕ್ಕೆ ಎಂಬ ಮಾತು ಬರುತ್ತದೆ.

ಸಮಾಜಸೇವೆಯಲ್ಲಿ, ಶೈಕ್ಷಣಿಕ, ವೈದ್ಯಕೀಯ, ಔದ್ಯಮಿಕ, ನ್ಯಾಯ, ತಂತ್ರಜ್ಞಾನ ಇಂಥ ಎಲ್ಲ ಕ್ಷೇತ್ರಗಳಲ್ಲೂ ಒಂದಷ್ಟು ಜನರಿದ್ದಾರೆ. ಅವರಿಗೆ ಪ್ರಪಂಚದ ಉದ್ಧಾರದ್ದೇ ಚಿಂತೆ. ಅದಕ್ಕಾಗಿ ಎಷ್ಟೊಂದು ಹಾರಾಟ, ಒದ್ದಾಟ.

ಬಸವಣ್ಣನವರು ಇಂಥವರನ್ನು ಕಂಡು ಹೇಳುತ್ತಾರೆ,

ತನು ಮನಧನವ ಹಿಂದಿಕ್ಕಿಕೊಂಡು ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು
ನೀವೆಲ್ಲ ಕೇಳಿರೆ:ತಲಹಿಲ್ಲದ ಕೋಲು ಜೊಳ್ಳುಹಾರುವುದಲ್ಲದೆ ಗುರಿಯ ತಾಗಬಲ್ಲದೆ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕಕೂಡಲಸಂಗಮದೇವ ಎಂತೊಲಿವನಯ್ಯ,

ತಮ್ಮ ತನುಮನಧನಗಳನ್ನು ಹಿಂದಿಟ್ಟು, ಬರೀ ಮಾತಿನ ಬಣವೆಯನ್ನು ಕಟ್ಟಿ, ಸುಳ್ಳು ಮಾತನಾಡಿ, ತೂಕವಿಲ್ಲದ, ಗುರಿ ತಲುಪದ ಬಾಣಗಳನ್ನು ಬಿಡುವ ಜನರಿಗೆ ಕೂಡಲಸಂಗಮದೇವ ಹೇಗೆ ಒಲಿದಾನು? ಆ ಮಾತನ್ನು ಕಗ್ಗ ಕೇಳುತ್ತದೆ. ಮರುಳು ಮಾಡುವ ಮಾತುಗಳನ್ನಾಡಿ, ಗದ್ದಲ ಎಬ್ಬಿಸಿ, ಪ್ರಪಂಚವನ್ನು ಉದ್ಧಾರ ಮಾಡುತ್ತೇನೆಂದು ಹೊರಟಿರುವ ಸ್ನೇಹಿತನೇ, ಮೊದಲು ನಿನ್ನ ಉದ್ಧಾರವಾಯಿತೇ? ಅದನ್ನು ಗಮನಿಸು. ನಂತರ ಜಗತ್ತಿನ ಉದ್ಧಾರಕ್ಕೆ ಕೈ ಹಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.