ADVERTISEMENT

ಬೆರಗಿನ ಬೆಳಕು: ಆಸೆ-ಪಿಶಾಚಿ

ಗುರುರಾಜ ಕರಜಗಿ ಅಂಕಣ

ಡಾ. ಗುರುರಾಜ ಕರಜಗಿ
Published 12 ಮೇ 2022, 22:30 IST
Last Updated 12 ಮೇ 2022, 22:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |
ವಿಷದೂಟಕಿಂತುಪೋಷಿತವೆ ಲೇಸಲ್ತೆ? ||
ತೃಷೆ ಕನಲೆ, ಜೀವ ಬಿಸಿಬಾಣಲೆಗೆ ಬಿದ್ದ ಹುಳು |
ಶಿಶು ಪಿಶಾಚಿಯ ಕೈಗೆ – ಮಂಕುತಿಮ್ಮ || 627 ||

ಪದ-ಅರ್ಥ: ವಿಷಯಸನ್ನಿಧಿಗಿಂತ=ವಿಷಯ(ಇಂದ್ರಿಯಗಳ ಸೆಳೆತ)+ಸನ್ನಿಧಿಗಿಂತ, ಮಸಣಸನ್ನಿಧಿ=ಮಸಣ(ಸಾವಿನ)+ಸನ್ನಿಧಿ, ವಿಷದೂಟಕಿಂತುಪೋಷಿತವೆ=ವಿಷದ=ಊಟಕಿಂತ+ಉಪೋಷಿತವೆ(ಉಪವಾಸವೆ), ತೃಷೆ=ಆಸೆ, ಕನಲೆ=ಕೆರಳಿದರೆ,

ವಾಚ್ಯಾರ್ಥ: ಇಂದ್ರಿಯಗಳ ಸೆಳೆತದ ಸಂಗಕ್ಕಿಂತ ಮರಣವೇ ಮೇಲು. ವಿಷದ ಅಡುಗೆಯನ್ನು ಊಟ ಮಾಡುವುದಕ್ಕಿಂತ ಉಪವಾಸವಿರುವುದೇ ಕ್ಷೇಮ. ಒಂದು ಸಲ ಆಸೆ ಕೆರಳಿದರೆ, ಆ ಜೀವ ಬಿಸಿಯಾದ ಬಾಣಲೆಗೆ ಬಿದ್ದ ಹುಳುವಿದ್ದಂತೆ, ಪುಟ್ಟ ಮಗುವನ್ನು ಪಿಶಾಚಿಯ ಕೈಗೆ ಕೊಟ್ಟಂತೆ.

ADVERTISEMENT

ವಿವರಣೆ: ಅವರೊಬ್ಬ ಮಹಾನ್ ರಾಷ್ಟ್ರದ ರಾಷ್ಟ್ರಪತಿ. ಕೆಲವು ಕ್ಷಣಗಳ ಇಂದ್ರಯದ ಸೆಳೆತಕ್ಕೆ ಬಲಿಯಾದರು. ಇಡೀ ರಾಷ್ಟ್ರದ ಮುಂದೆ ಮೊಣಕಾಲೂರಿ ಕ್ಷಮೆ ಯಾಚಿಸುವ ಪ್ರಸಂಗ ಬಂದಿತು, ಹಿಂದಿನ ಸಾಧನೆಗಳು ಕ್ಷಣದಲ್ಲಿ ಕರಗಿ ಹೋಗಿ, ಈ ವಿಷಯಲಂಪಟತನವೇ ಪ್ರಧಾನವಾಯಿತು. ಆ ಮರ್ಯಾದೆಯನ್ನು ಕಳೆದುಕೊಳ್ಳುವ ಕ್ಷಣ ಸಾವಿಗಿಂತ ಘೋರ. ಅವರೊಬ್ಬ ದೊಡ್ಡ ಅಧಿಕಾರಿ. ಅಧಿಕಾರದ ಬೆಂಬತ್ತಿ ಬಂದಿತು ಹಣದ ಆಸೆ. ಅದೂ ಬಂದು ಬಂದು ತುಂಬಿದಾತ ಕೆಲವು ಕಾಲದ ಸಂತೃಪ್ತಿ. ಮುಂದೆ ಅನ್ಯಾಯ ಬಯಲಾದಾಗ, ಎಲ್ಲರ ಮುಂದೆ ಬತ್ತಲಾದ ಶೋಚನೀಯ ಅನುಭವ. ಒಂದು ಪುಟ್ಟ ನೆಲ. ಅದಕ್ಕಾಗಿ ಸಹೋದರನ ಆಸೆ. ಅದಕ್ಕೆ ಕೋರ್ಟು, ಕಚೇರಿ ಸುತ್ತಾಟ. ಯಾವ ತೀರ್ಮಾನ ಬಂದರೂ ಇನ್ನೊಬ್ಬರಿಗೆ ತೃಪ್ತಿ ಇಲ್ಲ. ಒಬ್ಬ ಇನ್ನೊಬ್ಬನನ್ನು ಕೊಂದ. ತಾನು ಜೈಲು ಸೇರಿ ನೇಣಿಗೇರಿದ.

ಇಂದು ಮಾತ್ರ ನಡೆಯುವ ಸಂಗತಿಗಳಲ್ಲ ಇವು. ಹಿಂದೆಯೂ ಅನೇಕ ಬಾರಿ ಇವು ನಡೆದಿವೆ. ಹಲವಾರು ಅಪ್ಸರೆಯರ ನಾಯಕನಾಗಿದ್ದು ಅಹಲ್ಯೆಗೆ ಅಪೇಕ್ಷೆ ಪಟ್ಟ ಇಂದ್ರ ಸಹಸ್ರಾಕ್ಷನಾದ. ಸೀತೆಗೆ ಮನತೆತ್ತು ರಾವಣ ಪ್ರಾಣತೆತ್ತ. ಪುತ್ರಮೋಹಕ್ಕೆ ಬಲಿಯಾದ ಧೃತರಾಷ್ಟ್ರ ವಂಶವನ್ನೇ ಬಲಿಕೊಟ್ಟ. ಭಗವದ್ಗೀತೆಯಲ್ಲಿ ಈ ವಿಷಯವನ್ನು ಸುಂದರವಾಗಿ ಪ್ರಸ್ತಾಪಿಸಲಾಗಿದೆ. ಇಂದ್ರಿಯ ವಿಷಯಗಳ ಸೆಳೆತಕ್ಕೆ ಬಂದಾಗ ಕಾಮ ಹುಟ್ಟುತ್ತದೆ, ಕಾಮಕ್ಕೆ ಅಡ್ಡಿಯಾದಾಗ ಕ್ರೋಧ ಬರುತ್ತದೆ. ಕ್ರೋಧದಿಂದ ವಿವೇಕ ತಪ್ಪಿಸುವ ಸಂಮೋಹ ಬೆಳೆಯುತ್ತದೆ. ಸಂಮೋಹದಿಂದ ತಿಳಿವಳಿಕೆ ತಲೆಕೆಳಗಾಗುತ್ತದೆ. ಅದರಿಂದಾಗಿ ಬುದ್ಧಿ ನಶಿಸಿಹೋಗುತ್ತದೆ. ಬುದ್ಧಿನಾಶದಿಂದ ಮನುಷ್ಯ ನಾಶಹೊಂದುತ್ತಾನೆ. ವಿಷಯದ ಸೆಳೆತ ಸಾವಿನೆಡೆಗೇ. ಅದನ್ನೇ ಕಗ್ಗ ಹೇಳುತ್ತದೆ. ವಿಷಯದ ಸಂಗಕ್ಕಿಂತ ಸಾವಿನ ಸಂಗ ಲೇಸು. ಸಾವನ್ನು ಖಚಿತಪಡಿಸುವ ವಿಷದ ಊಟಕ್ಕಿಂತ ಉಪವಾಸ ಇರುವುದು ಮೇಲಲ್ಲವೆ?

ಒಂದು ಬಾರಿ ಆಸೆ ಕೆರಳಿಬಿಟ್ಟರೆ, ಮನುಷ್ಯನನ್ನು ಒದ್ದಾಡಿಸಿಬಿಡುತ್ತದೆ. ಅವನು ಬಾಣಲೆಗೆ ಬಿದ್ದ ಹುಳುವಿನಂತೆ ಚಡಪಡಿಸಿಬಿಡುತ್ತಾನೆ. ಅತಿಯಾದ ಆಸೆ ಒಂದು ಪಿಶಾಚಿ ಇದ್ದ ಹಾಗೆ. ಆ ಅನಾಹುತಶಕ್ತಿಯ ಪಿಶಾಚಿಯ ಕೈಗೆ ಒಂದು ಎಳೆಯ ಕೂಸು ಸಿಕ್ಕಿದರೆ ಏನಾದೀತು? ಅದು ಕ್ಷಣಮಾತ್ರದಲ್ಲಿ ಹೊಸಕಿ ಹಾಕೀತು. ಅಂತೆಯೇ ನಮ್ಮ ಆಸೆಗಳು ಮಿತಿಮೀರಿದರೆ, ಅವೇ ಪಿಶಾಚಿಗಳಾಗಿ ನಮ್ಮ ಪ್ರಾಣವನ್ನು ಹೀರಿಬಿಡುತ್ತವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.